ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ನಾಗರಿಕತೆಯ ಹುಣ್ಣು: ಬೇಕು ಒಳಗಣ್ಣು

ನಾಳೆಗಾಗಿ ಕೂಡಿಡುವ ಸಾಂಸ್ಕೃತಿಕ ಶಿಥಿಲ ಸ್ಥಿತಿಯು ಶಿಲಾಯುಗದಿಂದ ಆರಂಭವಾಗಿ ಇಂದಿಗೂ ಹಿಮ್ಮುಖ ಚಲನೆಯಲ್ಲೇ ಸಾಗುತ್ತಿರುವುದು ವಿಪರ್ಯಾಸ
Published 7 ಮೇ 2024, 0:18 IST
Last Updated 7 ಮೇ 2024, 0:18 IST
ಅಕ್ಷರ ಗಾತ್ರ

ಮಾರ್ಗರೆಟ್ ಮೀಡ್ ಅಮೆರಿಕದ ಒಬ್ಬ ಸಾಂಸ್ಕೃತಿಕ ಮಾನವಶಾಸ್ತ್ರಜ್ಞೆ. ಮಾನವಶಾಸ್ತ್ರ ಬೆಳೆದುಬಂದ ಬಗೆಯನ್ನು ತಮ್ಮ ವಿಶಿಷ್ಟ ವಾದಗಳು, ಭಿನ್ನವಾದ ಸಿದ್ಧಾಂತಗಳು, ತೀಕ್ಷ್ಣ ಒಳನೋಟಗಳಿಂದ ಕೂಡಿದ ಭಾಷಣಗಳು ಹಾಗೂ ಬರಹಗಳ ಮೂಲಕ ಪ್ರತಿಪಾದಿಸುತ್ತಾ ಪ್ರಸಿದ್ಧರಾದವರು.

ಒಂದು ದಿನ ತಮ್ಮ ವಿದ್ಯಾರ್ಥಿಯೊಬ್ಬ ಭೂಮಿಯ ಮೇಲೆ ‘ಸಾಂಸ್ಕೃತಿಕ ನಾಗರಿಕತೆ’ ಯಾವ ಕ್ಷಣದಿಂದ ಶುರುವಾಯಿತು ಎಂಬ ಪ್ರಶ್ನೆಯನ್ನು ಕೇಳುತ್ತಾನೆ. ತುಂಬಾ ಸರಳವಾದ ಈ ಪ್ರಶ್ನೆಗೆ ಉತ್ತರ ಬಹುಶಃ ‘ಮೀನು ಬಲೆಯ ಕೊಕ್ಕೆ’, ‘ಮಣ್ಣಿನ ಪಾತ್ರೆ’ಯಂತಹ ವಸ್ತುಗಳ ಅನ್ವೇಷಣೆಯ ದಿನಗಳಿಂದ ಶುರುವಾಯಿತು ಎಂದಾಗಿದ್ದಿರಬಹುದು ಎಂಬುದು ಆ ವಿದ್ಯಾರ್ಥಿಯ ನಿರೀಕ್ಷೆಯಾಗಿತ್ತೇನೊ. ಆದರೆ ನಾಗರಿಕತೆ ಬೆಳೆದು ಬಂದ ಆ ದಿನಗಳ ಬಗೆಗಿನ ಮೀಡ್‌ ಅವರ ಒಳನೋಟ ತುಂಬಾ ಆಳವಾಗಿ, ಅಷ್ಟೇ ಮನನೀಯವಾಗಿ ಹಾಗೂ ಬಹಳ ಭಿನ್ನವಾಗಿ ಇತ್ತು.

ಮನುಷ್ಯನ ದೇಹದಲ್ಲಿನ ತೊಡೆಯ ಮೂಳೆಯನ್ನು ವೈದ್ಯಕೀಯ ಭಾಷೆಯಲ್ಲಿ ‘ಫೀಮರ್‌ ಬೋನ್‌’ ಎನ್ನಲಾಗುತ್ತದೆ. ಇದು ಬಹಳ ಮುಖ್ಯವಾದ ಒಂದು ಮೂಳೆ. ಪ್ರಾಣಿ ಜಗತ್ತಿನಲ್ಲಿ, ತೊಡೆಯ ಮೂಳೆ ಮುರಿದರೆ ಆ ಪ್ರಾಣಿಯ ಅವಸಾನವೆಂದೇ ಅರ್ಥ. ಗಾಯಗೊಂಡ ಇಂತಹ ಮನುಷ್ಯಪ್ರಾಣಿ ತನ್ನ ಆಹಾರವನ್ನು ಸಂಪಾದಿಸಲಾರ, ನಡೆಯಲಾರ, ನೆಗೆಯಲಾರ, ಬೇಟೆ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲಾರ. ಇಂತಹ ಬಲವಾದ ‘ಫೀಮರ್‌’ ಮೂಳೆಗಾದ ಗಾಯವು ಮಾನವನ ವಿಕಾಸವಾದದ ಒಂದು ಹಂತದಲ್ಲಿ ವಾಸಿಯಾಗಿದೆ ಎಂದಾದರೆ, ಬಹುಕಾಲದವರೆಗೆ ಆ ಮನುಷ್ಯನ ಜೊತೆಗೆ ಯಾರೋ ಇದ್ದು ಅವನನ್ನು  ರೋಗಿಯಂತೆ ಆರೈಸಿ, ಲಾಲಿಸಿ, ಪೋಷಿಸಿದ ಆ ಕಾಲವು ‘ಸಾಂಸ್ಕೃತಿಕ ನಾಗರಿಕತೆ’ಯ ಮೊದಲ ಕುರುಹು ಎಂಬ ಸೂಕ್ಷ್ಮ ಒಳನೋಟದ ವಾದವನ್ನು ಮಾರ್ಗರೆಟ್ ಮಂಡಿಸುತ್ತಾರೆ.

ಅಕ್ಷರ ಜ್ಞಾನ, ಆಧ್ಯಾತ್ಮಿಕ ಅರಿವು, ಪರಸ್ಪರ ವಿಶ್ವಾಸ, ಅನ್ಯರ ಬಗೆಗೆ ಅನುಕಂಪದಂತಹ ಯಾವ ದೊಡ್ಡ ದೊಡ್ಡ ಪದಪುಂಜಗಳ ಪ್ರಯೋಗಗಳೂ ಚಾಲ್ತಿಯಲ್ಲಿರದ ಆ ಕಾಲಕ್ಕೆ ಮನುಷ್ಯನ ಸಹಜ ಅಂತಃಪ್ರಜ್ಞೆ ಮತ್ತು ತಾಯ್ತನದ ಫಲವಾದ ಶುದ್ಧ ನಾಗರಿಕತೆ ಅದು. ಕಾಡಿನಲ್ಲಿ ಅಲೆದಲೆದು ಬೇಟೆಯಾಡಿ ಗೆಡ್ಡೆ, ಗೆಣಸು, ಮಾಂಸವನ್ನು ಬೇಯಿಸಿ ತಿನ್ನುವಾಗ ಕೂಡ ತೊಡೆಯ ಮೂಳೆ ಮುರಿದ ಮನುಷ್ಯನ ಹಸಿವಿಗೂ ಒಂದು ಪಾಲಿತ್ತು ಎನ್ನಲಾಗುತ್ತದೆ. ಹೀಗಿರುವಾಗ, ನಾಗರಿಕತೆ ಬೆಳೆದುಬಂದ ಮೊದಲ ಹೆಜ್ಜೆ ಗುರುತಾಗಿ ಇದನ್ನು ಪರಿಗಣಿಸಬಹುದು ಎಂಬುದು ಮೀಡ್‌ ಅವರ ಸ್ಪಷ್ಟವಾದ ಅಭಿಪ್ರಾಯ.

ಆದರೆ ವಿಕಾಸವಾದದ ದಾರಿಯಲ್ಲಿದ್ದ ಇದೇ ಮನುಷ್ಯನಲ್ಲಿ ತನ್ನ ಆಹಾರವನ್ನು ಯಾವಾಗ ನಾಳೆಗೆ ಕೂಡಿಡುವ ಯೋಚನೆ ಹೊಳೆಯಿತೋ ಆಗ ಈ ಕಾಡು ಮತ್ತು ನಾಡಿನ ಸಹಜ ಸಂಪತ್ತು ಕೂಡ ಬಲಶಾಲಿಯ ಆಸ್ತಿಗೆ ಜಮೆಯಾಗುತ್ತಾ ಬಂದಿತು. ಆ ದಿನವೇ ನಾಗರಿಕತೆಯ ಚಕ್ರವು ಉಲ್ಟಾ ತಿರುಗಿ, ವಿಕಾಸವಾದದ ವಿಕಾರ ರೂಪಗಳು ನಾಗರಿಕತೆಯನ್ನು ಅಸ್ವಸ್ಥಗೊಳಿಸುತ್ತಾ ಬಂದವು. ಶಿಲಾಯುಗದಿಂದಲೇ ಶುರುವಾದ ಈ ಸಾಂಸ್ಕೃತಿಕ ಶಿಥಿಲ ಸ್ಥಿತಿ ಇಂದಿಗೂ ಹಿಮ್ಮುಖ ಚಲನೆಯಲ್ಲೇ ಸಾಗಿದೆಯೆಂದರೆ ತಪ್ಪಾಗಲಾರದು.

ಜಗತ್ತಿನ ತತ್ವಜ್ಞಾನಿಗಳು, ಋಷಿಮುನಿಗಳು, ದಾರ್ಶನಿಕರು, ಯೋಗಿಗಳು, ಸಂತರು, ಸಿದ್ಧರು, ಸಮ ಸಮಾಜದ ಆಶಯ ಹೊತ್ತ ಗಣ್ಯಮಾನ್ಯರಿಗೆ ಸಂಪತ್ತಿನ ಕ್ರೋಡೀಕರಣವೆಂಬ ಈ ಅಪಾಯದ ಅರಿವಿತ್ತು. ಇಂತಹ ಭೋಗ ವಿಲಾಸದ ಲೋಲುಪತೆಯೊಂದು ಸಮಾಜದ ನಡುವೆ ದೇಹದ ಹುಣ್ಣಿನಂತೆ ಹಬ್ಬುವ ಅಪಾಯವನ್ನು ಮನಗಂಡಿದ್ದರು. ಹೀಗಾಗಿ, ಧಾರ್ಮಿಕ ನೆಲೆಯಲ್ಲಿ ಜನರಿಗೆ ತಮ್ಮ ಕೈಲಾದ ಅರಿವನ್ನು ಮೂಡಿಸುವ ಯತ್ನವನ್ನು ಜಾರಿಯಲ್ಲಿ ಇಟ್ಟುಕೊಂಡು, ದಾನ ಮತ್ತು ಧರ್ಮವು ಮೋಕ್ಷದ ದಾರಿಗಳೆಂದು ಒಪ್ಪಿಕೊಂಡು, ಮನುಷ್ಯತ್ವವನ್ನು ಮೇಲೆತ್ತುವ ಕಾರ್ಯಸೂಚಿಗೆ ಬಹುತೇಕ ಎಲ್ಲ ಧರ್ಮಗಳೂ ಒತ್ತು ನೀಡುತ್ತಾ ಬಂದಿವೆ.

ಅನುಭವ ಮಂಟಪದಲ್ಲಿ ಒಮ್ಮೆ, ಬಸವಣ್ಣನವರ ಪತ್ನಿ ಗಂಗಾಂಬಿಕೆಯ ಕಿವಿಯಲ್ಲಿದ್ದ ಮುತ್ತಿನೋಲೆಯ ಮೇಲೆ ಲೆಂಕರಸನೆಂಬ ಭಕ್ತನ ಕಣ್ಣು ಬೀಳುತ್ತದೆ. ಆ ಭಕ್ತ ಅವಸರದಲ್ಲಿ ಅವರ ಕಿವಿಗೆ ಕೈ ಹಾಕಿ ಆ ಮುತ್ತಿನೋಲೆಗಳನ್ನು ಕಸಿಯಲು ಮುಂದಾಗುತ್ತಾನೆ. ಸುತ್ತಮುತ್ತಲಿನ ಜನ ಅವನನ್ನು ತಡೆಯುತ್ತಾರೆ. ಆ ಗದ್ದಲವನ್ನು ಕೇಳಿ ಓಡಿಬಂದ ಬಸವಣ್ಣನವರು ‘ನನ್ನ ದೇವರಾದ ಸಂಗಮನಾಥನ ಕೈ ನೊಂದುದು, ಕೇಳುವುದಕ್ಕೆ ಮೊದಲೇ ಕೊಡದಿರಬಹುದೇ?’ ಎಂದು ಸತಿಯನ್ನೇ ಆಕ್ಷೇಪಿಸುತ್ತಾರೆ ಮತ್ತು ಕೈಯಾರೆ ಆ
ಮುತ್ತಿನೋಲೆಗಳನ್ನು ಬಿಚ್ಚಿ ಶಿವಭಕ್ತನಿಗೆ ಅರ್ಪಿಸುತ್ತಾರೆ. ಇಲ್ಲಿ ಶಿವಭಕ್ತನ ಮೇಲೆ ಬಸವಣ್ಣನವರಿಗೆ ಇರುವ ಪ್ರೀತಿಗಿಂತ, ಏನೂ ಇಲ್ಲದ ದೀನನ ಮುಂದೆ ತಮ್ಮ ಪತ್ನಿಯ ಮುತ್ತಿನೋಲೆಯ ಸಿರಿತನದ ಆಡಂಬರದ ಪ್ರದರ್ಶನವು ಎದ್ದುಕಂಡಿದೆ.

ಅಕ್ಷರ ಕಲಿತ ನಾಗರಿಕನಾಗಿ ಅಕ್ರಮ ಸಂಪತ್ತನ್ನು ಕೂಡಿಟ್ಟುಕೊಂಡವನ ಎದೆ ಇಂದು ಕಲ್ಲಾಗಿ, ಕಣ್ಣು ಕುರುಡಾಗಿ, ಮೆದುಳಿಗೆ ತುಕ್ಕು ಹಿಡಿದು ಇಡೀ ಇಂದ್ರಿಯಗಳೇ ಭ್ರಷ್ಟವಾದ ಈ ವಿಷಮಗಳಿಗೆಯಲ್ಲಿ, ತೊಡೆಯ ಮೂಳೆ ಮುರಿದುಕೊಂಡು ತೆವಳುತ್ತಿರುವ ದೀನನಿಗೆ ಈ ಜಗತ್ತು ತನ್ನ ಸಂಪತ್ತಿನ ಒಂದಂಶವನ್ನಾದರೂ ಕೊಡುವುದಕ್ಕೆ ಕಾನೂನೇ ಬೇಕಿಲ್ಲ. ತೀರಾ ಒಳಗಣ್ಣಿನಿಂದ ನೋಡಿದರೆ, ನಾಗರಿಕತೆಯ ಈ ಹುಣ್ಣುಗಳನ್ನು ಜಗತ್ತು ಸುಲಭವಾಗಿ ಗುರುತಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT