ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ– ವಿರೋಧವೆಂಬ ಕಿಬ್ಬದಿಯ ಕೀಲು

ಪ್ರತಿಯೊಬ್ಬ ನಾಗರಿಕನೂ ಈಗ ರಾಜಕಾರಣದ ಪಡಸಾಲೆಯಲ್ಲಿ ನಿಂತಿದ್ದಾನೆ
Last Updated 19 ಡಿಸೆಂಬರ್ 2019, 18:44 IST
ಅಕ್ಷರ ಗಾತ್ರ

‘ನೀವು ನರೇಂದ್ರ ಮೋದಿಯ ಪರವೋ? ವಿರೋಧವೋ?’ ಮಾತಿನ ನಡುವೆ ಹಿರಿಯ ಕವಯತ್ರಿಯೊಬ್ಬರು ನನಗೆ ಕೇಳಿದ ಪ್ರಶ್ನೆ ಇದು. ತಕ್ಷಣಕ್ಕೆ ಉತ್ತರ ಹೇಳಲು ತಡಬಡಾಯಿಸಿದೆ. ‘ನೀವು ದೇಶದ ಪರವೋ? ವಿರೋಧವೋ?’ ಎಂದು ಕೇಳಿದ್ದರೆ ತಕ್ಷಣ ಉತ್ತರಿಸಬಹುದಾದಷ್ಟು ಸರಳವಾದ ಪ್ರಶ್ನೆ ಇದಾಗಿರಲಿಲ್ಲ. ದೇಶದ ಪರವೆಂದು ಹೇಳುವವರೂ ರಾಷ್ಟ್ರಭಕ್ತರಂತೆ ತೋರುವ ಮೋದಿ ಮತ್ತು ಅವರ ಪರಿವಾರವು ಸಂವಿಧಾನ ರೂಪಿಸಿದ ರಾಷ್ಟ್ರದ ಪರವಿಲ್ಲ ಎನ್ನುವವರೂ ನಮ್ಮ ಕಣ್ಣ ಮುಂದೆ ವಾದ, ಪ್ರತಿವಾದಗಳನ್ನು ಮಂಡಿಸುತ್ತಿದ್ದಾರೆ. ಈ ಎರಡೂ ವಾದಗಳಲ್ಲಿ ಯಾವುದಾದರೊಂದನ್ನು ಹಿಡಿಯಲೇಬೇಕಾದ ಅನಿವಾರ್ಯ ಈಗ ಎಲ್ಲರ ಮುಂದಿದೆ. ಸಮನ್ವಯವೂ ಸಾಧ್ಯವಿಲ್ಲ; ನಿರ್ಲಿಪ್ತತೆಯಂತೂ ಸಾಧ್ಯವೇ ಇಲ್ಲ.

ಪರವಾಗಿದ್ದೇವೆಂದರೆ ಅದರಲ್ಲಿ ವಿರೋಧವಿಲ್ಲವೇ ಇಲ್ಲ ಎಂದಲ್ಲ. ವಿರೋಧವಾಗಿದ್ದೇವೆಂದರೆ ಅಲ್ಲಿ ಪರ ಇಲ್ಲವೆಂದಲ್ಲ. ಇವು ಸ್ವಯಂ ವಿಷಯಾಧಾರಿತ ಸಂದರ್ಭವನ್ನು ಅವಲಂಬಿಸಿರುತ್ತವೆ. ಪಕ್ಷಸಿದ್ಧಾಂತ, ರಾಜಕಾರಣವನ್ನು ಒಪ್ಪಿಕೊಂಡವರ ಪರದೊಳಗೂ ವಿರೋಧವಿದ್ದೇ ಇರುತ್ತದೆ. ಅಧಿಕಾರ ಸಿಗಲಿಲ್ಲವೆಂದು ಪಕ್ಷನಿಷ್ಠೆ ಬದಲಿಸುವುದರ ಹಿಂದೆ ಕೇವಲ ಅಧಿಕಾರದ ಹಪಹಪಿತನ ಇರುತ್ತದೆಂದು ನಿರ್ವಚಿಸಲಾಗುತ್ತಿದೆ. ನಿಜ! ಆದರೆ, ಆತ ಆ ತಾತ್ವಿಕತೆಯನ್ನು ನಿರಾಕರಿಸಲು ಅದೊಂದು ಕಾರಣ ಎಂದು ಯಾಕೆ ತಿಳಿಯುವುದಿಲ್ಲ.

ಕಾಶ್ಮೀರದ ವಿಚಾರದಲ್ಲಿ ಸರ್ಕಾರದ ನಿರ್ಧಾರದ ಪರವಾಗಿ ಬಹುತೇಕ ಚಿಂತನ ಶಾಲೆಗಳು ಬೆನ್ನು ಚಪ್ಪರಿಸಿದವು. ಪೌರತ್ವ ಕುರಿತಾದ ವಾಸ್ತವ ಸಂಗತಿಗಳನ್ನೂ ರಾಜ್ಯಸಭೆ ಅನುಮೋದಿಸಿತು. ಈ ಅನುಮೋದನೆ ಕೊಡುವಾಗ ಪರವಾಗಿದ್ದವರು ಆನಂತರ ಚಳವಳಿಗಳನ್ನು ಹತ್ತಿಕ್ಕಲು ಕೈಗೊಂಡ ಕ್ರಮಗಳನ್ನು ವಿರೋಧಿಸಿದರು. ತಾತ್ವಿಕತೆಯನ್ನು ಬೆಂಬಲಿಸುವವರು ಅನುಷ್ಠಾನದ ಸಮಯದಲ್ಲಿ ಅದರ ಹಿಂದೆ ಇರುವ ಮನಃಸ್ಥಿತಿಯನ್ನು ವಿರೋಧಿಸಿದರು. ಆದರೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಆಗ್ರಹ ಪೂರ್ವಕವಾಗಿ ಅನುಷ್ಠಾನಗೊಳಿಸುತ್ತೇವೆಂದು ಹೊರಡುವ ಶಕ್ತ ರಾಜಕಾರಣಕ್ಕೆ ವಿರೋಧ ವ್ಯಕ್ತಪಡಿಸದೆ ಬೇರೆ ದಾರಿಗಳಿರಲು ಸಾಧ್ಯವಿಲ್ಲ.

ಮೋದಿ ನೇತೃತ್ವದ ಸರ್ಕಾರ ತೆಗೆದುಕೊಳ್ಳುತ್ತಿರುವ ಎಲ್ಲ ತೀರ್ಮಾನಗಳೂ ಮೇಲ್ನೋಟಕ್ಕೆ ಸರಿ ಎಂದೆನಿಸುತ್ತವೆ. ಆದರೆ, ಈ ತೀರ್ಮಾನಗಳ ಹಿಂದಿನ ಮನಃಸ್ಥಿತಿ ರೂಪುಗೊಂಡಿರುವುದು ದುರುದ್ದೇಶ
ದಿಂದಲೇ ಎಂಬುದು ಈಗ ಸಾಬೀತಾಗಿದೆ. ‘ವಿರೋಧಕ್ಕಾಗಿ ವಿರೋಧ’ ಎಂಬ ಧೋರಣೆಯನ್ನು ತಾತ್ವಿಕ ರೂಪಕ್ಕೆ ಇಳಿಸಿ, ಆಮೂಲಾಗ್ರ ಬದಲಾವಣೆ ತರುವ ಹಿಂದಿನ ಆಶಯ ಸ್ಪಷ್ಟವಾಗುತ್ತಿದೆ. ಸಂಪೂರ್ಣ ಬಹುಮತ ಲಭ್ಯವಾದ ಗಳಿಗೆಯಿಂದಲೂ ಹೊರಬರುತ್ತಿರುವ ಎಲ್ಲ ತೀರ್ಮಾನಗಳು ರಾಷ್ಟ್ರದ ಭಾವೈಕ್ಯವನ್ನು ಉಳಿಸುತ್ತಿವೆಯೋ ಛಿದ್ರಗೊಳಿಸುತ್ತಿವೆಯೋ ಎಂದು ನೋಡಿದಾಗ, ಸಹಜವಾಗಿಯೇ ವಿರೋಧ ವ್ಯಕ್ತವಾಗುತ್ತಿದೆ. ಈ ಎಲ್ಲ ನಿರ್ಣಯಗಳಿಗೆ ಧರ್ಮಾಧಾರಿತ ರಾಷ್ಟ್ರಗಳನ್ನು ಪೂರ್ವಪಕ್ಷವಾಗಿರಿಸಿಕೊಂಡು, ಅದೇ ಮಾದರಿಯನ್ನು ಜಾತ್ಯತೀತತೆಯ ಹೆಸರಿನಲ್ಲಿ ಮಾಡಹೊರಟಿರುವುದು ಆತ್ಮದ್ರೋಹದ ಕ್ರಮವಾಗದೆ ಬೇರೆ ಏನಾದೀತು? ನಿರಂಕುಶಾಧಿಕಾರ ನಿಧಾನಕ್ಕೆ ಹೆಜ್ಜೆ ಇಡತೊಡಗಿದರೆ, ಪರವಾಗಿದ್ದ ಸಮುದಾಯಗಳೆಲ್ಲಾ ವಿರುದ್ಧವಾಗಿ ನಿಲ್ಲಲಾರದೆ ಇರಲಾರವು. ಭಾರತವು ಹಿಂದೆ ಎಮರ್ಜೆನ್ಸಿಯನ್ನು ಕಂಡು ಬೆಚ್ಚಿಬಿದ್ದಿತು. ಈಗ ಅಂಥ ಸ್ಥಿತಿ ಇಲ್ಲ. ಆದರೆ, ನಮ್ಮ ಪರಿಸ್ಥಿತಿಯು ಕ್ರೌರ್ಯವನ್ನು ಸಹಿಸಲೇಬೇಕಾದುದಕ್ಕಿಂತಲೂ ಪ್ರತಿ
ಭಟಿಸಲೇಬೇಕಾದ ಅನಿವಾರ್ಯದಲ್ಲೇ ಇದೆ.

ಗಡಿಯಾರದ ಮುಳ್ಳನ್ನು ನೀವು ಎಷ್ಟಕ್ಕೆ ಹಿಂತಿರುಗಿಸಿದರೂ ಅದು ಅಲ್ಲಿಂದಲೇ ಮುಂದಡಿ ಇಡುತ್ತದೆ. ಗತಕಾಲದ ಹೆಣವನ್ನು ಅಗೆದಗೆದು ಅದರ ವಾಸನೆಯನ್ನು ವ್ಯಾಪಕವಾಗಿ ಹರಡಿ, ಅದನ್ನೇ ಚರಿತ್ರೆಯೆಂದು ನಂಬಿಸುವ ಹುನ್ನಾರಕ್ಕೆ ಖಂಡಿತಾ ವಿರೋಧವಿದೆ. ಉದಾರವಾದ ನಿಲುವುಗಳಲ್ಲೇ ತನ್ನ ಸಂಸ್ಕೃತಿ, ಪರಂಪರೆಗಳನ್ನು ರಕ್ಷಿಸಿಕೊಂಡು ಬಂದ ದೇಶ ಈಗ ಉಗ್ರವಾದದ ಚೌಕಟ್ಟಿನಲ್ಲಿ ಅದನ್ನು ರಕ್ಷಿಸುತ್ತೇನೆ ಎನ್ನುವುದು ವಿಪರ್ಯಾಸ. ಗತವನ್ನು ನಿರಾಕರಿಸಿ ವರ್ತಮಾನವಿಲ್ಲ. ಗತದಲ್ಲಿ ಯಾವುದೂ ಒಳ್ಳೆಯದೆಂಬುದು ಇಲ್ಲ ಎಂಬ ನಿಲುವು ಸರಿಯಾದುದಲ್ಲ. ಮಾನವೀಯ ಪರವಾದದ್ದು ಎಲ್ಲಿರುತ್ತದೋ ಅದರ ಪರ ನಾವೆಲ್ಲ ಇರಬೇಕಾದುದು ನಮ್ಮ ಹೊಣೆಗಾರಿಕೆ.

ಆ ಕವಯತ್ರಿಯ ಎದುರು, ಈಚೆಗೆ ಬಿಡುಗಡೆಯಾದ ‘ಶಂಕರವಿಹಾರ’ ಪುಸ್ತಕದ ಮಾತು ತೆಗೆದಿದ್ದೆ. ‘ಅದರಲ್ಲೇನಿದೆ..., ಹಳೆಯದನ್ನು ಕುರಿತು ಈಗ ಬರೆಯುವುದು. ಗೊತ್ತಲ್ಲಾ ನಿಮಗೆ ಶಂಕರರ ಬಗ್ಗೆ’ ಎಂದರು. ‘ಗಾಂಧಿ, ಅಂಬೇಡ್ಕರ್, ಶಂಕರ, ಬುದ್ಧರ ಬಗ್ಗೆ ಬರೆದ ಅಪವ್ಯಾಖ್ಯಾನಗಳನ್ನೇ ನಂಬಿ ನಮ್ಮ ಅಭಿಪ್ರಾಯ ರೂಪಿಸಿಕೊಳ್ಳುವ ಸ್ಥಿತಿ ಈಗ ನಿರ್ಮಾಣವಾಗಿದೆ. ನಾವೇ ತಲಸ್ಪರ್ಶಿಯಾಗಿ ಓದದೆ, ಯಾವುದರ ಬಗೆಗೂ ನಿರ್ಣಯಕ್ಕೆ ಬರಬಾರದಲ್ಲವೇ?’ ಎಂದೆ. ಆಗ ಅವರು ಕೇಳಿದ್ದು ‘ನೀವು ಮೋದಿಯ ಪರವೋ? ವಿರೋಧವೋ?’ ಎಂದು. ನಾನು ಶಂಕರರ ಪರವಾದರೆ ಮೋದಿಯವರ ಪರವೆಂದೂ, ಶಂಕರರ ವಿರೋಧವಾಗಿದ್ದೇನೆಂದರೆ ಮೋದಿಯವರ ವಿರೋಧವಾಗಿದ್ದೇನೆಂದೂ ಅವರ ಗ್ರಹಿಕೆ.

ನಿಮ್ಮನ್ನು ಹೂವಿನ ಹಾದಿಯಲ್ಲಿ ಕರೆದುಕೊಂಡು ಹೋಗುತ್ತೇನೆಂಬ ಮಾತಾಗಲಿ, ಹಿಂದೆ ನೀವು ಬರೀ ಮುಳ್ಳಿನ ಹಾದಿಯಲ್ಲೇ ಇದ್ದೀರೆಂದು ಹೇಳುವುದಾಗಲೀ ಎರಡೂ ಮಿಥ್ಯೆ. ಎರಡನ್ನೂ ಮೀರಿದ ಸತ್ಯವೆಂದರೆ, ಮುಳ್ಳು– ಕಲ್ಲಿನ ಹಾದಿಯು ಎಲ್ಲ ಕಾಲದಲ್ಲೂ ಇದ್ದದ್ದೇ. ಈಗಂತೂ ಹೂವಿನ ಹಾದಿ ಕಾಣುತ್ತಿಲ್ಲ.

ನಾನು ಅವರಿಗೆ ಮೋದಿಯವರ ಪರವೆಂದೋ ವಿರೋಧವೆಂದೋ ಏನನ್ನೂ ಹೇಳಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT