ಗುರುವಾರ , ಏಪ್ರಿಲ್ 22, 2021
24 °C
ವನ್ಯಜೀವಿಗಳನ್ನು ಮನುಷ್ಯ ತುಚ್ಛವಾಗಿ ಕಾಣುವುದು ಆಘಾತಕಾರಿ ಮತ್ತು ಅಪಾಯಕಾರಿ ವಿಷಯವಾಗಿದೆ

ಸಂಗತ: ಪ್ರಾಣಿ ಪ್ರೇಮದಲ್ಲಿ ಮಾನವ ಕ್ಷೇಮ

ಡಾ. ಎಂ.ವೆಂಕಟಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಅಳಿವಿನ ಅಂಚಿನಲ್ಲಿರುವ ವನ್ಯಜೀವಿಗಳು ಮತ್ತು ಸಸ್ಯ ಪ್ರಭೇದಗಳ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ, ಮಾರ್ಚ್‌ 3 ಅನ್ನು ವಿಶ್ವ ವನ್ಯಜೀವಿ ದಿನವನ್ನಾಗಿ ಆಚರಿಸಲು ವಿಶ್ವಸಂಸ್ಥೆಯು 2013ರಲ್ಲಿ ನಿರ್ಧರಿಸಿತು. ಅದರಂತೆ, ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿನ ಈ ವರ್ಷದ ಘೋಷವಾಕ್ಯ ‘ಅರಣ್ಯ ಮತ್ತು ಜೀವನೋಪಾಯ: ಜನ ಮತ್ತು ಭೂಗ್ರಹ’.

ಅರಣ್ಯ ಹಾಗೂ ಅದರ ಸುತ್ತಲಿನ ಪ್ರದೇಶದೊಂದಿಗೆ ಐತಿಹಾಸಿಕ ಸಂಬಂಧ ಹೊಂದಿರುವ ಸ್ಥಳೀಯ ಸಮುದಾಯಗಳ ಜೀವನೋಪಾಯವನ್ನು ಉಳಿಸಿಕೊಳ್ಳುವಲ್ಲಿ ಅರಣ್ಯಗಳು, ಅರಣ್ಯ ಪ್ರಭೇದಗಳು ಮತ್ತು ಪರಿಸರ ವ್ಯವಸ್ಥೆ ಅತಿ ಮುಖ್ಯ ಪಾತ್ರವನ್ನು ವಹಿಸಿವೆ. ಭೂಮಿಯ ಮೇಲಿನ ಎಲ್ಲಾ ಪರಿಸರ ವಲಯಗಳು ಅದ್ಭುತ ಜೀವಿಗಳಿಂದ ತುಂಬಿಕೊಂಡಿವೆ. ಗಾಳಿಯಲ್ಲಿ ಹಾರಾಡುವ ಪಕ್ಷಿಗಳಿಂದ ಹಿಡಿದು ಸಾಗರಗಳಲ್ಲಿನ ದೈತ್ಯ ತಿಮಿಂಗಿಲಗಳವರೆಗೆ ವನ್ಯಜೀವಿಗಳು ಅತ್ಯಂತ ಅಸಾಮಾನ್ಯ ಮತ್ತು ಅನಿರೀಕ್ಷಿತ ವಲಯಗಳಲ್ಲಿ ಬದುಕು ನಡೆಸುತ್ತಿವೆ.

ಭೂಮಿಯ ಮೇಲೆ ಪ್ರಾಣಿಗಳ ಸಂಖ್ಯೆಗೆ ಹೋಲಿಸಿ ದರೆ ಮನುಷ್ಯನ ಸಂಖ್ಯೆ ಅತಿ ಹೆಚ್ಚಾಗಿ ಬೆಳೆಯುತ್ತಿದೆ. ಆದರೆ ಭೂಮಿಯ ಮೇಲೆ ಮನುಷ್ಯ ಮಾತ್ರ ಮುಖ್ಯವಲ್ಲ. ವನ್ಯಜೀವಿಗಳನ್ನು ಮನುಷ್ಯ ತುಚ್ಛವಾಗಿ ಕಾಣುವುದು ಆಘಾತಕಾರಿ ಮತ್ತು ಅಪಾಯಕಾರಿ ವಿಷಯವಾಗಿದೆ.

ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಎಲ್ಲಾ ರೀತಿಯ ವನ್ಯಜೀವಿಗಳನ್ನೂ ಬೇಟೆಯಾಡಿ ಅಳಿವಿನ ಅಂಚಿಗೆ ತಳ್ಳುತ್ತಿದ್ದಾನೆ. ಮನುಷ್ಯ ಇಲ್ಲದೇ ಇದ್ದರೆ ಭೂಮಿಗೆ ಏನೂ ತೊಂದರೆ ಇಲ್ಲ. ಆದರೆ ಅದೇ ಭೂಮಿಯ ಮೇಲಿರುವ ಜೀವಜಾಲದ ಪಿರಮಿಡ್‍ ಅನ್ನು ನಾಶಪಡಿಸಿದಲ್ಲಿ ಮನುಷ್ಯ ಖಂಡಿತ ಉಳಿಯಲಾರ. ಅದಕ್ಕೆ ಈಗ ಭೂಮಿಯ ಮೇಲೆ ಸ್ಫೋಟಗೊಂಡಿರುವ ಕೋವಿಡ್-19 ಒಂದು ಉದಾಹರಣೆ ಮಾತ್ರ.

ವನ್ಯಜೀವಿಗಳ ಬಗ್ಗೆ ಕಾಳಜಿ ವಹಿಸುವುದು ಹಿಂದೆಂದಿಗಿಂತ ಇಂದು ತುರ್ತು ಅಗತ್ಯವಾಗಿದೆ. ನೂರಾರು ಪ್ರಭೇದಗಳು ಅಳಿವಿನ ಅಂಚಿನಲ್ಲಿದ್ದು, ಪ್ರತಿವರ್ಷ ಹತ್ತಾರು ಪ್ರಭೇದಗಳು ಅಳಿಸಿ ಹೋಗುತ್ತಿವೆ. ಹೀಗಾಗಿ, ಅಳಿವಿನ ಅಂಚಿನಲ್ಲಿರುವ ಪ್ರಾಣಿ ಹಾಗೂ ಸಸ್ಯ ಪ್ರಭೇದಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು, ಇಲ್ಲವಾದರೆ ಜಗತ್ತು ಮತ್ತೆ ಎಂದಿಗೂ ಅವುಗಳನ್ನು ಕಾಣುವುದಿಲ್ಲ ಎಂದು ಈ ಕುರಿತ ಜಾಗತಿಕ ಒಪ್ಪಂದ (ಕನ್ವೆನ್ಷನ್‌ ಆನ್‌ ಇಂಟರ್‌ ನ್ಯಾಷನಲ್‌ ಟ್ರೇಡ್‌ ಇನ್‌ ಎನ್‌ಡೇಂಜರ್ಡ್‌ ಸ್ಪೀಶೀಸ್‌– ಸಿಐಟಿಇಎಸ್) ಒತ್ತಿ ಹೇಳಿದೆ.

ಜಗತ್ತಿನಾದ್ಯಂತ 20 ಕೋಟಿಯಿಂದ 35 ಕೋಟಿ ಯಷ್ಟು ಜನರು ಅರಣ್ಯ ಪ್ರದೇಶಗಳಲ್ಲಿ ಮತ್ತು ಅವುಗಳ ಸುತ್ತಮುತ್ತ ವಾಸಿಸುತ್ತಿದ್ದಾರೆ. ಅರಣ್ಯ ಪರಿಸರ ಮತ್ತು ಅರಣ್ಯ ಪ್ರಭೇದಗಳು ಒದಗಿಸುವ ಆಹಾರ, ಆಶ್ರಯ, ಶಕ್ತಿ, ಔಷಧಿ ಮತ್ತು ಮೂಲಭೂತ ಅಗತ್ಯಗಳಂತಹ ವಿವಿಧ ಪರಿಸರ ವ್ಯವಸ್ಥೆಯ ಸೇವೆಗಳನ್ನು ಇವರು ಅವಲಂಬಿಸಿದ್ದಾರೆ. ಸ್ಥಳೀಯ ಜನರು- ಜನಸಮುದಾಯಗಳು ಮತ್ತು ಅರಣ್ಯ, ವನ್ಯಜೀವಿ ಪ್ರಭೇದಗಳು ಮತ್ತು ಪರಿಸರ ವ್ಯವಸ್ಥೆಯ ಸೇವೆಗಳ ನಡುವಿನ ಸಹ ಜೀವನವನ್ನು ಇಲ್ಲಿ ನೋಡಬಹುದಾಗಿದೆ. ಜಗತ್ತಿನ ಸರಿಸುಮಾರು ಶೇ 28ರಷ್ಟು ಭೂಪ್ರದೇಶಗಳು ಸ್ಥಳೀಯ ಜನಸಮುದಾಯಗಳ ಆಡಳಿತದಲ್ಲಿವೆ. ಇದರಲ್ಲಿ ಅತ್ಯಂತ ಸಮೃದ್ಧ ಅರಣ್ಯಗಳೂ ಸೇರಿವೆ. ಇವು ಅವರ ಆರ್ಥಿಕ ಮತ್ತು ವೈಯಕ್ತಿಕ ಯೋಗಕ್ಷೇಮಕ್ಕೆ ಮಾತ್ರ ಸೀಮಿತವಾಗಿಲ್ಲ, ಅವರ ಸಾಂಸ್ಕೃತಿಕ- ನಾಗರಿಕತೆಯ ಹೆಗ್ಗುರುತುಗಳೂ ಆಗಿವೆ.

ಅರಣ್ಯಗಳು, ಅರಣ್ಯ ಪ್ರಭೇದಗಳು ಮತ್ತು ಅವುಗಳ ಮೇಲೆ ಅವಲಂಬಿತವಾಗಿರುವ ಜೀವನೋಪಾಯಗಳಿಗೆ ಪ್ರಸ್ತುತ ಹವಾಮಾನ ವೈಪರೀತ್ಯದಿಂದ ಅಪಾರ ಧಕ್ಕೆ ಉಂಟಾಗುತ್ತಿದೆ. ಹವಾಮಾನ ಬದಲಾವಣೆ, ಜೀವವೈವಿಧ್ಯದ ನಷ್ಟ ಮತ್ತು ಈಗ ಕಾಣಿಸಿಕೊಂಡಿರುವ ಮಹಾ ಸಾಂಕ್ರಾಮಿಕ ಕೋವಿಡ್-19ರಿಂದ ಇಡೀ ಜಗತ್ತಿನಲ್ಲಿ ಸಾಮಾಜಿಕ ಪಲ್ಲಟಗಳಾಗಿವೆ ಮತ್ತು ಆರ್ಥಿಕ ನಷ್ಟ ಉಂಟಾಗಿದೆ.

ಅರಣ್ಯ- ವನ್ಯಜೀವಿ ನಿರ್ವಹಣಾ ಮಾದರಿಗಳು, ಮಾನವ ಯೋಗಕ್ಷೇಮ, ಅರಣ್ಯಗಳ ದೀರ್ಘಕಾಲೀನ ಸಂರಕ್ಷಣೆಯನ್ನು ಉತ್ತೇಜಿಸಲು ವಿಶ್ವಸಂಸ್ಥೆ ಪ್ರಯತ್ನಿಸುತ್ತಿದೆ. ಸಸ್ಯಗಳು ಮತ್ತು ಅವುಗಳನ್ನು ಉಳಿಸಿಕೊಳ್ಳುವ ಪರಿಸರ ವ್ಯವಸ್ಥೆ, ಈ ನಿರ್ಣಾಯಕ ನೈಸರ್ಗಿಕ ವ್ಯವಸ್ಥೆಯೊಂದಿಗೆ ಹೆಚ್ಚು ಸುಸ್ಥಿರ ಸಂಬಂಧಗಳನ್ನು ಸ್ಥಾಪಿಸಲು ಸಾಂಪ್ರದಾಯಿಕ ಅಭ್ಯಾಸಗಳು ಹಾಗೂ ಜ್ಞಾನದ ಮೌಲ್ಯವನ್ನು ಉತ್ತೇಜಿಸಬೇಕಿದೆ. ಪರಿಸರದ ಬಗ್ಗೆ ನಾವು ಆಸಕ್ತಿ ಉಳ್ಳವರಾದರೆ, ವನ್ಯಪ್ರಾಣಿಗಳ ಈ ವಿಶ್ವ ದಿನದ ಮಹತ್ವವನ್ನು ಅರಿತು ಅರ್ಥಪೂರ್ಣವಾಗಿ ಅದನ್ನು ಆಚರಣೆಗೆ ತರಬೇಕಾಗಿದೆ.

ಅರಣ್ಯ ಮತ್ತು ವನ್ಯಪ್ರಾಣಿಗಳ ಪರಿಸರ ವೈವಿಧ್ಯವು ಮಾನವಕ್ಷೇಮ ಹಾಗೂ ಸುಸ್ಥಿರ ಅಭಿವೃದ್ಧಿಗೆ ಮುಖ್ಯವಾಗುತ್ತದೆ. ಈ ಭೂಮಿ ನಿರಂತರವಾಗಿ ನಮ್ಮ ಯೋಗಕ್ಷೇಮವನ್ನು ಕಾಪಾಡುತ್ತಾ ಬಂದಿದೆ. ವಿಶ್ವ ವನ್ಯಜೀವಿ ದಿನಾಚರಣೆ ಎಂದರೆ ನಮಗೆ ಮೊದಲು ಕಾಣಿಸುವುದು ಸ್ಥಳೀಯ ಮೃಗಾಲಯಗಳು ಮತ್ತು ಸಸ್ಯಶಾಸ್ತ್ರೀಯ ತೋಟಗಳು. ಇವು ನಮಗೆ ಜೀವವೈವಿಧ್ಯದ ಬಗ್ಗೆ ನೆನಪಿಸುತ್ತವೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಅರಣ್ಯ ಮತ್ತು ವನ್ಯಜೀವಿಗಳ ಪ್ರಾಮುಖ್ಯವನ್ನು ವಿವರಿಸಿ ಹೇಳಬೇಕಾಗಿದೆ.

ಶಾಲಾ ಮಕ್ಕಳಿಗೆ ಹೊರಾಂಗಣ ವಿಹಾರದೊಂದಿಗೆ ಅರಣ್ಯ- ವನ್ಯಜೀವಿ ಪರಿಸರದ ಸಂಪರ್ಕವನ್ನು ಏರ್ಪಡಿಸಿ, ಅವರಲ್ಲಿ ಕುತೂಹಲ, ಆಸಕ್ತಿಯನ್ನು ಹುಟ್ಟಿಸಬೇಕಿದೆ. ಹೀಗೆ ಅರಣ್ಯ ಮತ್ತು ವನ್ಯಜೀವಿ
ಗಳನ್ನು ಉಳಿಸಿಕೊಳ್ಳುವ ಮೂಲಕ ನಮ್ಮನ್ನು ನಾವು ಉಳಿಸಿಕೊಳ್ಳಬೇಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.