ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ : ಚುನಾವಣೆ, ಪ್ರಚಾರ, ಕಿರಿಕಿರಿ

ಜನಸಾಮಾನ್ಯರ ತೊಂದರೆಯನ್ನು ಪರಿಗಣಿಸದೆ ಚುನಾವಣೆಯ ಹೆಸರಿನಲ್ಲಿ ನಡೆಯುವ ಬೀದಿ ಪ್ರದರ್ಶನಗಳು ಒಬ್ಬ ಅಭ್ಯರ್ಥಿಯ ಜನಸೇವೆಗೆ ದಿಕ್ಸೂಚಿಯಾಗಲು ಸಾಧ್ಯವೇ?
Published 5 ಮೇ 2023, 19:33 IST
Last Updated 5 ಮೇ 2023, 19:33 IST
ಅಕ್ಷರ ಗಾತ್ರ

ಪ.ರಾಮಕೃಷ್ಣ ಶಾಸ್ತ್ರಿ

ಉಜಿರೆ ಪುಟ್ಟ ಪೇಟೆ. ಮೂರು ಹಾದಿಗಳು ಸೇರುವ ಸಂಗಮ ಸ್ಥಳ. ಶಿಕ್ಷಣ ಕಾಶಿ. ಇಲ್ಲಿ ಇತ್ತೀಚೆಗೆ ಸಂಜೆ ಐದು ಗಂಟೆಯ ಹೊತ್ತಿಗೆ ಪೊಲೀಸರ ಚುನಾವಣಾಪೂರ್ವ ತಾಲೀಮು. ಸಾವಿರಾರು ಮೀಸಲು ಪೊಲೀಸರು ಕೈಯಲ್ಲಿ ಬಂದೂಕು ಹಿಡಿದುಕೊಂಡು ರಸ್ತೆಯುದ್ದಕ್ಕೂ ಪಥಸಂಚಲನ ಮಾಡಿದರು. ಎಷ್ಟೊಂದು ವಾಹನಗಳು, ಜನಸಾಮಾನ್ಯರು ನಿಂತಲ್ಲೇ ಸ್ತಬ್ಧವಾಗಬೇಕಾಯಿತು.

ದ್ವಿಚಕ್ರ ವಾಹನ ಸವಾರರಂತೂ ದೊಡ್ಡ ವಾಹನಗಳ ನಡುವೆ ಸಿಕ್ಕಿಬಿದ್ದು, ಚಕ್ರವ್ಯೂಹ ಹೊಕ್ಕ ಅಭಿಮನ್ಯುವಿನಂತಾದರು. ಕಚೇರಿಗಳಿಂದ ಕೆಲಸ ಮುಗಿಸಿ ಮನೆಗೆ ಹೋಗುವವರ ಸಂಖ್ಯೆ ದೊಡ್ಡದಿತ್ತು. ಕೆಲವರು ‘ಇದು ಯಾವ ಗಣ್ಯರ ಶವಯಾತ್ರೆ?’ ಎಂದು ವಿಚಾರಿಸುತ್ತಿದ್ದರು.

ಒಂದು ಪುಟ್ಟ ಊರಿನಲ್ಲಿ ಇಂತಹ ಪಥಸಂಚಲನ ಬೇಕಿತ್ತಾ? ಚುನಾವಣೆ ಕಾಲದಲ್ಲಿ ಗಲಾಟೆ ಮಾಡಿದವರಿಗೆ ಇದು ಎಚ್ಚರಿಕೆಯ ಸಂದೇಶವೇ ಇರಬಹುದು. ಆದರೆ ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಮಾಡಿ ನಡುರಸ್ತೆಯಲ್ಲಿ ಇದನ್ನು ಮಾಡುವುದರಿಂದ ತೊಂದರೆಯಾಗುತ್ತದೆ ಎಂಬುದು ಪೊಲೀಸರಿಗೆ ತಿಳಿಯಬೇಡವೇ? ಉಜಿರೆ ಯಾವತ್ತಿಗೂ ಸೂಕ್ಷ್ಮ ಸಂವೇದನೆಯ ಮತಕ್ಷೇತ್ರ ಅಲ್ಲ. ಇಲ್ಲಿ ಪೊಲೀಸ್‌ ಬಲ ಪ್ರದರ್ಶನ ಉಚಿತವೂ ಅಲ್ಲ. ಕರ್ನಾಟಕದ ಯಾವ ಭಾಗದಲ್ಲಿ ಎಷ್ಟು ಜನರಿಗೆ ಇಂತಹ ಸಂಚಲನದಿಂದ ತೊಂದರೆಯಾಯಿತೋ ಹೇಳುವವರಿಲ್ಲ.

ಈ ಸಲ ಕರ್ನಾಟಕಕ್ಕೆ ಮತ್ತೆ ಮತ್ತೆ ಮತ ಪ್ರಚಾರಕ್ಕೆ ಪ್ರಧಾನಿ ಭೇಟಿ ನೀಡಿದರು. ಪಕ್ಷಗಳ ಗಣ್ಯರು ಅನೇಕರು ಬಂದರು. ಪ್ರಧಾನಿ ಬಂದದ್ದು ಪಕ್ಷದ ಪ್ರಚಾರಕ್ಕೆ. ಆದರೆ ಅಂದು ದಕ್ಷಿಣ ಕನ್ನಡ ಜಿಲ್ಲೆಯ ಬಹುಭಾಗದ ಸಂಚಾರಕ್ಕೆ ತೊಂದರೆಯುಂಟಾಯಿತು. ಭಾಷಣ ಕೇಳಲು ಬಹುಸಂಖ್ಯೆಯಲ್ಲಿ ಜನರನ್ನು ಕರೆದೊಯ್ಯಲು ಸರ್ಕಾರಿ ಬಸ್ಸುಗಳನ್ನು ಬಳಸಿದ್ದರಿಂದ ನಿತ್ಯ ಸಂಚಾರ ಮಾಡುವವರಿಗೆ ತೊಡಕುಂಟಾಯಿತು. ಹಲವು ರಸ್ತೆಗಳನ್ನು ಮುಚ್ಚಿದ್ದರಿಂದ ಮದುವೆಯಂತಹ ಕಾರ್ಯಕ್ರಮಗಳಿಗೆ ನೆಂಟರು ಹಾಗಿರಲಿ, ಸ್ವತಃ ವಧು, ವರರೂ ಸರಿಯಾದ ಸಮಯಕ್ಕೆ ಮದುವೆ ಮಂಟಪಕ್ಕೆ ಹೋಗಲಾಗದೆ ಅಡಚಣೆಯುಂಟಾಯಿತು.

ಜನಸಾಮಾನ್ಯರ ತೊಂದರೆಯನ್ನು ಪರಿಗಣಿಸದೆ ಚುನಾವಣೆಯ ಹೆಸರಿನಲ್ಲಿ ಬೀದಿಪ್ರದರ್ಶನ
ಗಳಾದವು. ಒಂದೊಂದು ಪಕ್ಷದಿಂದ ಒಂದೊಂದು ದಿನ ತೋಳ್ಬಲ ಪ್ರದರ್ಶಿಸಲು ಅದೇ ಊರನ್ನು ಬಳಸಿದ ಪರಿಣಾಮವಾಗಿ, ತೊಂದರೆಗೊಳಗಾದವರು ಹಿಡಿಶಾಪ ಹಾಕಿರಬಹುದೇ ವಿನಾ ಒಬ್ಬ ಅಭ್ಯರ್ಥಿಯ ಆಯ್ಕೆಗೆ, ಆತ ಮುಂದೆ ಮಾಡಬಹುದಾದ ಜನ ಸೇವೆಗೆ ಈ ಮೆರವಣಿಗೆಗಳು ದಿಕ್ಸೂಚಿಯಾಗಲು ಸಾಧ್ಯವಿದೆಯೇ?

ಚುನಾವಣಾ ಆಯೋಗ ಕೆಲವು ದೃಷ್ಟಿಯಿಂದ ಉತ್ತಮ ನಿರ್ಧಾರಗಳನ್ನು ಜಾರಿಗೊಳಿಸಿದೆ. ರಸ್ತೆ ಬದಿಯಲ್ಲಿ ಮಹಾನ್‌ ನಾಯಕರ ಬೃಹದಾಕೃತಿಯ ಫಲಕಗಳನ್ನು ನೆಡುವುದು, ಭಿತ್ತಿಪತ್ರಗಳನ್ನು ಅಂಟಿಸುವುದಕ್ಕೆಲ್ಲ ಲಗಾಮು ಹಾಕಿದೆ. ಆದರೆ ಬೀದಿ ಸಂಚಾರವನ್ನು ನಿರ್ಬಂಧಿಸುವ ಈ ಮಹಾಪ್ರಭುಗಳ ಮೆರವಣಿಗೆಗೆ ಯಾಕೆ ತಡೆಯೊಡ್ಡುವುದಿಲ್ಲ?

ಶಾಲೆಗೆ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿರಬಹುದು, ಹೆರಿಗೆ ನೋವಿನಿಂದ ಬಳಲುವ ಗರ್ಭಿಣಿಯಿರಬಹುದು, ಇವರ ಸಂಚಾರಕ್ಕೆ ಉಂಟಾಗುವ ಬಾಧೆಯನ್ನು ಯಾಕೆ ಪರಿಗಣಿಸುವುದಿಲ್ಲ? ಪೊಲೀಸರು ನಿಷ್ಕ್ರಿಯರಾಗಿ ನೋಡುತ್ತ ನಿಲ್ಲುವುದೇಕೆ?

ಬಹಳಷ್ಟು ಪಕ್ಷಗಳು ಆಶ್ವಾಸನೆಯ ಮಹಾಪೂರವನ್ನೇ ಪ್ರಣಾಳಿಕೆಯ ರೂಪದಲ್ಲಿ ಮುದ್ರಿಸಿ ಹಂಚುತ್ತಿವೆ. ಸರ್ಕಾರದ ಖಜಾನೆಯನ್ನು ಬೀದಿಯಲ್ಲಿ ತಂದಿಡಲು ಬೇಕಾದಷ್ಟು ಆಮಿಷಗಳನ್ನು ಒಡ್ಡುತ್ತಿವೆ. ಮತದಾರರಿಗೂ ಇದರಿಂದ ಸಂತೋಷ ವಾಗುತ್ತಿದೆ. ಆದರೆ ಒಂದೇ ಒಂದು ಪಕ್ಷದವರ ಗ್ಯಾರಂಟಿ ಕಾರ್ಡಿನಲ್ಲೂ ‘ನಾನು ಶಾಸಕನಾಗಿ ನಿಮ್ಮ ಸೇವೆ ಮಾಡುವ ಅವಧಿಯಲ್ಲಿ ಅನ್ಯ ಪಕ್ಷಕ್ಕೆ ಹಾರುವುದಿಲ್ಲ’ ಎಂದವರಿಲ್ಲ. ‘ರೆಸಾರ್ಟ್‌ ಸೇರಿಕೊಂಡು ಭೋಗವಿಲಾಸಗಳಲ್ಲಿ ಮೈಮರೆಯುವುದಿಲ್ಲ’, ‘ಕಮಿಷನ್‌ ಪಡೆಯುವುದಿಲ್ಲ’, ‘ಮಗನಿಗೆ ಸೀಟುಕೊಡಿ ಎಂದು ದುಂಬಾಲು‌ ಬೀಳುವುದಿಲ್ಲ’, ‘ಭ್ರಷ್ಟಾಚಾರ ಮಾಡುವುದಿಲ್ಲ’, ‘ಶಾಸಕನಾಗಿ ವೇತನ ಮತ್ತು ಬಳಿಕ ನಿವೃತ್ತಿ ವೇತನ ಪಡೆಯುವುದಿಲ್ಲ’ ಎಂದು ಒಬ್ಬರಾದರೂ ಭರವಸೆ ಕೊಟ್ಟಿದ್ದಾರೆಯೇ? ಕೊಡುಗೆಗಳನ್ನು ನೀಡಿ, ಪ್ರಶ್ನಿಸಬೇಕಾದ ಜನರ ಬಾಯಿಯನ್ನು ಅವರು ಮೊದಲೇ ಮುಚ್ಚಿಸಿದ ಬಳಿಕ, ಜನಸಾಮಾನ್ಯರು ಇದನ್ನೆಲ್ಲ ಕೇಳುವುದೂ ಇಲ್ಲ.

ಇಂತಹ ಮೆರವಣಿಗೆಗಳು, ಭಾಷಣ ಕೇಳಲು ಎಲ್ಲಿಂದಲೋ ಜನರ ಸಾಗಾಟ, ಮನೆ ಮನೆ ಪ್ರಚಾರಕ್ಕೆ ಹಿಂಡುಗಟ್ಟಲೆ ಸಾಗುವ ಸ್ವಯಂ ಸೇವಕರು ಎಲ್ಲದಕ್ಕೂ ವೆಚ್ಚಕ್ಕೆ ಎಷ್ಟು ಹೊನ್ನು ಬೇಕಾಗುತ್ತದೆ ಎಂಬುದು ಚುನಾವಣಾ ಆಯೋಗಕ್ಕೆ ತಿಳಿಯದ ಸಂಗತಿಯೇನಲ್ಲ. ಒಬ್ಬ ಅಭ್ಯರ್ಥಿ ಎಷ್ಟು ವೆಚ್ಚ ಮಾಡಬಹುದು ಎಂಬುದರ ಗರಿಷ್ಠ ಮಿತಿಯನ್ನೂ ಆಯೋಗ ಹೇರಿದೆ. ಹೀಗಿದ್ದರೂ ಪ್ರತಿ ಚುನಾವಣೆಯಲ್ಲಿಯೂ ಹಿಂದಿನ ಸಲ ಮಾಡಿದ ಉತ್ತಮ ಕೆಲಸಗಳೇ ಅಭ್ಯರ್ಥಿಯ ಪುನರಾಯ್ಕೆಗೆ ಮಾನದಂಡವಾಗುವುದಿಲ್ಲ. ಸಿನಿಮಾ ನಟರನ್ನು, ಆ ಊರಿನ ಜನಕ್ಕೆ ಅರ್ಥವಾಗದ ಭಾಷೆಯಲ್ಲಿ ಭಾಷಣ ಮಾಡುವವರನ್ನು ಬರಹೇಳಿ ಮೆರವಣಿಗೆ ನಡೆಸುತ್ತಾರೆ. ಸಂಚಾರ ಅಸ್ತವ್ಯಸ್ತ ಗೊಳಿಸುತ್ತಾರೆ. ಸಾಲದ್ದಕ್ಕೆ ಪೊಲೀಸರ ಪಥಸಂಚಲನದಂತಹ ಮಹಾಹಿಂಸೆ.

ಮೊದಲೇ ಜನರ ಕಿವಿಗಳು ಕೆಟ್ಟುಹೋಗಿವೆ. ಅವರ ಸ್ವಂತ ಕೆಲಸಕ್ಕೂ ಸಂಚಾರ ಅಡಚಣೆ ತರುವ ಮಂದಿಗೆ ಪ್ರಾಯಶ್ಚಿತ್ತವೇ ಇಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT