ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ರೋಗ ಪತ್ತೆ: ಮಹತ್ವ ಮರೆತೀರಿ ಮತ್ತೆ

ರೋಗಲಕ್ಷಣ ಪತ್ತೆಗೆ ತಗಲುವ ದುಬಾರಿ ಖರ್ಚಿಗೆ ಕಡಿವಾಣ ಹಾಕಬೇಕೆಂಬ ಆಗ್ರಹವಿದೆ
Last Updated 13 ಏಪ್ರಿಲ್ 2023, 0:00 IST
ಅಕ್ಷರ ಗಾತ್ರ

ಮದುವೆ ಗಂಡಿಗೆ ಪಂಚೆ ಉಡಿಸಲು ನೆರವಾಗುತ್ತಿದ್ದೆ. ನಮ್ಮನ್ನೇ ಗಮನಿಸುತ್ತಿದ್ದ ಹಿರಿಯರೊಬ್ಬರು ‘ತುಂಬಾ ಬಿಗಿಯಾಗಿ ಕಟ್ಟಬೇಡಪ್ಪ, ಧೋತಿ ಕ್ಯಾನ್ಸರ್ ಬಂದುಬಿಟ್ಟೀತು’ ಎಂದರು. ‘ಏನ್ಸಾರ್ ತಮಾಷೆ ಮಾಡ್ತಿದ್ದೀರಾ, ಪಂಚೆ ಉಟ್ಟರೆ ಕ್ಯಾನ್ಸರ್ ಬರುತ್ತದಾ’ ಎಂದೆ. ‘ಹೌದಪ್ಪ, ನಮ್ಮ ಕಾಲದಲ್ಲಿ ಹಾಗೊಂದು ಕ್ಯಾನ್ಸರ್‌ ಕಾಯಿಲೆ ಇದೆ ಅನ್ನುತ್ತಿದ್ದರು. ವರ್ಷಗಳ ಕಾಲ ಬಿಗಿಯಾಗಿ ಪಂಚೆ ಉಡುವವರಿಗೆ ಸೊಂಟದ ಬಳಿ ಚರ್ಮದ ಕ್ಯಾನ್ಸರ್ ಉಂಟಾಗುತ್ತಿತ್ತು. ಅದನ್ನು ಧೋತಿ ಕ್ಯಾನ್ಸರ್ ಎನ್ನುತ್ತಿದ್ದರು’ ಎಂದು ವಿವರಿಸಿದರು.

ಅರೆ, ಇದರ ಬಗ್ಗೆ ಕೇಳಿಯೇ ಇಲ್ಲವಲ್ಲ ಎಂದು ಮಾಹಿತಿಗಾಗಿ ದಾವಣಗೆರೆಯ ಪೆಥಾಲಜಿಸ್ಟ್ (ರೋಗಲಕ್ಷಣ ವಿಜ್ಞಾನಿ) ಡಾ. ಸುರೇಶ್ ಹನಗವಾಡಿ ಅವರನ್ನು ಸಂಪರ್ಕಿಸಿದೆ. ಕರ್ನಾಟಕ ವಲಯದ ಇಂಡಿಯನ್ ಅಸೋಸಿಯೇಷನ್ ಆಫ್ ಪೆಥಾಲಜಿಸ್ಟ್ಸ್ ಆ್ಯಂಡ್ ಮೈಕ್ರೊಬಯಾಲಜಿಸ್ಟ್ಸ್ ಮತ್ತು ಕರ್ನಾಟಕ ಹಿಮೊಫೀಲಿಯ ಸೊಸೈಟಿಯ ಅಧ್ಯಕ್ಷರೂ ಆಗಿರುವ ಸುರೇಶ್, ‘ಹೌದು ಸರ್, ಅಂಥ ಕಾಯಿಲೆ ಇತ್ತು. ಈಗ ಅದನ್ನು ಬೇರೆ ಹೆಸರಿನಿಂದ ಕರೆಯುತ್ತೇವೆ’ ಎಂದರು.

ಈ ಕಾಯಿಲೆಯನ್ನು ಪತ್ತೆ ಮಾಡಿದವರು ವಸಂತ ರಾಮ್‍ಜಿ ಖನೋಲ್ಕರ್. ಭಾರತದ ಮೊದಲ ಪೆಥಾಲಜಿಸ್ಟ್ ಎಂದೇ ಖ್ಯಾತರಾದ ಖನೋಲ್ಕರ್ ಅವರನ್ನು ವೈದ್ಯಲೋಕ ‘ಪೆಥಾಲಜಿ ಪಿತಾಮಹ’ ಎಂದೇ ಗೌರವಿಸುತ್ತದೆ. ಕ್ಯಾನ್ಸರ್, ಕುಷ್ಠರೋಗ, ರಕ್ತದ ಗುಂಪು ಪತ್ತೆ ಹಾಗೂ ಸಾಂಕ್ರಾಮಿಕ ರೋಗಗಳ ಕುರಿತು ಪ್ರಥಮವಾಗಿ ಅಧ್ಯಯನ ಕೈಗೊಂಡ ಖನೋಲ್ಕರ್ ಅವರು ಸಹವೈದ್ಯ ಸೂರ್ಯಭಾಯ್ ಜೊತೆ ಸೇರಿ, ಪುರುಷರನ್ನು ಬಾಧಿಸುತ್ತಿದ್ದ ‘ಧೋತಿ ಕ್ಯಾನ್ಸರ್’ ಪತ್ತೆ ಹಚ್ಚಿದ್ದರು.

ತಂಬಾಕು ಸೇವನೆಯಿಂದ ಬಾಯಿಯ ಕ್ಯಾನ್ಸರ್ ಬರುತ್ತದೆ ಎಂದು ಎಚ್ಚರಿಸಿ, ಅದರ ಪತ್ತೆಗೆ ನೀಡಲ್ ಆ್ಯಸ್ಪಿರೇಷನ್ ಸೈಟಾಲಜಿ, ಅಂದರೆ ತೆಳುವಾದ ಪೊಳ್ಳುಸೂಜಿಯನ್ನು ಚುಚ್ಚಿ ಅಂಗಾಂಶ ಪರೀಕ್ಷೆ ಮಾಡಿ, ರೋಗ ಪತ್ತೆ ವಿಧಾನ ಪರಿಚಯಿಸಿ ವೈದ್ಯಕೀಯ ಸಂಶೋಧನೆಗೆ ಹೊಸ ದಿಕ್ಕು ತೋರಿದ್ದರು. ಇವರ ಜನ್ಮದಿನ ಏಪ್ರಿಲ್ 13 ಅನ್ನು ‘ರಾಷ್ಟ್ರೀಯ ರೋಗಲಕ್ಷಣ ವಿಜ್ಞಾನ ದಿನಾಚರಣೆ’ (ನ್ಯಾಷನಲ್‌ ಪೆಥಾಲಜಿ ಡೇ) ಎಂದು ಆಚರಿಸಲಾಗುತ್ತದೆ.

ಪೆಥಾಲಜಿಯನ್ನು ರೋಗಲಕ್ಷಣ ಪತ್ತೆ ಹಚ್ಚುವ ವಿಜ್ಞಾನ ಅಥವಾ ರೋಗಲಕ್ಷಣ ವಿಜ್ಞಾನ ಎನ್ನುತ್ತಾರೆ. ಸುಸಜ್ಜಿತ ಆಸ್ಪತ್ರೆ, ಮೆಡಿಕಲ್ ಕಾಲೇಜು, ಸರ್ಕಾರಿ ಆಸ್ಪತ್ರೆಗಳಲ್ಲಿ ಪೆಥಾಲಜಿಗಾಗಿ ಪ್ರತ್ಯೇಕ ವಿಭಾಗ, ಲ್ಯಾಬ್‍ಗಳು ಇರುತ್ತವೆ. ವೈದ್ಯರು ನೀಡುವ ಸಲಹೆ, ಔಷಧಿಗಳು ಕೆಲಸ ಮಾಡಲು ರೋಗವಿಜ್ಞಾನಿ ನೀಡುವ ವರದಿ ತುಂಬಾ ಮುಖ್ಯ.

‘ಸದ್ಯಕ್ಕೆ ಈ ಮೆಡಿಸಿನ್ ಕೊಟ್ಟಿರ್ತೀನಿ, ಒಂದು ಬ್ಲಡ್ ಟೆಸ್ಟ್ ಮಾಡಿಸಿಬಿಡಿ. ರಿಪೋರ್ಟ್ ನೋಡಿದ ಮೇಲೆ ನಿಜವಾದ ಸಮಸ್ಯೆ ಏನು ಅಂತ ಗೊತ್ತಾಗುತ್ತೆ. ಆಗ ಬೇಕಾದ್ರೆ ಮೆಡಿಸಿನ್ ಚೇಂಜ್ ಮಾಡೋಣ ಇಲ್ಲವೆ ಅದನ್ನೇ ಮುಂದುವರಿಸೋಣ’ ಎನ್ನುವ ಬಹುತೇಕ ವೈದ್ಯರು, ಲ್ಯಾಬ್‍ನವರು ನೀಡುವ ರಿಪೋರ್ಟ್‌ಗಳನ್ನಾಧರಿಸಿ ಶಸ್ತ್ರಚಿಕಿತ್ಸೆ, ಲೇಸರ್ ಟ್ರೀಟ್‍ಮೆಂಟ್, ಫಿಸಿಯೋಥೆರಪಿ, ಡಯಟ್, ಫ್ಲುಯಿಡ್ ಇನ್‍ಟೇಕ್, ವ್ಯಾಯಾಮ, ಪೇಸ್‍ಮೇಕರ್ ಅಳವಡಿಕೆ, ಡಯಾಲಿಸಿಸ್, ಬ್ಲಡ್ ಟ್ರಾನ್ಸ್‌ಫ್ಯೂಶನ್, ವಿಟಮಿನ್ ಇಂಜೆಕ್ಷನ್... ಹೀಗೆ ಹಲವು ಚಿಕಿತ್ಸಾ ಕ್ರಮಗಳನ್ನು ನಿರ್ಧರಿಸುತ್ತಾರೆ.

ಖಾಸಗಿ ಒಡೆತನದ ಲ್ಯಾಬ್‍ಗಳಲ್ಲಿ, ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗಳಲ್ಲಿ ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿ ಲ್ಯಾಬ್ ಸಜ್ಜುಗೊಳಿಸಿರುತ್ತಾರೆ. ನುರಿತ ತಜ್ಞರು, ತಂತ್ರಜ್ಞರು ಇರುತ್ತಾರೆ. ಮನುಷ್ಯನ ಸ್ವಾಸ್ಥ್ಯಕ್ಕೆ ಸಂಬಂಧಿಸಿದ ಪ್ರಮುಖ ಪರೀಕ್ಷೆಗಳು ನಡೆಯುತ್ತವೆ. ಅವುಗಳನ್ನು 3 ಪಾರ್ಟ್ ಡಿಫರೆನ್ಶಿಯಲ್ ಮತ್ತು 6 ಪಾರ್ಟ್ ಡಿಫರೆನ್ಶಿಯಲ್ ಎಂದು ವರ್ಗೀಕರಿಸಲಾಗಿದೆ. ಹೆಮಟಾಲಜಿ, ಸೈಟಾಲಜಿ, ಹಿಸ್ಟೊಪೆಥಾಲಜಿ, ಇಮ್ಯುನೋಹಿಸ್ಟೊ ಕೆಮಿಸ್ಟ್ರಿ, ಮಾಲಿಕ್ಯುಲಾರ್ ಜೆನೆಟಿಕ್ಸ್, ಲಿಪಿಡ್ ಪ್ರೊಫೈಲ್, ರೀನಲ್ ಪ್ರೊಫೈಲ್, ಲಿವರ್ ಫಂಕ್ಷನ್‍ ಟೆಸ್ಟ್, ಬೇಸಿಕ್ ಮೆಟಾಬಾಲಿಕ್ ಪ್ಯಾನೆಲ್, ಪ್ರೊಥ್ರೊಂಬಿನ್ ಟೈಂ, ಥೈರಾಯಿಡ್, ಕ್ಯಾನ್ಸರ್ ಸಂಬಂಧಿತ ಪರೀಕ್ಷೆ, ರಕ್ತದಲ್ಲಿನ ಕಬ್ಬಿಣದ ಅಂಶ, ಹೃದಯದ ಸಮಸ್ಯೆ ಅರಿಯಲು ಕೊಲೆಸ್ಟರಾಲ್ ಪರೀಕ್ಷೆ ಹೀಗೆ ಹತ್ತು ಹಲವು ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ಮಾಡಲಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲವು ಪರೀಕ್ಷೆ ಮಾಡುವ ವ್ಯವಸ್ಥೆ ಇರುವುದಿಲ್ಲ. ಆಗ ರೋಗಿಗಳು ಖಾಸಗಿ ಲ್ಯಾಬ್‍ಗಳ ಮೊರೆ ಹೋಗಲೇಬೇಕಾಗುತ್ತದೆ.

ಖಾಸಗಿ ಲ್ಯಾಬ್‍ಗಳಲ್ಲಿ ಪರೀಕ್ಷೆಗಳಿಗೆ ಭಾರಿ ಹಣ ಖರ್ಚಾಗುತ್ತದೆ ಎನ್ನುವುದು ರೋಗಿಗಳ ಮಾತು. ಖಚಿತ ರೋಗ ಪತ್ತೆಗಾಗಿ ಜನ ನಮ್ಮಲ್ಲಿ ಬರುತ್ತಾರೆ. ನಿರ್ದಿಷ್ಟ ಪರೀಕ್ಷೆ ಮಾಡಲು ಅದಕ್ಕೆ ಬೇಕಾದ ರಾಸಾಯನಿಕಗಳು, ಯಂತ್ರ ಹಾಗೂ ತಂತ್ರಜ್ಞರನ್ನು ಬಳಸುವುದರಿಂದ ಅಷ್ಟು ಖರ್ಚು ಇದ್ದೇ ಇರುತ್ತದೆ ಎನ್ನುತ್ತಾರೆ ಲ್ಯಾಬ್ ನಡೆಸುವವರು.

ಸಣ್ಣ ಲ್ಯಾಬ್‍ಗಳಿಂದ ಹಿಡಿದು ಕಾರ್ಪೊರೇಟ್ ಮಾದರಿಯ ಲ್ಯಾಬ್‍ಗಳಲ್ಲಿ ನಡೆಯುವ ಪರೀಕ್ಷೆಗಳು ವೈದ್ಯರ ರೋಗ ಚಿಕಿತ್ಸೆ ಕ್ರಮದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಹಿಮೊಫೀಲಿಯಾ ಮತ್ತು ಆನುವಂಶಿಕ ರಕ್ತಸ್ರಾವದ ರೋಗಿಗಳಿಗೆ ಬೇಕಾದ ಲ್ಯಾಬ್ ಪರೀಕ್ಷೆ ವ್ಯವಸ್ಥೆ ದೊಡ್ಡ ನಗರಗಳಲ್ಲಿ ಮಾತ್ರ ಇದೆ. ಇದು ಪ್ರತೀ ಜಿಲ್ಲಾ ಕೇಂದ್ರದಲ್ಲೂ ಸಿಗಬೇಕು, ಸರ್ಕಾರ ಕ್ರಮ ವಹಿಸಬೇಕು ಎನ್ನುತ್ತಾರೆ. ಪೆಥಾಲಜಿ ವಿಷಯದಲ್ಲಿ ಉನ್ನತ ಕೆಲಸ ಮಾಡಿದ ಡಾ. ಎಸ್.ಜೆ.ನಾಗಲೋಟಿಮಠ, ಡಾ. ಕೃಷ್ಣ ಭಾರ್ಗವ, ಡಾ. ಪಾರ್ಶ್ವನಾಥ ಅವರನ್ನು ನೆನೆಯುತ್ತ, ರೋಗಲಕ್ಷಣ ಪತ್ತೆಗೆ ತಗಲುವ ಖರ್ಚು ದುಬಾರಿಯಾಗುತ್ತಿದೆ, ಇದಕ್ಕೆ ಕಡಿವಾಣ ಹಾಕಲೇಬೇಕು
ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT