ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲ ಕೊಡದ ಉದ್ಯಮ...

ತೀವ್ರ ಸಂಕಷ್ಟದ ದಿನಗಳಲ್ಲಿ ಜನರನ್ನು ಯಾರು ಕಾಪಾಡುತ್ತಿದ್ದಾರೆ ಎಂಬುದನ್ನು ಮೌಢ್ಯದಾಸ್ಯದಿಂದ ಮುಕ್ತರಾಗಿ, ಕಣ್ಣು– ಮನಸ್ಸು ತೆರೆದು ನೋಡಬೇಕಾಗಿದೆ
Last Updated 26 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ನನ್ನ ಮತ್ತು ನನ್ನ ದೇವರ ನಡುವಿನ ನಂಟು ಅನನ್ಯವಾದದ್ದು; ಹಾಗಿರುವುದೇ ಧರ್ಮ. ನಮ್ಮಿಬ್ಬರ ನಡುವೆ ಇನ್ನಷ್ಟು ಜನ ಸೇರಿದರೆ ಅದು ಸಾಮಾಜಿಕ, ರಾಜಕೀಯ, ವಾಣಿಜ್ಯ, ಇನ್ನೇನೇನೋ ಆಗಿಬಿಡುತ್ತದೆ. ದೇವರು ಸರ್ವಾಂತರ್ಯಾಮಿ, ದೇವರಿಗಾಗಿ ಒಂದು ಜಾಗ ಮಾಡಬೇಕಾಗಿಲ್ಲ ಎಂದು ಎಷ್ಟೊಂದು ಸಂತರು, ಸತ್ಪುರುಷರು ಹೇಳುತ್ತಲೇ ಬಂದಿದ್ದಾರೆ. ಆದರೂ ನಾವು ದೇವರ ನಂಬಿಕೆಯನ್ನು ಧರ್ಮದ ಹೆಸರಿನಲ್ಲಿ ಒಂದು ಉದ್ಯಮವನ್ನಾಗಿ ಮಾಡಿಕೊಂಡು ಬಿಟ್ಟಿದ್ದೇವೆ; ಧರ್ಮೋಧ್ಯಮ.

ಮಸೀದಿ, ಮಂದಿರ, ಇಗರ್ಜಿ, ದರ್ಗಾ, ಗುರುದ್ವಾರ ಇತ್ಯಾದಿ ಎಲ್ಲವೂ ಮನುಷ್ಯ ಮತ್ತು ದೇವರ ಸಂಬಂಧಕ್ಕೆ ಕೊಡಲಾಗಿರುವ ಸಾಮಾಜಿಕ, ರಾಜಕೀಯ ರೂಪಗಳು, ಸ್ಥಾವರಗಳು. ಇವುಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಬೇಕು ಎಂದರೆ ಅವೂ ಆಧುನಿಕ ಉದ್ಯಮಗಳಾಗಬೇಕಾಗುತ್ತದೆ. ಅವು ಆಗಿವೆ ಕೂಡ. ಯಾವುದೇ ಉದ್ಯಮದಲ್ಲಿ ಇರುವ ಹಾಗೆ ಅವುಗಳಿಗೆ ಚರಾಚರ ಸ್ವತ್ತು, ಸಂಪತ್ತು, ನಿರ್ವಹಣೆಗೆ ಮಂಡಳಿ, ಟ್ರಸ್ಟುಗಳಿವೆ, ಹಲವಾರು ಸೇವೆಗಳಿಗೆ ತಕ್ಕ ಹಾಗೆ ಶುಲ್ಕಗಳಿವೆ, ಬ್ಯಾಂಕ್ ಖಾತೆಗಳಿವೆ, ತೆರಿಗೆ ವಿನಾಯಿತಿ ಇದೆ, ನೇಮಕಾತಿ, ಬಡ್ತಿ ಇದೆ, ಸಂಬಳ– ಸಾರಿಗೆ ಇವೆ. ಇವೆಲ್ಲವೂ ಯಾವುದೇ ಚಿಕ್ಕ–ದೊಡ್ಡ ಉದ್ಯಮದ ಮೂಲಭೂತ ಲಕ್ಷಣಗಳು. ಇವೆಲ್ಲವೂ ಧರ್ಮೋದ್ಯಮಕ್ಕೂ ಬೇಕು, ಇವೆ.

ಆದರೆ, ಯಾವುದೇ ಉದ್ಯಮವು ಬಂಡವಾಳ ಹೂಡುವವರಿಗಷ್ಟೇ ಅಲ್ಲ, ಅಂತಿಮವಾಗಿ ಗ್ರಾಹಕರಿಗೆ ಪ್ರಯೋಜನವಾದರಷ್ಟೇ ಯಶಸ್ವಿಯಾಗುತ್ತದೆ, ಸುಸ್ಥಿರವಾಗುತ್ತದೆ. ಹಾಗೆ ಆಗದಿದ್ದರೆ ಅದು ಇದ್ದೂ ಏನು ಪ್ರಯೋಜನ? ಅದೇ ಸಂಪನ್ಮೂಲಗಳನ್ನು ಬಳಸಿ ಬೇರೆ ಉದ್ಯಮ ಆರಂಭಿಸುವುದು ಲೇಸು. ಕೆಲವು ತಿಂಗಳುಗಳಿಂದ ಕೊರೊನಾ ಸೋಂಕು ಹರಡುವಿಕೆಯು ನಮಗೆ ಧರ್ಮೋದ್ಯಮವನ್ನು ಪರೀಕ್ಷೆಗೆ ಒಳಪಡಿಸುವ ಬಹುದೊಡ್ಡ ಅವಕಾಶವನ್ನು ಕಲ್ಪಿಸಿದೆ. ಮಾನವನಿಗೆ ಈ ತರಹದ ಸಂಕಷ್ಟ ಬಂದಾಗ ‘ದೇವರು ಉಳಿಸುತ್ತಾರೆ’ ಎಂದು ಎಲ್ಲಾ ಆಸ್ತಿಕರು ನಂಬುತ್ತಾರೆ. ಆದರೆ ಕೊರೊನಾ ಸಂದರ್ಭದಲ್ಲಿ ದೇವರುಗಳೂ ಮನುಷ್ಯರ ಸಾಲಿನಲ್ಲಿ ನಿಂತು ಮುಖಕ್ಕೆ ಮುಖಕವಚ ಹಾಕಿಕೊಂಡರು, ‘ಸಾಮಾಜಿಕ ಅಂತರ’ವನ್ನು ಕಾಪಾಡಿಕೊಂಡರು, ಬಾಗಿಲುಗಳನ್ನು ಹಾಕಿಕೊಂಡು ಲಾಕ್‍ಡೌನ್‍ಗೆ ಒಳಗಾದರು.

ಭಕ್ತರನ್ನು ‘ಹತ್ತಿರ ಬರಬೇಡಿ, ನಿಮ್ಮ ಸೋಂಕು ನಮಗೂ ಬಡಿದೀತು’ ಎಂದು ಎಲ್ಲರನ್ನೂ ದೂರ ಅಟ್ಟಿದರು. ಇಡೀ ಜಗತ್ತಿನ ಎಲ್ಲಾ ಧರ್ಮಗಳ ಧರ್ಮೋದ್ಯಮ ಸ್ಥಗಿತಗೊಂಡಿತು. ಸೇವೆ, ಆದಾಯ ನಿಂತುಹೋಯಿತು. ಈ ಉದ್ಯಮವನ್ನು ಅವಲಂಬಿಸಿದ್ದ ಲಕ್ಷಾಂತರ ಜನ ಕಂಗಾಲಾದರು, ಇನ್ಯಾರೋ ಅವರಿಗೆ ಅನ್ನ, ನೀರು ದಾನ ಮಾಡಬೇಕಾದ ಪರಿಸ್ಥಿತಿ ಏರ್ಪಟ್ಟಿತು. ಎಂದರೆ, ಯಾವ ಉದ್ದೇಶವನ್ನು ಪೂರೈಸುತ್ತದೆ ಎಂದು ಧರ್ಮೋದ್ಯಮವನ್ನು ಆರಂಭಿಸಲಾಗಿತ್ತೋ ಸರ್ಕಾರಗಳು ಅವುಗಳಿಗೆ ಅನುದಾನ, ಬೆಂಬಲ ನೀಡುತ್ತಿದ್ದವೋ ಜನರೂ ತಮ್ಮ ಕೈಲಾದಷ್ಟು ದಾನ, ಧರ್ಮ, ದೇಣಿಗೆ ಕೊಡುತ್ತಿದ್ದರೋ ಆ ಉದ್ದೇಶವನ್ನು ಈ ಉದ್ಯಮ ಪೂರೈಸದೇ ದಿವಾಳಿ ಎದ್ದಿದೆ. ಇದನ್ನು ಹಗಲಿನ ಬೆಳಕಿನಂತೆ ಕಂಡ ನಂತರವೂ ಈ ಉದ್ಯಮದ ಬಗೆಗಿನ ನಮ್ಮ ವಿಶ್ವಾಸ ಈ ಹಿಂದೆ ಇದ್ದಂತೆಯೇ ಇರಬೇಕೇ?

ಹಾಗಂತ ಹೇಳಿ, ಧರ್ಮೋದ್ಯಮದ ಆರ್ಥಿಕತೆ, ಸಂಘಟನೆ, ಜನಸಂಪನ್ಮೂಲವನ್ನು ವ್ಯರ್ಥವಾಗಲು ಬಿಡಬಾರದು. ಸ್ವತ್ತು, ಸಂಪತ್ತು, ನಿರ್ವಾಹಕ ಸಂಸ್ಥೆಗಳು, ಸಿಬ್ಬಂದಿ ಎಲ್ಲರನ್ನೂ ಬಳಸಿಕೊಂಡು ಜನರಿಗೆ ತಲೆತಲಾಂತರದವರೆಗೆ ಪ್ರಯೋಜನವಾಗುವಂಥ ಶಿಕ್ಷಣ, ತರಬೇತಿ, ಸಬಲೀಕರಣದಂಥ ತಾಣಗಳನ್ನಾಗಿ ಅವುಗಳನ್ನು ಮಾಡಬೇಕು. ಚಿಕಿತ್ಸಾಲಯಗ,ಪ್ರಯೋಗಾಲಯಗಳನ್ನಾಗಿ ಪರಿವರ್ತಿಸಬೇಕು; ಧರ್ಮೋದ್ಯಮವನ್ನೇ ಅವಲಂಬಿಸಿರುವ ವ್ಯಾಪಾರಿಗಳು, ಪ್ರವಾಸೋದ್ಯಮಿಗಳಿಗೆ ವ್ಯವಸ್ಥಿತ ಜೀವನೋಪಾಯಗಳನ್ನು ಕಲ್ಪಿಸಬೇಕು.

ತೀವ್ರ ಸಂಕಷ್ಟದ ದಿನಗಳಲ್ಲಿ ಕೊನೆಗೆ ಮನುಷ್ಯನ ರಕ್ಷಣೆಗೆ ಬರುತ್ತಿರುವುದು ಮನುಷ್ಯ ಮತ್ತು ವಿಜ್ಞಾನ-ತಂತ್ರಜ್ಞಾನ. ವೈದ್ಯರು, ಪೊಲೀಸರು, ಪೌರಕಾರ್ಮಿಕರು ಇತ್ಯಾದಿ ಮಾನವರನ್ನೂ ಈಗ ನಾವು ‘ದೇವರ ಹಾಗೆ’ ಎಂದು ಹೇಳುವುದುಂಟು. ಅದೇ ನಿಜ. ಎಲ್ಲರಲ್ಲಿಯೂ ದೇವರಿರುತ್ತಾನೆ ಅಲ್ಲವೇ, ಅದೇ ಸತ್ಯ, ಅದೇ ನಿತ್ಯ. ಆದ್ದರಿಂದ ಮನುಷ್ಯರಲ್ಲಿ ವಿಶ್ವಾಸ ಇಡಬೇಕು; ದೇಶದ ಮಾನವ ಸಂಪನ್ಮೂಲವನ್ನು ಸಬಲಗೊಳಿಸಬೇಕು.

ಜಗತ್ತಿನಲ್ಲಿ ಲಕ್ಷಾಂತರ ಜನರಿಗೆ ಕೊರಾನಾದಂಥ ಸೋಂಕಿನ ಯಾವುದೇ ಭಯವಿಲ್ಲ. ಏಕೆಂದರೆ ಅವರ ಜೀವ ತೆಗೆಯಲು ಹಸಿವೆಯೇ ಸಾಕಾಗುತ್ತದೆ. ಅದು ಇನ್ನೊಬ್ಬರಿಗೆ ಸೋಂಕು ತಗುಲಿಸದೆಯೆ ತಾವೊಬ್ಬರೇ ಇಲ್ಲವಾಗುವ ಸಾವು. ಕೋಟ್ಯಂತರ ಜನ ನಿರ್ಗತಿಕರಾಗಿದ್ದಾರೆ. ಶತಶತಮಾನಗಳಿಂದ ಅದೆಷ್ಟೋ ಧನ, ಕನಕ, ಜನಸಂಪತ್ತನ್ನು ಧಾರೆಯೆರೆದರೂ ಸಂಕಷ್ಟದಲ್ಲಿ ಪ್ರಯೋಜನಕ್ಕೆ ಬಾರದ ಧರ್ಮೋದ್ಯಮದಿಂದ ಏನು ಪ್ರಯೋಜನ? ಮನುಷ್ಯ-ವಿಜ್ಞಾನ-ತಂತ್ರಜ್ಞಾನದಿಂದ ಸರಿಹೋದ ಮೇಲೆ ಇನ್ಯಾವ ಪುರುಷಾರ್ಥಕ್ಕಾಗಿ ಇದನ್ನು ಮತ್ತೆ ವಿಜೃಂಭಣೆಯಿಂದ ಪುನರಾರಂಭಿಸಬೇಕು?

ನಾವು ನಮ್ಮ ಹಾದಿಯನ್ನು ತಿದ್ದಿಕೊಳ್ಳೋಣ. ದೇವರು ಪ್ರತ್ಯಕ್ಷರೂಪದಲ್ಲಿರುವ ಕೊಟ್ಟ ಕೊನೆಯ ಮನುಷ್ಯನ ಅಭ್ಯುದಯಕ್ಕಾಗಿ ಯೋಚಿಸದಿದ್ದರೆ, ಯೋಜಿಸದಿದ್ದರೆ ನಮ್ಮನ್ನು ಆ ದೇವರೂ ಕ್ಷಮಿಸುವುದಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT