ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ‘ಕಾಡಿನ ರಾಜ’ ಕೊಟ್ಟಿಗೆಗೆ ಬಂದಾನು!

ವಿಶ್ವ ಸಿಂಹ ದಿನಾಚರಣೆಯ ಈ ವೇಳೆ ಸಿಂಹಗಳನ್ನು ಸಂರಕ್ಷಿಸಿ ಎನ್ನುವುದಕ್ಕಿಂತ ಅವುಗಳ ವಾಸನೆಲೆಗಳನ್ನು ಸಂರಕ್ಷಿಸಿ ಎನ್ನುವುದೇ ಹೆಚ್ಚು ಸಮಂಜಸ
Last Updated 9 ಆಗಸ್ಟ್ 2022, 22:00 IST
ಅಕ್ಷರ ಗಾತ್ರ

‘ಕಾಡಿನ ರಾಜ’ ಎಂದು ಕರೆಸಿಕೊಂಡಿರುವ ಸಿಂಹವು ಬೇಟೆಯ ಕೊರತೆ, ಆವಾಸದ ಅಭಾವ, ಮನುಷ್ಯನ ಅತಿಕ್ರಮಣದಿಂದಾಗಿ ಸೊರಗಿದೆ. ಹಲವರು ತಮ್ಮ ಸಾಕುಪ್ರಾಣಿಗಳ ರಕ್ಷಣೆಗೆ, ಮೋಜಿಗೆ ಸಿಂಹಗಳನ್ನು ಕೊಲ್ಲುವುದಿದೆ. ಗಾಯಗೊಂಡ ಸಿಂಹಗಳು ಇತರ ಪ್ರಾಣಿಗಳಿಂದ ಒಂದಿಲ್ಲೊಂದು ಸೋಂಕಿಗೆ ಒಳಗಾಗಿ ಅಸುನೀಗುತ್ತವೆ.

ಜಾಗತಿಕ ಮಟ್ಟದಲ್ಲಿ ಈ 25 ವರ್ಷಗಳಲ್ಲಿ ಸಿಂಹಗಳ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ. ಸ್ವಿಟ್ಜರ್ಲೆಂಡ್‍ನಲ್ಲಿ ಕೇಂದ್ರ ಸ್ಥಾನವುಳ್ಳ ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟ (ಇಂಟರ್‌ನ್ಯಾಷನಲ್‌ ಯೂನಿಯನ್‌ ಫಾರ್‌ ಕನ್ಸರ್ವೇಷನ್‌ ಆಫ್‌ ನೇಚರ್‌), ‘ಸಿಂಹದ ಹಲವು ಪ್ರಭೇದಗಳು ಅಳಿವಿನಂಚಿನಲ್ಲಿವೆ, ಇದನ್ನು ತಪ್ಪಿಸುವ ಜರೂರಿದೆ’ ಎಂದು ಎಚ್ಚರಿಸಿದೆ. ಸದ್ಯ ಜಗತ್ತಿನಲ್ಲಿ ಪ್ರಮುಖವಾಗಿ ಉಳಿದಿರುವ ಸಿಂಹ ಪ್ರಭೇದಗಳೆಂದರೆ ಆಫ್ರಿಕನ್ ಲಯನ್ ಮತ್ತು ಗಾತ್ರದಲ್ಲಿ ಅದಕ್ಕಿಂತ ಚಿಕ್ಕದಾದ ಏಷ್ಯಾಟಿಕ್ ಲಯನ್.

ಸಿಂಹಗಳು ಪರಿಸರ ವ್ಯವಸ್ಥೆಯ ಆರೋಗ್ಯದ ನಿರ್ಣಾಯಕಗಳು. ಸಿಂಹಕ್ಕೆ ಆಹಾರ ಸರಪಳಿಯಲ್ಲಿ ಮುಖ್ಯ ಸ್ಥಾನವಿದೆ. ಬದುಕುಳಿಯಲು ಯಾವುದು ಯಾವುದನ್ನು ಸೇವಿಸಬೇಕು ಎನ್ನುವುದರ ಪ್ರಕೃತಿಯ ನಿಯೋಜನೆ ಅದ್ಭುತ. ಅದು, ಅಂತರ್‌ಸಂಬಂಧವುಳ್ಳ ಆಹಾರ ಸರಣಿಗಳ ಮಾಲೆಯಿಂದ ಒಂದಕ್ಕೊಂದು ಹೆಣೆದ ಅನನ್ಯ ವಿನ್ಯಾಸ. ಬಹು ಸಂಕೀರ್ಣವಾದ ಆಹಾರ ಜಾಲದಲ್ಲಿ ಕಿಂಚಿತ್ತು ವ್ಯತ್ಯಯವಾದರೂ ನಿಸರ್ಗ ನಿಟ್ಟುಸಿರುಬಿಡುತ್ತದೆ. ಸಿಂಹವು ಮಾಂಸಾಹಾರಿ ಚಿಕ್ಕ ಪ್ರಾಣಿಗಳು ಮತ್ತು ಸಸ್ಯಾಹಾರಿ ದೊಡ್ಡ ಪ್ರಾಣಿಗಳ ಸಂಖ್ಯೆಯನ್ನು ಸಮತೋಲನದಲ್ಲಿ ಇಡುತ್ತದೆ. ಅದು, ಮಾಂಸಾಹಾರಿ ಚಿಕ್ಕ ಪ್ರಾಣಿಗಳನ್ನಲ್ಲದೆ ಹೆಚ್ಚುವರಿ ಸಸ್ಯಾಹಾರಿ ಪ್ರಾಣಿಗಳನ್ನೂ ಬೇಟೆಯಾಡುವುದು ವಿಶೇಷ.

ನೆಲಹರವು ಹಸಿರಿನಿಂದ ನಳನಳಿಸುವುದಕ್ಕೂ ಪ್ರಕೃತಿಯು ಪರೋಕ್ಷ ಮಿತಿ ವಿಧಿಸಿಬಿಟ್ಟಿದೆ. ಇತ್ತ ಮರುಭೂಮಿಯೂ ಬೇಡ, ಅತ್ತ ಅತಿ ಹಸಿರೂ ಬೇಡ ಎನ್ನುವ ಇರಾದೆ ನಿಸರ್ಗದ್ದು. ಹೀಗೆ ವನ್ಯಮೃಗಗಳಿಂದ ನಮಗೆ ಎಲೆಮರೆಯ ಕಾಯಿಯಂತೆ ಪರೋಕ್ಷ ಮಹದುಪಕಾರ. ಮನುಷ್ಯ ಅವುಗಳೊಂದಿಗೆ ಸಂಘರ್ಷಕ್ಕಿಳಿಯುವುದೇ ವಿಪರ್ಯಾಸ. ವನ್ಯಜೀವ ಅಥವಾ ‘ವೈಲ್ಡ್ ಲೈಫ್’ ಎಂಬುದು ಪಾಲಿಸದ, ಪಳಗಿಸದ ಮತ್ತು ಸ್ವಾಭಾವಿಕ ವಾಸನೆಲೆಗಳಲ್ಲಿ ಜೀವಿಸುವ ಇಡೀ ಪ್ರಾಣಿ ಸಮುದಾಯವನ್ನು ಪ್ರತಿನಿಧಿಸುತ್ತದೆ.

ವಿಶ್ವಮಟ್ಟದಲ್ಲಿ ಪ್ರತೀ 5 ವರ್ಷಗಳಿಗೊಮ್ಮೆ ಸಿಂಹ ಗಣತಿ ನಡೆಯುವುದು. ಶತಮಾನದ ಹಿಂದೆ ಸಿಂಹಗಳ ತವರಾದ ಆಫ್ರಿಕಾಖಂಡದಲ್ಲೇ ಒಟ್ಟು ಒಂದು ಲಕ್ಷ ಸಿಂಹಗಳಿದ್ದವು. ಆದರೆ ಇಂದು ಜಗತ್ತಿನಲ್ಲಿ 20,000 ಸಿಂಹಗಳಷ್ಟೇ ಇವೆ. ಭಾರತದಲ್ಲಿ ಗುಜರಾತ್‍ನ ಗಿರ್ ರಾಷ್ಟ್ರೀಯ ಉದ್ಯಾನದಲ್ಲಿ 2015ರಲ್ಲಿ 523 ಸಿಂಹಗಳಿದ್ದವು. 2020ರಲ್ಲಿ ಈ ಸಂಖ್ಯೆ 674ಕ್ಕೆ ಏರಿದ್ದು ನಾವು ಹೆಮ್ಮೆಪಡಬಹುದಾದ ಮಹತ್ವದ ಬೆಳವಣಿಗೆ.

ಹಿಂದೆ ಬೆಟ್ಟ ಗುಡ್ಡಗಳಲ್ಲಿ ಪೊದೆ, ಬಂಡೆಗಳ ಮರೆಯನ್ನೇ ಮನೆಯಾಗಿಸಿಕೊಂಡು ಸಿಂಹ ಸುರಕ್ಷಿತ ವಾಗಿತ್ತು. ಮನುಷ್ಯನ ಕಾಂಕ್ರೀಟು ವ್ಯಾಮೋಹದಿಂದಾಗಿ ಅದಕ್ಕೆ ಒದಗಿದ ದುರ್ಗತಿ ಎಂಥದ್ದು? ಕೆಲವೇ ಮರಗಳುಳ್ಳ ವಿಶಾಲ ಹುಲ್ಲಿನ ನೆಲಹರವಿದ್ದರಾಯಿತು, ಅಲ್ಲಿಯೇ ಬದುಕುವ ಅನಿವಾರ್ಯ ಸ್ಥಿತಿ ಅದಕ್ಕೆ ತಲೆದೋರಿತು. ಕೆಲವು ಪ್ರಿಯ ಬೇಟೆಗಳು ಬಹು ಅಪರೂಪವಾದವು. ಮುಂದೊಂದು ದಿನ ಕೊಟ್ಟಿಗೆಯಲ್ಲಿ ಚಿರತೆ, ಹುಲಿಯ ಹಾಗೆ ಸಿಂಹ ಪ್ರತ್ಯಕ್ಷವಾದರೂ ಅಚ್ಚರಿಯೇನಿಲ್ಲ!

ಸುದೈವವಶಾತ್ ಸಿಂಹಕ್ಕೆ ಕೆರೆಕುಂಟೆಗಳ ಅಗತ್ಯ ಅಷ್ಟಾಗಿಲ್ಲ. ಬೇಟೆಗೆ ಸಿಲುಕುವ ಪ್ರಾಣಿಗಳಿಂದಲೇ ಅದು ನೀರನ್ನು ದಕ್ಕಿಸಿಕೊಳ್ಳುತ್ತದೆ. ಸಿಂಹವು ಕಾಡೇ ಇಲ್ಲದ ‘ಕಾಡಿನ ರಾಜ’ ಎನ್ನಿಸಿಕೊಳ್ಳಲು ಬಿಡಬಾರದು. ವಿಶ್ವ ಸಿಂಹ ದಿನಾಚರಣೆಯ (ಆ. 10) ಈ ಸಂದರ್ಭದಲ್ಲಿ, ಸಿಂಹಗಳನ್ನು ಸಂರಕ್ಷಿಸಿ ಎನ್ನುವುದಕ್ಕಿಂತ ಸಿಂಹಗಳ ವಾಸನೆಲೆಗಳನ್ನು ಸಂರಕ್ಷಿಸಿ ಎನ್ನುವುದೇ ಹೆಚ್ಚು ಸಮಂಜಸ.

ಅಸಾಧಾರಣ ಸ್ಮರಣಶಕ್ತಿ, ಸೀಮಾಪ್ರಜ್ಞೆ, ಬೇಟೆಯಾಡುವಾಗ ಸಿಂಹಗಳು ತೋರುವ ತಂತ್ರ, ಕೌಶಲಕ್ಕೆ ಸಾಟಿಯಿಲ್ಲ. ತನ್ನ ಸ್ಥೈರ್ಯ, ಸಹನೆಯಿಂದಾಗಿಯೇ ಸಿಂಹ ಭಾರತವೂ ಸೇರಿದಂತೆ ಹಲವು ದೇಶಗಳ ರಾಷ್ಟ್ರೀಯ ಲಾಂಛನಗಳಲ್ಲಿದೆ. 11 ಮೀಟರ್ ಎತ್ತರಕ್ಕೆ ನೆಗೆತ, ತಾಸಿಗೆ 80 ಕಿ.ಮೀ. ವೇಗದ ಓಟ. ಪೂರ್ವಾಪರ ಅವಲೋಕನಕ್ಕೆ ಪರ್ಯಾಯ ಹೆಸರೇ ಸಿಂಹ! ‘ಪ್ರತಿಯೊಬ್ಬ ಧೈರ್ಯಶಾಲಿಯ ಹೃದಯದಲ್ಲೂ ಸಿಂಹ ನಿದ್ರಿಸುತ್ತದೆ’ ಎನ್ನುವುದು ಟರ್ಕಿ ದೇಶದ ಗಾದೆ.

ಸಿಂಹ ಬೇಟೆ ವಿರೋಧಿ ಆಂದೋಲನದ ಸಂಘ, ಸಂಸ್ಥೆಗಳಿಗೆ ವಂತಿಗೆ ಸಲ್ಲಿಕೆಯೂ ಸಿಂಹ ಸಂರಕ್ಷಣೆಯತ್ತ ಒಂದು ದಿಟ್ಟ ಹೆಜ್ಜೆಯೆ. ಭೂಮಿಯ ತಾಪಮಾನ ಏರಿಕೆ, ಸಾಗರ ಮಟ್ಟದ ಏರಿಕೆ, ವಾತಾವರಣ ವೈಪರೀತ್ಯ ನಿವಾರಣೆಗೆ ಬೇಕಾದ ಉಪಕ್ರಮಗಳನ್ನು ಆದ್ಯತೆಯ ಮೇಲೆ ಕೈಗೊಳ್ಳುವುದು ಈಗಿನ ತುರ್ತು ಅಗತ್ಯ. ಅದರಲ್ಲಿ ಅರಣ್ಯೀಕರಣದ ಪಾತ್ರ ಹೆಚ್ಚು ಮಹತ್ವದಿಂದ ಕೂಡಿದೆ. ಬೇರೆ ಬೇರೆ ಹಂತಗಳಲ್ಲಿ ಆ ಕೆಲಸ ಆಗಬೇಕು. ಸಂಘ–ಸಂಸ್ಥೆಗಳು, ನಾಗರಿಕರು ಮತ್ತು ಸರ್ಕಾರ ಈ ದಿಸೆಯಲ್ಲಿ ಕೈಜೋಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT