ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು (ಜ.24) ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ: ಹೆಣ್ಣು ಮಗುವಿನ ‘ನಿಜಮೌಲ್ಯ’

ಸಂಗತ: ‘ಹೆಣ್ಣು ಮಗು’ವಿನ ದಿನ ಆಚರಿಸಲಾಗುತ್ತದೆ ಎಂಬುದೇ ಬಹು ಜನರಿಗೆ ಗೊತ್ತಿಲ್ಲ!
Last Updated 24 ಜನವರಿ 2022, 5:24 IST
ಅಕ್ಷರ ಗಾತ್ರ

‘ರಾಷ್ಟ್ರೀಯ ಹೆಣ್ಣು ಮಗುವಿನ ದಿನ’ವನ್ನಾಗಿ ಜನವರಿ 24 ಅನ್ನು 2009ರಿಂದ ಪ್ರತಿವರ್ಷ ಆಚರಿಸಲಾಗುತ್ತಿದೆ.

***

‘ರಾಷ್ಟ್ರೀಯ ಹೆಣ್ಣು ಮಗುವಿನ ದಿನ’ವನ್ನಾಗಿ ಜನವರಿ 24 ಅನ್ನು 2009ರಿಂದ ಪ್ರತಿವರ್ಷ ಆಚರಿಸಲಾಗುತ್ತಿದೆ. ಅಮೆರಿಕದಂಥ ಮುಂದುವರಿದ ದೇಶದಲ್ಲಿಯೂ ಈವರೆಗೆ ಸಾಧ್ಯವಾಗಿರದ ‘ಮಹಿಳಾ ಪ್ರಧಾನಿ’ಯ ವಾಸ್ತವ, ಭಾರತದಲ್ಲಿ 1966ರ ಜನವರಿ 24ಕ್ಕೆ ಇಂದಿರಾ ಗಾಂಧಿ ಅವರು ಭಾರತದ ಪ್ರಧಾನಿಯಾಗು ವುದರೊಂದಿಗೆ ಸಾಧ್ಯವಾದದ್ದು ಈಗ ಇತಿಹಾಸ. ಇದೂ ಮಹಿಳಾ ಸಬಲೀಕರಣದ ಒಂದು ಗುರುತು ಎಂಬ ಕಾರಣಕ್ಕೆ ಈ ದಿನವನ್ನೇ ಹೆಣ್ಣು ಮಗುವಿನ ದಿನವನ್ನಾಗಿ ಭಾರತ ಆರಿಸಿಕೊಂಡಿದೆ.

ಪ್ರತಿವರ್ಷ ಹೊಸತೊಂದು ಧ್ಯೇಯವಾಕ್ಯವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆರಿಸಿಕೊಳ್ಳುತ್ತದೆ. ಆ ಧ್ಯೇಯವನ್ನು ಇಟ್ಟುಕೊಂಡು ಮತ್ತಷ್ಟು ಕೆಲಸಗಳನ್ನು ಮಾಡಬೇಕು, ಅರಿವು ಮೂಡಿಸಬೇಕು ಎನ್ನುವುದು ಅದರ ಉದ್ದೇಶ. ಆದರೆ ದುರಂತವೆಂದರೆ, ಈ ಬಾರಿಯ ಧ್ಯೇಯವಾಕ್ಯಕ್ಕಾಗಿ ಇಲಾಖೆಯ ಅಂತರ್ಜಾಲ ತಾಣವನ್ನು ಕೆದಕಿದರೂ, ಗೂಗಲ್‌ನಲ್ಲಿ ವಿವಿಧ ಶೀರ್ಷಿಕೆಗಳನ್ನು ಹಾಕಿ ತಡಕಾಡಿದರೂ, ಕೇವಲ ಮೂರೇ ದಿನಗಳು ಉಳಿದಿವೆ ಎಂದಾಗಲೂ ಸಾಮಾನ್ಯ ಜನರಿಗೆ ‘ಧ್ಯೇಯ’ ಲಭ್ಯವಿಲ್ಲ!

ನಿರ್ದಿಷ್ಟ ದಿನದಂದು ಸೂಕ್ತ ಧ್ಯೇಯವನ್ನು ಆರಿಸಿ, ವರ್ಷಪೂರ್ತಿ ಆ ಧ್ಯೇಯಕ್ಕೆ ಅನುಗುಣವಾಗಿ ದುಡಿಯುವುದು, ಹಿಂದಿನ ಧ್ಯೇಯವನ್ನೇ ಮಹತ್ವದ ಅಂಶದಿಂದ 2-3 ವರ್ಷಗಳವರೆಗೆ ಮುಂದು ವರಿಸುವುದು, ಧ್ಯೇಯಕ್ಕೆ ಪ್ರಚಾರ ನೀಡುವುದಕ್ಕೆ ವಿಷಯ ‘ಗಂಭೀರ’ವಾದದ್ದಲ್ಲ ಎಂಬ ಕಾರಣದಿಂದ ಗಣನೆಗೆ ಬಾರದಿರುವುದು- ಹೀಗೆ ‘ಧ್ಯೇಯ’ ಹೊರ ಬೀಳದಿರಲು ಹಲವು ಕಾರಣಗಳಿರುವ ಸಾಧ್ಯತೆಯಿದೆ.

ಕಾರಣ ಯಾವುದೇ ಇರಲಿ ಹೆಣ್ಣು ಮಗುವಿನ ‘ನಿಜಮೌಲ್ಯ’ದ ಬಗ್ಗೆ ನಮಗೆ ಅರಿವು ಇದ್ದಂತಿಲ್ಲ! ಇಂಥ ಒಂದು ದಿನ ಅಸ್ತಿತ್ವದಲ್ಲಿ ಇದೆಯೆಂಬುದೇ ಬಹು ಜನರಿಗೆ ಗೊತ್ತಿಲ್ಲ. ಪಾಲಿಸಬೇಕಾದ ಜನರಿಗೆ ಅರಿವಿಲ್ಲದೆ ನಿರರ್ಥಕವಾಗಿರುವ ಕಾನೂನುಗಳು- ದುರುಪಯೋಗವಾಗುವ ಕಾನೂನುಗಳು ಮಹಿಳೆಯರಿಗೆ ಸಂಬಂಧಿಸಿದಂತೆ ಬಹಳಷ್ಟಿವೆ. ಆದರೂ ಮಹಿಳಾ ಸಬಲೀಕರಣ ಎಂಬ ಪರಿಕಲ್ಪನೆಯನ್ನು ನಾವು ಸ್ವಲ್ಪ ಅನುಮಾನದಿಂದ ನೋಡುವುದೇ ಹೆಚ್ಚು!

‘ಅದೆಲ್ಲಾ ಭಾಷಣ ಮಾಡಲು, ಇತರರಿಗೆ ಬೋಧಿಸಲು ಪರವಾಗಿಲ್ಲ, ಆದರೆ ನಮ್ಮ ಮನೆಗೆ ಬೇಡ’ ಎನ್ನುವ ಧೋರಣೆ ಸಾಮಾನ್ಯ. ಸಬಲೀಕರಣ ಒಳಗೊಳ್ಳುವ ಅಂಶಗಳು ಯಾವುವು? ಸ್ವಂತ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ, ಅಂತಹ ನಿರ್ಣಯವನ್ನು ತೆಗೆದುಕೊಳ್ಳಲು ಬೇಕಾದ ಮಾಹಿತಿ-ಸಂಪನ್ಮೂಲ, ಆಯ್ಕೆಗಳಿರುವುದು, ಒಟ್ಟಿಗೆ ತೆಗೆದುಕೊಳ್ಳುವ ನಿರ್ಧಾರ ಗಳಲ್ಲಿ ದನಿಯೆತ್ತಿ ಮಾತನಾಡುವ ಅವಕಾಶ, ತನಗೆ ಬದಲಾವಣೆಯನ್ನು ತರುವ ಶಕ್ತಿಯಿದೆ ಎಂಬ ನಂಬಿಕೆ, ಕೌಶಲಗಳನ್ನು ಕಲಿಯುವ ಸೌಲಭ್ಯ, ಇನ್ನೊಬ್ಬರ ಗ್ರಹಿಕೆಗಳನ್ನು ಬದಲಿಸುವ ಬಲ. ಈ ಪ್ರಕ್ರಿಯೆ ನಿರಂತರ ಮತ್ತು ಸ್ವತಃ ಆರಂಭಿಸಬೇಕಾದದ್ದು ಎನ್ನುವುದು ಗಮನಾರ್ಹ.

ಇಂದಿನ ನಮ್ಮ ಶಿಕ್ಷಣ ಪದ್ಧತಿ ವೃತ್ತಿ ಕೈಗೊಳ್ಳಲು, ಆರ್ಥಿಕವಾಗಿ ಹೊಟ್ಟೆ ಹೊರೆಯಲು ಸಹಾಯಕವೇ ವಿನಾ ಇಂಥ ಸಬಲೀಕರಣವನ್ನಾಗಲೀ ಮತ್ತೊಬ್ಬರ ಸಾಮರ್ಥ್ಯಗಳನ್ನು ಗೌರವಿಸಿ ಪೋಷಿಸುವುದನ್ನಾಗಲೀ ಕಲಿಸುವುದಿಲ್ಲ. ಹಾಗೆಯೇ ಸಾಮಾಜಿಕವಾಗಿಯೂ ಮಹಿಳೆಯ ಮೇಲಿರುವ ಮನ್ನಣೆಯಿರದ ಕೆಲಸದ ಹೊರೆ, ಅನಕ್ಷರತೆ, ಮಹಿಳೆಯರನ್ನೇ ಪ್ರತ್ಯೇಕಿಸುವುದು, ಮಾಧ್ಯಮಗಳು ಮಹಿಳೆಯರನ್ನು ಬಿಂಬಿಸುವ ಮಾದರಿಗಳು ಇವೆಲ್ಲವೂ ಸಬಲೀಕರಣವನ್ನುದುರ್ಬಲೀಕರಣದತ್ತ ಎಳೆದುಬಿಡುತ್ತವೆ.

ಮಹಿಳಾ ಸಬಲೀಕರಣದ ಪ್ರಶ್ನೆ ಲಿಂಗಪತ್ತೆಯ ಕಾನೂನಿಗಿಂತ ಹೆಚ್ಚು ಚರ್ಚೆಯಾಗುವುದು ಅಗತ್ಯ. ಮೊನ್ನೆ ಮೊನ್ನೆ ಗರ್ಭಪಾತದ ಅವಧಿಯನ್ನು ಸರ್ಕಾರ ಏರಿಸಿದೆ, ಹೆಣ್ಣು ಮಕ್ಕಳ ಮದುವೆಯ ಕನಿಷ್ಠ ವಯಸ್ಸನ್ನು 21 ವರ್ಷಗಳಿಗೆ ಏರಿಸುವ ಮಸೂದೆ ಮಂಡನೆಯಾಗಿದೆ. ಈ ಕಾನೂನು ಶೀಘ್ರ ಜಾರಿಗೆ ಬರಬಹುದು ಎನ್ನುವ ಅಳುಕಿನಿಂದ ನೂರಾರು ಬಾಲಕಿಯರ ಮದುವೆಯನ್ನು ಅವಸರದಲ್ಲಿ ಹೇಗಾದರೂ ಮಾಡಿ, ಯಾರಿಗಾದರೂ ಕೊಟ್ಟು ಮುಗಿಸಲಾಗಿದೆ!

‘ಹೆಣ್ಣು ಮಗು’ವಿನ ದಿನ ವಿಶೇಷವಾಗಿ ತಾಯಂದಿರಿಗೆ ಗಂಡು ಮಕ್ಕಳನ್ನು ಬೆಳೆಸುವ ರೀತಿ ಬದಲಾಗಬೇಕಾದ ಬಗೆಗೂ ಅರಿವು ಮೂಡಿಸಬೇಕು. ಸಾಮಾಜಿಕವಾಗಿ ಗಂಡು ಮಗುವಿನ ‘ಮೌಲ್ಯ’ದಿಂದ ಗಂಡು ಮಗುವನ್ನು ಹೆರುವ ತಾಯಿಯ ಅಂತಸ್ತೂ ಏರುತ್ತದೆ. ಇದು ಇಂದು ಬಹಳಷ್ಟು ಮಹಿಳೆಯರನ್ನು ಗಂಡು ಮಗು ಬೇಕು ಎಂದು ಹಂಬಲಿಸುವಂತೆ, ‘ಹೆಣ್ಣು ಮಗು’ ಎಂದಾಕ್ಷಣ ಅದು ತಮ್ಮ ‘ಸೋಲು’ ಎಂದು ಭಾವಿಸುವಂತೆ ಪ್ರೇರೇಪಿಸುತ್ತದೆ. ಹೆಣ್ಣು ಮಕ್ಕಳನ್ನು ನಾವು ಸಬಲೀಕರಿಸಲು ಮುಂದಾಗುವಂತೆಯೇ ಗಂಡು ಮಕ್ಕಳಲ್ಲಿ ಸ್ವಾವಲಂಬಿತನವನ್ನು ಬೆಳೆಸುವುದು ಅವಶ್ಯಕ. ಅದು ಮುಂದೆ ತಾಯಿ-ಪತ್ನಿಯರ ಸಂತಸಕ್ಕೆ ಕಾರಣವಾಗುತ್ತದೆಯೋ ಇಲ್ಲವೋ ಸ್ವತಃ ಅವರವರ ಜೀವನಕ್ಕಂತೂ ಸಹಾಯಕವೇ!

ಹೆಣ್ಣು ಮಕ್ಕಳು ತಮ್ಮ ಜೀವನಕ್ಕೆ ಆದರ್ಶ ಮಾದರಿಗಳನ್ನು ಹುಡುಕಲು ದೂರ ಹೋಗಬೇಕಿಲ್ಲ. ಸುತ್ತಲಿರುವ ಸುಖಿ, ಸ್ವಾವಲಂಬಿ, ಆತ್ಮವಿಶ್ವಾಸದ ಮಹಿಳೆಯರನ್ನು ನೋಡಿ ಅವರಿಂದ ಕಲಿಯುವುದೇ ಸೂಕ್ತ. ಹಾಗೆ ಕಲಿಯುವ ಧೈರ್ಯವೇ ನಮ್ಮ ‘ಬಂಡವಾಳ’ ಎಂಬುದನ್ನು ಅರಿಯಬೇಕು. ಆಗ ‘ರಾಷ್ಟ್ರೀಯ ಹೆಣ್ಣು ಮಗುವಿನ ದಿನ’ದ ಅಗತ್ಯ, ಧ್ಯೇಯ ವಾಕ್ಯ ಇನ್ನೂ ಬಿಡುಗಡೆಯಾಗಿಲ್ಲ ಎಂಬ ಪೇಚಾಟ ಇರಲಾರದು ಅಲ್ಲವೇ?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT