ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಬಟ್ಟೆ ಬರಿದಾಗಿಸೀತು ಭುವಿಯ ಸಂಪತ್ತು!

ಅತ್ಯಂತ ಮಾಲಿನ್ಯಕಾರಕ ಉದ್ಯಮಗಳಲ್ಲಿ ಫ್ಯಾಷನ್ ಉಡುಪು ಉದ್ಯಮವೂ ಒಂದು
Last Updated 20 ಏಪ್ರಿಲ್ 2023, 22:45 IST
ಅಕ್ಷರ ಗಾತ್ರ

ನೀವು ಯಾವುದೇ ಬಟ್ಟೆ ಅಂಗಡಿಗೆ ಹೋದರೂ ಅಲ್ಲಿ ಕಾಣುವುದು ಗಾಢ ಬಣ್ಣದ ಆಕರ್ಷಕ ಉಡುಪುಗಳು. ವಿವಿಧ ವಿನ್ಯಾಸದ, ವಿವಿಧ ಬಣ್ಣದ ಉಡುಪುಗಳು ಇಂದಿನವರ ಟ್ರೆಂಡ್ ಆಗಿವೆ. ಉಡುಪಿನ ವಿಷಯದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿರುಚಿ ಇರುತ್ತದೆ. ನಮಗಿಷ್ಟವಾದ ಉಡುಪು ಖರೀದಿಸಿ, ಅದನ್ನು ಧರಿಸಿ ಖುಷಿಪಡುತ್ತೇವೆ, ನಿಜ. ಆದರೆ ಫ್ಯಾಷನ್ ಉಡುಪುಗಳ ಹಿಂದಿರುವ ಕರಾಳ ಸತ್ಯವನ್ನು ಅರಿಯಬೇಕಾದ ಕಾಲ ಈಗ ಬಂದಿದೆ.

ಉಡುಪಿನ ವಿಷಯದಲ್ಲಾದ ಕ್ರಾಂತಿಯು ಪರಿಸರಕ್ಕೆ ಪೂರಕವಾಗಿಲ್ಲ ಎಂಬುದು ಮಾತ್ರ ದುರದೃಷ್ಟಕರ. ವಾಸ್ತವವಾಗಿ ಬಟ್ಟೆ ಉದ್ಯಮವು ಎರಡನೇ ಅತಿದೊಡ್ಡ ಮಾಲಿನ್ಯಕಾರಕ ಉದ್ಯಮ. ನಾವಿಂದು ಧರಿಸುವ ಪ್ರತಿಯೊಂದು ಫ್ಯಾಷನ್ ಉಡುಪೂ ಭೂಮಿಯ ಸೀಮಿತ ಸಂಪನ್ಮೂಲವನ್ನು ಕಸಿದುಕೊಳ್ಳುತ್ತಿದೆ.

ವೇಗವಾಗಿ ಬೆಳೆಯುತ್ತಿರುವ ಫ್ಯಾಷನ್ ಉಡುಪು ಉದ್ಯಮವು ಬೃಹತ್ ಪ್ರಮಾಣದ ತ್ಯಾಜ್ಯಕ್ಕೆ ಕಾರಣ ಆಗುತ್ತಿದೆ. ಅದು ಭೂಮಿಯ ಮೇಲಿನ ಆರೋಗ್ಯಕರ ಮಣ್ಣನ್ನು ನಾಶ ಮಾಡುತ್ತಿದೆ. ಶುದ್ಧ ನೀರಿನ ಮೂಲಗಳನ್ನು ಕಲುಷಿತಗೊಳಿಸುತ್ತಿದೆ. ಗಾಳಿಯನ್ನು ಕಲುಷಿತಗೊಳಿಸುತ್ತಿದೆ. ನಮ್ಮ ಸಾಗರಗಳನ್ನು ಮಲಿನ ಗೊಳಿಸುತ್ತಿದೆ. ಕಾಡುಗಳನ್ನು ನಾಶಪಡಿಸುತ್ತಿದೆ. ಪರಿಸರ ವ್ಯವಸ್ಥೆ ಮತ್ತು ಅದನ್ನು ಅವಲಂಬಿಸಿರುವ ಜೀವವೈವಿಧ್ಯದ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತಿದೆ. ಇದನ್ನೆಲ್ಲಾ ಕೇಳಿ ಅಚ್ಚರಿಯಾಗು
ತ್ತಿದೆಯೇ?ಆದರೂ ಇದು ಸತ್ಯ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕಾದ ಸ್ಥಿತಿಯನ್ನು ಕೆಲವು ಅಂಕಿಅಂಶಗಳು ನಮಗೆ ಸ್ಪಷ್ಟಪಡಿಸುತ್ತವೆ.

ಫ್ಯಾಷನ್ ಉದ್ಯಮವು ವರ್ಷಕ್ಕೆ 15,000 ಕೋಟಿ ಉಡುಪುಗಳನ್ನು ಉತ್ಪಾದಿಸುತ್ತದೆ ಎಂಬುದು ಖುಷಿಯ ವಿಚಾರ. ಆದರೆ ತಿರಸ್ಕರಿಸಲಾದ ಅಥವಾ ತೊಟ್ಟು ಬಿಸಾಡುವ ಶೇಕಡ 87ರಷ್ಟು, ಅಂದರೆ 4 ಕೋಟಿ ಟನ್‍ಗಳಷ್ಟು ಉಡುಪುಗಳು ಮಣ್ಣನ್ನು ಸೇರುತ್ತವೆ. ಹೀಗೆ ಮಣ್ಣಿಗೆ ಎಸೆಯಲಾದ ಬಹುತೇಕ ಉಡುಪುಗಳು ಬೆಂಕಿಗೆ ಆಹುತಿಯಾಗುತ್ತವೆ. ಬೆಂಕಿಗೆ ಬಿದ್ದ ಬಟ್ಟೆಗಳು ಹೊಗೆಯ ಮೂಲಕ ಗಾಳಿಯನ್ನು ಕಲುಷಿತಗೊಳಿಸುತ್ತವೆ.

ಇನ್ನು ಉತ್ಪಾದನೆಯಾಗುವ ಹೊಸ ಉಡುಪುಗಳ ಕತೆ ಮತ್ತೊಂದು ತೆರನಾದುದು. ಫ್ಯಾಷನ್ ಉಡುಪು ಉದ್ಯಮವು ಶೇಕಡ 4ರಷ್ಟು ಹಸಿರುಮನೆ ಅನಿಲ ಹೊರಸೂಸುವಿಕೆಗೆ ಕಾರಣವಾಗಿದೆ. ಬಹುತೇಕ ಬಟ್ಟೆಗಳನ್ನು ಹೆಚ್ಚು ವಿಷಕಾರಿ ಬಣ್ಣಗಳು ಮತ್ತು ಭಾರವಾದ ಲೋಹಗಳಿಂದ ತಯಾರಿಸಲಾಗುತ್ತದೆ.
ಬಟ್ಟೆ ಉದ್ಯಮದಿಂದ ಶುದ್ಧ ನೀರಿನ ತೊರೆಗಳು, ನದಿಗಳು ಮತ್ತು ಜಲಚರಗಳಿಗೆ ಹಾನಿಯಾಗುತ್ತದೆ. ಕಲುಷಿತ ನೀರು ಜನರು ಮತ್ತು ಪ್ರಾಣಿಗಳ ಅನಾರೋಗ್ಯಕ್ಕೆ ಕಾರಣವಾಗುತ್ತದೆ.

ನಾವು ಧರಿಸುವ ಶೇಕಡ 62ರಷ್ಟು ಬಟ್ಟೆಗಳನ್ನು ಸಿಂಥೆಟಿಕ್ ಫೈಬರ್‌ಗಳಿಂದ ತಯಾರಿಸಲಾಗುತ್ತದೆ. ಫ್ಯಾಷನ್ ಉದ್ಯಮದ ಭಾಗವಾದ ಪಾಲಿಯೆಸ್ಟರ್ ಉತ್ಪಾದನೆಯಿಂದ ಶೇಕಡ 40ರಷ್ಟು ಇಂಗಾಲದ ಹೊರಸೂಸುವಿಕೆ ಉಂಟಾಗುತ್ತಿದೆ. ಪಾಲಿಯೆಸ್ಟರ್ ಉತ್ಪಾದನೆಯು ಮುಂದಿನ 10 ವರ್ಷಗಳಲ್ಲಿ ಶೇ 47ರಷ್ಟು ಬೆಳೆಯುವ ನಿರೀಕ್ಷೆಯಿದೆ. ನೈಲಾನ್ ಮತ್ತೊಂದು ಹಾನಿಕಾರಕ ವಸ್ತುವಾಗಿದ್ದು, ಇದು ಭೂಮಿಯನ್ನು ಇಂಗಾಲದ ಡೈ ಆಕ್ಸೈಡ್‍ಗಿಂತ 300 ಪಟ್ಟು ಹೆಚ್ಚು ಬೆಚ್ಚಗಾಗಿಸುತ್ತದೆ. ಸಾಗರದಲ್ಲಿನ ಮೈಕ್ರೊಪ್ಲಾಸ್ಟಿಕ್‌ನಲ್ಲಿ ಶೇಕಡ 35ರಷ್ಟು ನಾವು ಬಳಸಿ ಬಿಸಾಕಿದ ಸಿಂಥೆಟಿಕ್ ಉಡುಪುಗಳಿಂದ ಆಗಿದೆ ಎಂಬುದು ಇನ್ನೂ ದುರಂತ. ಈಗಾಗಲೇ ಈ ಮೈಕ್ರೊಪ್ಲಾಸ್ಟಿಕ್ ನಮ್ಮ ಆಹಾರ ಸರಪಳಿಯಲ್ಲಿ ನುಸುಳುತ್ತಿದೆ ಎಂಬುದನ್ನೂ ಮರೆಯುವಂತಿಲ್ಲ.

ಭೂಮಿ ಹಾಗೂ ಪರಿಸರವನ್ನು ಸಂರಕ್ಷಿಸುವಲ್ಲಿ ಉಡುಪುಗಳ ಮರುಬಳಕೆ ಎಲ್ಲಕ್ಕಿಂತ ಅಗತ್ಯ ಎಂಬುದು ಗೊತ್ತಾಗುತ್ತಿದೆ. ಈ ಕಾರ್ಯ ನಡೆಯಬೇಕಾದರೆ ಬಟ್ಟೆಗಳನ್ನು ಸಂಗ್ರಹಿಸಬೇಕು, ವಿಂಗಡಿಸಬೇಕು ಮತ್ತು ಮರುಬಳಕೆ ಮಾಡುವವರಿಗೆ ವಿತರಿಸಬೇಕು. ಆದರೆ ಈ ವ್ಯವಸ್ಥೆ ಶೈಶವಾವಸ್ಥೆಯಲ್ಲಿದೆ. ಪ್ಲಾಸ್ಟಿಕ್ ಬಳಕೆಗೆ ನಿರ್ಬಂಧ ಇರುವಂತೆ ಸಿಂಥೆಟಿಕ್ ಬಟ್ಟೆ ಉತ್ಪಾದನೆಗೆ ನಿರ್ಬಂಧಗಳನ್ನು ರೂಪಿಸಬೇಕಾದ ಅನಿವಾರ್ಯ ಇದೆ. ಫ್ಯಾಷನ್ ಉದ್ಯಮವು ಬಹುತೇಕ ಅನಿಯಂತ್ರಿತವಾಗಿದೆ. ಇದನ್ನು ನಿಯಂತ್ರಣಕ್ಕೆ ಒಳಪಡಿಸಿದರೆ ಮಾತ್ರ ಭೂಮಿಯ ಸಂಪತ್ತನ್ನು ರಕ್ಷಿಸಬಹುದು.

ಬಟ್ಟೆಯ ಸಮಸ್ಯೆಯಿಂದ ಭೂಮಿಯನ್ನು ರಕ್ಷಿಸಲು ನಮ್ಮ ಮುಂದೆ ಒಂದಿಷ್ಟು ಆಯ್ಕೆಗಳಿವೆ. ಅವುಗಳಲ್ಲಿ ಮೊದಲನೆಯದು, ಉಡುಪುಗಳ ಕುರಿತಾದ ನಮ್ಮ ಮೋಹವನ್ನು ಮರುಚಿಂತನೆಗೆ ಒಳಪಡಿಸುವುದು. ಅಂದರೆ ವೇಗವಾಗಿ ಹಾಳಾಗುವ ಬಟ್ಟೆಯ ಬದಲಿಗೆ ಹೆಚ್ಚು ಬಾಳಿಕೆ ಬರುವ ಅಥವಾ ಪರಿಸರಕ್ಕೆ ಪೂರಕವಾದ ಉಡುಪುಗಳನ್ನು ಖರೀದಿಸುವುದು ಹಾಗೂ ಮರುಬಳಕೆಗೆ ಹೆಚ್ಚು ಪ್ರಾಶಸ್ತ್ಯ ನೀಡುವುದು ನಮ್ಮ ಆದ್ಯತೆಯಾಗಬೇಕು.

ಬೃಹತ್ ಉದ್ಯಮದ ಉಡುಪುಗಳ ಬದಲಿಗೆ ಸ್ಥಳೀಯ ಉಡುಪಿನ ಉದ್ಯಮಕ್ಕೆ ಬೆಂಬಲ ನೀಡುವುದು. ಸಾಧ್ಯವಾದಷ್ಟೂ ಮರುಬಳಕೆಗೆ ಆದ್ಯತೆ ನೀಡುವುದು. ಬಟ್ಟೆಗಳನ್ನು ಬಿಸಾಡುವ ಬದಲು ಅವಶ್ಯಕತೆ ಇದ್ದವರಿಗೆ ನೀಡುವುದು ಅಥವಾ ಆನ್‌ಲೈನ್‌ನಲ್ಲಿ ಉಚಿತವಾಗಿ ಮಾರಾಟ ಮಾಡುವುದು. ಚೆನ್ನಾಗಿ ಕಾಣಬೇಕು ಎಂಬುದಕ್ಕಷ್ಟೇ ಆದ್ಯತೆ ನೀಡಿ ಫ್ಯಾಷನ್ ಉಡುಪುಗಳನ್ನು ಧರಿಸುವ ಬದಲು, ಪರಿಸರಕ್ಕೆ ಪೂರಕವಾಗುವಂತಹ ಉಡುಪುಗಳನ್ನು ಧರಿಸಬೇಕು. ಪರಿಸರ ಸಂರಕ್ಷಣೆಯ ವಿಷಯದಲ್ಲಿ ಪ್ರತಿಯೊಬ್ಬರ ಪಾಲೂ ಇರುತ್ತದೆ. ಗ್ರಾಹಕರಾದ ನಾವು ತಯಾರಕರ ನಿರ್ಧಾರಗಳನ್ನು ನಿರ್ಧರಿಸುತ್ತೇವೆ. ನಮ್ಮ ಬಳಕೆಯ ಕ್ರಮ ಮತ್ತು ಖರ್ಚಿನ ಅಭ್ಯಾಸವು ಉದ್ಯಮಗಳು ಕಾರ್ಯನಿರ್ವಹಿಸುವ ವಿಧಾನವನ್ನು ಬದಲಾಯಿಸಬಹುದು.

ಭೂಮಿಯನ್ನು ಮುಂದಿನ ಪೀಳಿಗೆಗೆ ಸುಸ್ಥಿರವಾಗಿ ಇಡಲು ನಮ್ಮ ಬಳಕೆಯ ವಿಧಾನಗಳು ಬದಲಾಗಬೇಕು. ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT