ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ‘ಪ್ರೇಮ ಪಾಠ’ ಕಲಿಸುವ ಗ್ಯಾಲುವಾ!

ಪ್ರೀತಿಗೆ ಎದುರಾಗುವ ಅಡೆತಡೆಗಳು ಎಳೆಯರ ದಿಕ್ಕೆಡಿಸುತ್ತವೆ
Published 13 ಫೆಬ್ರುವರಿ 2024, 0:30 IST
Last Updated 13 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

‘ಮನಸಿನಲಿ ನೀನಿದ್ದರೆ ಮರೆಯಬಹುದು ನಾನು, ಮನಸೇ ನೀನಾದರೆ?’ ಎಂದೊ, ‘ಪ್ರೀತಿಯು ಜೀವನ ಎಂಬ ಪುಸ್ತಕದ ಒಂದು ಪುಟ. ಆ ಒಂದು ಪುಟಕ್ಕಾಗಿ ಪೂರ್ತಿ ಪುಸ್ತಕ ಶಿಥಿಲವಾಗದಿರಲಿ’ ಎಂದೊ, ‘ಒಲವೆಂಬುದು ಪಳಗಿಸಲಾಗದ ಪಕ್ಷಿ’ ಎಂದೊ ಪ್ರೀತಿ ವರ್ಷವರ್ಷವೂ ನವ ನವ ಉಪಮೆಗಳನ್ನು ಸೃಷ್ಟಿಸುತ್ತದೆ. ವ್ಯಾಲೆಂಟೈನ್ ದಿನವಾದ ಫೆಬ್ರುವರಿ 14, ಅಧಿಕ ವರ್ಷದಲ್ಲಿ ಬಂದರಂತೂ ಸಡಗರಕ್ಕೆ ವಿಶಿಷ್ಟತಮ ರಂಗು.

ಅಂದಹಾಗೆ, ಈ ದಿನ ಪ್ರಣಯಿಗಳ ನಡುವಿನ ಪ್ರೇಮಕ್ಕಷ್ಟೇ ಸೀಮಿತವಲ್ಲ. ಪರಸ್ಪರ ಗೌರವ, ವಿಶ್ವಾಸ, ನಂಬಿಕೆಯ ಅಭಿವ್ಯಕ್ತಿಯ ಸಂದರ್ಭ ಸಹ ಆಗಬಹುದು. ತನ್ನ ಆತ್ಮವಿಶ್ವಾಸದ ಪುನಶ್ಚೇತನವೂ ವ್ಯಾಲೆಂಟೈನ್ ದಿನದ ಸಾರ್ಥಕ್ಯವೇ ಆಗಿರುತ್ತದೆ.

‘ಯೌವನದ ಹೊಳೆಯಲ್ಲೀ ಈಜಾಟ ಆಡಿದರೆ, ಓ ಹೆಣ್ಣೇ ಸೋಲು ನಿನಗೆ...’- ಗಂಡಿಗೂ ಅನ್ವಯಿಸುವ ಎಚ್ಚರಿಕೆಯ ಸಂದೇಶವುಳ್ಳ ಹಳೆಯ ಸಿನಿಮಾವೊಂದರ ಈ ಹಾಡು ಎಲ್ಲ ಕಾಲಕ್ಕೂ ಪ್ರಸ್ತುತ ಎನಿಸುತ್ತದೆ. ಇನ್ನೂ ಶಾಲೆಗೆ ಹೋಗುವ ಪ್ರಾಯ. ಬಾಲಕ, ಬಾಲಕಿ ಪಾರ್ಕಿನ ಕಲ್ಲುಬೆಂಚಿನ ಮೇಲೆ ಕೂತು ಹರಟುತ್ತಾರೆ, ಕೈ ಕೈ ಹಿಡಿದು ಮಾಲ್‍ನಲ್ಲಿ ಅಡ್ಡಾಡುತ್ತಾರೆ. ಮಹಾತ್ಮ ಗಾಂಧಿ ಸಹಶಿಕ್ಷಣವನ್ನು ಪ್ರತಿಪಾದಿಸಿದ್ದರು. ಆದರೆ ಗೆಳೆತನವೇ ಪ್ರೇಮಕ್ಕೆ ತಿರುಗಿ ಬಾಲಕ, ಬಾಲಕಿ ಪ್ರಣಯಿಗಳಾದರೆ ಸಂಗತಿ ಸಂಕೀರ್ಣ ರೂಪ ತಳೆಯುತ್ತದೆ.

ತಾವು ಯಾರೆನ್ನುವುದನ್ನೇ ಇನ್ನೂ ಅರಿಯದ ವಯಸ್ಸು ಅವರದು. ಪ್ರೇಮ, ಪ್ರಣಯದ ಬಗೆಗಿನ ಸವಾಲು, ಪ್ರತಿರೋಧಗಳನ್ನು ಅವರು ಧೈರ್ಯವಾಗಿ ಎದುರಿಸಬಲ್ಲರೇ? ವಾಸ್ತವವಾಗಿ ಅವರು ಅನು
ಸಂಧಾನಿಸುತ್ತಿರುವುದು ನೈತಿಕತೆಗಿಂತಲೂ ಹೆಚ್ಚಾಗಿ ಜೈವಿಕ ಬದಲಾವಣೆಯೊಂದಿಗೆ. ‘ಓದು, ಬರಹದ ಕಡೆಗೆ ನಮ್ಮ ನಡಿಗೆ’ ಎಂಬುದು ವಿದ್ಯಾರ್ಥಿಗಳ ಪಾಲಿಗೆ ಧ್ಯೇಯ
ವಾಕ್ಯವಾಗುವುದು ಸೂಕ್ತ.

ಸಮೂಹ ಮಾಧ್ಯಮಗಳು ಮಾನಸಿಕ ನಂಜನ್ನು ಉಣಿಸುತ್ತವೆ. ಸಿನಿಮಾಗಳು ಕಾಲೇಜನ್ನು ಪ್ರಣಯಿಗಳು ಸಂಧಿಸುವ ತಾಣವೆಂದೇ ಬಿಂಬಿಸುತ್ತವೆ. ಮರ, ಕಂಬ ಸುತ್ತುವ ನಾಯಕ, ನಾಯಕಿಯ ಪ್ರೀತಿಯು ವಿವಾಹದಲ್ಲೇ ಪರ್ಯವಸಾನವಾಗಬೇಕು. ಪ್ರಣಯದ ಹಾದಿಯಲ್ಲಿ ಸವಾಲುಗಳು ಎದುರಾಗಿ ಪ್ರೇಮ ವೈಫಲ್ಯವಾಗುವ ಸನ್ನಿವೇಶಗಳು ತೆರೆಯ ಮೇಲೆ ಕಾಣಿಸಿ ಕೊಳ್ಳುವುದು ಬೆರಳೆಣಿಕೆಯಷ್ಟು ಮಾತ್ರ. ‘ಪ್ರೀತಿ, ಪ್ರೇಮವನ್ನು ಇಲ್ಲಿಗೇ ಮುಕ್ತಾಯಗೊಳಿಸೋಣ. ನಾಳೆ ನಮಗೆ ನಮ್ಮ ಪೋಷಕರ ಬಲ ಸಿಗುವುದೋ ಇಲ್ಲವೋ’ ಎಂದು ನಾಯಕ, ನಾಯಕಿ ನಿಶ್ಚಯಿಸುವ ಸನ್ನಿವೇಶಗಳು ಸಿನಿಮಾಗಳಲ್ಲಿ ಅತಿ ವಿರಳ.

ಭ್ರಮಿಸುವುದೆಲ್ಲ ನಿಜವಾಗಿರುವುದಿಲ್ಲ ಎನ್ನುವ ವಿವೇಕ, ಜಳ್ಳು– ಗಟ್ಟಿ ಕುರಿತ ವಿವೇಚನೆಯು ಪಠ್ಯಕ್ರಮದ ಒಂದು ಭಾಗವಾಗುವ ಅಗತ್ಯವಿದೆ. ಒಬ್ಬ ಕಲಿಕಾರ್ಥಿ ಬಹುತೇಕ ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್ ಹೊಂದದಿರುವುದೇ ಒಂದು ದೌರ್ಬಲ್ಯ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.

ಮಕ್ಕಳು ಈಗಾಗಲೇ ವಿಪರೀತ ಒತ್ತಡಕ್ಕೆ ಒಳಗಾಗಿದ್ದಾರೆ. ಹೆಚ್ಚು ಅಂಕ ಗಳಿಸಿ ತರಗತಿಗೆ ಮೊದಲು ಬಾ ಎಂದು ಪೋಷಕರು, ಕ್ರೀಡೆ, ಆಟೋಟಗಳಲ್ಲೂ ಶಾಲೆಗೆ ಕೀರ್ತಿ ತಾ ಎಂದು ವಿದ್ಯಾಸಂಸ್ಥೆಯ ಬೋಧಕ ವೃಂದ, ಆಡಳಿತ ವರ್ಗ. ಅಪ್ರಾಪ್ತ ವಯಸ್ಸಿನಲ್ಲಿ ಪ್ರಣಯಪಕ್ಷಿಗಳಾಗಿ ಮಕ್ಕಳು ಸ್ವತಃ ಒತ್ತಡವನ್ನು ಇನ್ನಷ್ಟು ತಾವೇ ಹೇರಿಕೊಳ್ಳುವುದು ವಿಪರ್ಯಾಸ. ಹದಿಹರೆಯದ ವಯಸ್ಸು ಅನಿಶ್ಚಯ, ಅಚ್ಚರಿ, ಆತಂಕದ ಕಣಜ. ಪ್ರೇಮ ವೈಫಲ್ಯಗಳು ಆತ್ಮಹತ್ಯೆಯತ್ತ ದೂಡಿರುವ ಪ್ರಸಂಗಗಳುಂಟು. ಪೋಷಕರು ಮಕ್ಕಳ ಪಾಲಿಗೆ ಪೋಷಕತ್ವಕ್ಕಿಂತಲೂ ಹೆಚ್ಚಾಗಿ ಅವರಲ್ಲಿ ಗೆಳೆತನವನ್ನೇ ಮೆರೆಯಬೇಕು. ಮಕ್ಕಳನ್ನು ಉತ್ತಮ ಹವ್ಯಾಸಗಳಲ್ಲಿ ತೊಡಗಿಸುವುದು ಮಹತ್ವದ ಹೆಜ್ಜೆ.

ಇರುವುದೊಂದೇ ಭವಿಷ್ಯ. ಪ್ರೀತಿಸಿಯೂ ಅದು ಪ್ರೀತಿಯಲ್ಲ ಎಂದು ಮುಂದೆ ಹುಸಿ ಸಮರ್ಥನೆ ಕೊಟ್ಟುಕೊಳ್ಳುವುದು ಸಂಗಾತಿಗೆ ಮಾತ್ರವಲ್ಲ ತನಗೆ ತಾನೇ ಎಸಗಿಕೊಳ್ಳುವ ವಂಚನೆ. ‘ಟ್ಯೂಷನ್’ ಭೇಟಿಯಾಗುವ ತಾಣವಾಗಬಹುದು ಎನ್ನುವುದು ನಿಷ್ಠುರ ಸತ್ಯ. ಹೊಟ್ಟೆಗೆ ಬಟ್ಟೆ ಕಟ್ಟಿಯಾದರೂ ತಮಗೆ ಶಿಕ್ಷಣ ಒದಗಿಸಲು ತಮ್ಮ ಪೋಷಕರು ಅದೆಷ್ಟು ಪರಿಶ್ರಮ ಪಡುತ್ತಾರೆ ಎಂಬ ಚಿತ್ರಣವೇ ಮಕ್ಕಳ ಸಂಗಾತಿಯಾಗಿರಬೇಕು.

ಈ ದಿಸೆಯಲ್ಲಿ, 19ನೇ ಶತಮಾನದ ಫ್ರಾನ್ಸ್ ದೇಶದ ಇವಾರಿಸ್ಟ್ ಗ್ಯಾಲುವಾ ನೆನಪಾಗುತ್ತಾನೆ. ಆತ ಹದಿಮೂರನೇ ವಯಸ್ಸಿಗೆಲ್ಲ ಗಣಿತದಲ್ಲಿ ಅಸಾಧಾರಣ ಸಂಶೋಧನೆ ನಡೆಸಿದ್ದ. ಪ್ರೌಢಶಾಲೆಗೆ ಸೇರಿದ ಹುಡುಗ ಚೆನ್ನಾಗಿಯೇ ಓದುತ್ತಿದ್ದ. ಲೆಜೆಂಡ್ರೆ, ಅಬೆಲ್, ನ್ಯೂಟನ್ ಅವರಂಥ ಅತಿರಥ ಮಹಾರಥರ ಗಣಿತ ಗ್ರಂಥಗಳನ್ನು ಆತ ಅರಗಿಸಿಕೊಂಡ. ‘ಗ್ಯಾಲುವಾಸ್ ಗ್ರೂಪ್ ಥಿಯರಿ’ ಸೇರಿದಂತೆ ಮೂರು ಸಂಶೋಧನಾ ಪ್ರಬಂಧಗಳನ್ನು ರಚಿಸಿದ್ದು ಅವನ ಸ್ವಂತಿಕೆಗೆ ಪುರಾವೆ. ಅವನ ವಯಸ್ಸು ಆಗ ಹತ್ತೊಂಬತ್ತು. ಆದರೇನು, ಚಂಚಲ ಸ್ವಭಾವ! ಹುಡುಗಿಯೊಬ್ಬಳೊಂದಿಗೆ ಪ್ರಣಯ.

ಅದೇಕೋ ದಿನಗಳೆದಂತೆ ತನ್ನ ಬಗ್ಗೆ, ತನ್ನ ಪ್ರೇಮದ ಬಗ್ಗೆ, ಪ್ರೇಯಸಿಯ ಬಗ್ಗೆ ಅಸಮಾಧಾನಗೊಂಡ. ಆತನ ಪ್ರಣಯವು ವಿವಾದಕ್ಕೆ ಸಿಲುಕಿ, ಪ್ರೇಯಸಿಯ ಸಂಬಂಧಿಯೊಂದಿಗೆ ಮಲ್ಲಯುದ್ಧ ಎದರಿಸ
ಬೇಕಾಯಿತು. ಗ್ಯಾಲುವಾ ತೀವ್ರ ಪೆಟ್ಟಿನಿಂದ ಸಾಯಬೇಕಾಗಿ ಬಂತು. ತಾನೇ ಕೈಯಾರೆ ತಂದುಕೊಂಡ ಮೃತ್ಯು ಅದು. ಅಪ್ರಾಪ್ತ ವಯೋಮಾನದಲ್ಲಿ ಪ್ರೇಮದ ಹಂಗಿರದಿದ್ದರೆ ಗ್ಯಾಲುವಾ ಗಣಿತದಲ್ಲಿ ಊಹೆಗೂ ನಿಲುಕದಷ್ಟು ಸಾಧನೆ ಮಾಡುತ್ತಿದ್ದ.

ವಿದ್ಯಾರ್ಥಿಜೀವನ ಎಂದರೆ ಸ್ನೇಹ, ಪ್ರಜ್ಞಾಪೂರ್ವಕ ಹಿಗ್ಗು, ಆಗುಹೋಗುಗಳು ನೆನಪಿನ ಬುತ್ತಿಯಾಗುವ ಕಾಲಘಟ್ಟ. ಅದನ್ನು ಹಾಳುಮಾಡಿಕೊಳ್ಳಕೂಡದು ಎಂಬ ಸಂದೇಶವನ್ನೂ ಬಾಲ ಮೇಧಾವಿ ಗ್ಯಾಲುವಾ ಗಣಿತದೊಂದಿಗೆ ಬಿಟ್ಟುಹೋದ. ಇತಿಹಾಸದಲ್ಲಿ ಹೀಗೆ ಮುರುಟಿಹೋದ ಪ್ರತಿಭೆಗಳೆಷ್ಟೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT