ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ|‘ಬೆನ್ನು’ವಿನ ಬೆನ್ನು ಹತ್ತಿದಾಗ

ಭೂಮಿಗೆ ಅಪ್ಪಳಿಸಬಹುದೆಂದು ಅಂದಾಜಿಸಲಾಗಿರುವ ಕ್ಷುದ್ರಗ್ರಹ ಬೆನ್ನು (Asteroid Bennu)ವಿನ ಬಗ್ಗೆ ಹೆಚ್ಚಿನ ಮಾಹಿತಿ ಅರಿಯಲು ನಾಸಾ ಸರ್ವಪ್ರಯತ್ನವನ್ನೂ ನಡೆಸಿದೆ
Published 30 ಜೂನ್ 2023, 1:07 IST
Last Updated 30 ಜೂನ್ 2023, 1:07 IST
ಅಕ್ಷರ ಗಾತ್ರ

ಕ್ಷುದ್ರಗ್ರಹಗಳ ಕುರಿತು ಮಾತು ಬಂದಾಗಲೆಲ್ಲ, ಅವು ಭೂಮಿಗೆ ಯಾವಾಗ ಅಪ್ಪಳಿಸಿಬಿಡುತ್ತವೋ ಎಂಬ ಆತಂಕದ ಚರ್ಚೆ ಶುರುವಾಗುತ್ತದೆ. ಹಿಂದೆ ಆದ ಪ್ರಕರಣಗಳ ನೆನಪಾಗಿ ಗಾಬರಿಯಾಗುತ್ತದೆ. 51º ನಾರ್ಥ್, ಆರ್ಮಗೆಡ್ಡಾನ್, ಡೀಪ್ ಇಂಪ್ಯಾಕ್ಟ್‌ನಂಥ ಸಿನಿಮಾಗಳಲ್ಲಿ ತೋರಿಸಿದಂತೆ ನಡೆದರೆ ಭೂಮಿಯ ಗತಿಯೇನು ಎನ್ನುವವರಿದ್ದಾರೆ.

ಕ್ಷುದ್ರಗ್ರಹಗಳ ಮೈಯಲ್ಲೇನಿದೆ ಎಂಬುದು ತಿಳಿದರೆ ಅದರ ದಿಕ್ಕು ಬದಲಾಯಿಸಿ ಭೂಮಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಬಹುದೆಂಬ ಲೆಕ್ಕಾಚಾರ ವಿಜ್ಞಾನಿಗಳದ್ದು. ಮುಂದಿನ ಶತಮಾನದ ಉತ್ತರಾರ್ಧದಲ್ಲಿ ‘ಬೆನ್ನು’ ಎಂಬ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಬಹುದು ಎಂಬ ಮಾಹಿತಿ ಈಗಲೇ ಲಭಿಸಿದೆ. ಬೆನ್ನು ಪ್ರತಿ 6 ವರ್ಷಗಳಿಗೊಮ್ಮೆ ಭೂಮಿಯ ಸಮೀಪ ಬರುತ್ತದೆ ಮತ್ತು ಭೂಮಿಯು ಸೂರ್ಯನನ್ನು ಸುತ್ತುವ ಕಕ್ಷೆಯನ್ನು ಹಾಯುತ್ತದೆ. 500 ಮೀಟರ್‌ ಸರಾಸರಿ ವ್ಯಾಸವಿರುವ ‘ಬೆನ್ನು’ ಭೂಮಿಯಿಂದ ಹತ್ತು ಕೋಟಿ ಕಿ.ಮೀ. ದೂರದಲ್ಲಿ ಭೂಮಿಯನ್ನು ಸುತ್ತುತ್ತಿದೆ.

450 ಕೋಟಿ ವರ್ಷ ವಯಸ್ಸಿನ ಈ ಕ್ಷುದ್ರಗ್ರಹ 1999ರಲ್ಲಿ ಪತ್ತೆಯಾಗಿತ್ತು. 2013ರಲ್ಲಿ ನಾಸಾದವರು ಕ್ಷುದ್ರಗ್ರಹಕ್ಕೊಂದು ಹೆಸರು ಕೊಡುವ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಆಗ ಉತ್ತರ ಕೆರೊಲಿನಾದ ಶಾಲಾ ಬಾಲಕನೊಬ್ಬ ಸೂಚಿಸಿದ ಬೆನ್ನು ಎಂಬ ಹೆಸರು ಆಯ್ಕೆಯಾಯಿತು. ಬೆನ್ನು ಎಂಬುದು ಈಜಿಪ್ಟಿನ ದೇವತೆಯ ಹೆಸರು. ಕ್ಷುದ್ರಗ್ರಹಗಳು ಖನಿಜ ಸಂಪತ್ತಿನ ಗಣಿಗಳೇ ಎಂದು ಅಂದಾಜಿಸಲಾಗಿದ್ದು, ಚಿನ್ನ, ಬೆಳ್ಳಿ, ಪ್ಲಾಟಿನಂ, ವಜ್ರಗಳು ದೊರಕಬಹುದು ಮತ್ತು ಲೀಥಿಯಂ ಸಿಕ್ಕರೆ ಭೂಮಿಗೆ ತಂದು ನಮ್ಮ ಕಾರು ಬಸ್ಸು, ರೈಲುಗಳನ್ನೆಲ್ಲ ಅದರಿಂದಲೇ ಓಡಿಸಬಹುದು ಎಂಬ ಲೆಕ್ಕಾಚಾರ ವಿಜ್ಞಾನಿಗಳದ್ದು. ಹಿಂದೆ ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸಿದಾಗ ಇರಿಡಿಯಂ ಲೋಹದ ಪುಡಿ ಉತ್ತರ ಗೋಳಾರ್ಧದ ಅನೇಕ ದೇಶಗಳಲ್ಲಿ ಹರಡಿತ್ತು.

ಅದಕ್ಕಾಗಿ ನಾಸಾವು ಬೆನ್ನು ಕ್ಷುದ್ರಗ್ರಹದ ಬೆನ್ನು ಬಿದ್ದಿದೆ. ಭೂಮಿಗೆ ಅಪ್ಪಳಿಸಬಹುದೆಂದು ಅಂದಾಜಿಸಲಾಗಿರುವ ಕ್ಷುದ್ರಗ್ರಹವನ್ನು ಅರಿಯಲು ನಾಸಾ ಭಾರಿ ಬಂಡವಾಳದ ಓಸಿರಿಸ್ ರೆಕ್ಸ್ (OSIRIS – REX) ಎಂಬ ಬಾಹ್ಯಾಕಾಶ ನೌಕೆಯನ್ನು ಏಳು ವರ್ಷಗಳ ಹಿಂದೆ ಸೆಪ್ಟೆಂಬರ್ 8ರಂದು ಹಾರಿಸಿತ್ತು. 2018ರ ಡಿಸೆಂಬರ್ 3ರಂದು ಬೆನ್ನುವಿನ ಸಮೀಪ ಬಂದ ಓಸಿರಿಸ್, ಎರಡು ವರ್ಷಗಳ ಕಾಲ ಸುತ್ತಿ 2020ರ ಅಕ್ಟೋಬರ್ 20ರಂದು ಬೆನ್ನುವಿನ ಮೈಮೇಲಿನ ನೈಟಿಂಗೇಲ್ ಎಂದು ಹೆಸರಿಸಿದ ಜಾಗದಲ್ಲಿ ರೊಬಾಟ್‌ ಬಳಸಿ ದೂಳು, ಮಣ್ಣು ಮತ್ತು ಬೆಣಚುಕಲ್ಲುಗಳನ್ನು ಸಂಗ್ರಹಿಸಿಕೊಂಡು 2021ರ ಮೇ 10ರಂದು ಅಲ್ಲಿಂದ ಹಿಂತಿರುಗಿ ಭೂಮಿಯ ಕಡೆ ಪಯಣ ಪ್ರಾರಂಭಿಸಿದ್ದು, ಸೆಪ್ಟೆಂಬರ್ 24ನೇ ತಾರೀಖಿನಂದು ಭೂಮಿ ತಲುಪಲಿದೆ.

ಈಗ ಓಸಿರಿಸ್ ಭೂಮಿಗೆ ಹೊತ್ತು ತರುವ ಬೆನ್ನುವಿನ ಪದಾರ್ಥ ಎಷ್ಟು ಅಂತೀರಿ? ಬರೀ 60 ಗ್ರಾಂ ದೂಳು, ಮಣ್ಣು ಮತ್ತು ಕಲ್ಲು. ಇದನ್ನು ಕೂಲಂಕಷವಾಗಿ ಅಭ್ಯಸಿಸುವ ಇರಾದೆ ವಿಜ್ಞಾನಿಗಳದ್ದು. ಕ್ಷುದ್ರಗ್ರಹದ ಚಿತ್ರಗಳನ್ನು ನೋಡಿ, ಅಲ್ಲಿನ ಬಂಡೆಗಳನ್ನು ಕಂಡು ಅದರ ಮೇಲ್ಮೈ ತುಂಬಾ ಗಡುಸಾಗಿರಬಹುದೆಂದು ವಿಜ್ಞಾನಿಗಳು ಅಂದುಕೊಂಡಿದ್ದರು. ಆದರೆ ಬೆನ್ನುವಿನ ಮೈ ತುಂಬಾ ಸಡಿಲ ಎಂದು ಪ್ರಾಥಮಿಕ ಅಧ್ಯಯನಗಳಿಂದ ಗೊತ್ತಾಗಿದೆ. ಓಸಿರಿಸ್‍ನ ರೊಬಾಟ್‌ ಕೈ (‘ಟಚ್ ಆ್ಯಂಡ್ ಗೋ ಸ್ಯಾಂಪಲ್ ಅಕ್ವಿಜಿಶನ್ ಮೆಕ್ಯಾನಿಸಮ್- TAGSAM) ಬಳಸಿ ಅದರ ಮೇಲ್ಮೈಯನ್ನು ಅತ್ಯಂತ ನಾಜೂಕಾಗಿ ಸ್ಪರ್ಶಿಸಿ, ಎರಡು ಕಡೆಗಳಿಂದ ನೈಟ್ರೋಜನ್ ಅನಿಲ ಒತ್ತಡವನ್ನು ಪ್ರಯೋಗಿಸಿ ಮಧ್ಯದ ನಳಿಕೆಯ ಮೂಲಕ ಕ್ಷುದ್ರಗ್ರಹದ ಸ್ಯಾಂಪಲ್ ಪಡೆಯಲಾಗಿದೆ.

ದೊರೆತಿರುವ ಸ್ಯಾಂಪಲ್‍ನ ಶೇ 30ರಷ್ಟು ಭಾಗವನ್ನಷ್ಟೇ ಪ್ರಯೋಗಗಳಿಗೆ ಬಳಸುವುದೆಂದು ನಿರ್ಧಾರವಾಗಿದ್ದು ಉಳಿದ ಶೇ 70ರಷ್ಟು ಭಾಗ ಮುಂದಿನ ಪೀಳಿಗೆಯ ಬುದ್ಧವಂತ ಹಾಗೂ ಚಾಣಾಕ್ಷ ಸಂಶೋಧಕರಿಗೆ ಮೀಸಲು ಎಂದು ನಾಸಾ ಘೋಷಿಸಿದೆ. ಜಾನ್ಸನ್ ಸ್ಪೇಸ್ ಸೆಂಟರ್‌ನ ಪ್ರಯೋಗಾಲಯ ತಲುಪುವ ಬೆನ್ನುವಿನ ಪದಾರ್ಥದಲ್ಲಿ ಶೇ 4ರಷ್ಟು ಕೆನಡಾಗೆ ಹಾಗೂ ಶೇ 0.5ರಷ್ಟು ಜಪಾನ್ ದೇಶಗಳಿಗೆ ರವಾನೆಯಾಗಲಿದೆ. ಎರಡೂ ದೇಶಗಳು ಓಸಿರಿಸ್ ಯೋಜನೆಗೆ ಸಹಕಾರ ನೀಡಿವೆ. ಇಪ್ಪತ್ತು ವರ್ಷಗಳ ಹಿಂದೆ ಜಪಾನ್ 30 ಕೋಟಿ ಕಿ.ಮೀ ದೂರದ ಇತೊಕವಾ ಎಂಬ ಕ್ಷುದ್ರಗ್ರಹ ಅಧ್ಯಯನಕ್ಕೆ ಹಯಬುಸ ನೌಕೆಯನ್ನು ಕಳಿಸಿತ್ತು. ಆಗಲೂ ಸ್ಯಾಂಪಲ್ ತರಲಾಗಿತ್ತು.

ಮುಂದಿನ ಶತಮಾನದಲ್ಲಿ ಭೂಮಿಗೆ ಅಪ್ಪಳಿಸಬಹುದೆಂಬ ಮಾಹಿತಿ ಇರುವುದರಿಂದ ಬೆನ್ನುವಿನ ಅಧ್ಯಯನ ಸಮರ್ಪಕವಾಗಿ ಆಗಬೇಕೆಂಬುದು ನಾಸಾದ ಉದ್ದೇಶ. ಅಲ್ಲಿನ ಮಣ್ಣು, ಕಲ್ಲಿನ ಕಣಗಳಲ್ಲಿ ಎಷ್ಟರಮಟ್ಟಿಗೆ ಉಷ್ಣಧಾರಣಾ ಶಕ್ತಿ ಇದೆ, ಅಣುಗಳ ನಡುವೆ ಎಷ್ಟು ಜಾಗವಿದೆ, ಕುಟ್ಟಿದರೆ ಪುಡಿಯಾಗಲು ಎಷ್ಟು ಒತ್ತಡ ಬೇಕು ಎಂಬೆಲ್ಲ ವಿಚಾರಗಳ ಕುರಿತು ಸೂಕ್ಷ್ಮ ಅಧ್ಯಯನ ನಡೆಯಲಿದೆ. ವಿಶೇಷ ಮಾಸ್ ಸ್ಪೆಕ್ಟ್ರೋಮೀಟರ್ ಅನ್ನು ಬಳಸಿ ಅಲ್ಲಿನ ಕಣಗಳಲ್ಲಿ ಸಾವಯವ ಪದಾರ್ಥವಿದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಇಲೆಕ್ಟ್ರಾನ್ ಸೂಕ್ಷ್ಮದರ್ಶಕ ಬಳಸಿ, ಬೆನ್ನು ಇದುವರೆಗೆ ಬಾಹ್ಯಾಕಾಶದಲ್ಲಿ ಏನೆಲ್ಲ ಆಘಾತ ಅನುಭವಿಸಿರಬಹುದು ಎಂಬುದರ ಬಗ್ಗೆ ಸಂಶೋಧನೆ ನಡೆಯಲಿದೆ. ಸೌರವ್ಯೂಹ ಹೇಗೆ ರಚನೆಯಾಗಿರಬಹುದು ಎಂಬುದರ ಅಧ್ಯಯನವೂ ಸಾಧ್ಯವಿದೆ ಎನ್ನುತ್ತಾರೆ ತಜ್ಞರು.

ನಮಗೆ ತಿಳಿದಿರುವ 12 ಅಣುಗಳಿರುವ ಇಂಗಾಲದ ಬದಲಿಗೆ ಒಂದು ಹೆಚ್ಚುವರಿ ನ್ಯೂಟ್ರಾನ್ ಇರುವ 13 ಅಣುಗಳ ಕಾರ್ಬನ್ ಪತ್ತೆಯೂ ಜರುಗಲಿದೆ. ಒಟ್ಟಿನಲ್ಲಿ ಬೆನ್ನುವಿನ ಬೆನ್ನು ಹತ್ತಿದ್ದಕ್ಕೆ ವಿಶ್ವ ಸೃಷ್ಟಿಯ ಮತ್ತಷ್ಟು ವಿವರಗಳು ಹೊರಬೀಳಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT