ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ನಮ್ಮ ಶಾಲೆ ನಮ್ಮೆಲ್ಲರ ಅಸ್ಮಿತೆ!

‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಮಹತ್ವಾಕಾಂಕ್ಷಿ ಯೋಜನೆಗೆ ಬೇಕಾಗಿದೆ ಬದ್ಧತೆ
Published 12 ಮಾರ್ಚ್ 2024, 0:15 IST
Last Updated 12 ಮಾರ್ಚ್ 2024, 0:15 IST
ಅಕ್ಷರ ಗಾತ್ರ

ಬೆಳಗಾವಿ ಜಿಲ್ಲೆಯ ಯಾದವಾಡ ಗ್ರಾಮದ ಹಿರೇಮಠಕ್ಕೆ 1960-70ರ ದಶಕದಲ್ಲಿ ಶಿವಮೂರ್ತಿ ಸ್ವಾಮೀಜಿ
ಅಧ್ಯಕ್ಷರಾಗಿದ್ದರು. ಗ್ರಾಮದ ಹಿರಿಯರು ಸಭೆ ಸೇರಿ, ಮಠದ ಕಟ್ಟಡದ ನವೀಕರಣ ಹಾಗೂ ಹೊಸ ಕೊಠಡಿಗಳನ್ನು ಕಟ್ಟಲು ಹಣ ಸಂಗ್ರಹಿಸಿ ಶ್ರೀಗಳಿಗೆ ಅರ್ಪಿಸಿದರು. ಆಗ ಶ್ರೀಗಳು ‘ನಾವೆಲ್ಲರೂ ಕಲಿತ ನಮ್ಮೂರ ಶಾಲೆ ಶಿಥಿಲಗೊಂಡಿದೆ, ಮಳೆಗಾಲದಲ್ಲಿ ಸೋರುತ್ತಿದೆ. ಶಾಲೆಯ ರಿಪೇರಿ ಕೆಲಸ ಮೊದಲು ಮಾಡೋಣ. ಊರಲ್ಲಿ ಹೈಸ್ಕೂಲು ಇಲ್ಲ. ಹೈಸ್ಕೂಲು ಆರಂಭಿಸೋಣ’ ಎಂದು ಹೇಳಿ, ಗ್ರಾಮದ ಸ್ವಾತಂತ್ರ್ಯ ಯೋಧ ಬಸಪ್ಪ ಕಲ್ಯಾಣಿ ಅವರ ನೇತೃತ್ವದಲ್ಲಿ ವಿದ್ಯಾವರ್ಧಕ ಸಂಘ ಸ್ಥಾಪಿಸಿದರು. ಭಕ್ತರು ಕೊಟ್ಟ ಹಣವನ್ನು ಸಂಸ್ಥೆಗೆ ನೀಡಿ ಶಾಲಾ ಕಟ್ಟಡದ ರಿಪೇರಿ ಮಾಡಿಸಿದರು. ತಮ್ಮ ಗುರುವಿನ ಹೆಸರಿನಲ್ಲಿ ನೀಲಕಂಠ ಸ್ವಾಮಿ ಪ್ರೌಢಶಾಲೆಯನ್ನು ಆರಂಭಿಸಿದರು. ಅದು ಈಗ ಪದವಿಪೂರ್ವ ಕಾಲೇಜಾಗಿ ಬೆಳೆದಿದೆ. ಶ್ರೀಗಳ
ದೂರದೃಷ್ಟಿಯಿಂದಾಗಿ ನಾನೂ ಸೇರಿದಂತೆ ಯಾದವಾಡ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಪಡೆಯುವ ಭಾಗ್ಯ ದೊರೆಯಿತು.

ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಎಂಬ ಮಹತ್ವಾ
ಕಾಂಕ್ಷೆಯ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಪ್ರಾಥಮಿಕ ಶಿಕ್ಷಣ ಪಡೆದ ಮೈಸೂರು ತಾಲ್ಲೂಕಿನ ಕುಪ್ಪೇಗಾಲ ಹಾಗೂ ಸಿದ್ದರಾಮನಹುಂಡಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ತಲಾ ₹ 10 ಲಕ್ಷ ವೈಯಕ್ತಿಕ ನೆರವು ನೀಡುವ ಮೂಲಕ ಚಾಲನೆ ನೀಡಿದ ಸಂಗತಿಯನ್ನು (ಪ್ರ.ವಾ., ಮಾರ್ಚ್ 2) ಓದಿದಾಗ, ಶಿವಮೂರ್ತಿ ಸ್ವಾಮೀಜಿ ಹಚ್ಚಿದ ಬೆಳಕು ಕಾಣಿಸಿತು.

ಖಾಸಗಿ ಶಾಲೆಗಳ ಭರಾಟೆಯ ಮುಂದೆ ಸರ್ಕಾರಿ ಶಾಲೆಗಳ ಆಕರ್ಷಣೆ ಕಡಿಮೆಯಾಗಿದೆ. ಬಡವರು, ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದ ಮಕ್ಕಳು ಹೆಚ್ಚಾಗಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಾರೆ. ಈ ಮಕ್ಕಳಲ್ಲಿ ಕೀಳರಿಮೆ ಬೆಳೆಯಬಾರದು, ಆತ್ಮಶ್ರೀಗೆ ಧಕ್ಕೆ ಆಗಬಾರದು, ಉತ್ಸಾಹದಿಂದ ಓದುವ ವಾತಾವರಣ ಸೃಷ್ಟಿಯಾಗಬೇಕು, ಸಮವಸ್ತ್ರ, ಪೌಷ್ಟಿಕ ಆಹಾರ, ಶೌಚಾಲಯ, ಕಲಿಕಾ ಸಾಮಗ್ರಿ, ಇ– ಕಲಿಕಾ ಕೇಂದ್ರ, ಸ್ಮಾರ್ಟ್ ಕ್ಲಾಸ್, ಪ್ರಯೋಗಾಲಯ, ಕ್ರೀಡಾಂಗಣ, ವಾಚನಾಲಯ, ಪ್ರವಾಸ ಭಾಗ್ಯ ಈ ಮಕ್ಕಳಿಗೂ ದಕ್ಕಬೇಕು ಎಂಬುದು ಯೋಜನೆಯ ಘನ ಉದ್ದೇಶ.

ಸಂಪನ್ಮೂಲ ಕ್ರೋಡೀಕರಣಕ್ಕೆ ಸರ್ಕಾರಿ ಶಾಲೆಗಳಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳ ನೆರವು ಪಡೆಯುವುದು ಯೋಜನೆಯ ಆಶಯವಾಗಿದೆ. ಎಲ್ಲ ಸರ್ಕಾರಿ ಶಾಲೆಗಳಿಗೆ ಸ್ಥಳೀಯ ಮಟ್ಟದಲ್ಲಿ ಒಂದು ಸಂಘ ರಚಿಸಲಾಗುವುದು. ಶಾಲೆಯ ಮುಖ್ಯ ಅಧ್ಯಾಪಕರು ಗೌರವಾಧ್ಯಕ್ಷರಾಗಿರುತ್ತಾರೆ. ಸಾಮಾಜಿಕವಾಗಿ ಮನ್ನಣೆ ಪಡೆದ ಹಳೆಯ ವಿದ್ಯಾರ್ಥಿಯೊಬ್ಬರು ಅಧ್ಯಕ್ಷರಾಗಿರುತ್ತಾರೆ. ಹಳೆಯ ವಿದ್ಯಾರ್ಥಿಗಳೇ ಸದಸ್ಯರಾಗಿರುತ್ತಾರೆ. ಇದರಿಂದ ಅವರು ಕುಂದುಕೊರತೆ ಅರಿತುಕೊಂಡು ನೆರವಾಗಲು ಅನುಕೂಲವಾಗುತ್ತದೆ.

ಕಲಿತ ಶಾಲೆಯೊಂದಿಗೆ ಎಲ್ಲರೂ ಒಳ್ಳೆಯ ಅನುಬಂಧ ಹೊಂದಿರುತ್ತಾರೆ. ಇದು ಸಹಜ ಪ್ರೀತಿ. ಮನೆಯಷ್ಟೇ ಶಾಲೆಯೂ ಮನಸ್ಸಿಗೆ ಹತ್ತಿರವಾಗಿರುತ್ತದೆ. ಓದಿದ ಶಾಲೆಯ ಆವರಣದಲ್ಲಿ ನಡೆದಾಡಿದರೆ ಬಾಲ್ಯ ಮರುಕಳಿಸಿದಂತೆ ಆಗುತ್ತದೆ.

ಎಚ್.ವಿಶ್ವನಾಥ್ ಶಿಕ್ಷಣ ಸಚಿವರಾಗಿದ್ದಾಗ ಅವರ ಶ್ರೀಮಂತ ಗೆಳೆಯರೊಬ್ಬರು ತಮ್ಮ ತಾಯಿಯ ಭೇಟಿಗೆ ಮುಂಬೈಗೆ ಹೊರಟಿರುವುದಾಗಿ ಹೇಳಿದರು. ‘ಇದೇ ಊರಿನಲ್ಲಿ ನಿಮ್ಮ ಇನ್ನೊಬ್ಬ ತಾಯಿ ಇದ್ದಾರೆ, ಅವರನ್ನು ಭೇಟಿಯಾಗುವುದಿಲ್ಲವೇ’ ಎಂದು ವಿಶ್ವನಾಥ್ ಪ್ರಶ್ನಿಸಿದರು. ಮಾತಿನ ಅರ್ಥ ಗ್ರಹಿಸಿದ ಗೆಳೆಯ ತಾನು ಓದಿದ ಸರ್ಕಾರಿ ಶಾಲೆಗೆ ಭೇಟಿ ನೀಡಿದರು. ಶಾಲೆಯ ಸ್ಥಿತಿ ಕಂಡು ಕಳವಳಗೊಂಡು ಕೋಟಿ ರೂಪಾಯಿ ದಾನ ನೀಡಿದರು. ಬಾಗಲಕೋಟೆಯಲ್ಲಿ ನಡೆದಿದ್ದ ಶೈಕ್ಷಣಿಕ ಸಮ್ಮೇಳನದಲ್ಲಿ ವಿಶ್ವನಾಥ್ ಅವರು ಹೇಳಿದ್ದ ಈ ಸಂಗತಿ ಈಗ ನೆನಪಾಗುತ್ತಿದೆ.

ಗದಗದ ವೈದ್ಯ ಡಾ. ಎನ್.ಬಿ.ಪಾಟೀಲ ಅವರು ರಡ್ಡೇರ ತಿಮ್ಮಾಪುರ ಗ್ರಾಮದ ಶಾಲೆಯಲ್ಲಿ ಓದುತ್ತಿದ್ದಾಗ, ವಿದ್ಯಾರ್ಥಿಗಳೆಲ್ಲ ಸೇರಿ ಜಾತ್ರೆಯಲ್ಲಿ ಹೋಟೆಲ್ ನಡೆಸಿ ಹಣ ಸಂಪಾದಿಸಿ, ಶಾಲಾ ವಾಚನಾಲಯ ಕಟ್ಟಿದ ನೆನಪನ್ನು ಅವರ ಅಭಿನಂದನ ಗ್ರಂಥ ‘ವೈದ್ಯವಜ್ರ’ದಲ್ಲಿ ರೋಚಕವಾಗಿ ದಾಖಲಿಸಲಾಗಿದೆ.

ಹಳೆ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯಲ್ಲಿ ಒಟ್ಟಿಗೆ ಸೇರುವ ಕಾರ್ಯಕ್ರಮ ಬಹಳಷ್ಟು ಕಡೆ ನಡೆಯು
ತ್ತಿರುತ್ತದೆ. ಈಚೆಗೆ ನಡೆದ ಈ ಬಗೆಯ ಸಮ್ಮಿಲನ ಕಾರ್ಯಕ್ರಮವೊಂದಕ್ಕೆ ಉಪನ್ಯಾಸ ನೀಡಲು ಹೋಗಿದ್ದೆ. ಹಳೆ ವಿದ್ಯಾರ್ಥಿಗಳೆಲ್ಲ ಅಂದು ‘ವಿದ್ಯಾರ್ಥಿ’ಗಳಾಗಿಯೇ ನಡೆದುಕೊಂಡದ್ದು ವಿಶೇಷವಾಗಿತ್ತು. ಶಾಲೆಯ ಬೆಳಗಿನ ಪ್ರಾರ್ಥನೆಯ ಗಂಟೆ ಬಾರಿಸಿತು. ಎಲ್ಲರೂ ಸೇರಿ ಪ್ರಾರ್ಥನೆ ಮಾಡಿದರು. ತರಗತಿಯಲ್ಲಿ ಕುಳಿತು ಮತ್ತೊಮ್ಮೆ ಪಾಠ ಹೇಳಿಸಿಕೊಂಡರು. ಅವರಲ್ಲಿ ಬಾಲ್ಯದ ತುಂಟತನ ಮರುಕಳಿಸಿತ್ತು. ಕೊನೆಯಲ್ಲಿ ಹೆಡ್‌ಮಾಸ್ಟರ್ ವೇದಿಕೆಗೆ ಬಂದು, ನಾಲ್ವರು ಹಳೆಯ ವಿದ್ಯಾರ್ಥಿಗಳು ತಲಾ ಒಂದು ಕಂಪ್ಯೂಟರ್ ದೇಣಿಗೆ ಕೊಟ್ಟಿದ್ದು, ತಮ್ಮ ಹೆಸರು ಬಹಿರಂಗಪಡಿಸದಂತೆ ಮನವಿ ಮಾಡಿರುವುದಾಗಿ ಪ್ರಕಟಿಸಿದರು. ಚಪ್ಪಾಳೆ ಧ್ವನಿ ಜೋರಾಗಿ ಹರಡಿತು.

ಸಮುದಾಯದ ನೆರವು ಪಡೆಯುವ ಉದ್ದೇಶದಿಂದ ‘ನಮ್ಮೂರ ಶಾಲೆ’ ಎಂಬ ಯೋಜನೆಯನ್ನು ಹಿಂದೆ ಸರ್ಕಾರ ಜಾರಿಗೆ ತಂದಿತ್ತು. ಕ್ರಿಯಾಶೀಲತೆಯ ಕೊರತೆಯಿಂದ ಅದು ಮುಂದೆ ಸಾಗಲಿಲ್ಲ. ಒಂದು ಯೋಜನೆ ಯಶಸ್ವಿಯಾಗಲು ಯೋಜನೆಗೆ ಸ್ಪಷ್ಟ ಪರಿಕಲ್ಪನೆ, ಕ್ರಿಯಾಶೀಲತೆ, ಬದ್ಧತೆ, ಪ್ರಾಮಾಣಿಕತೆ ಬೇಕು.

‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಉತ್ತಮ ಪರಿಕಲ್ಪನೆಯಾಗಿದೆ. ಬಹಳಷ್ಟು ನೆರವು ಹರಿದುಬರುವ ನಿರೀಕ್ಷೆ ಇದೆ. ಸಹಾಯದ ಸಮರ್ಪಕ ಸದ್ಬಳಕೆ ಕೂಡ ಮುಖ್ಯವಾದುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT