ಮಂಗಳವಾರ, ಅಕ್ಟೋಬರ್ 22, 2019
23 °C
ಹಿಂದಿಯನ್ನು ಅವಾಸ್ತವಿಕವಾಗಿ ಕೇವಲ ಭಾಷಾ ಆವೇಶದಿಂದ ವಿರೋಧಿಸಿದರೆ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ನಮಗೆ ನಷ್ಟವೇ ಹೆಚ್ಚು

ಹಿಂದಿ ಬಳಕೆ: ಭಾಷಾ ಆವೇಶವೇಕೆ?

Published:
Updated:
Prajavani

ಈ ಬರಹವನ್ನು ನಾನು ಪೂರ್ಣ ವೈಯಕ್ತಿಕ ನೆಲೆಯಿಂದಲೇ ಪ್ರಾರಂಭಿಸುತ್ತೇನೆ. ಶಿಮ್ಲಾ, ದೆಹಲಿ, ಅಹಮದಾಬಾದ್, ಹೈದರಾಬಾದ್ ಪ್ರದೇಶಗಳಲ್ಲಿ ಪ್ರವಾಸ ಮಾಡುತ್ತಿದ್ದಾಗ, ವಾಸ್ತವ್ಯವನ್ನೂ ಮಾಡಿದ್ದಾಗ, ನನಗೆ ಸಮಸ್ಯೆಯಾಗಿದ್ದದ್ದು ಸಾಮಾನ್ಯ ಜನರ ನಡುವಣ ಸಂವಹನ. ಅವರುಗಳಿಗೆ ಕನ್ನಡ ಗೊತ್ತಿಲ್ಲ, ನನ್ನ ಇಂಗ್ಲಿಷ್ ಅಂಗಡಿ ಮುಂಗಟ್ಟು, ತರಕಾರಿ ವ್ಯಾಪಾರದಲ್ಲಿ, ಹೋಟೆಲ್‍ಗಳಲ್ಲಿ ನಡೆಯುವುದಿಲ್ಲ. ಇನ್ನು ರಿಕ್ಷಾ, ಟ್ಯಾಕ್ಸಿ ಪ್ರಪಂಚದಲ್ಲೂ ಅಷ್ಟೆ. ಹೋಗಬೇಕಾದ ರಸ್ತೆ ತಿಳಿಯದಿದ್ದಾಗ ಅಥವಾ ಯಾವುದಾದರೂ ಮಾಹಿತಿಯನ್ನು ಪಡೆಯಬೇಕಾದರೆ ಬಲು ಕಷ್ಟವಾಗುತ್ತಿತ್ತು. ಇಂಗ್ಲಿಷ್ ಬರುವ ದಾರಿಹೋಕರನ್ನು ಕೇಳಬೇಕು, ಇಲ್ಲವಾದರೆ ನನಗೆ ಬರುವ ಹರಕು ಮುರುಕು ಹಿಂದಿಯನ್ನು ಅವಲಂಬಿಸಬೇಕು. ಅನ್ಯ ಮಾರ್ಗವಿಲ್ಲ. ಈ ಪ್ರದೇಶಗಳ ಜನರೆಲ್ಲ ಕನ್ನಡ ಕಲಿಯಬೇಕು ಎಂದು ಭಾವಿಸುವುದು ಅತ್ಯಂತ ಅವಾಸ್ತವಿಕ.

ವೈಯಕ್ತಿಕ ನೆಲೆ ಬಿಟ್ಟುಬಿಡೋಣ. ರಾಜ್ಯ– ರಾಜ್ಯಗಳ ನಡುವಿನ ಸಂಬಂಧಗಳು, ವಾಣಿಜ್ಯ, ಉದ್ಯಮ, ವ್ಯವಹಾರ ವಹಿವಾಟುಗಳತ್ತ ದೃಷ್ಟಿ ಹರಿಸೋಣ.

ಕನ್ನಡ ಬಾರದ ನೆರೆ ರಾಜ್ಯಗಳ ಜೊತೆಗೆ ಸಂಬಂಧ ಕಲ್ಪಿಸಿಕೊಳ್ಳಬೇಕಾದಲ್ಲಿ ಇಂಗ್ಲಿಷ್‌ ಭಾಷೆಯ ಮೊರೆ ಹೋಗಬೇಕು. ಇಲ್ಲವಾದರೆ ಆ ರಾಜ್ಯಗಳಿಗೆ ತಿಳಿಯಬಲ್ಲಂಥ ಭಾಷೆಯನ್ನು ಅವಲಂಬಿಸಬೇಕು. ಉದಾಹರಣೆಗೆ, ಬಹಳ ದೂರವೇನೂ ಹೋಗಬೇಕಾಗಿಲ್ಲ. ಮಹದಾಯಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಗೋವಾ ರಾಜ್ಯದ ಜೊತೆ ನಡೆದ ಪತ್ರ ವ್ಯವಹಾರವನ್ನೇ ನೆನಪಿಸಿಕೊಂಡರೆ ಸಾಕು ಅಥವಾ ಕರ್ನಾಟಕ, ಕೇರಳ ನಡುವಣ ನದಿ ವ್ಯಾಜ್ಯಗಳನ್ನು ನೆನಪಿಸಿಕೊಂಡರೂ ಸಾಕು. ನಾವುಗಳಾಗಲೀ ತಮಿಳುನಾಡು, ಕೇರಳ ಅಥವಾ ಮಹಾರಾಷ್ಟ್ರದ ಜನರಾಗಲೀ ದಿನದ ಮಟ್ಟಿನ ಸಂವಹನಕ್ಕೆ ಇಂಗ್ಲಿಷ್ ಭಾಷೆಯನ್ನು ಅವಲಂಬಿಸಲಾರೆವು; ಅವಲಂಬಿಸಲೂಬಾರದು. ಇಂಗ್ಲಿಷ್‌ಗಿಂತ ಹೆಚ್ಚಾಗಿ ನಮ್ಮ ಕಿವಿಗೆ ಬೀಳುವ ಭಾಷೆಯೆಂದರೆ ಹಿಂದಿ. ಇದರ ಮೂಲಕ ವ್ಯವಹಾರ ಸಲೀಸು.

ರಾಷ್ಟ್ರ ಮಟ್ಟದಲ್ಲಿ ಅತ್ಯಂತ ವ್ಯಾಪಕವಾದ ಜನಪ್ರಿಯತೆಯನ್ನು ಪಡೆದುಕೊಂಡ ರಾಮಾಯಣ, ಮಹಾಭಾರತ ಧಾರಾವಾಹಿಗಳು ಹಿಂದಿ ಮೂಲದವು. ಇವುಗಳು ಹಿಂದಿಯೇತರ ಮನಸ್ಸನ್ನೂ ಪ್ರಜ್ಞೆಯನ್ನೂ ಗೆದ್ದವು. ನನಗೆ ತಿಳಿದಂತೆ, ಯಾವುದೇ ಒಂದು ಪ್ರಾದೇಶಿಕ, ಕನ್ನಡ ಧಾರಾವಾಹಿ ಈ ಮಟ್ಟದಲ್ಲಿ ಜನರ ಮನಸ್ಸನ್ನು ಗೆದ್ದು ಹಿಡಿದಿಟ್ಟುಕೊಂಡಿಲ್ಲ. ಆರ್.ಕೆ.ನಾರಾಯಣ್‍ ಅವರ ‘ಮಾಲ್ಗುಡಿ ಡೇಸ್’ ರಾಷ್ಟ್ರ ಮಟ್ಟದಲ್ಲಿ ಪ್ರಭಾವ ಬೀರಿದ್ದು ಅದರ ಹಿಂದಿ ಮತ್ತು ಇಂಗ್ಲಿಷ್ ಅವತರಣಿಕೆಗಳಲ್ಲಿ!

ಇಲ್ಲಿ ನಾವು ಇನ್ನೊಂದು ಸಂಗತಿಯನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು: ಹೈದರಾಲಿ, ಟಿಪ್ಪು ಸುಲ್ತಾನರ ಕಾಲದಲ್ಲಿ ಬೆಂಗಳೂರು, ಶ್ರೀರಂಗಪಟ್ಟಣ ಹಾಗೂ ಮೈಸೂರಿನ ಜನ ಕಲಿತದ್ದು ಪಾರ್ಸಿ, ಮರಾಠಿ ಭಾಷೆಗಳನ್ನು; ಬ್ರಿಟಿಷರ ಆಡಳಿತದ ಕಾಲದಲ್ಲಿ ನಾವುಗಳು ಕಲಿತದ್ದು ಇಂಗ್ಲಿಷ್ ಭಾಷೆಯನ್ನು.

ಇದಕ್ಕೆ ಕಾರಣ ಪಾರ್ಸಿ ಅಥವಾ ಇಂಗ್ಲಿಷ್ ಭಾಷಾ ವ್ಯಾಮೋಹವೇನೂ ಅಲ್ಲ. ಈ ಭಾಷೆಗಳು ರಾಜಕೀಯ, ಆರ್ಥಿಕ, ಸಾಮಾಜಿಕ ಕಾರಣಗಳಾಗಿ ನಮಗೆ ಅಗತ್ಯವಾಗಿದ್ದವು, ಅನೇಕ ರೀತಿಯಲ್ಲಿ ಲಾಭದಾಯಕ ಆಗಿದ್ದವು. ಕನ್ನಡದ ಜನರಿಗೆ ಆ ಹಂತದಲ್ಲಿ ವೈಯಕ್ತಿಕ ಅಥವಾ ಸಾಮೂಹಿಕ ಏಳಿಗೆಗೆ ಈ ಭಾಷೆಗಳ ಕಲಿಕೆ ಅನಿವಾರ್ಯವಾಗಿತ್ತು. ಮತ್ತೆ ಇವುಗಳು ಕನ್ನಡಕ್ಕೆ ಹಾಗೂ ಕನ್ನಡ ರಾಜಕೀಯ ಶಕ್ತಿ ಗಳಿಕೆಗೆ ಸೊಗಸಾಗಿ ಸಹಾಯಕ್ಕೆ ಬಂದವು.

ರಾಜಕೀಯದಲ್ಲೂ ಇಡೀ ರಾಷ್ಟ್ರದ ಜೊತೆ ಸಂವಹನಕ್ಕೆ ಸದ್ಯಕ್ಕೆ ಬೇಕಾದದ್ದು ಇಂಗ್ಲಿಷ್ ಅಲ್ಲ, ಹಿಂದಿ. ರಾಷ್ಟ್ರ ರಾಜಕೀಯದಲ್ಲಿ ಆಗ ರಾಮಕೃಷ್ಣ ಹೆಗಡೆ ದೊಡ್ಡ ಪಾತ್ರ ವಹಿಸಿದ್ದರು. ಮಲ್ಲಿಕಾರ್ಜುನ ಖರ್ಗೆ ಈಗ
ಇಂಥ ಪಾತ್ರ ವಹಿಸುತ್ತಿದ್ದಾರೆ. ಅದಕ್ಕೆ ಕಾರಣ ಅವರ ಹಿಂದಿ, ಉರ್ದು, ಇಂಗ್ಲಿಷ್. ದೇವೇಗೌಡರಿಗೆ ಹಿಂದಿಯ ಈ ಸೌಲಭ್ಯ ಇಲ್ಲದ್ದು ಕರ್ನಾಟಕಕ್ಕೆ ಲಾಭದಾಯಕ ಆಗಲಿಲ್ಲ.

ಇಂಗ್ಲಿಷ್‌ನಂತೆ ಹಿಂದಿಯನ್ನು ನಾವು ಯಜಮಾನಿಕೆಯ ಭಾಷೆ ಎಂದೇನೂ ತಿಳಿಯಬೇಕಿಲ್ಲ. ಕನ್ನಡದಂತೆ ಅದೂ ಒಂದು ರಾಷ್ಟ್ರ ಭಾಷೆ. ಆದರೆ ಅದನ್ನು ಬಳಸುವವರ ಸಂಖ್ಯೆಯು ಕನ್ನಡವನ್ನು ಬಳಸುವವರ ಸಂಖ್ಯೆಗಿಂತ ಅಗಾಧ ರೀತಿಯಲ್ಲಿ ದೊಡ್ಡದು. ಅಷ್ಟೇ ಅಲ್ಲ, ಅದರ ವ್ಯಾಪ್ತಿಯೂ ವಿಶಾಲವಾದದ್ದು.

ನಾವು ಹಿಂದಿ ಭಾಷೆಯನ್ನು ಕಲಿತರೆ ಮತ್ತು ಬಳಸಿದರೆ ಹಿಂದಿ ಭಾಷೆಗಾಗಲೀ ಅಥವಾ ಜನರಿಗಾಗಲೀ ದೊಡ್ಡ ಲಾಭವೂ ಇಲ್ಲ. ನಮ್ಮ ಇಂಗ್ಲಿಷ್ ಕಲಿಕೆಯಿಂದ ಇಂಗ್ಲಿಷ್ ಭಾಷೆ ಅಥವಾ ಆ ಭಾಷೆಯ ರಾಜಕೀಯ ಶಕ್ತಿ ಏನೇನೂ ವೃದ್ಧಿಯಾಗುವುದಿಲ್ಲ. ಆದರೆ ನಮ್ಮ ವ್ಯಾಪಾರ, ವಹಿವಾಟು, ರಾಜಕೀಯ ಶಕ್ತಿ ಖಂಡಿತ ಬಲಗೊಳ್ಳುತ್ತವೆ. ನಮ್ಮ ವ್ಯಾಪಕ ಹಿಂದಿ ಬಳಕೆ ನಮಗೆ ಲಾಭದಾಯಕ. ಎಲ್ಲ ಬಗೆಯ ಲಾಭವೂ ಒಳ್ಳೆಯದೆ. ಹಾಗಾಗಿ ಹಿಂದಿಯನ್ನು ಅವಾಸ್ತವಿಕವಾಗಿ, ಕೇವಲ ಭಾಷಾ ಆವೇಶದಿಂದ ವಿರೋಧಿಸಿದರೆ ನಮಗೆ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ನಷ್ಟವೇ ಹೆಚ್ಚು. ಇದು ಕಟ್ಟಿಟ್ಟ ಬುತ್ತಿ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)