ಮಂಗಳವಾರ, ಏಪ್ರಿಲ್ 7, 2020
19 °C
ಆಧುನಿಕತೆಯ ಪರಿಣಾಮವಾಗಿ ಇವರು ಕುಲಕಾಯಕ ವಂಚಿತರಾಗುತ್ತಿದ್ದಾರೆ

‘ಮಡಿ’ ಆದೀತೇ ಮಡಿವಾಳರ ಬದುಕು?

ಆರ್.ರಘು Updated:

ಅಕ್ಷರ ಗಾತ್ರ : | |

Prajavani

ಮಡಿವಾಳ ಸಮಾಜವು ಕರ್ನಾಟಕದಲ್ಲಿ ಕಾಯಕ ಸಮಾಜಗಳಲ್ಲೊಂದು. ‘ಕಾಯಕವೇ ಕೈಲಾಸ’ ಎಂದು ಅಹರ್ನಿಶಿ ದುಡಿವ ಮಡಿವಾಳ ಸಮಾಜ ಹನ್ನೆರಡನೇ ಶತಮಾನದ ಶರಣ ಮಡಿವಾಳ ಮಾಚಿದೇವನನ್ನು ಆರಾಧ್ಯದೈವವನ್ನಾಗಿಸಿಕೊಡು ಭಕ್ತಿ-ಭಾವದಿಂದ ಸಮಾಜಸೇವೆ ಮಾಡುತ್ತಾ ತಾನಾಯಿತು ತನ್ನ ಕಾಯಕವಾಯಿತು ಎಂದು ಜೀವ ಸವೆಸುತ್ತಿರುವ ಸಮುದಾಯ.

ಕರ್ನಾಟಕದಲ್ಲಿ ಮಡಿವಾಳರು ‘ಅಗಸ’, ‘ಚಕಲ’, ‘ಧೋಭಿ’, ‘ಮನ್ನನ್’, ‘ಪರಿತ್’, ‘ರಜಕ’, ‘ಸಕಲ’, ‘ವನ್ನನ್’, ‘ವೆಲ್ಲು ತೇಡನ್’, ‘ಸಾಕಲವಾಡು’/ ‘ಸಕಜವಾಡು’, ‘ಚಕ್ಕಲವಾಂಡ್ಲು’ ಮತ್ತು ‘ಪರಿತ’ ಎಂಬ ಉಪನಾಮಗಳಿಂದ ಗುರುತಿಸಿಕೊಂಡಿದ್ದಾರೆ. ಕರ್ನಾಟಕದೆಲ್ಲೆಡೆ, ಊರಿಗೈದು ಮನೆ ಎಂಬಂತೆ ವಾಸಿಸುವ ಮಡಿವಾಳರು, ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ ಮತ್ತು ಉತ್ತರ ಕನ್ನಡದ ಶಿರಸಿ- ಸಿದ್ಧಾಪುರ ಭಾಗದಲ್ಲಿ ಹೆಚ್ಚು ನೆಲೆಸಿದ್ದಾರೆ.

ಕರ್ನಾಟಕದಲ್ಲಿ ಸುಮಾರು 8 ಲಕ್ಷ ಜನಸಂಖ್ಯೆ ಹೊಂದಿರುವ ಮಡಿವಾಳ ಸಮುದಾಯವು ಪರಂಪರಾಗತವಾಗಿ ಹಳ್ಳಿ, ನಗರ-ಪಟ್ಟಣಗಳಲ್ಲಿ ಕುಲಭೇದ ಮಾಡದೆ ಜನಸಾಮಾನ್ಯರ ಮಲಿನ ಬಟ್ಟೆಗಳನ್ನು ‘ಮಡಿ’ ಮಾಡುವ ಕಾಯಕ ಮಾಡುತ್ತಿದೆ. ಹತ್ತಿರದ ಮಡಿಕಟ್ಟೆ, ಕೆರೆ-ಕುಂಟೆ ಅಥವಾ ನದಿ-ಕಾಲುವೆಗಳಲ್ಲಿ ಬಟ್ಟೆಗಳನ್ನು ಸ್ವಚ್ಛಗೊಳಿಸಿ, ಮನೆಗಳಿಗೆ ಮಡಿ ಬಟ್ಟೆಗಳನ್ನು ವಿತರಿಸುತ್ತಾರೆ. ಇದಕ್ಕಾಗಿ ಹಳ್ಳಿಗಳಲ್ಲಿ ದವಸ-ಧಾನ್ಯ ಅಥವಾ ನಿರ್ದಿಷ್ಟ ಹಣವನ್ನು ಪಡೆದುಕೊಳ್ಳುತ್ತಾರೆ. ಈ ನಿತ್ಯ ಕಾಯಕಕ್ಕೆ ಮೂಕಪ್ರಾಣಿ ಕತ್ತೆಯನ್ನು ‘ಜೀವನಸಂಗಾತಿ’ ಯನ್ನಾಗಿಸಿಕೊಂಡಿದ್ದಾರೆ. ಹೀಗಾಗಿ ಕತ್ತೆಗೆ ‘ಅಗಸರಕತ್ತೆ’ ಎಂಬ ಅಡ್ಡ ಹೆಸರೂ ಬಂದಿದೆ. ಹಿಂದೂ ಧಾರ್ಮಿಕರ ಶುಭಕಾರ್ಯಗಳಾದ ದೇವರ ಉತ್ಸವ, ವಿವಾಹ ಇತ್ಯಾದಿಗಳಿಗೆ ‘ನಡೆಮಡಿ’ ಹಾಸಿ ದೊಂದಿ ಹಿಡಿಯುವ ಕೈಂಕರ್ಯವನ್ನೂ ಮಾಡುತ್ತಾರೆ. ಆದರೆ ಅವರನ್ನು ಅತೀವವಾಗಿ ಕಾಡುತ್ತಿರುವ ಯಾತನೆ ಎಂದರೆ ‘ಮಲ ಹೊರುವವನು ಅಸ್ಪೃಶ್ಯನೆಂದೆನಿಸಿದರೆ, ಮಲವನ್ನು ತೊಳೆವ ಮಡಿವಾಳ ಅಸ್ಪೃಶ್ಯನೇಕಲ್ಲ’! ಎಂಬುದು.

ಮಡಿವಾಳರು ಸಾಮಾಜಿಕ ಶೋಷಣೆಗೆ ಒಳಗಾಗಿ, ಸಂಖ್ಯಾ ಬಾಹುಳ್ಯದ ಬಲಹೀನತೆಯ ಕಾರಣದಿಂದ ಬಲಾಢ್ಯರ ದೌರ್ಜನ್ಯ-ದಬ್ಬಾಳಿಕೆಯ ಪರಿಣಾಮ, ನೋವು ನುಂಗಿಕೊಂಡು ಬದುಕುತ್ತಿದ್ದಾರೆ. ಎಂತಹುದೇ ಅವಮಾನ, ಪುಂಡಾಟಿಕೆಗಳಿಂದುಂಟಾದ ಪರಿಸ್ಥಿತಿಯಲ್ಲಿಯೂ ರಕ್ಷಣೆಗಾಗಿ ಸರ್ಕಾರದ ಕಡೆ ತಿರುಗಿ ನೋಡದ ಅಮಾಯಕರು. ಕರ್ನಾಟಕದಲ್ಲಿ ಮಡಿವಾಳರು ಆಧುನಿಕತೆಯ ಪರಿಣಾಮವಾಗಿ ಕುಲಕಾಯಕ ವಂಚಿತರಾಗುತ್ತಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ದುಡಿಯಲು ಭೂಮಿಯೂ ಇಲ್ಲದವರು, ಪಟ್ಟಣಗಳಿಗೆ ವಲಸೆ ಬಂದು ಶ್ರಮಜೀವಿಗಳಾಗಿ ಬದುಕು ಕಟ್ಟಿಕೊಂಡಿದ್ದಾರೆ. ನಗರ ಪ್ರದೇಶದಲ್ಲಿ ಅಧಿಕಾರಶಾಹಿ ವರ್ತನೆಯಿಂದ ಮಡಿಕಟ್ಟೆ ನಿರ್ಮಿಸಿಕೊಳ್ಳಲಾಗದ ದುಃಸ್ಥಿತಿಯಿಂದ ಕುಲಕಸುಬು ನಿರ್ವಹಿಸಲಾಗದ ಸ್ಥಿತಿಯಲ್ಲಿದ್ದಾರೆ.

ಹೀಗೆ ಮಡಿವಾಳ ಸಮುದಾಯವು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಶೋಚನೀಯ ಸ್ಥಿತಿಯಲ್ಲಿದೆ. ರಾಜಕೀಯ ಕ್ಷೇತ್ರದಲ್ಲಂತೂ ಹೇಳಿಕೊಳ್ಳಲೂ ಒಬ್ಬನೇ ಒಬ್ಬ ಜನನಾಯಕನಿಲ್ಲ. ಶಾಸನಸಭೆಗಳಲ್ಲಂತೂ ಪ್ರಾತಿನಿಧ್ಯ ಇಲ್ಲವೇ ಇಲ್ಲ. ಹೀಗಿರುವಲ್ಲಿ ಮಡಿವಾಳರು ಆರ್ಥಿಕವಾಗಿ ಸಬಲರಾಗುವ ದಿಸೆಯಲ್ಲಿ ಸಾಗುವುದು ದೂರದ ಕನಸೇ ಸರಿ. ಮಡಿವಾಳ ಸಮಾಜವನ್ನು ದೆಹಲಿ, ಅಸ್ಸಾಂ, ಬಿಹಾರ, ಹಿಮಾಚಲಪ್ರದೇಶ, ಕೇರಳ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಒಡಿಶಾ, ಸಿಕ್ಕಿಂ, ತ್ರಿಪುರಾ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಮಿಜೋರಾಂನಲ್ಲಿ ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಆದರೆ ಕರ್ನಾಟಕದಲ್ಲಿ ದಶಕಗಳ ಅವಿಶ್ರಾಂತ ಹೋರಾಟದ ಹಿನ್ನೆಲೆ ಇದ್ದರೂ, ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಬೇಡಿಕೆ ಈಡೇರಿಲ್ಲ. ಬಿ.ಎಸ್.ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಡಾ. ಅನ್ನಪೂರ್ಣ ಅವರು ಕುಲಶಾಸ್ತ್ರೀಯ ಅಧ್ಯಯನ ನಡೆಸಿ,ಮಡಿವಾಳರ ಸ್ಥಿತಿಗತಿಯ ಅಂಕಿಅಂಶಗಳ ಸಹಿತ ವರದಿಯನ್ನು ಸರ್ಕಾರದ ಮುಂದಿರಿಸಿದ್ದಾರೆ. ಆನಂತರ ಬಂದ ಸರ್ಕಾರಗಳೂ ಕಣ್ಣು ತೆರೆಯಲಿಲ್ಲ. ಐದಾರು ವರ್ಷಗಳಿಂದ ವರದಿಯು ಸಮಾಜ ಕಲ್ಯಾಣ ಇಲಾಖೆಯ ಕಪಾಟಿನಲ್ಲಿ ನಿದ್ರಿಸುತ್ತಿದೆ. ಸರ್ಕಾರದ ಮುಂದೆ ಶಾಂತ ರೀತಿಯಲ್ಲಿ ಬೇಡಿಕೆ ಮಂಡಿಸುವುದರ ಹೊರತು, ಬಲ ಪ್ರದರ್ಶಿಸುವ ಸ್ಥಿತಿಯಲ್ಲಿ ಮಡಿವಾಳರಿಲ್ಲ.

ಮಡಿವಾಳ ಮೂಲದ ಬಗ್ಗೆ ಒಂದು ಕಥೆ ಇದೆ. ತ್ರಿಮೂರ್ತಿಗಳ ಪತ್ನಿಯರಾದ ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿ ಹಾಗೂ ಇಂದ್ರ ಮತ್ತು ಸೂರ್ಯನ ಪತ್ನಿಯರಾದ ಸಚಿ ಮತ್ತು ಛಾಯಾ ಅವರು ಮಾಸಿಕ ಮುಟ್ಟಿನಿಂದಾದ ಉಡುಪುಗಳನ್ನು ಸ್ವಚ್ಛಗೊಳಿಸಲು ಬರುತ್ತಿದ್ದರು. ಆಗ ಮಹಿಳೆಯೊಬ್ಬಳು ತನ್ನ ಮಗನ ಜೊತೆ ಬರುತ್ತಿದ್ದಳು. ಆಕೆಗೆ ಬಟ್ಟೆಗಳನ್ನು ಮಡಿ ಮಾಡಿಕೊಡಲು ದೇವತೆಗಳು ಕೇಳಿಕೊಂಡರು. ಆಕೆ ಬಟ್ಟೆಗಳನ್ನು ಮಡಿ ಮಾಡಿಕೊಟ್ಟಿದ್ದರಿಂದ ಸಂತೋಷಗೊಂಡ ಅವರು ಆ ಮಹಿಳೆಗೆ ವರ ಬೇಡಲು ಹೇಳಿದರು. ಅದಕ್ಕೆ ಆ ಮಹಿಳೆ, ಉಡುಪುಗಳನ್ನು ಮಡಿಮಾಡಲು ಸಾಕಷ್ಟು ನೀರಿನ ಪ್ರದೇಶ ಮತ್ತು ಅದಕ್ಕಾಗಿ ಕೂಲಿ ದೊರಕುವಂತೆ ವರ ಬೇಡುತ್ತಾಳೆ. ಅಲ್ಲದೆ, ಬಟ್ಟೆ ಉಡುಪು ಮಡಿಮಾಡುವ ಕಾಯಕವನ್ನು ಏಕಸ್ವಾಮ್ಯಗೊಳಿಸಲು ಕೂಡ ಪ್ರಾರ್ಥಿಸುತ್ತಾಳೆ. ಮಹಿಳೆಯ ಪ್ರಾರ್ಥನೆಯನ್ನು ದೇವತೆಗಳು ಮನ್ನಿಸಿ, ವರಕೊಟ್ಟರು. ಈಗಲೂ ಮಡಿವಾಳರು ಸರ್ಕಾರದಿಂದ ವರ ಬೇಡುತ್ತಿದ್ದಾರೆ. ಮಡಿವಾಳ ಮಾಚಿದೇವರ ಜಯಂತಿಯನ್ನು ಶನಿವಾರ (ಫೆ. 1) ಸರ್ಕಾರ ಆಚರಿಸುತ್ತಿದೆ. ‘ಮಡಿವಾಳ ಮಾಚಿದೇವರ ಅಭಿವೃದ್ಧಿ ನಿಗಮ’ ಕೂಡ ಸ್ಥಾಪನೆಯಾಗುತ್ತಿದೆ. ಮಡಿವಾಳರ ಬದುಕು ಇನ್ನಾದರೂ ಮಡಿ ಆದೀತೇ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)