ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಗ್ರಂಥಾಲಯ: ತಪ್ಪಿದ್ದೇಕೆ ಲಯ?

Last Updated 26 ಜೂನ್ 2020, 20:15 IST
ಅಕ್ಷರ ಗಾತ್ರ

ಲಾಕ್‌ಡೌನ್‌ನಿಂದಾಗಿ ಮುಚ್ಚಿರುವ ಸಾರ್ವಜನಿಕ ಗ್ರಂಥಾಲಯಗಳನ್ನು ಶೀಘ್ರ ತೆರೆಯಬೇಕೆಂದು ವಿನಂತಿಸಿದ ಎರಡು ಪತ್ರಗಳು ಪತ್ರಿಕೆಯ ‘ವಾಚಕರ ವಾಣಿ’ ವಿಭಾಗದಲ್ಲಿ ಇತ್ತೀಚೆಗೆ ಪ್ರಕಟವಾಗಿವೆ. ಸಾರ್ವಜನಿಕ ಗ್ರಂಥಾಲಯಗಳಿಂದ ಓದುಗ ಸಮೂಹ ವಿಮುಖವಾಗುತ್ತಿದೆ ಎನ್ನುವ ಆತಂಕದ ಈ ಸಮಯದಲ್ಲಿ, ಇಂತಹ ಅಹವಾಲು ಒಂದೆಡೆ ಸಂತಸಕ್ಕೆ ಕಾರಣವಾದರೆ, ಅದು ಕೆಲವು ಪ್ರಶ್ನೆಗಳನ್ನು ಕೂಡ ನಮ್ಮ ಮುಂದಿಡುತ್ತಿದೆ. ಹೀಗೆ ಅಹವಾಲು ಮಾಡಿಕೊಳ್ಳುತ್ತಿರುವ ಓದುಗರು ಯಾವ ವಯೋಮಾನದವರು? ಅವರು ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆಯನ್ನು ಉಪಯೋಗಿಸುತ್ತಿರುವುದು ಯಾವ ಉದ್ದೇಶಕ್ಕಾಗಿ?

ಆ ಪತ್ರಗಳಲ್ಲಿ ಓದುಗರೇ ನಿವೇದಿಸಿಕೊಂಡಂತೆ, ಸ್ಪರ್ಧಾತ್ಮಕ ಪರೀಕ್ಷಾ ಅವಧಿ ಹತ್ತಿರ ಬರುತ್ತಿರುವುದ ರಿಂದ ಸಂಬಂಧಿಸಿದ ಪುಸ್ತಕಗಳ ಅಗತ್ಯ ಮತ್ತು ಓದಲು ಅನುಕೂಲಕರವಾದ ಸ್ಥಳದ ಕಾರಣ ಅವರಿಗೆ ಸಾರ್ವಜನಿಕ ಗ್ರಂಥಾಲಯದ ಅವಶ್ಯಕತೆ ಎದುರಾಗಿದೆ.

ಸಾರ್ವಜನಿಕ ಗ್ರಂಥಾಲಯಗಳನ್ನು ಶ್ರೀಸಾಮಾನ್ಯರ ವಿಶ್ವವಿದ್ಯಾಲಯಗಳೆಂದು ಪರಿಗಣಿಸಲಾಗಿದೆ. ಇವುಗಳ ಕಾರ್ಯಯೋಜನೆ ಮನೆಮನೆಗೂ ಮುಟ್ಟಬೇಕೆನ್ನುವ ಸದಾಶಯದಿಂದ ‘ಸಂಚಾರಿ ಗ್ರಂಥಾಲಯ’ ಯೋಜನೆ ಕೂಡ ಚಾಲ್ತಿಗೆ ಬಂತು. 1980ರ ದಶಕದಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದ ನನಗೆ, ಗ್ರಂಥಾಲಯ ಸಿಬ್ಬಂದಿಯು ವಾಹನದಲ್ಲಿ ಪುಸ್ತಕಗಳನ್ನು ಹೇರಿಕೊಂಡು ಬಂದು ಪ್ರತೀ ಕಾಲೊನಿಯ ನಿರ್ದಿಷ್ಟ ಜಾಗದಲ್ಲಿ ಓದುಗರಿಗೆ ವಿತರಿಸುತ್ತಿದ್ದ ದೃಶ್ಯ ನೆನಪಿನಲ್ಲಿ ಹಸಿರಾಗಿದೆ. ಕಾಲಕ್ರಮೇಣ ಸಂಚಾರಿ ಗ್ರಂಥಾಲಯ ವ್ಯವಸ್ಥೆಯು ತನ್ನ ಕಾರ್ಯ

ಚಟುವಟಿಕೆಯನ್ನು ಸ್ಥಗಿತಗೊಳಿಸಿ, ಅದಕ್ಕೆ ತನ್ನದೇ ಆದ ಕಾರಣಗಳನ್ನು ನೀಡಿದೆ. ಸಂಖ್ಯಾ ದೃಷ್ಟಿಯಿಂದ ರಾಜ್ಯದಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಸೌಲಭ್ಯ ಸಮೃದ್ಧವಾಗಿದೆ. ಆದರೆ, ಗುಣಾತ್ಮಕ ಸೇವೆಯನ್ನು ಪರಿಗಣಿಸಿದಾಗ ಇವುಗಳ ಸಾಧನೆ ಗೌಣ. ಕ್ರಮೇಣ ಇವು ಜನಸಾಮಾನ್ಯರಿಂದಲೇ ದೂರವಾಗುತ್ತಿರುವ ಬೆಳವಣಿಗೆಗೆ ಇಲಾಖೆಯು ಅನೇಕ ಕಾರಣಗಳನ್ನು ಮುಂದಿಡುತ್ತದೆ. ಅತಿಯಾದ ಮೊಬೈಲ್ ಬಳಕೆ, ಟಿ.ವಿ. ಚಾನೆಲ್‍ಗಳ ಹಾವಳಿ, ಮಾಹಿತಿಯ ಡಿಜಿಟಲೀಕರಣ... ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹೀಗೆ ತಪ್ಪನ್ನೆಲ್ಲ ತಂತ್ರ ಜ್ಞಾನದ ಮೇಲೆ ಹೊರಿಸುವುದು, ಇಲಾಖೆಯು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಕ್ಕೊಂದು ಸುಲಭವಾದ ಮಾರ್ಗೋಪಾಯ.

ಇಲಾಖೆಯು ಮೊದಲು ಗಮನ ಹರಿಸಬೇಕಾದದ್ದು ಗ್ರಂಥಾಲಯಗಳಲ್ಲಿ ಎಂಥ ಪುಸ್ತಕಗಳು ಓದಲು ದೊರೆಯುತ್ತಿವೆ ಮತ್ತು ಅವುಗಳಿಂದ ಓದುಗ ವಲಯ ಸಂತೃಪ್ತವಾಗಿದೆಯೇ ಎನ್ನುವುದರ ಬಗ್ಗೆ. ಸಾರ್ವಜನಿಕ ಗ್ರಂಥಾಲಯಗಳಿಗೆ ಕೆಲವು ಅಧಿಕಾರಿಗಳು ತಮಗೆ ಬೇಕಾದ ಲೇಖಕರಿಂದ ಪುಸ್ತಕಗಳನ್ನು ಬರೆಸಿ ಮತ್ತು ಬೇಕಾದ ಪ್ರಕಾಶಕರಿಂದ ಪುಸ್ತಕಗಳನ್ನು ಪ್ರಕಟಿಸಿ ಖರೀದಿಸುವರೆಂಬ ದೂರಿದೆ. ಅಧಿಕಾರಿಗಳು ಈ ಮಾತನ್ನು ಅಲ್ಲಗಳೆದರೂ ಅಲ್ಲಿನ ಪುಸ್ತಕಗಳನ್ನು ನೋಡಿದಾಗ ಆ ಮಾತು ನಿಜವೆಂದು ತೋರುತ್ತದೆ. ಅಧಿಕಾರಿಗಳು, ಪ್ರಕಾಶಕರು ಮತ್ತು ಲೇಖಕರ ನಡುವೆ ಕಮಿಷನ್ ರೂಪದಲ್ಲಿ ಹಣ ಹರಿದಾಡುತ್ತದೆ ಎನ್ನುವ ಮಾತಿಗೆ ಅಲ್ಲಿನ ಪುಸ್ತಕಗಳೇ ಪುರಾವೆ ಒದಗಿಸುತ್ತವೆ.

ಕನ್ನಡದ ಮಹತ್ವದ ಲೇಖಕರ ಪುಸ್ತಕಗಳನ್ನು ದುರ್ಬೀನು ಹಾಕಿಕೊಂಡು ಹುಡುಕಬೇಕು. ಒಬ್ಬರೇ ಪ್ರಕಾಶಕರು ಬೇರೆ ಬೇರೆ ಪ್ರಕಾಶನ ಸಂಸ್ಥೆಗಳ ಹೆಸರಿನಿಂದ ಪುಸ್ತಕಗಳನ್ನು ಪ್ರಕಟಿಸಿ ಇಲಾಖೆಗೆ ಮಾರಾಟ ಮಾಡುವುದು ಬಹಿರಂಗ ಸತ್ಯವಾಗಿದೆ. ಸಾರ್ವಜನಿಕ ಗ್ರಂಥಾಲಯಗಳು ಪುಸ್ತಕಗಳನ್ನು ತೂಕ ಮಾಡಿ ಖರೀದಿಸುತ್ತವೆ ಎನ್ನುವ ವ್ಯಂಗ್ಯಭರಿತ ಹೇಳಿಕೆ ಬಹಳ ಹಿಂದಿನಿಂದಲೂ ಜನರ ನಡುವೆ ಕೇಳಿಬರುತ್ತದೆ.

ಜಿಲ್ಲಾ ಮತ್ತು ನಗರ ಕೇಂದ್ರ ಗ್ರಂಥಾಲಯಗಳ ಹಳೆಯ ಪೀಠೋಪಕರಣಗಳನ್ನೇ ಗ್ರಾಮೀಣ ಗ್ರಂಥಾಲಯಗಳಿಗೆ ಕೊಡಲಾಗುತ್ತದೆ. ಪುಸ್ತಕಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವೇನಿರುವುದಿಲ್ಲ.

ಇಲಾಖೆಯು ಸರ್ಕಾರದ ಮಟ್ಟದಲ್ಲಿ ಅವಗಣನೆಗೆ ಒಳಗಾಗಿರುವುದು ಸತ್ಯಕ್ಕೆ ಹತ್ತಿರವಾದ ಮಾತು. ಇದಕ್ಕೆ, ಈ ಇಲಾಖೆ ‘ಆರ್ಥಿಕವಾಗಿ ಹೊರೆಯಾಗಿದೆ’ ಎಂಬ ಭಾವನೆ ಅಧಿಕಾರಸ್ಥರಲ್ಲಿ ಇರುವುದು ಒಂದು ಕಾರಣವಾದರೆ, ಎರಡನೆಯ ಮಹತ್ವದ ಕಾರಣ, ಇದು ಅನುತ್ಪಾದಕ ಇಲಾಖೆ ಎನ್ನುವ ಭಾವನೆ ಅಧಿಕಾರಿಗಳಲ್ಲಿ ಇರುವುದು. ಓದಿನ ಅಭಿರುಚಿ ಬೆಳೆಸ ಬೇಕಾದ ಉದಾತ್ತ ಧ್ಯೇಯವನ್ನು ಹೊಂದಿರುವ ಇಲಾಖೆಯನ್ನು ಸರ್ಕಾರವು ಅನುತ್ಪಾದಕ ಕ್ಷೇತ್ರವೆಂದು ಪರಿಗಣಿಸುವುದು ಸರಿಯಲ್ಲ.

ಪುಸ್ತಕಗಳ ಡಿಜಿಟಲೀಕರಣಕ್ಕೆ ಮುಂದಾಗಿರುವ ಇಲಾಖೆಯ ನಿರ್ಧಾರವನ್ನು ಸ್ವಾಗತಿಸುವ ಹೊತ್ತಿನಲ್ಲೇ, ಆ ಪುಸ್ತಕಗಳ ಕುರಿತು ಮತ್ತೆ ಪ್ರಶ್ನೆ ಎದುರಾಗುತ್ತದೆ. ಕೆ.ಜಿಗಳ ಲೆಕ್ಕದಲ್ಲಿ ಖರೀದಿಸಿದ ಪುಸ್ತಕಗಳನ್ನು ಡಿಜಿಟಲೀಕರಣಗೊಳಿಸುತ್ತಿದ್ದರೆ ಅದು ಆರ್ಥಿಕವಾಗಿ ಇಲಾಖೆಗೆ ಹೊರೆಯ ಕೆಲಸ. ಮಧ್ಯವಯಸ್ಕ ಮತ್ತು ವಯೋವೃದ್ಧ ಓದುಗರನ್ನು ಈ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುವಂತೆ ಮಾಡುವುದು ಸವಾಲಿನ ಕೆಲಸ. ಇನ್ನು ಯುವ ಓದುಗರ ಓದು ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳಿಗಷ್ಟೇ ಸೀಮಿತ. ಆದ್ದರಿಂದ ಡಿಜಿಟಲೀಕರಣಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡು ವುದಕ್ಕಿಂತ ಅತ್ಯುತ್ತಮ ಪುಸ್ತಕಗಳ ಖರೀದಿ ಮತ್ತು ಪೀಠೋಪಕರಣಗಳಿಗಾಗಿ ಖರ್ಚು ಮಾಡಬಹುದು.

ಸಾರ್ವಜನಿಕ ಗ್ರಂಥಾಲಯಗಳನ್ನು ಪುನಶ್ಚೇತನ ಗೊಳಿಸುವ ಕಾರ್ಯಕ್ಕೆ ಇಲಾಖೆ ಮುಂದಾಗಬೇಕು. ಇಲ್ಲ ವಾದರೆ ಸಾರ್ವಜನಿಕ ಗ್ರಂಥಾಲಯಗಳು ಬಹುದೊಡ್ಡ ಓದುಗ ಸಮೂಹದಿಂದ ಪೂರ್ತಿ ವಿಮುಖವಾಗುವ ದಿನಗಳು ದೂರವಿಲ್ಲ.

ಲೇಖಕ: ಮುಖ್ಯ ಗ್ರಂಥಪಾಲಕ, ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT