ಗುರುವಾರ , ಫೆಬ್ರವರಿ 9, 2023
30 °C
ಎಲ್ಲ ವ್ಯವಹಾರಗಳೂ ಲಾಭ-– ನಷ್ಟದ ಲೆಕ್ಕಾಚಾರದಲ್ಲೇ ನಡೆಯುವಾಗ, ಸಾಹಿತ್ಯಕ್ಕೆ ಸಂಬಂಧಿಸಿದ ವ್ಯವಹಾರಗಳು ಮಾತ್ರ

ಸಂಗತ | ಸಾಹಿತ್ಯ ಮತ್ತು ಬಂಡವಾಳ– ಎಚ್.ಕೆ.ಶರತ್ ಅವರ ಲೇಖನ

ಎಚ್.ಕೆ.ಶರತ್ Updated:

ಅಕ್ಷರ ಗಾತ್ರ : | |

Prajavani

ಸಾಹಿತ್ಯಕ ಚಟುವಟಿಕೆಗಳ ಆಯೋಜನೆ ಮತ್ತು ಪುಸ್ತಕ ಪ್ರಕಟಣೆಯಲ್ಲಿ ಆರ್ಥಿಕವಾಗಿ ಲಾಭ ಗಳಿಸುವ ಉದ್ದೇಶ ಇರಬಾರದೆ? ಸಾಹಿತ್ಯವನ್ನು ಹಣ ಗಳಿಸುವ ಸರಕಾಗಿ ನೋಡುವುದು ಅನೈತಿಕವೇ? ಸಾಹಿತ್ಯ ಕ್ಷೇತ್ರವನ್ನು ಹೂಡಿಕೆ ಮತ್ತು ಗಳಿಕೆಯ ವರ್ತುಲದಿಂದ ಹೊರಗಿಡಬೇಕೆ? 

ಬರಹಗಾರರು ‘ಸಾಹಿತ್ಯ ಕ್ಷೇತ್ರದಲ್ಲಿ ದುಡ್ಡಿದೆ, ಬರೆಯುವ ಮೂಲಕ ಹಣ ಸಂಪಾದಿಸಬಹುದು’ ಎನ್ನುವ ಧೋರಣೆ ತಳೆಯಲು ಅನುವು ಮಾಡಿ ಕೊಡುವ ವಾತಾವರಣ ನಿರ್ಮಾಣವಾಗ
ಬಾರದೆ? ಹಣವುಳ್ಳವರು ಸಾಂಸ್ಕೃತಿಕ ವಲಯದಲ್ಲಿ ಮನ್ನಣೆ ಗಳಿಸುವ ಸಲುವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಮುಂದಾದರೆ, ಅದನ್ನು ಹೇಗೆ ಸ್ವೀಕರಿಸಬೇಕು? ಮೇಲಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಕ್ರಿಯೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ವೇಗ ದಕ್ಕಿರುವಂತೆ ಭಾಸವಾಗುತ್ತಿದೆ. ಪ್ರವೇಶ ದರ ನಿಗದಿಪಡಿಸಿ ಆಯೋಜಿಸುವ ಸಾಹಿತ್ಯಕ ಕಾರ್ಯಕ್ರಮಗಳಿಗೆ ವಿರೋಧ ವ್ಯಕ್ತವಾಗುತ್ತಿದೆ. ‘ಸಾಹಿತ್ಯಕ ಕಾರ್ಯಕ್ರಮ ಗಳು ಎಲ್ಲರನ್ನೂ ಒಳಗೊಳ್ಳಬೇಕು. ಹಣವಿಲ್ಲದ ಕಾರಣಕ್ಕೆ ಆಸಕ್ತಿ ಇದ್ದೂ ಪಾಲ್ಗೊಳ್ಳಲು ಸಾಧ್ಯ ವಾಗದವರ ಕುರಿತೂ ಚಿಂತಿಸಬೇಕು’ ಎನ್ನುವ ವಾದ ಮುನ್ನೆಲೆಗೆ ಬರುತ್ತಿದೆ. ಕನ್ನಡ ಪುಸ್ತಕಗಳಿಗೆ ಪ್ರಕಾಶಕರು ಹೆಚ್ಚಿನ ಬೆಲೆ ನಿಗದಿಪಡಿಸುತ್ತಿರುವುದರಿಂದ ಓದುಗರು ಪುಸ್ತಕ ಕೊಳ್ಳಲು ಹಿಂದೆ ಮುಂದೆ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎನ್ನುವ ಆಕ್ಷೇಪವೂ ಆಗಾಗ ಕೇಳಿಬರುವುದುಂಟು.

ಕನ್ನಡ ಕಥಾ ಸ್ಪರ್ಧೆಗಳ ಸಂಖ್ಯೆ ಹೆಚ್ಚುವುದರ ಜೊತೆಗೆ ಬಹುಮಾನಗಳ ಮೊತ್ತವೂ ಗಣನೀಯವಾಗಿ ಏರುತ್ತಿದೆ. ಇದರಿಂದ ಸ್ಪರ್ಧೆಗಾಗಿ ಕತೆ ಬರೆಯುವವರು ಹುಟ್ಟಿಕೊಳ್ಳುತ್ತಿದ್ದಾರೆ. ದುಡ್ಡು ಕಥೆಗಾರರ ದಿಕ್ಕು ತಪ್ಪಿಸುತ್ತಿದೆ. ಬರಹಗಾರರ ನಡುವೆ ಸ್ಪರ್ಧೆ ಏರ್ಪಡು ವುದು ಆರೋಗ್ಯಕರ ಬೆಳವಣಿಗೆಯಲ್ಲ. ಸ್ಪರ್ಧೆ ಸಂಕುಚಿತ ಮನೋಭಾವ ಬೆಳೆಸಲು ಹಾಗೂ ಅನಾ ರೋಗ್ಯಕರ ಪೈಪೋಟಿಗೆ ಕಾರಣವಾಗುತ್ತಿದೆ ಎಂದು ಕೂಡ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಹಾಗಾದರೆ, ಸಾಹಿತ್ಯ ರಚನೆಯಲ್ಲಿ ತೊಡಗಿರು ವವರು, ಪುಸ್ತಕ ಬರೆಯುವವರು, ಪ್ರಕಟಿಸುವವರು, ಮಾರುವವರು, ಸಾಹಿತ್ಯಕ ಕಾರ್ಯಕ್ರಮ, ಕಾರ್ಯಾ ಗಾರ, ಸ್ಪರ್ಧೆಗಳನ್ನು ಆಯೋಜಿಸುವವರು ಯಾವ ಮಾದರಿ ಆರಿಸಿಕೊಳ್ಳಬೇಕು? ಎಲ್ಲ ವ್ಯವಹಾರಗಳೂ ಲಾಭ- ನಷ್ಟದ ಲೆಕ್ಕಾಚಾರದಲ್ಲೇ ನಡೆಯುವಾಗ, ಸಾಹಿತ್ಯಕ್ಕೆ ಸಂಬಂಧಿಸಿದ ವ್ಯವಹಾರಗಳು ಮಾತ್ರ ಲಾಭ ರಹಿತವಾಗಿಯೇ ನಡೆಯಬೇಕೆ? ಬೇರೆಲ್ಲ ಕೆಲಸ ಮತ್ತು ಶ್ರಮಕ್ಕೂ ತಕ್ಕ ಆರ್ಥಿಕ ಪ್ರತಿಫಲ ಅಪೇಕ್ಷಿಸುವುದು ಸಹಜವಾಗಿರುವಾಗ, ಪುಸ್ತಕವೊಂದನ್ನು ರೂಪು ಗೊಳಿಸುವ ಸಲುವಾಗಿ ಶ್ರಮ ಹಾಕುವವರು ಮಾತ್ರ ಈ ಲೆಕ್ಕಾಚಾರಕ್ಕೆ ವಿಮುಖರಾಗಿ ನಡೆದುಕೊಳ್ಳಬೇಕೆಂದು ನಿರೀಕ್ಷಿಸುವುದು ಸೂಕ್ತವೇ? ಸಾಹಿತ್ಯಕ ಚಟುವಟಿಕೆಗಳನ್ನು ಲಾಭರಹಿತವಾಗಿ ನಡೆಸಿಕೊಂಡು ಹೋಗುವುದರಿಂದ ಸಾಹಿತ್ಯ ಕ್ಷೇತ್ರಕ್ಕೆ ಒಳಿತಾಗುವುದೇ? ಕನ್ನಡ ಪುಸ್ತಕಗಳಿಗೆ ಕಡಿಮೆ ಬೆಲೆ ನಿಗದಿಪಡಿಸುವು
ದರಿಂದ ನಿಜಕ್ಕೂ ಓದುಗರ ಹಿತ ಕಾಯ್ದಂತೆ ಆಗುವುದೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳು ವಾಗ ವಾಸ್ತವಿಕ ನೆಲೆಗಟ್ಟಿನಲ್ಲಿ ಯೋಚಿಸಬೇಕಾಗಿದೆ.

ಸಾಹಿತ್ಯಕ ಕಾರ್ಯಕ್ರಮಗಳ ಆಯೋಜನೆಗೆ ಬೇಕಿರುವ ಸಂಪನ್ಮೂಲ ಹೊಂದಿಸಲು ಪ್ರವೇಶ ದರ ನಿಗದಿಪಡಿಸಿ, ಹಣ ಕೊಟ್ಟು ಸಾಹಿತ್ಯಕ ಕಾರ್ಯಕ್ರಮ ಗಳಿಗೆ ಹಾಜರಾಗುವ ಸಾಹಿತ್ಯಾಸಕ್ತರ ಸಮೂಹ ಕಟ್ಟಿಕೊಳ್ಳಲು ಕೆಲವರಿಗೆ ಸಾಧ್ಯವಾಗುವುದಾದರೆ ಅದರಿಂದ ಯಾರಿಗೆ ತಾನೆ ನಷ್ಟ? ಹೆಚ್ಚೆಚ್ಚು ಜನರನ್ನು ಸೆಳೆಯಲು ಇಂತಹ ಕಾರ್ಯಕ್ರಮಗಳಿಗೆ ಸಾಧ್ಯವಾಗುವುದಾದರೆ ಅದರಿಂದ ಸಾಹಿತ್ಯ ಕ್ಷೇತ್ರಕ್ಕೆ ಒಳಿತಾಗುವುದಿಲ್ಲವೇ? ಬೇರೆಲ್ಲ ಉತ್ಪನ್ನಗಳ ಮಾರಾಟ ಮಳಿಗೆಗಳ ಸಂಖ್ಯೆ ಹೆಚ್ಚುತ್ತಲೇ ಇರುವಂತೆ, ಕನ್ನಡ ಪುಸ್ತಕ ಮಾರಾಟ ಮಳಿಗೆಗಳ ಸಂಖ್ಯೆಯೂ ಹೆಚ್ಚಬೇಕಲ್ಲವೇ? ಪುಸ್ತಕ ಪ್ರಕಾಶನ ಮತ್ತು ಮಾರಾಟವನ್ನು ಸೇವೆಯ ರೀತಿಯಲ್ಲಿ ಬಿಂಬಿಸುವ ಬದಲಿಗೆ, ವ್ಯವಹಾರವಾಗಿ ಪರಿಗಣಿಸುವ ವಾತಾವರಣ ನಿರ್ಮಾಣವಾಗಬಾರದೆ? ನಷ್ಟದಲ್ಲಿ ನಡೆಸಬೇಕಿರುವ ಸೇವೆಯಲ್ಲಿ ವೃತ್ತಿಪರತೆ ನಿರೀಕ್ಷಿಸಲಾದೀತೆ? ಕನ್ನಡ ಪುಸ್ತಕೋದ್ಯಮವು ಲಾಭದಾಯಕವಾಗಿ ಮಾರ್ಪಟ್ಟರೆ, ವೃತ್ತಿಪರತೆ ಮೈಗೂಡುವ ಸಂಭವನೀಯತೆಯೂ ಹೆಚ್ಚು. ವೈವಿಧ್ಯ ಮಯ ವಸ್ತುವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳು ಪ್ರಕಟವಾಗುತ್ತಾ ಹೋದರೆ ಅದರಿಂದ ಓದುಗರಿಗೂ ಉತ್ತಮ ಆಯ್ಕೆಗಳು ದೊರೆಯಲಿವೆ.

ಸಾಹಿತ್ಯ ಕ್ಷೇತ್ರ ಇತರ ವ್ಯವಹಾರಗಳ ರೀತಿ ಲಾಭಕೇಂದ್ರಿತ ಆಗಬಾರದು ಎಂದು ಆಶಿಸಬಹುದು. ಆದರೆ, ಈ ಆಶಯವನ್ನು ಕಾರ್ಯಗತಗೊಳಿಸುವ ಸುಸ್ಥಿರ ಮಾದರಿಯ ಅನುಪಸ್ಥಿತಿಯಲ್ಲಿ ಸಾಹಿತ್ಯ ಕ್ಷೇತ್ರವೂ ಲಾಭಕೇಂದ್ರಿತವಾಗಿ ಮುನ್ನಡೆಯುವುದೇ ಉತ್ತಮ. ಇಲ್ಲವಾದಲ್ಲಿ ಅನುಷ್ಠಾನಕ್ಕೆ ತರಲಾಗದ ನೈತಿಕ ಆಶಯಕ್ಕೆ ಜೋತು ಬಿದ್ದವರನ್ನು ಹಿನ್ನೆಲೆಗೆ ಸರಿಸುವಲ್ಲಿ, ಈಗಾಗಲೇ ಲಾಭ ಪಥದಲ್ಲಿ ಮುನ್ನಡೆಯು ತ್ತಿರುವ ಜನಪ್ರಿಯ ಸವಕಲು ಮಾದರಿಗಳಿಗೆ ಪೈಪೋಟಿ ಇಲ್ಲದಂತಾಗಲಿದೆ. ಸಾಹಿತ್ಯವನ್ನು ಬಂಡವಾಳಶಾಹಿ ಧೋರಣೆಯಿಂದ ಮುಕ್ತಗೊಳಿಸುವ ಆಶಯವು ಪರೋಕ್ಷವಾಗಿ ಕಳಪೆ ಪುಸ್ತಕಗಳಿಗೆ ಮಾರುಕಟ್ಟೆ ಆಳುವ ಅವಕಾಶ ಕಲ್ಪಿಸಲಷ್ಟೇ ಶಕ್ತವಾಗುವ ಅಪಾಯವೂ ಇದೆ.

ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚಿದಂತೆಲ್ಲ ಗ್ರಾಹಕರಿಗೆ ಗುಣಮಟ್ಟದ ಸೇವೆ ಹಾಗೂ ಉತ್ಪನ್ನ ಕಡಿಮೆ ಬೆಲೆಗೆ ಲಭ್ಯವಾಗಲಿದೆ ಎನ್ನುವ ಮುಕ್ತ ಮಾರುಕಟ್ಟೆಯ ಧೋರಣೆಯನ್ನು ಕನ್ನಡ ಸಾಹಿತ್ಯ ಹಾಗೂ ಪುಸ್ತಕ ಕ್ಷೇತ್ರಕ್ಕೂ ಅನ್ವಯಿಸಲು ಸಾಧ್ಯವಿಲ್ಲವೇ? ಹೀಗೆ ಮಾಡುವುದೂ ಅನೈತಿಕವೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು