ಸೋಮವಾರ, ಸೆಪ್ಟೆಂಬರ್ 27, 2021
23 °C
ಭವಿಷ್ಯದ ಭಾರತಕ್ಕಾಗಿ ಟ್ಯಾಗೋರ್‌ ಅವರು ತೆರೆದಿಟ್ಟ ವಿಶಾಲ ಹೆದ್ದಾರಿಯಲ್ಲಿ ನಾವೆಷ್ಟು ಕ್ರಮಿಸಿದ್ದೇವೆ ಎನ್ನುವ ಕುರಿತಾದ ಪುನರ್ವಿಮರ್ಶೆ ಸಂದರ್ಭೋಚಿತ

ಟ್ಯಾಗೋರ್ ಆಶಯ: ನಮಗೆಷ್ಟು ದಕ್ಕಿದೆ?

ಡಾ. ಜ್ಯೋತಿ Updated:

ಅಕ್ಷರ ಗಾತ್ರ : | |

Prajavani

ಭಾರತವು ಸ್ವಾತಂತ್ರ್ಯ ಚಳವಳಿಯ ಮೂಲಕ ಬ್ರಿಟಿಷರ ವಸಾಹತುಶಾಹಿ ಆಡಳಿತದಿಂದ ಮುಕ್ತಿ ಹೊಂದಿ ರಾಜಕೀಯ ಸ್ವಾತಂತ್ರ್ಯ ಪಡೆದ 75ನೇ ವರ್ಷಾಚರಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ, ಆಧುನಿಕ ಭಾರತದ ಬೌದ್ಧಿಕ ಜಗತ್ತನ್ನು ರೂಪಿಸಿದವರ ಚಿಂತನೆಗಳನ್ನು ಮೆಲುಕು ಹಾಕುವ ಪ್ರಸ್ತುತತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಯಾಕೆಂದರೆ, ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ರಾಜಕೀಯ ಸ್ವಾತಂತ್ರ್ಯದಷ್ಟೇ ಅಲ್ಲಿನ ನಾಗರಿಕರ ಬೌದ್ಧಿಕ ಪ್ರಬುದ್ಧತೆ ಹಾಗೂ ಸ್ವಾತಂತ್ರ್ಯವೂ ಅಷ್ಟೇ ಮುಖ್ಯ.

ಐರೋಪ್ಯ ದೇಶಗಳಿಂದ ಎರವಲು ಪಡೆದ ರಾಷ್ಟ್ರದ ಪರಿಕಲ್ಪನೆಗೆ ಭಿನ್ನವಾಗಿ, ಭಾರತ ಒಂದು ದೇಶವಾಗಿ ವಿಭಿನ್ನ ಸಂಸ್ಕೃತಿ, ಜಾತಿ, ಧರ್ಮ ಹಾಗೂ ಭಾಷೆಗಳನ್ನು ಒಳಗೊಂಡಿದೆ. ಇತಿಹಾಸದ ಪುಟಗಳಲ್ಲಿ ದಾಖಲಿಸಿದಂತೆ, ಅಮೆರಿಕ ಮತ್ತು ಆಸ್ಟ್ರೇಲಿಯಾದಲ್ಲಿ, ಯುರೋಪಿನ ವಸಾಹತುಗಾರರು ಮೂಲ
ನಿವಾಸಿಗಳನ್ನು ಸದೆಬಡಿದು ರಾಷ್ಟ್ರೀಯ ಏಕಸ್ವಾಮ್ಯ ಸಾಧಿಸಿದರು. ಇದಕ್ಕೆ ತದ್ವಿರುದ್ಧವಾಗಿ, ಭಾರತ ‘ವಸುಧೈವ ಕುಟುಂಬಕಮ್’ ತತ್ವದ ಅನುಸಾರ, ಇಲ್ಲಿ ನೆಲೆಯಾಗಲು ಇಚ್ಛಿಸಿದವರನ್ನು ಗೌರವದಿಂದ ಸ್ವೀಕರಿಸಿ, ವಿವಿಧತೆಯಲ್ಲಿ ಏಕತೆ ಸಾಧಿಸಿದೆ. ಹಾಗಾಗಿ, ಇದಕ್ಕೆ ವಿರುದ್ಧವಾದ ಯಾವುದೇ ರೀತಿಯ ನಿಲುವು ಹೊಂದುವುದು ಭಾರತೀಯ ಶ್ರೇಷ್ಠ ಪರಂಪರೆ, ತಾತ್ವಿಕತೆಗೆ ವಿರುದ್ಧ ಹಾಗೂ ಅಪ್ರಾಯೋಗಿಕ ಕೂಡ.

ಈ ದಿಸೆಯಲ್ಲಿ, ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಭಾರತದ ದಾರ್ಶನಿಕರು ರಾಷ್ಟ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವ ಬಗೆಯ ದೃಷ್ಟಿಕೋನಗಳನ್ನು ಹೊಂದಿದ್ದರು ಎನ್ನುವುದರ ಅವಲೋಕನ ನಡೆಸುವುದು ಬಹಳ ಪ್ರಸ್ತುತವಾಗಿದೆ. ದೇಶದ ಬೌದ್ಧಿಕ ಜಗತ್ತಿಗೆ ಬಹುದೊಡ್ಡ ಕಾಣಿಕೆ ನೀಡಿದವರಲ್ಲಿ ಪ್ರಮುಖ ಹೆಸರು ರವೀಂದ್ರನಾಥ ಟ್ಯಾಗೋರ್. ಅವರು ತಮ್ಮ ಸಾಹಿತ್ಯ, ಸಂಗೀತ, ಚಿತ್ರಕಲೆ, ತತ್ವಶಾಸ್ತ್ರ ಹಾಗೂ ವಿನೂತನ ಶಿಕ್ಷಣ ಕ್ರಮದ ಪರಿಕಲ್ಪನೆಯ ಮೂಲಕ ಭವಿಷ್ಯದ ಭಾರತಕ್ಕೆ ಬೇಕಾದ ವಿಶಾಲ ಹೆದ್ದಾರಿಯೊಂದನ್ನು ಜನರಿಗೆ ತೆರೆದಿಟ್ಟಿದ್ದರು. ಇಷ್ಟು ವರ್ಷಗಳಲ್ಲಿ ಆ ಹೆದ್ದಾರಿಯಲ್ಲಿ ನಾವೆಷ್ಟು ಕ್ರಮಿಸಿದ್ದೇವೆ ಎನ್ನುವ ಕುರಿತಾದ ಪುನರ್ವಿಮರ್ಶೆ ಸಂದರ್ಭೋಚಿತ.

ಟ್ಯಾಗೋರ್ ಪರಿಕಲ್ಪನೆಯ ಸ್ವತಂತ್ರ ಭಾರತವನ್ನು ಸಮಗ್ರವಾಗಿ ಹಿಡಿದಿಟ್ಟಿರುವ ಅವರ ಕವಿತೆ, ‘ಎಲ್ಲಿ ಮನಕೆ ಅಳುಕಿರದೋ...’ ಇದನ್ನು 1910ರಲ್ಲಿ, ಅವರ ಕಾವ್ಯಸಂಗ್ರಹ ‘ಗೀತಾಂಜಲಿ’ಯ ಭಾಗವಾಗಿ ಪ್ರಕಟಿಸಲಾಯಿತು. ವಿಷಾದವೆಂದರೆ, ಶತಮಾನದ ಹಿಂದೆ ಟ್ಯಾಗೋರರ ಪ್ರಬುದ್ಧ ಯೋಚನಾಲಹರಿಯ ಕನಸಿನ ಭಾರತ, ನಮಗಿನ್ನೂ ಸಂಪೂರ್ಣವಾಗಿ ಸಿದ್ಧಿಸಿಲ್ಲ.

ಟ್ಯಾಗೋರ್ ಅವರ ಪ್ರಕಾರ, ಸ್ವತಂತ್ರ ದೇಶವೆಂದರೆ ಅಲ್ಲಿನ ನಾಗರಿಕರು ನಿರ್ಭೀತಿಯಿಂದ ಬದುಕುವ ವಾತಾವರಣವಿರುತ್ತದೆ. ಅವರು ನಿರ್ದಿಷ್ಟವಾಗಿ ‘ಅಳುಕಿಲ್ಲದ ಮನಸ್ಸು’ ಎಂದು ಉಲ್ಲೇಖಿಸುತ್ತಾರೆ. ಯಾಕೆಂದರೆ, ಭಯಗ್ರಸ್ತ ಮನಸ್ಸು ಬದುಕಿನ ಉನ್ನತ ಸಾಧನೆಗೆ ಅಡ್ಡಿಯಾಗಬಹುದು. ಆನಂತರ ಟ್ಯಾಗೋರ್ ತಲೆಯೆತ್ತಿ ನಿಲ್ಲುವ ಸ್ವಾಭಿಮಾನದ ಬದುಕಿನ ಅಗತ್ಯವನ್ನು ಪ್ರಸ್ತಾಪಿಸುತ್ತಾರೆ. ಅಂದರೆ, ಇದು ಮಾನವ ನಿರ್ಮಿತ ವ್ಯವಸ್ಥೆ ಪ್ರತಿಪಾದಿಸುವ ದೈಹಿಕ ಮತ್ತು ಮಾನಸಿಕ ಗುಲಾಮಗಿರಿಯಿಂದ ಕಳಚಿಕೊಂಡ ಗೌರವದ ಬದುಕು. ಸ್ವತಂತ್ರ ರಾಷ್ಟ್ರದಲ್ಲಿ ಜಾತಿ, ಧರ್ಮ, ಲಿಂಗ, ಭಾಷೆ ಅಥವಾ ವರ್ಗ ಆಧಾರಿತ ತಾರತಮ್ಯ
ಗಳಿಗೆ ಆಸ್ಪದವಿಲ್ಲ ಎನ್ನುವುದೇ ಇಲ್ಲಿನ ತಾತ್ಪರ್ಯ.

ಉಳಿದ ಜೀವರಾಶಿಗಳಿಗಿಂತ ವಿಭಿನ್ನವೆಂದು ಗುರುತಿಸಿಕೊಳ್ಳುವ ಮನುಷ್ಯನ ವಿಶೇಷವೆಂದರೆ, ಜ್ಞಾನ ಹಾಗೂ ಸ್ವತಂತ್ರ ಚಿಂತನೆ. ಇದು ಉದ್ದೀಪನವಾಗುವುದು ಶಿಕ್ಷಣದ ಮೂಲಕ. ಹಾಗಾಗಿ, ಗುಣಮಟ್ಟದ ಉಚಿತ ಶಿಕ್ಷಣ ಒದಗಿಸುವುದು ಅಭಿವೃದ್ಧಿಯ ಕನಸು ಕಾಣುವ ದೇಶಗಳ ಮೂಲಭೂತ ಜವಾಬ್ದಾರಿ.

ಮಹತ್ತರವಾಗಿ, ಟ್ಯಾಗೋರರ ಕನಸಿನ ಭಾರತ ದಲ್ಲಿ, ಮನುಷ್ಯರ ನಡುವಿನ ಸಹಜ ಭಿನ್ನತೆಗಳು, ಮನಸ್ಸು ಮನಸ್ಸುಗಳ ನಡುವಿನ ಸಂಕುಚಿತ ಅಡ್ಡಗೋಡೆಗಳಾಗಿ ಮಾರ್ಪಡದಿರಲಿ ಎನ್ನುವ ಕಳಕಳಿಯಿದೆ. ಸುಳ್ಳಿನ ತಳಹದಿಯ ಮೇಲೆ ಮಾತಿನ ಸೌಧ ಕಟ್ಟಿ ಬದುಕುವವರಿಗೆ ಸಾರ್ವಜನಿಕ ಮನ್ನಣೆ ಸಿಗಬಾರದು ಎನ್ನುವ ಎಚ್ಚರಿಕೆ ಮೂಡಿಸುವ ಟ್ಯಾಗೋರ್, ಮನುಷ್ಯನ ಮಾತು ಸತ್ಯದ ಆಳದಿಂದ ಹೊರಸೂಸಬೇಕು ಎನ್ನುತ್ತಾರೆ.

ಮನುಷ್ಯಜೀವನದ ಒಟ್ಟು ತಾತ್ಪರ್ಯವನ್ನು ಹೀಗೆನ್ನುತ್ತಾರೆ: ‘ದಣಿವಿಲ್ಲದ ಪ್ರಯತ್ನಗಳ ಮೂಲಕ ನಿರಂತರವಾಗಿ ಪರಿಪೂರ್ಣತೆಯತ್ತ ಕೈಚಾಚುವುದೇ ಜೀವನದ ಉದ್ದೇಶ. ಅದರಂತೆಯೇ, ವೈಜ್ಞಾನಿಕ ದೃಷ್ಟಿಕೋನವೆನ್ನುವ ಚಿಂತನೆಯ ಸ್ಫಟಿಕದ ತೊರೆಯು ಸಮಾಜದಲ್ಲಿ ಆಳವಾಗಿ ಬೇರೂರಿರುವ ಮೂಢನಂಬಿಕೆಯೆಂಬ ಮರುಭೂಮಿಯಲ್ಲಿ ಇಂಗಿಹೋಗದೆ, ಸದಾ ಜನಮನದಲ್ಲಿ ಹರಿದು ದಾರಿದೀಪವಾಗಲಿ’. ಹಾಗೆಯೇ, ಮನುಷ್ಯ ತನ್ನ ಸುತ್ತಲಿನ ಜಗತ್ತಿನ ಒಡನಾಟದಿಂದ ಪಡೆಯುವ ವಿದ್ವತ್, ಅವನ ದೃಷ್ಟಿಕೋನವನ್ನು ನಿರಂತರವಾಗಿ ವಿಶಾಲಗೊಳಿಸುತ್ತ, ಅವನ ಆಲೋಚನೆ ಹಾಗೂ ಕಾಯಕದಲ್ಲಿ ಪ್ರತಿಫಲಿಸುತ್ತಿರಬೇಕು.

ಈ ಎಲ್ಲಾ ಅಂಶಗಳು ಯಾವ ದೇಶವಾಸಿಗಳ ಜೀವನಮಾರ್ಗ ಆಗಿರುತ್ತವೋ ಮತ್ತು ಅದಕ್ಕೆ ಪೂರಕವಾದ ವ್ಯವಸ್ಥೆ ಇರುತ್ತದೋ ಅದೇ ನೈಜ ಸ್ವಾತಂತ್ರ್ಯದ ಅನುಭವ. ದುರದೃಷ್ಟವಶಾತ್, ಟ್ಯಾಗೋರ್ ಅವರ ಕನಸಿನ ದಾರ್ಶನಿಕ ಸ್ವಾತಂತ್ರ್ಯವನ್ನು ನಾವು ಇನ್ನೂ ದಕ್ಕಿಸಿಕೊಂಡಿಲ್ಲ.

ಕುವೆಂಪು ಅವರು ಹೇಳಿದಂತೆ, ಸ್ವಾತಂತ್ರ್ಯ ಹೋರಾಟ ನಿರಂತರವಾದುದು, ಅದಕ್ಕೆ ಪೂರ್ಣ
ವಿರಾಮವಿಲ್ಲ. ನಮ್ಮ ಸ್ವಾತಂತ್ರ್ಯಹರಣವಾಗದಂತೆ ಸದಾ ಎಚ್ಚರ ಕಾಯ್ದುಕೊಂಡು, ಅದಕ್ಕಾಗಿ ನಾವು ನಿತ್ಯವೂ ಹೋರಾಡುತ್ತಲೇ ಇರಬೇಕಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.