ಶುಕ್ರವಾರ, ಫೆಬ್ರವರಿ 21, 2020
19 °C
ಯಾಂತ್ರೀಕರಣವು ನಮ್ಮ ಎಲ್ಲ ದೈಹಿಕ ಚಟುವಟಿಕೆಯನ್ನೂ ನಿಯಂತ್ರಿಸುವ ಮನಸ್ಸಿನ ಆರೋಗ್ಯದ ಅಗತ್ಯವನ್ನು ಪರಿಗಣಿಸದಿರುವುದು ಸಮಸ್ಯೆಯ ಮೂಲ

ದೋಷಯುಕ್ತ ಮನಃಸ್ಥಿತಿ: ಬಿಡುಗಡೆ?

ಡಾ. ಜ್ಯೋತಿ Updated:

ಅಕ್ಷರ ಗಾತ್ರ : | |

prajavani

ಪರಿಸರ ಸ್ವಚ್ಛತೆಯೊಂದಿಗೆ, ದೈಹಿಕ ಸ್ವಚ್ಛತೆ ಮತ್ತು ಆರೋಗ್ಯದ ಕಡೆಗೂ ಜನ ಗಮನಹರಿಸುತ್ತಿರು
ವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇದರ ಅಂಗವಾಗಿ ಎಲ್ಲೆಡೆ ಜಿಮ್, ಹೆಲ್ತ್ ಕ್ಲಬ್‌ಗಳು ತಲೆ ಎತ್ತು
ತ್ತಿವೆ. ಇವುಗಳ ಮಧ್ಯೆ ಮೂಡುವ ಪ್ರಶ್ನೆ, ನಾವು ನಮ್ಮ ಮಾನಸಿಕ ನೈರ್ಮಲ್ಯಕ್ಕಾಗಿ ಎಷ್ಟು ಕಾಳಜಿ ವಹಿಸಿದ್ದೇವೆ?

ಐತಿಹಾಸಿಕವಾಗಿ, ಜಾಗತಿಕ ಮಟ್ಟದಲ್ಲಿ ಹಿನ್ನೋಟ ಬೀರಿದರೆ, ವಿವಿಧ ಸಂಸ್ಕೃತಿಗಳು ಹಾಗೂ ಧರ್ಮಗಳು ಮಾನಸಿಕ ಆರೋಗ್ಯಕ್ಕೆ ಪ್ರಾಧಾನ್ಯ ಕೊಟ್ಟಿದ್ದುದಕ್ಕೆ ಪುರಾವೆಗಳಿವೆ. ಹೆಸರಾಂತ ಗ್ರೀಕ್ ಗಾದೆ, ‘ಎ ಸೌಂಡ್ ಮೈಂಡ್ ಇನ್ ಎ ಸೌಂಡ್ ಬಾಡಿ’ ಸಮಗ್ರ ಯೋಗಕ್ಷೇಮಕ್ಕೆ ಒತ್ತುಕೊಡುತ್ತದೆ. ನಮ್ಮ ಪೂರ್ವಜರ ಜೀವನಶೈಲಿಯನ್ನು ತುಲನಾತ್ಮಕವಾಗಿ ಪರಿಶೀಲಿಸಿದರೆ, ಅವರು ನಮಗಿಂತ ಹೆಚ್ಚಾಗಿ ಮಾನಸಿಕ ಆರೋಗ್ಯ ಕಾಪಾಡಿಕೊಂಡಿದ್ದರು ಎನಿಸುತ್ತದೆ. ಬಹುಶಃ, ಅವರು ಬಾಹ್ಯಜಗತ್ತಿನಿಂದ ಕಡಿಮೆ ನಿರೀಕ್ಷೆಗಳನ್ನು ಇಟ್ಟು
ಕೊಂಡಿದ್ದುದು, ವ್ಯಕ್ತಿಗತ ಸೋಲು–ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡಿದ್ದುದು ಕಾರಣ ಇರಬಹುದು. ಇದಕ್ಕೆ ವ್ಯತಿರಿಕ್ತವಾಗಿ, ಆಧುನಿಕ ಲೌಕಿಕ ಜಗತ್ತು ಮತ್ತು ಅದರ ಬಳುವಳಿಯಾದ ಹಿಡಿತವಿಲ್ಲದ ಯಾಂತ್ರೀಕರಣವು ದೈಹಿಕ ಆರೋಗ್ಯ ಹಾಗೂ ಬಾಹ್ಯ ಸೌಂದರ್ಯೀಕರಣ
ಕ್ಕಷ್ಟೇ ಮಹತ್ವ ಕೊಟ್ಟಿದೆ. ಮಾತ್ರವಲ್ಲ, ಎಲ್ಲಾ ದೈಹಿಕ ಚಟುವಟಿಕೆಯನ್ನು ನಿಯಂತ್ರಿಸುವ ಮನಸ್ಸಿನ ಆರೋಗ್ಯದ ಅಗತ್ಯವನ್ನು ಪರಿಗಣಿಸುತ್ತಿಲ್ಲ.

ಕಳೆದ ನೂರು ವರ್ಷಗಳ ವಿಶ್ವ ಇತಿಹಾಸವನ್ನು ಮರುಪರಿಶೀಲಿಸಿದರೆ, ನಮ್ಮ ರಾಷ್ಟ್ರನಾಯಕ
ರಲ್ಲಿದ್ದ ಮಾನಸಿಕ ಅಸ್ವಸ್ಥತೆಯನ್ನು ಗುರುತಿಸುತ್ತೇವೆ. ಉದಾಹರಣೆಗೆ, ಸಂಕುಚಿತ ಮನೋಭಾವದ ರಾಷ್ಟ್ರ ಪರಿಕಲ್ಪನೆ ಹೊಂದಿದ್ದ ಹಿಟ್ಲರ್‌ಗೆ ತನ್ನ ದೇಶದ ಯಹೂದಿಗಳು ಅನಗತ್ಯ ಹೊರೆಯೆನಿಸಿ ಅವರನ್ನು ನಿರ್ಮೂಲನ ಮಾಡಲು ನಿರ್ಧರಿಸಿದ. ಇಂತಹ ಅಸ್ವಸ್ಥ ಮನಃಸ್ಥಿತಿ ರಾಷ್ಟ್ರನಾಯಕರಲ್ಲಿ ಇದ್ದರೆ, ಇಡೀ ದೇಶ ಭಾರಿ ಬೆಲೆ ತೆರಬೇಕಾಗುತ್ತದೆ. ಇದಕ್ಕೆ ಇನ್ನೊಂದು ಉದಾಹರಣೆ, ಅಮೆರಿಕದ ನಾಯಕತ್ವವು ಎರಡನೆಯ ಮಹಾಯುದ್ಧದಲ್ಲಿ ಜಪಾನ್ ಮೇಲೆ ಬಾಂಬ್ ದಾಳಿ ನಡೆಸಿದ್ದು. ಹಾಗೆಯೇ, ನಮ್ಮ ಸುತ್ತಲೂ ಮತ್ತೆ ಮತ್ತೆ ಮರುಕಳಿಸುವ ಆತ್ಮಾಹುತಿ ಬಾಂಬ್ ಸ್ಫೋಟಗಳು, ಭಯೋತ್ಪಾದಕ ದಾಳಿಗಳು, ಗಡಿ ವ್ಯಾಜ್ಯಗಳು ಇಂತಹುದೇ ಮನಃಸ್ಥಿತಿಯ ಫಲವಾಗಿವೆ.

ಮಾನಸಿಕ ಅಸ್ವಸ್ಥತೆಯ ಪರಿಣಾಮವು ಕೇವಲ ದೈಹಿಕ ಆಕ್ರಮಣಕ್ಕೆ ಸೀಮಿತವಾಗಿಲ್ಲ. ಇದು ಮಾನವ
ನಿರ್ಮಿತ ಎಲ್ಲ ವಿಪತ್ತುಗಳಿಗೂ ವಿಸ್ತರಿಸುತ್ತದೆ; ಅಕಾಲಿಕ ಋತುಮಾನ ವೈಪರೀತ್ಯ, ಪ್ರವಾಹ, ಭೂಕುಸಿತ, ಅರಣ್ಯನಾಶ, ಅನ್ಯಜೀವರಾಶಿಗಳ ತುಚ್ಛೀಕರಣ, ಜಾತಿನಿಂದನೆ, ಮರ್ಯಾದೆಗೇಡು ಹತ್ಯೆ, ಮಹಿಳೆಯರ ಮೇಲಿನ  ದೌರ್ಜನ್ಯ ಇತ್ಯಾದಿ. ಇವೆಲ್ಲವುಗಳ ಮೂಲಬೇರು ಅಸ್ವಸ್ಥ ಮನಃಸ್ಥಿತಿ. ತಾನು, ತನ್ನವರು ಮಾತ್ರ ಚೆನ್ನಾಗಿರಬೇಕು, ಉಳಿದವರೆಲ್ಲರೂ ತನ್ನ ಆಟದ ದಾಳಗಳೆಂಬ ಸ್ವಾರ್ಥ. ತನ್ನ ಸಿದ್ಧಾಂತ, ಧರ್ಮ, ಜಾತಿ, ಭಾಷೆ, ದೇಶ ಇತ್ಯಾದಿ ಮಾನವನಿರ್ಮಿತ ಗಡಿಗಳಷ್ಟೇ ಶ್ರೇಷ್ಠ, ಮಾತ್ರವಲ್ಲ, ಅವುಗಳನ್ನು ಇನ್ನೊಬ್ಬರ ಮೇಲೆ ಹೇರಬೇಕು, ಒಪ್ಪಿಕೊಳ್ಳದವರನ್ನು ನಾಶ ಮಾಡಬೇಕೆಂದು ಅದು ಕಿವಿ ಚುಚ್ಚುತ್ತದೆ. ಇಂತಹ ದೋಷಯುಕ್ತ ಮನಃಸ್ಥಿತಿಯಿಂದ ಬಿಡುಗಡೆ ಹೇಗೆ?

ಈ ಅಂಶವನ್ನು ಆಳವಾಗಿ ಪರಿಶೀಲಿಸಿದಾಗ, ಇದೊಂದು ದೋಷಯುಕ್ತ ಸಂತೋಷದ ಪರಿಕಲ್ಪನೆ ಎಂದು ಅರಿವಾಗುತ್ತದೆ. ಇವುಗಳಲ್ಲಿ ಹೆಚ್ಚಿನವು ಪ್ರಸ್ತುತ ಕಾಲಘಟ್ಟದ ಬೃಹತ್ ವ್ಯಾಪಾರೀಕರಣದ ಜೀವನಾಡಿ
ಯಾದ ಜಾಹೀರಾತುಗಳು ಕೊಡುವ ನಮ್ಮದಲ್ಲದ ಜೀವನಶೈಲಿ. ವಿಶೇಷವೆಂದರೆ, ನಮಗೆ ಹೃದಯದಾಳದಲ್ಲಿ ಇದರ ಅರಿವಿದ್ದರೂ, ಈ ಮರೀಚಿಕೆಯ ಬೆನ್ನಟ್ಟಿ, ವಿಶ್ರಾಂತಿಯಿಲ್ಲದೆ ದುಡಿದು, ಯಶಸ್ಸನ್ನು ನಮ್ಮದಾಗಿಸಿ
ಕೊಳ್ಳಲು ಓಡುತ್ತ ಜೀವನವನ್ನು ಕೊನೆಗೊಳಿಸುತ್ತೇವೆ. ಈ ಮಾನಸಿಕ ಒತ್ತಡ ನಮ್ಮ ಚಿತ್ತ ಕೆಡಿಸಿ, ಕೆಲವು ಕ್ಷಣಗಳ ತಪ್ಪಿನಿಂದ ಮಾಡುವ ಅಪಘಾತ, ಸಾವು, ಕೊಲೆ, ದರೋಡೆ... ಜೀವನಪರ್ಯಂತ ಅನುಭವಿಸ
ಬೇಕಾದ ದುರಂತಕ್ಕೆ ಕಾರಣವಾಗುತ್ತದೆ. ಮಾತ್ರವಲ್ಲ, ಈ ಅಸ್ವಸ್ಥ ಮನಸ್ಸು ಮದ್ಯವ್ಯಸನ, ಧೂಮಪಾನ, ಮಾದಕವಸ್ತು ಇನ್ನಿತರ ಕೆಡುಕುಗಳ ರುಚಿ ಹತ್ತಿಸಿ ಬದುಕನ್ನು ಧ್ವಂಸ ಮಾಡುತ್ತದೆ.

ಅಂತೆಯೇ, ಇತ್ತೀಚಿನ ದಿನಗಳಲ್ಲಿ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಅತಿಯಾದ ನಿರೀಕ್ಷೆ, ಸಿಗದಿದ್ದಾಗ ಹತಾಶೆ, ಸೋಲನ್ನು ಒಪ್ಪಿಕೊಳ್ಳಲಾ
ಗದ ಮನಃಸ್ಥಿತಿ. ಇಂತಹ ಮನೋಭಾವ ಸರಿಪಡಿಸುವಲ್ಲಿ ಪೋಷಕರು ಮತ್ತು ಶಿಕ್ಷಕರು ಸಕ್ರಿಯ ಪಾತ್ರ ವಹಿಸ
ಬೇಕು. ಇದರಂತೆಯೇ, ನಮ್ಮ ಹೆಚ್ಚಿನ ದೈಹಿಕ ಕಾಯಿಲೆಗಳ ಮೊಳಕೆ ಮನಸ್ಸಿನಲ್ಲಿಯೇ. ಇದಕ್ಕೆ ಪೂರಕವಾಗಿ, ಇಚ್ಛಾಶಕ್ತಿಯಿಂದ ಎಂತಹ ಕಾಯಿಲೆಯನ್ನೂ ಮೆಟ್ಟಿನಿಂತ ಉದಾಹರಣೆಗಳು ಸಾಕಷ್ಟಿವೆ. ಸ್ಥಿತಪ್ರಜ್ಞೆಯಿಲ್ಲದ ಮನಸ್ಸು ಸಮಾಜಕ್ಕೆಷ್ಟು ಅಪಾಯಕಾರಿ ಎನ್ನುವುದಕ್ಕೆ ಉತ್ತಮ ಉದಾಹರಣೆ, 2015ರ ಮಾರ್ಚ್‌ 24ರಂದು ಜರ್ಮನಿಯ ಪೈಲಟ್ ಆಂಡ್ರಿಯಾಸ್ ಲುಬಿಟ್ಜ್, ತಾನು ಆತ್ಮಹತ್ಯೆ ಮಾಡಿಕೊಳ್ಳುವ ಭರದಲ್ಲಿ, ವಿಮಾನದಲ್ಲಿದ್ದ ಎಲ್ಲ 150 ಜನರನ್ನೂ ಸಾಯಿಸಿದ್ದು. ಮನಸ್ಸು ನಮ್ಮೆಲ್ಲ ದೈಹಿಕ ಕ್ರಿಯೆಗಳ ರಿಮೋಟ್ ಕಂಟ್ರೋಲ್. ಅದು ಸ್ವಸ್ಥವಾಗಿ ಇಲ್ಲದಿದ್ದರೆ ನಮಗೆ ಮಾತ್ರವಲ್ಲ, ಸುತ್ತಲಿನ ಸಮಾಜಕ್ಕೂ ಅಪಾಯಕಾರಿ. ಈ ನಿಟ್ಟಿನಲ್ಲಿ, ಮಾನಸಿಕ ನೈರ್ಮಲ್ಯದ ಅಗತ್ಯದ ಅರಿವನ್ನು ಪ್ರಚುರಪಡಿಸುವ ಹೊಣೆ ಸರ್ಕಾರಗಳಿಗೆ, ಸಂಘ ಸಂಸ್ಥೆಗಳಿಗೆ ಮತ್ತು ಜನಸಾಮಾನ್ಯರಿಗೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)