ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯವೊಂದರಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾದ ಕಾರಣಕ್ಕೆ ಸ್ನಾತಕೋತ್ತರ ಅಧ್ಯಯನದ ಕೆಲವು ವಿಭಾಗಗಳನ್ನು ಸ್ಥಗಿತಗೊಳಿಸಲಾಗಿದೆ. ಹಲವು ದಶಕಗಳಿಗೂ ಮೀರಿ ಉನ್ನತ ಶಿಕ್ಷಣ ಪ್ರಸರಣದ ಮೂಲಕ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದ ವಿಶ್ವವಿದ್ಯಾಲಯವೊಂದು ಇದ್ದಕ್ಕಿದ್ದಂತೆ ಕೆಲವು ವಿಭಾಗಗಳನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದದ್ದು ಆತಂಕಕಾರಿ ಬೆಳವಣಿಗೆ.

ಐದು ವರ್ಷಕ್ಕೊಮ್ಮೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯಿಂದ (ನ್ಯಾಕ್) ಪಡೆಯ ಬೇಕಾದ ಮಾನ್ಯತೆಯ ದೃಷ್ಟಿಯಿಂದ ನೋಡಿದರೆ, ಕೆಲವು ವಿಭಾಗಗಳನ್ನು ಮುಚ್ಚುವ ಪರಿಸ್ಥಿತಿ ಬಂದದ್ದಕ್ಕೆ ಸಮರ್ಥನೆ ನೀಡಬೇಕಿರುವುದು ಬರೀ ವಿಶ್ವ ವಿದ್ಯಾಲಯದ ಹೊಣೆಯೇ ಎಂಬ ಪ್ರಶ್ನೆ ಎದುರಾಗುತ್ತದೆ. ಈ ವಿಶ್ವವಿದ್ಯಾಲಯದ ಪ್ರಸ್ತುತ ಪರಿಸ್ಥಿತಿಯು ದೇಶದ ಅನೇಕ ಸರ್ಕಾರಿ ವಿಶ್ವವಿದ್ಯಾಲಯಗಳು ಎದುರಿಸುತ್ತಿರುವ ಸಂಕಷ್ಟದ ಸಂಕೇತದಂತಿದೆ.

ಈ ವಿಶ್ವವಿದ್ಯಾಲಯದಲ್ಲಿ ಸ್ಥಗಿತಗೊಂಡ ಕೋರ್ಸುಗಳನ್ನು ಗಮನಿಸಿದರೆ, ಉನ್ನತ ಶಿಕ್ಷಣ ಕ್ಷೇತ್ರ ದಲ್ಲಿನ ಎಲ್ಲರ ಹುಬ್ಬುಗಳೂ ಮೇಲೇರಬಹುದು. ಸ್ಥಗಿತ ಗೊಂಡಿರುವ ವಿಭಾಗಗಳಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಪರಿಸರ ವಿಜ್ಞಾನ, ಅಂಕಿಅಂಶ ಶಾಸ್ತ್ರ (ಸ್ಟ್ಯಾಟಿಸ್ಟಿಕ್ಸ್) ಮತ್ತು ಮೆಟೀರಿಯಲ್ ಸೈನ್ಸ್... ಸೇರಿವೆ. 2024–25ನೇ ಶೈಕ್ಷಣಿಕ ವರ್ಷಕ್ಕೆ ಈ ಪ್ರತಿ ಕೋರ್ಸ್ಗೆ ಹತ್ತಕ್ಕಿಂತ ಕಡಿಮೆ ಮಂದಿ ಪ್ರವೇಶ ಪಡೆದ ಕಾರಣದಿಂದ ಈ ವಿಭಾಗಗಳನ್ನು ಮುಚ್ಚುವ ನಿರ್ಧಾರಕ್ಕೆ ಬರಲಾಯಿತು. ಪ್ರವೇಶಾತಿಯಲ್ಲಿ ಸುಧಾರಣೆ ಕಂಡುಬಂದರೆ ಮಾತ್ರ ಇವು ಪುನರಾರಂಭವಾಗಲಿವೆ ಎಂದು ಸ್ಪಷ್ಟೀಕರಣ ನೀಡಲಾಗಿದೆ.

ಕೆಲವು ಕೋರ್ಸ್ಗಳ ಪ್ರವೇಶಾತಿಯ ಅಂತಿಮ ದಿನಾಂಕವನ್ನು ಎರಡು ಬಾರಿ ವಿಸ್ತರಿಸಿದ್ದರೂ ವಿದ್ಯಾರ್ಥಿಗಳನ್ನು ಸೆಳೆಯಲು ಸಾಧ್ಯವಾಗಿಲ್ಲ. ಹೀಗಾಗಿ, ಆರಂಭದಲ್ಲಿ ವಿಶ್ವವಿದ್ಯಾಲಯವು ಕೋರ್ಸ್ ಸ್ಥಗಿತಕ್ಕೆ ನಿಗದಿಪಡಿಸಿದ್ದ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಯ ಮಿತಿಯನ್ನು 15ರಿಂದ 10ಕ್ಕೆ ಇಳಿಸಿದೆ.

ಉದ್ಯೋಗ ಸೃಷ್ಟಿಗೆ ಪೂರಕವಾಗಿದ್ದ ಇಂತಹ ಕೋರ್ಸ್ಗಳಿಗೇ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖ ಆಗಿರುವುದು ಸರ್ಕಾರ ಮತ್ತು ಶಿಕ್ಷಣ ತಜ್ಞರ ಚಿಂತನಾತ್ಮಕ ಹಸ್ತಕ್ಷೇಪವನ್ನು ಅನಿವಾರ್ಯಗೊಳಿಸಿದೆ. ಕೆಲವು ಉನ್ನತ ಶಿಕ್ಷಣ ಆಕಾಂಕ್ಷಿಗಳಿಗೆ ಸಂಶೋಧನೆಯ ಗುರಿ ಇರುತ್ತದೆ. ಅಂತಹವರಿಗೆ ವಿಶ್ವವಿದ್ಯಾಲಯಗಳು ಅಗತ್ಯ ಮೂಲಸೌಕರ್ಯ, ಮಾರ್ಗದರ್ಶನ ಮತ್ತು ಬೌದ್ಧಿಕ ವಾತಾವರಣವನ್ನು ಒದಗಿಸಬೇಕಾದುದು ಬಹಳ ಮುಖ್ಯ. ಒಂದು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿ ಪಿಎಚ್.ಡಿಗಾಗಿ ಬೇರೊಂದು ವಿಶ್ವವಿದ್ಯಾಲಯದತ್ತ ಮುಖ ಮಾಡಿದರೆ, ಸ್ನಾತಕೋತ್ತರ ಪದವಿ ನೀಡಿದ ವಿಶ್ವವಿದ್ಯಾಲಯದ ಗುಣಮಟ್ಟದ ಪ್ರಶ್ನೆ ಎದುರಾಗುತ್ತದೆ.

ಮುಂದಿನ ಅಧ್ಯಯನದ ತಯಾರಿ ಮಾಡಿಕೊಳ್ಳ ಬಯಸುವ ವಿದ್ಯಾರ್ಥಿಗಳಿಗೆ ನುರಿತ ಪ್ರಾಧ್ಯಾಪಕರ ಮಾರ್ಗದರ್ಶನ ಬಹಳ ಮುಖ್ಯವಾಗಿರುತ್ತದೆ. ಆದರೆ ರಾಜ್ಯದ ಹಲವಾರು ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಕಾಯಂ ಅಧ್ಯಾಪಕರ ನೇಮಕಾತಿಗೆ ಸರ್ಕಾರ ಗಮನಹರಿಸದೇ ಇರುವುದು ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಲು ಕಾರಣವಾಗಿದೆ.

ಭಾರತವನ್ನು ಅಭಿವೃದ್ಧಿಯ ಪಥದಲ್ಲಿ ಸಾಗಿಸುವ ಪ್ರಯತ್ನ ಫಲಕಾರಿ ಆಗಬೇಕಿದ್ದರೆ ಉನ್ನತ ಶಿಕ್ಷಣದ ಆಕಾಂಕ್ಷಿಗಳಿಗೆ ವಿಶ್ವವಿದ್ಯಾಲಯಗಳಲ್ಲಿ ಎಂದಿಗೂ ಸ್ಥಿರ ಮಾರ್ಗದರ್ಶನದ ಕೊರತೆ ಇರಬಾರದು. ಅಲ್ಲಿ ಅಧ್ಯಾಪಕರ ಕೊರತೆಯಿದ್ದರೆ ಸಂಶೋಧನೆಯ ಬಾಗಿಲು ಸಂಪೂರ್ಣ ಮುಚ್ಚಿದಂತೆಯೇ ಸರಿ. ಆಗ, ಅತಿಥಿ ಅಧ್ಯಾಪಕರ ಸಹಾಯದಿಂದ ಬರೀ ಪಠ್ಯಕ್ರಮ ಮುಗಿಸಿ, ಪರೀಕ್ಷೆ ನಡೆಸಿ ಸರ್ಟಿಫಿಕೇಟ್ ಕೊಡುವ ಕಾಲೇಜುಗಳಾಗಿ ಅವು ರೂಪಾಂತರಗೊಳ್ಳಬೇಕಾಗುತ್ತದೆ.

ಉನ್ನತ ಶಿಕ್ಷಣಕ್ಕಾಗಿ ವಿಶ್ವವಿದ್ಯಾಲಯವನ್ನು ಪ್ರವೇಶಿಸುವವರ ನಿರೀಕ್ಷೆಗಳಲ್ಲಿ ನುರಿತ ಪ್ರಾಧ್ಯಾಪಕರ ಉಪಸ್ಥಿತಿ, ಕಾಲಕಾಲಕ್ಕೆ ನವೀಕರಿಸಿದ ಪಠ್ಯಕ್ರಮ, ನಿರಂತರವಾಗಿ ನಡೆಯುವ ವಿಚಾರ ಸಂಕಿರಣಗಳು, ವಿಭಾಗಗಳು ಕೈಗೊಂಡಿರುವ ಪ್ರಾಜೆಕ್ಟುಗಳು, ಪ್ರಕಟಣೆ ಯಂತಹವು ಇದ್ದೇ ಇರುತ್ತವೆ. ಹಾಗಾಗಿ, ಪ್ರತಿ ವಿಭಾಗದ ಸಂಶೋಧನಾ ಸಂಸ್ಕೃತಿಯನ್ನು ಬೆಳೆಸುವಲ್ಲಿ ಅಲ್ಲಿನ ಪ್ರಾಧ್ಯಾಪಕರು ಪ್ರಮುಖ ಪಾತ್ರ ವಹಿಸುತ್ತಾರೆ. ಪಾಠದ ಜೊತೆಗೆ ಉತ್ತಮ ಬೌದ್ಧಿಕ ಚಟುವಟಿಕೆಯಿಂದ ಕೂಡಿದ ಪರಿಸರವನ್ನು ರೂಪಿಸುವುದು ಸರ್ಕಾರದ ಮೂಲ ಜವಾಬ್ದಾರಿಯಾಗಿರುತ್ತದೆ.

ಗುಣಮಟ್ಟದ ಸಂಶೋಧನೆಗೆ ಸಮರ್ಪಿತರಾದ ಪ್ರಾಧ್ಯಾಪಕರು ನಿವೃತ್ತರಾದ ನಂತರ ಅವರ ಜಾಗಗಳು ಶಾಶ್ವತವಾಗಿ ಖಾಲಿ ಉಳಿದುಬಿಟ್ಟರೆ, ಸಂಶೋಧನೆಗಾಗಿ ಅನುದಾನ ನೀಡುವ ಸಂಸ್ಥೆಗಳು ಅಂತಹ ವಿಭಾಗಗಳಿಂದ ವಿಮುಖವಾಗುತ್ತವೆ. ಆಗ ಸಂಶೋಧನೆ ನಡೆಸಲು ಇಚ್ಛಿಸುವ ವಿದ್ಯಾರ್ಥಿಗಳು ಖಾಸಗಿ ವಿಶ್ವವಿದ್ಯಾಲಯಗಳತ್ತ ಆಕರ್ಷಿತರಾಗುತ್ತಾರೆ. ಇಂತಹ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದರೆ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏಕೆ ಇಳಿಮುಖವಾಗುತ್ತಿದೆ ಎಂಬುದು ಅರ್ಥವಾಗುತ್ತದೆ.

ಖಾಸಗಿ ವಿಶ್ವವಿದ್ಯಾಲಯಗಳಂತೆ ಸರ್ಕಾರಿ ವಿಶ್ವವಿದ್ಯಾಲಯಗಳೂ ತಮ್ಮನ್ನು ತಾವು ಕಾಲಕ್ಕೆ ತಕ್ಕಂತೆ ಎಲ್ಲ ದೃಷ್ಟಿಯಿಂದಲೂ ಆಧುನೀಕರಿಸಿಕೊಳ್ಳುತ್ತಿಲ್ಲವೇ? ಸರ್ಕಾರಿ ವಿಶ್ವವಿದ್ಯಾಲಯಗಳು ಬಡವರಿಗೆ ಮತ್ತು ಖಾಸಗಿ ವಿಶ್ವವಿದ್ಯಾಲಯಗಳು ಶ್ರೀಮಂತ ವರ್ಗಗಳಿಗೆ ಮಾತ್ರ ಮೀಸಲು ಎಂಬಂತೆ ಆಗಿರುವುದಕ್ಕೆ ಕಾರಣವೇನು ಎಂದು ಚಿಂತಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.