ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸಿಕ ಏಕಲವ್ಯರು ಇವರು!

Last Updated 14 ಜುಲೈ 2019, 20:15 IST
ಅಕ್ಷರ ಗಾತ್ರ

‘ರಾಜ್ಯ ಸರ್ಕಾರ ಪೋರ್ಟಬಿಲಿಟಿ ವ್ಯವಸ್ಥೆ ಜಾರಿಗೆ ತಂದಿರುವುದರಿಂದ ಗ್ರಾಹಕರು ಯಾವ ಊರಿನಲ್ಲಿ, ಯಾವ ನ್ಯಾಯಬೆಲೆ ಅಂಗಡಿಯಲ್ಲಿ ಬೇಕಾದರೂ ಪಡಿತರ ಪಡೆಯಬಹುದು’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಧಾರವಾಡ ಜಿಲ್ಲೆಯ ಉಪನಿರ್ದೇಶಕ ಡಾ. ಸದಾಶಿವ ಮರ್ಜಿ ‘ಪ್ರಜಾವಾಣಿ’ಯ ಫೋನ್ ಇನ್ ಕಾರ್ಯಕ್ರಮದಲ್ಲಿ (ಜುಲೈ 9) ಹೇಳಿದ್ದಾರೆ. ಪಡಿತರ ವಿತರಣೆಗೆ ಸಂಬಂಧಿಸಿದಂತೆ ರಾಜ್ಯದ ಎಲ್ಲೆಡೆಯಿಂದ ಅನೇಕರು ಕೇಳಿದ ಪ್ರಶ್ನೆಗಳಿಗೆ ಅವರು ಸಮಾಧಾನ ಹೇಳಿದ್ದಾರೆ. ಹಾಗೆಯೇ ಪತ್ರಿಕೆಯ ಸಂಪಾದಕೀಯ (ಪ್ರ.ವಾ.,ಜುಲೈ 11) ಕೂಡ, ದೇಶದಾದ್ಯಂತ ಅನ್ವಯವಾಗುವ ‘...ಒಂದೇ ಪಡಿತರ ಚೀಟಿ’ ಯೋಜನೆ ಯಶಸ್ವಿಯಾದರೆ ಕಾನೂನಿನ ಆಶಯ ಪೂರ್ಣಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟಿದೆ.

‘ಪಡಿತರ ಚೀಟಿಯಲ್ಲಿ ಹೆಸರು ಇರುವವರೆಲ್ಲ ಒಮ್ಮೆ ಹೆಬ್ಬೆಟ್ಟಿನ ಅಚ್ಚು ನೀಡಬೇಕು. ನಂತರ ಪ್ರತಿ ತಿಂಗಳೂ ಯಾರಾದರೊಬ್ಬರು ತಮ್ಮ ಬೆರಳಚ್ಚು ದೃಢೀಕರಿಸಿ ಪಡಿತರ ತರಬಹುದು’ ಎಂದಿದ್ದಾರೆ ಉಪನಿರ್ದೇಶಕರು. ಕೆಲ ದಿನಗಳ ಹಿಂದೆ ‘ಕುಟುಂಬಕ್ಕಿನ್ನು ಮಹಿಳೆಯೇ ಯಜಮಾನಿ’ ಎಂಬ ಆಕರ್ಷಕ ಶೀರ್ಷಿಕೆಯೊಂದಿಗೆ, ‘ಎಲ್ಲ ಪಡಿತರ ಚೀಟಿದಾರರ ಬೆರಳಚ್ಚನ್ನು ಪಡೆದ ನಂತರ ಮಹಿಳೆಯರನ್ನು ಮನೆಯ ಯಜಮಾನಿ ಎಂದು ಪರಿಗಣಿಸಿ, ಹೊಸ ಕಾರ್ಡ್‌ಗಳನ್ನು ಮುದ್ರಿಸಿ ಕೊಡಲಾಗುವುದು’ ಎಂದು ಇಲಾಖೆಯ ಉಪನಿರ್ದೇಶಕ ಪುಟ್ಟಸ್ವಾಮಿ ಅವರು ಹೇಳಿದ್ದು ವರದಿಯಾಗಿತ್ತು. ವಾಸ್ತವದಲ್ಲಿ, ಕುಟುಂಬದ ಎಲ್ಲ ಸದಸ್ಯರೂ ಬೆರಳಚ್ಚು ಕೊಟ್ಟು ಬರಬೇಕೆಂಬ ಆ ಸುದ್ದಿಯು ಹಳ್ಳಿಗಳಲ್ಲಿ ತಲ್ಲಣ ಮೂಡಿಸಿತ್ತು. ಈ ಪ್ರಕ್ರಿಯೆಗೆ ಒಳಪಡದವರಿಗೆ ‘ಬೆರಳಚ್ಚು ನೀಡಬೇಕು’ ಎನ್ನುವುದು ಬಲು ಸುಲಭದ ವಿಷಯ. ಆದರೆ ನಮ್ಮ ಹಳ್ಳಿಗಳಲ್ಲಿ ಬೆರಳಚ್ಚು ಕೊಡಹೋದರೆ ಸರ್ವರ್ ಇಲ್ಲ, ಕರೆಂಟ್ ಇಲ್ಲ, ಉದ್ದನೆಯ ಸಾಲು... ಎಂಬಂತಹ ಕಾರಣಗಳಿಂದಾಗಿ, ಹೋದ ದಿನವೇ ಕೆಲಸ ಆಗಿದ್ದೇ ಗೊತ್ತಿಲ್ಲ.

ಕೆಲವೊಮ್ಮೆ ಬೆರಳಚ್ಚು ಕೊಡಲು ಮೂರ್ನಾಲ್ಕು ಬಾರಿ ಅಲೆಯಬೇಕು. ಅಂಥಾದ್ದರಲ್ಲಿ, ಶಾಲೆಗೆ ಹೋಗುವ ಮಕ್ಕಳು, ದುಡಿಯಲು ಹೋದ ಮಗ, ಹುಟ್ಟಿದ ಮಗು ಸೇರಿದಂತೆ ಮನೆಯವರೆಲ್ಲರೂ ಸರದಿಯಲ್ಲಿ ನಿಲ್ಲುವ ದೃಶ್ಯವೇ ಅಮಾನವೀಯ. ದಿನವೊಂದಕ್ಕೆ10 ಬೆರಳಚ್ಚುಗಳನ್ನೂ ಪಡೆಯಲು ಸಾಧ್ಯವಾಗುವುದಿಲ್ಲವಾದ್ದರಿಂದ ತಾವು ಈ ಕಾರ್ಯ ಮಾಡುವುದಿಲ್ಲ ಎಂದು ಪಡಿತರ ಅಂಗಡಿಯವರು ಹೇಳಿರುವ ಕಾರಣಕ್ಕೆ, ಸರ್ಕಾರ ಆ ಆದೇಶವನ್ನು ಹಿಂತೆಗೆದುಕೊಂಡಿದೆ. ಆನಂತರವೂ ಉಪನಿರ್ದೇಶಕರು ಇದೇ ಆದೇಶವನ್ನು ಉಲ್ಲೇಖಿಸುತ್ತಾರೆ ಎಂದರೆ, ಈ ವ್ಯವಸ್ಥೆ ಮರಳಿ ಬರುವ ಶಂಕೆ ಮೂಡುತ್ತದೆ ಮತ್ತು ಅವರ ಆದೇಶದ ನಿಜವಾದ ಉದ್ದೇಶದ ಬಗ್ಗೆ ಸಂಶಯವೂ ಮೂಡುತ್ತದೆ.

ಜನ ವಲಸೆ ಹೋಗುವುದರಲ್ಲಿ ಮೂರು ಹಂತಗಳಿವೆ. ಮೊದಲ ಹಂತದಲ್ಲಿ, ಮುಖ್ಯಸ್ಥ ಮಾತ್ರ ಹೋಗುತ್ತಾನೆ. ಮಕ್ಕಳನ್ನು ಅಜ್ಜ– ಅಜ್ಜಿ ಬಳಿ ಬಿಟ್ಟು ಗಂಡ– ಹೆಂಡತಿಯಷ್ಟೇ ಹೋಗುವುದು ಎರಡನೆಯ ಹಂತ. ಮನೆಯವರೆಲ್ಲರೂ ವಲಸೆ ಹೋಗುವುದು ಬಹುಶಃ ಮೂರನೇ ಹಂತದಲ್ಲಿ ಬರುತ್ತದೆ. ಮನೆಯವರೆಲ್ಲರೂ ವಲಸೆ ಹೋದಾಗ ಮಾತ್ರ, ಹೋದಲ್ಲಿಯೇ ಪಡಿತರ ದೊರಕಿದರೆ ಆ ಕುಟುಂಬಕ್ಕೆ ಅನುಕೂಲವಾಗುತ್ತದೆ. ಒಬ್ಬನೇ ಹೋದವನು ತಿಂಗಳಿಗೊಮ್ಮೆ ಬೆರಳಚ್ಚು ದೃಢೀಕರಣಕ್ಕಾಗಿ ಖರ್ಚು ಮಾಡಿಕೊಂಡು ಊರಿಗೆ ಬರುತ್ತಾನೆ. 3 ತಿಂಗಳು ಆತ ಬಾರದಿದ್ದರೆ ಆ ರೇಷನ್ ಕಾರ್ಡ್ ಡಿಲೀಟ್ ಆಗಿಹೋಗುತ್ತದೆ. ಹೀಗಿರುವಾಗ, ಗಂಡ– ಹೆಂಡತಿ ಇಬ್ಬರೂ ಬೆರಳಚ್ಚು ಕೊಡುವುದರಲ್ಲಿ ಅರ್ಥವಿದೆ. ಆದರೆ ಇಡೀ ಕುಟುಂಬದವರು ಬೆರಳಚ್ಚು ಕೊಡಬೇಕೆನ್ನುವ ಆದೇಶದ ಹಿಂದೆ ಬೇರೇನೋ ಉದ್ದೇಶವಿರುವುದು ಮೇಲ್ನೋಟದಲ್ಲೇ ಸ್ಪಷ್ಟವಾಗುತ್ತದೆ.

ನಮ್ಮದು ದೊಡ್ಡ ದೇಶ. ನೂರಾರು ಬಗೆಯ, ವೈವಿಧ್ಯಮಯ ಆಹಾರ ಪದ್ಧತಿಗಳು. ಪಡಿತರದಲ್ಲಿ ಸ್ಥಳೀಯ, ವೈವಿಧ್ಯಮಯ ಆಹಾರ ಕೊಡುವ ದಿಕ್ಕಿನಲ್ಲಿ ಸರ್ಕಾರವು ಕಾಲನ್ನೇ ಇಟ್ಟಿಲ್ಲ. ಆದರೆ ಆಯಾ ರಾಜ್ಯದಲ್ಲಿ ಕೊಡುವ ಧಾನ್ಯಗಳು ಬೇರೆ ಬೇರೆ ಮತ್ತು ದರಗಳೂ ಬೇರೆ ಬೇರೆ. ಹಾಗಿರುವಾಗ ‘ಇಡೀ ದೇಶಕ್ಕೊಂದೇ ಪಡಿತರ’ ಘೋಷಣೆಗೂ ಮೊದಲು, ದೇಶದಲ್ಲಿ ವಿತರಣೆ ಒಂದೇ ರೂಪಕ್ಕೆ ಬರಬೇಕು. ಆ ತಯಾರಿಯು ಸರ್ಕಾರದ ಕಡೆಯಿಂದ ಮೊದಲು ಆಗಬೇಕು. ಆದರೆ ಪ್ರಾದೇಶಿಕ ಆಹಾರ ಬೇರೆ ಬೇರೆ ಇರುವಾಗ ಈ ಭಿನ್ನತೆ ಹೆಚ್ಚಬೇಕೇ ಹೊರತು ಅದನ್ನು ಅಳಿಸಬಾರದಲ್ಲ?

ಪ್ರಾದೇಶಿಕವಾದ ಆಹಾರವನ್ನೇ ಕೊಡಿ ಎಂದು ಸರ್ಕಾರಕ್ಕೆ ಇನ್ನಿಲ್ಲದಷ್ಟು ಮನವಿಗಳು ಹೋಗಿವೆ. ಯಾವುದೋ ಸುಳಿಯಲ್ಲಿ ಸಿಲುಕಿರುವ ಸರ್ಕಾರ, ಪ್ರಜೆಗಳಿಗೆ ಬೇಕಾಗಿರುವುದನ್ನು ನೀಡಲಾಗದೆ ಬರಿಯ ಮೋಡಿಯ ಮಾತುಗಳಡಿಯಲ್ಲಿ ಮೋಸವನ್ನೇ ಮಾಡುತ್ತಿದೆ. ಈಗಾಗಲೇ ಐದಾರು ವರ್ಷಗಳಿಂದ, ಪಡಿತರ ಚೀಟಿ ಹೊಂದಿರುವವರು ಮತ್ತೆ ಮತ್ತೆ ಬದಲಾಗುವ ಆದೇಶಗಳಿಂದಾಗಿ ಅಲೆದಲೆದು ಬಸವಳಿದು ಹೋಗಿದ್ದಾರೆ. ಇದು ಖಂಡಿತ ಆಹಾರ ಭದ್ರತಾ ಕಾನೂನಿನ ಆಶಯವಲ್ಲ. ಎಪಿಎಲ್, ಬಿಪಿಎಲ್ ವಿಂಗಡಣೆ ಮಾಡಿದಂದಿನಿಂದಲೇ ಪಡಿತರ ಚೀಟಿದಾರರ ಬವಣೆಗಳ ಬಗ್ಗೆ ಮಧ್ಯಮ ವರ್ಗದವರಿಗೆ ಅನುಕಂಪ ಕರಗಿ ಹೋಗಿದೆ. ಅವರಿಗೆ ‘ಬೆರಳಚ್ಚು ಕೊಡುವುದು’ ದೊಡ್ಡ ವಿಷಯವಾಗಿ ಕಾಣುವುದಿಲ್ಲ. ಆದರೆ ವಾಸ್ತವದಲ್ಲಿ ಪಡಿತರ ಚೀಟಿದಾರರಿಗೆ ಅದು ತಿಂಗಳಿಗೊಮ್ಮೆ ಏಕಲವ್ಯನಾಗುವ ಅನುಭವ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT