ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ನೀಟ್ ನೆಟ್ಟಗಾಗದಿದ್ದರೆ?

ಈ ಪರೀಕ್ಷೆಯು ಪರೀಕ್ಷಿಸುವುದು ಕೇವಲ ವಿಜ್ಞಾನವನ್ನಲ್ಲ, ಜೀವನಕೌಶಲವನ್ನೂ!
Last Updated 5 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

‘ನೀಟ್’ ಮುಗಿದು, ಫಲಿತಾಂಶ ಹೊರಬಿದ್ದು, ಸೀಟುಗಳು ಹಂಚಿಕೆಯಾಗುವ ಪ್ರಕ್ರಿಯೆ ಮೊದಲಾಗುತ್ತಿದೆ. ಪಿಯು ನಂತರ ಮುಂದೇನು ಎಂದು ಯೋಚಿಸುವ ಮಕ್ಕಳು, ಅವರ ತಂದೆ-ತಾಯಿಗಳು ನೀಟ್ ಬಗ್ಗೆ ಹೇಗೆ ಓದಬೇಕು, ಎಲ್ಲಿ ಓದಬೇಕು, ಎಷ್ಟು ಬಾರಿ ತೆಗೆದುಕೊಳ್ಳಬೇಕು ಎಂಬ ಆತಂಕ-ಗೊಂದಲಗಳಲ್ಲಿ ಮುಳುಗಿರುವುದು ಅಸಹಜವೇನಲ್ಲ.

‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’ ಎಂಬ ಏಕರೂಪಿ ಪರೀಕ್ಷಾ ವ್ಯವಸ್ಥೆಯ ಮೂಲಕ ಯಾವುದೇ ವೈದ್ಯಕೀಯ ಪದ್ಧತಿಗೆ, ಭಾರತದಲ್ಲಿರುವ ಸುಮಾರು 66,000 ಎಂಬಿಬಿಎಸ್ ಮತ್ತು ಬಿಡಿಎಸ್ ಸೀಟುಗಳಿಗೆ ಪ್ರವೇಶ ನೀಡಲಾಗುತ್ತದೆ. ಏಕರೂಪವಾಗಿ ದೇಶದೆಲ್ಲೆಡೆ ಈ ಪರೀಕ್ಷೆ ನಡೆಯುತ್ತದೆ ಎನ್ನುವುದು ಅದರ ವಿಶೇಷವನ್ನೂ ಕ್ಲಿಷ್ಟ ಎನ್ನುವ ಗ್ರಹಿಕೆಯನ್ನೂ ಹೆಚ್ಚಿಸಿದೆ ಎನ್ನಬಹುದು. ಪಕ್ಕದ ತಮಿಳುನಾಡಿನಲ್ಲಿ ‘ಏಕರೂಪತೆ’ಯ ಬಗೆಗೆ ಈಗಾಗಲೇ ಹಲವು ಗಲಾಟೆಗಳು ನಡೆದಿವೆ. ಆದರೆ ಸದ್ಯಕ್ಕಂತೂ ನೀಟ್ ಈ ಹೊತ್ತಿನ ವಾಸ್ತವ ಎಂಬುದನ್ನು ಒಪ್ಪಿಕೊಂಡು ನಮ್ಮ ಮುಂದಿರುವ ಸಮಸ್ಯೆಗಳಿಗೆ ಪರಿಹಾರಗಳ ಬಗ್ಗೆ ನೋಡುವುದೊಳಿತು.

ನೀಟ್‌ನಲ್ಲಿ ಅರ್ಹತೆ ದೊರಕದ ವಿದ್ಯಾರ್ಥಿಗಳು, ಇತರ ದಾರಿಗಳನ್ನು ಒಪ್ಪಿಕೊಳ್ಳದ ಯುವಜನರು, ಬಡಪೆಟ್ಟಿಗೆ ತಮ್ಮ ಮಕ್ಕಳ ‘ಸೋಲು’ ಒಪ್ಪದ ಅಪ್ಪಅಮ್ಮಂದಿರು ಮನೋವೈದ್ಯಕೀಯ ಸಲಹೆಗೆ ಬರುತ್ತಾರೆ. ಅದರಲ್ಲಿಯೂ ನೀಟ್ ಫಲಿತಾಂಶ ಬಂದ ನಂತರದಲ್ಲಿ ಪ್ರತಿದಿನಕ್ಕೆ ಇಬ್ಬರು ಮೂವರಂತೆ ಬರುವ ವಿದ್ಯಾರ್ಥಿಗಳನ್ನು ನೋಡಿದರೆ ಮನಸ್ಸು ಆತಂಕಗೊಳ್ಳುತ್ತದೆ. ನೀಟ್‌ಗೆ ಸಂಬಂಧಿಸಿದಂತೆ ಹದಿಹರೆಯದವರಲ್ಲಿ ಕೆಲವು ಮುಖ್ಯ ಸಮಸ್ಯೆಗಳನ್ನು ನಾವು ಗಮನಿಸಬೇಕಾಗುತ್ತದೆ.

ಮೊದಲನೆಯದು, ಎಲ್ಲಿ- ಹೇಗೆ- ಯಾವಾಗ ಓದಬೇಕೆನ್ನುವ ಸಮಸ್ಯೆ. ನೀಟ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ತ್ವರಿತವಾಗಿ ಗ್ರಹಿಸಿ, ಉತ್ತರಿಸುವ ವಿದ್ಯಾರ್ಥಿಯ ಸಾಮರ್ಥ್ಯವನ್ನು ಪರೀಕ್ಷಿಸುವುದರಿಂದ, ಸಹಜವಾಗಿ ಹಾಗೆ ಮಾಡಲು ವಿಶೇಷ ತರಬೇತಿಯ ಅಗತ್ಯವಿದೆ. ಈ ಅಗತ್ಯವನ್ನು ಅವಲಂಬಿಸಿ ಹಲವು ತರಬೇತಿ ಕೇಂದ್ರಗಳು ಹುಟ್ಟಿಕೊಂಡಿವೆ. ಹೆಚ್ಚಿನ ಕೇಂದ್ರಗಳ ನೆಲೆ ದೊಡ್ಡ ನಗರಗಳು. ಜೊತೆಗೇ ಕೋವಿಡ್ ಸಮಯದಲ್ಲಿ ಆನ್‍ಲೈನ್ ತಾಣಗಳೂ ಆರಂಭವಾಗಿವೆ. ಚಿಕ್ಕ ನಗರಗಳಿಂದ, ಹಳ್ಳಿಗಳಿಂದ, ಕೆಲವೊಮ್ಮೆ ಬೇರೆ ರಾಜ್ಯಗಳಿಂದ ಮಕ್ಕಳು ನೀಟ್ ಅನ್ನು ಗೆಲ್ಲುವ ಆಸೆಯಿಂದ ಈ ಕೇಂದ್ರಗಳಿಗೆ ಸೇರುತ್ತಾರೆ. ಕೆಲವರು ‘ಜಯಶಾಲಿ’ಗಳಾಗುತ್ತಾರೆ. ಒಂದಿಷ್ಟು ಜನ ಒತ್ತಡ ತಾಳಲಾರದೆ ಮನೆಗೆ ಹಿಂದಿರುಗುತ್ತಾರೆ. ನೀಟ್ ಆಕಾಂಕ್ಷಿಗಳಲ್ಲಿ ಕಂಡುಬರುವ ಮತ್ತೊಂದು ಮುಖ್ಯ
ಪ್ರವೃತ್ತಿಯೆಂದರೆ, ನೀಟ್‌ನಲ್ಲಿ ಮೊದಲನೆಯ ಬಾರಿ ಜಯ ಸಿಗಲಿಲ್ಲವೆಂದು ಎರಡು- ಮೂರು ಕೊನೆಗೆ ನಾಲ್ಕು ಬಾರಿ ನೀಟ್ ಅರ್ಹತೆ ಗಳಿಸಲು ಕಷ್ಟಪಡುವುದು. ‘ನೀವು ಕೋಚಿಂಗ್‌ಗೆ ಕಳಿಸಿದ್ದರೆ ನನಗೆ ಸೀಟು ಸಿಕ್ಕೇ ಸಿಕ್ಕುತ್ತಿತ್ತು’ ಎಂಬ ಮಕ್ಕಳ ಆರೋಪಕ್ಕೆ ಹೆದರಿ ಅಪ್ಪ ಅಮ್ಮ ಹೇಗಾದರೂ ಕೋಚಿಂಗ್‌ಗೆ ಕಳಿಸುವುದು.

ಹತ್ತನೇ ತರಗತಿಯಿಂದ ಆರಂಭವಾಗುವ ‘ಓದಿನ ಸಂಕಷ್ಟ’ ಇಂದಿನ ವಾಸ್ತವ. 15 ವರ್ಷದ ಮಕ್ಕಳು 17 ವರ್ಷದವರೆಗೆ ಯಾವ ಆಟ-ವ್ಯಾಯಾಮಗಳೂ ಇರದೆ, ಬೇರೆಲ್ಲಾ ಚಟುವಟಿಕೆಗಳನ್ನೂ ಬದಿಗಿರಿಸಿ ಓದಿನಲ್ಲಿ ಮುಳುಗುತ್ತಾರೆ. ಸುಮಾರು 20 ಶೇಕಡ ನೀಟ್ ಆಕಾಂಕ್ಷಿಗಳು ‘ವೈದ್ಯಕೀಯ ಪದವಿಯೇ ತಮ್ಮ ಜೀವನ’ ಎಂದು ನಂಬಿರುವುದನ್ನು ಇತ್ತೀಚಿನ ಅಧ್ಯಯನವೊಂದು ತೋರಿಸಿದೆ. ‘ವೈದ್ಯಕೀಯ’ ಪದವಿಗೆ ಬದಲಿಯಾದ ಇನ್ನೊಂದು ಅಧ್ಯಯನದ ದಾರಿಯೇ ಅವರ ಯೋಚನೆಗಳಲ್ಲಿ ಇರುವುದಿಲ್ಲ. ಈ ಮೊದಲು ನಾವು ಬಹುವಾಗಿ ಮಾತನಾಡುತ್ತಿದ್ದ ‘ಅಪ್ಪ- ಅಮ್ಮಂದಿರಿಂದ ಮಕ್ಕಳ ಮೇಲೆ ಒತ್ತಡ’, ಈಗ ಕೊಂಚ ಬದಲಾಗಿ ‘ಮಕ್ಕಳು ಸ್ವತಃ ಹಾಕಿಕೊಳ್ಳುವ ಒತ್ತಡ ವಾಗಿದೆ!’

ನೀಟ್ ಸಮಯದ ಮತ್ತೊಂದು ಆತಂಕಕಾರಿ ಬೆಳವಣಿಗೆಯಾದ ಆತ್ಮಹತ್ಯೆ ಪ್ರಕರಣಗಳು ದೇಶದ ಹಲವೆಡೆಯಿಂದ ವರದಿಯಾಗಿವೆ. ತಮಿಳುನಾಡು ಇಂತಹ ಪ್ರಕರಣಗಳನ್ನು ತಡೆಯಲು ಆಪ್ತ ಸಲಹೆ- ಸಹಾಯವಾಣಿಯನ್ನೇ ಆರಂಭಿಸಿದೆ. ಮರು ನೀಟ್ ಪರೀಕ್ಷೆಯ ವಿದ್ಯಾರ್ಥಿಗಳಲ್ಲಿ ಶೇಕಡ 70ರಷ್ಟು ಜನ ಅತಿ ಆತಂಕದಿಂದ ಬಳಲುತ್ತಿರುತ್ತಾರೆ ಎಂಬುದನ್ನು ತಮಿಳುನಾಡಿನಲ್ಲಿ ನಡೆದ ಅಧ್ಯಯನ ನಿರೂಪಿಸಿದೆ.

ಇದರ ಮಧ್ಯೆ ಎಂಬಿಬಿಎಸ್ ಆಕಾಂಕ್ಷಿಗಳಿಗೆ ದ್ವಿತೀಯ ಪಿಯು ಅಥವಾ ಹನ್ನೆರಡನೇ ತರಗತಿ ಎಂಬುದು ‘ಬೇಡದಿರುವ– ಹೇಗೋ ಪಾಸಾಗಬೇಕಾದ’ ಒಂದು ಪರೀಕ್ಷೆ ಎಂಬ ಧೋರಣೆ ತಲೆದೋರಿದೆ! ದ್ವಿತೀಯ ಪಿಯು ಪರೀಕ್ಷೆಗಳು ನಿರೀಕ್ಷಿಸುವ ಬರೆಯುವ ಕೌಶಲವು ನೀಟ್‌ಗೇನೂ ಬೇಕಾಗಿಲ್ಲ ಎಂಬುದು ವಿದ್ಯಾರ್ಥಿಗಳ ಗ್ರಹಿಕೆಯಾಗಿಬಿಟ್ಟಿದೆ.

ಮನೋವೈದ್ಯೆಯಾದ ನನಗೆ ಅನ್ನಿಸುವ ಹಾಗೆ, ನೀಟ್ ಅನ್ನೂ ಒಳಗೊಂಡಂತೆ ಸ್ಪರ್ಧಾತ್ಮಕ ಪರೀಕ್ಷೆಗಳು ಪರೀಕ್ಷಿಸುವುದು ಕೇವಲ ವಿಜ್ಞಾನವನ್ನಲ್ಲ, ಜೀವನಕೌಶಲವನ್ನೂ!

ನಾವು ಪರೀಕ್ಷೆಗಾಗಿ ಎಷ್ಟು ನಮ್ಮ ಮನಸ್ಸಿನಲ್ಲಿ ಕಷ್ಟಪಡುತ್ತೇವೆ, ಪ್ರೀತಿಯಿಂದ ಓದುತ್ತೇವೆ, ಫಲಿತಾಂಶವನ್ನು ಹೇಗೆ ಸ್ವೀಕರಿಸುತ್ತೇವೆ, ಇವುಗಳೂ ಇಲ್ಲಿ ಮೌಲ್ಯಮಾಪನಕ್ಕೆ ಒಳಗಾಗುತ್ತವೆ. ನೀಟ್‍ನಲ್ಲಿ ‘ಜಯಶಾಲಿ’ಗಳಾದವರ ನಂತರದ ಮಾನಸಿಕ, ದೈಹಿಕ ಆರೋಗ್ಯವನ್ನೂ ಅಧ್ಯಯನ ಮಾಡಬೇಕಾದ ಅಗತ್ಯವಿದೆ. ನೀಟ್‍ನಲ್ಲಿ ವೈಫಲ್ಯ ಉಂಟಾದರೆ ಬದಲಿ ಮಾರ್ಗವನ್ನು ಆರಿಸಿಕೊಂಡು, ಅದರಲ್ಲಿ ಯಶಸ್ಸು ಗಳಿಸುವ ಧೈರ್ಯ, ಪ್ರಾಮಾಣಿಕತೆ ಎರಡೂ ಮಕ್ಕಳು- ಅಪ್ಪ ಅಮ್ಮ ಇಬ್ಬರಿಗೂ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT