ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಭೂದಾನ ಚಳವಳಿ: ಆಗಲಿ ಮೌನಕ್ರಾಂತಿ

ಭೂರಹಿತ ಕೃಷಿಕರು, ಕೃಷಿ ಕಾರ್ಮಿಕರಿಗೆ ಭೂಮಿಯ ಹಕ್ಕು ಕೊಟ್ಟು ದುಡಿಮೆಗೆ ದಾರಿ ಮಾಡಿಕೊಡುವುದು ಬಹುದೊಡ್ಡ ಪರಿವರ
Last Updated 2 ಫೆಬ್ರುವರಿ 2023, 19:31 IST
ಅಕ್ಷರ ಗಾತ್ರ

ಭೂರಹಿತ ಕೃಷಿ ಕಾರ್ಮಿಕರಿಗೆ, ಕೃಷಿಕರಿಗೆ ಉಚಿತವಾಗಿ ಒಂದಿಷ್ಟು ಭೂಮಿಯ ಒಡೆತನದ ಹಕ್ಕು ಕೊಟ್ಟು ಕೃಷಿಗೆ ಪ್ರೇರೇಪಿಸುವುದರ ಹಿಂದಿನ ಮಹತ್ವ ಕುರಿತು ಚರ್ಚಿಸಲು ವಿಚಾರ ಸಂಕಿರಣವೊಂದು ಮುಧೋಳದ ಸರ್ವೋದಯ ವಾತ್ಸಲ್ಯಧಾಮದಲ್ಲಿ ಈಚೆಗೆ ನಡೆಯಿತು. ಭೂದಾನ ಚಳವಳಿಯಲ್ಲಿ ಭಾಗವಹಿಸಿದ್ದ ಸರ್ವೋದಯ ಹಿರಿಯ ಕಾರ್ಯಕರ್ತರು ತಮ್ಮ ಅನುಭವದ ಬುತ್ತಿ ಬಿಚ್ಚಿಟ್ಟರು. ದೇಶದಲ್ಲಿ ಭೂದಾನ ಚಳವಳಿಯನ್ನು ಮತ್ತೆ ಆರಂಭಿಸುವುದು ತೀರಾ ಅವಶ್ಯ ಎನ್ನುವ ಸಂದೇಶವನ್ನು ಅವರು ರವಾನಿಸಿದರು.

ದೇಶದಲ್ಲಿ ಸರ್ಕಾರದ ಉಚಿತ ಕೊಡುಗೆಗಳ ಭರಾಟೆ ಜೋರಾಗಿ ನಡೆಯುತ್ತಿರುವ ಈ ಸಂದರ್ಭದಲ್ಲಿ, ಈ ವಿಚಾರ ಸಂಕಿರಣವು ಹೆಚ್ಚು ಮಹತ್ವ ಪಡೆದಿತ್ತು. ಉಚಿತವಾಗಿ ಆಹಾರಧಾನ್ಯ, ವಿದ್ಯುತ್, ಪ್ರವಾಸ ಭಾಗ್ಯ, ಕೈ ಖರ್ಚಿಗೆ ಒಂದಿಷ್ಟು ಹಣ ಕೊಡುವ ಕುರಿತು ಸ್ಪರ್ಧೆಗೆ ನಿಂತವರಂತೆ ರಾಜಕಾರಣಿಗಳು ವರ್ತಿಸುತ್ತಿದ್ದಾರೆ. ಅವಶ್ಯವಿದ್ದವರಿಗೆ ಸಹಾಯವಿರಲಿ, ಅದರೊಂದಿಗೆ ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಭೂರಹಿತ ಕೃಷಿಕರಿಗೆ, ಕೃಷಿ ಕಾರ್ಮಿಕರಿಗೆ ಒಂದಿಷ್ಟು ಭೂಮಿಯ ಹಕ್ಕು ಕೊಟ್ಟು ದುಡಿಮೆಗೆ ದಾರಿ ಮಾಡಿಕೊಡುವುದು ಬಹುದೊಡ್ಡ ಪರಿವರ್ತನೆಗೆ ಕಾರಣವಾಗಬಲ್ಲದು.

ಕೃಷಿ ಕಾರ್ಮಿಕರು ಭೂಮಾಲೀಕರ ಹೊಲಗಳಲ್ಲಿ ಕೂಲಿಗಳಾಗಿ ದುಡಿದು ಬದುಕು ಸಾಗಿಸುತ್ತಿದ್ದಾರೆ. ಅವರು ಸ್ವಂತಕ್ಕೆ ಭೂಮಿ ಹೊಂದಿದರೆ ಹೆಚ್ಚು ಕ್ರಿಯಾತ್ಮಕವಾಗಿ ಸ್ವಂತದ ಜಮೀನು ಹಾಗೂ ಭೂಮಾಲೀಕರ ಹೊಲಗಳಲ್ಲಿ ಕೆಲಸ ಮಾಡುವ ಉತ್ಸಾಹ ತೋರಿಸುತ್ತಾರೆ. ತಾನು ಬರೀ ಕೂಲಿಕಾರ ಎನ್ನುವ ಕೀಳರಿಮೆ ದೂರವಾಗುತ್ತದೆ.

ಆದರೆ, ಜಮೀನಿನ ಜತೆ ನಮ್ಮಲ್ಲಿ ಭಾವನಾತ್ಮಕ ನಂಟಿದೆ. ಅದು ಭೌತಿಕವಾಗಿ ದೊಡ್ಡ ಸಂಪತ್ತು ಎಂಬ ಭಾವನೆ ಅನೇಕರಲ್ಲಿ ಇದೆ. ಭೂಮಿಯ ಬೆಲೆ ತುಂಬಾ ಹೆಚ್ಚಾಗಿದೆ, ಹೀಗಾಗಿ ದಾನ ಕೊಡುವವರು ಸಿಕ್ಕಲಿಕ್ಕಿಲ್ಲ ಎನ್ನುವ ಅನುಮಾನ ಕೆಲವರಲ್ಲಿದೆ.

ಭೂಮಿ ಇಲ್ಲದ ಎಲ್ಲರಿಗೂ ಭೂಮಿ ಹಂಚಲು ಸರ್ಕಾರದ ಬಳಿ ಬಹಳಷ್ಟು ಭೂಮಿ ಇಲ್ಲ. ಸರ್ಕಾರವೇ ಭೂಮಿ ಖರೀದಿಗೆ ನಿಂತರೆ ಬೆಲೆ ಮತ್ತೆ ಹತ್ತು ಪಟ್ಟು ಹೆಚ್ಚುತ್ತದೆ. ಉಳ್ಳವರಿಂದ ಭೂಮಿ ದಾನ ಪಡೆದು ಹಂಚುವುದು ಸೂಕ್ತ ಮಾರ್ಗ ಎನಿಸುತ್ತದೆ. ಭೂ ಒಡೆಯರ ಮನಃ ಪರಿವರ್ತನೆಯಿಂದ ಭೂಮಿ ದಾನ ಪಡೆಯಬೇಕು. ಸರಿಯಾಗಿ ಮನವರಿಕೆ ಮಾಡಿದರೆ ದಾನ ನೀಡುವುದಕ್ಕೆ ಅನೇಕರು ಮುಂದೆ ಬರಬಹುದು.

ಬಡವರನ್ನು ಗುರುತಿಸಿ ನೆರವಾಗುವ ಪ್ರಾಮಾಣಿಕ ಕೆಲಸ ಶ್ರದ್ಧೆಯಿಂದ ನಡೆದರೆ ದಾನ ಕೊಡುವವರು ಸ್ವಸಂತೋಷದಿಂದ ಮುಂದೆ ಬರುತ್ತಾರೆ. ಆಸ್ತಿ ಸಂಪಾದಿಸುವ ಆಸೆ ಇರುವಂತೆ ಸಮಾಜಕ್ಕೆ ನೆರವಾಗಬೇಕು ಎಂಬ ತುಡಿತ ಕೂಡ ಮನುಷ್ಯರ ಸಹಜ ಗುಣವಾಗಿದೆ. ವಿನೋಬಾ ಅವರ ನೇತೃತ್ವದಲ್ಲಿ ನಡೆದ ಭೂದಾನ ಚಳವಳಿಯ ಮಾದರಿ ನಮ್ಮ ಮುಂದಿದೆ.

ಗಾಂಧೀಜಿ ಪ್ರಿಯ ಶಿಷ್ಯ ವಿನೋಬಾ ಭಾವೆ ಅವರು ಭೂರಹಿತ ಬಡವರಿಗೆ ಭೂಮಿ ಹಂಚುವ ಭೂದಾನ ಚಳವಳಿಯನ್ನು 1951ರಲ್ಲಿ ಆರಂಭಿಸಿದ್ದರು. ಹೆಚ್ಚು ಭೂಮಿ ಹೊಂದಿದ್ದ ಶ್ರೀಮಂತರು ಸ್ವಪ್ರೇರಣೆಯಿಂದ ಭೂಮಿ ನೀಡುವ ಈ ವಿಧಾಯಕ ಕಾರ್ಯವನ್ನು ಅವರು ಬಹುದೊಡ್ಡ ಚಳವಳಿಯಾಗಿ ರೂಪಿಸಿದರು. ಸಾವಿರಾರು ಕಾರ್ಯಕರ್ತರನ್ನು ಈ ಕಾರ್ಯದಲ್ಲಿ ತೊಡಗಿಸಿದರು. ಸುಮಾರು ಎಂಟು ವರ್ಷ ದೇಶದ ಉದ್ದಗಲಕ್ಕೂ ಪಾದಯಾತ್ರೆ ಮಾಡಿದರು. ಜವಾಹರಲಾಲ್‌ ನೆಹರೂ, ರಾಜೇಂದ್ರ ಪ್ರಸಾದ್, ಜಯಪ್ರಕಾಶ ನಾರಾಯಣ್ ಈ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದರು. ದೇಶದ ತುಂಬಾ 45 ಲಕ್ಷ ಎಕರೆ ಭೂಮಿ ದಾನವಾಗಿ ಬಂದಿತು. ವ್ಯವಸ್ಥಿತವಾಗಿ ಹಂಚುವುದಕ್ಕೆ ರಾಜ್ಯ ಸರ್ಕಾರಗಳು ಕಾನೂನು ಕೂಡ ರೂಪಿಸಿದವು.

ತೆಲಂಗಾಣದ ಪೋಚಂಪಲ್ಲಿ ಹಳ್ಳಿಯಲ್ಲಿ ಭೂಮಾಲೀಕ ವಿ. ರಾಮಚಂದ್ರಾರೆಡ್ಡಿ ಅವರು ನೂರು ಎಕರೆ ಭೂಮಿಯನ್ನು ಸ್ಥಳೀಯ ದಲಿತರಿಗೆ ಹಂಚಲು ವಿನೋಬಾ ಅವರಿಗೆ ದಾನಪತ್ರ ನೀಡಿದರು. ಈ ಬೆಳವಣಿಗೆ ಭೂದಾನ ಚಳವಳಿಯ ಪರಿಕಲ್ಪನೆಗೆ ನಾಂದಿ ಹಾಡಿತು.

ಚಳವಳಿಗಳಿಗೂ ಆಯುಷ್ಯದ ಮಿತಿ ಇರುವಂತೆ ಕಾಣುತ್ತದೆ. 1975ರ ಅವಧಿಯಲ್ಲಿ ಭೂದಾನ ಚಳವಳಿ ಸ್ಥಗಿತಗೊಂಡಿತು. ದಾನ ಬಂದ ಭೂಮಿಯ ಕೆಲವು ಭಾಗ ಹಂಚಿಕೆಯಾಗದೇ ಉಳಿದಿದೆ. ಇಲ್ಲಿಂದಲೇ ಈ ಕೆಲಸವನ್ನು ಮತ್ತೆ ಆರಂಭಿಸಬಹುದು.

ರಾಜ್ಯಸಭೆಯ ಸದಸ್ಯರಾಗಿದ್ದ ಬೀಳಗಿಯ ರಾಚಪ್ಪ ಮಲ್ಲಪ್ಪ ದೇಸಾಯಿ ತಮ್ಮ ಹೊಲದಲ್ಲಿ ದುಡಿಯುತ್ತಿದ್ದ ಕೂಲಿ ಕಾರ್ಮಿಕರಿಗೆ 1970ರ ದಶಕದಲ್ಲಿ ಸ್ವಪ್ರೇರಣೆಯಿಂದ 500 ಎಕರೆ ದಾನ ನೀಡಿದ್ದರು. ಈಗ ಈ ಕುಟುಂಬಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಬಹಳ ಪ್ರಗತಿ ಸಾಧಿಸಿವೆ. ಭೂಮಿ ಒಡೆತನ ಪ್ರತೀ ಕುಟುಂಬಕ್ಕೆ ಘನತೆಯನ್ನು ತಂದುಕೊಟ್ಟಿದೆ.

ಸಾಮಾಜಿಕ ಕಾರ್ಯಕರ್ತರು ಭೂದಾನ ಚಳವಳಿಯ ಮೌನಕ್ರಾಂತಿಗೆ ಮುಂದಾಗಬೇಕು. ಇದು ಜಾತಿ, ಮತ, ಪಂಥ, ಭಾಷೆ, ಗಡಿಗಳಿಂದ ಮುಕ್ತವಾದ ಸಾಮಾಜಿಕ ಬದಲಾವಣೆಯ ಚಳವಳಿ. ಸರ್ಕಾರ ಕಾನೂನಾತ್ಮಕವಾಗಿ ಎಲ್ಲ ಸಹಕಾರ ನೀಡಬೇಕು. ಅರ್ಹರನ್ನು ಗುರುತಿಸುವಾಗ ದಕ್ಷತೆ ವಹಿಸಬೇಕು. ವಿಧಾಯಕ ಚಳವಳಿಗಳು ಆರಂಭವಾದರೆ, ವಿಭಜಿಸುವ ಚಟುವಟಿಕೆಗಳು ಕ್ರಮೇಣ ಮೌನವಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT