ಶುಕ್ರವಾರ, ಅಕ್ಟೋಬರ್ 7, 2022
28 °C
ಬಿಸಿಯೂಟದಿಂದ ಮಕ್ಕಳ ಆರೋಗ್ಯ ತುಸು ಸುಧಾರಿಸಿದೆ. ಊಟದ ಜೊತೆ ಮೊಟ್ಟೆಯನ್ನು ವಾರಕ್ಕೆ ಮೂರು ಬಾರಿಯಾದರೂ ಕೊಡಬೇಕು

ಸಂಗತ | ಮಕ್ಕಳ ತಟ್ಟೆಯಲ್ಲಿ ಮೊಟ್ಟೆ...

ಉದಯ ಗಾಂವಕರ್ Updated:

ಅಕ್ಷರ ಗಾತ್ರ : | |

Prajavani

ಇದು ಬಹಳ ಹಳೆಯ ಕತೆ. ಆದರೂ ನೆನಪಿಸುವೆ. ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಕೆ. ಕಾಮ ರಾಜ್‌ ಅವರ ಕಾರು ಗ್ರಾಮವೊಂದರ ರೈಲ್ವೆ ಕ್ರಾಸಿಂಗ್‌ ಬಳಿ ನಿಂತಿತ್ತು. ರೈಲು ಇನ್ನೇನು ಬರಬೇಕಿತ್ತು. ಕಾಮ ರಾಜರು ಕಿಟಕಿಯಾಚೆ ನೋಡಿದರು. ಒಬ್ಬ ಹುಡುಗ ದನ ಮೇಯಿಸುತ್ತಿದ್ದ. ಅವನೊಡನೆ ಮಾತನಾಡಬೇಕೆನಿಸಿತು ಅವರಿಗೆ. ಕರೆದು ‘ಯಾಕಪ್ಪಾ ಶಾಲೆಗೆ ಹೋಗ ಲಿಲ್ಲ?’ ಎಂದು ಕೇಳಿದರು. ತಕ್ಷಣವೇ ಆತ ‘ದಿನವೂ ಶಾಲೆಗೆ ಹೋದರೆ ನೀವು ಊಟ ಹಾಕುತ್ತೀರಾ?’ ಎಂದು ಕೇಳಿದ. ಆ ಬುಡಕಟ್ಟು ಹುಡುಗ ಅವರನ್ನು ಗುರುತಿಸಿರಲಿಲ್ಲ. ಆದರೆ, ಈ ಘಟನೆಯು ಕಾಮರಾಜ್‌ ಅವರು ದೇಶದಲ್ಲೇ ಮೊದಲ ಬಾರಿಗೆ 1956ರಲ್ಲಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೊಳಿಸಲು ಕಾರಣವಾಯಿತು. 

ಸರ್ಕಾರಗಳು ಜಗತ್ತನ್ನು ದಮನಿತರ ಹೃದಯದ ಮೂಲಕ ನೋಡಬೇಕೇ ವಿನಾ ಶೋಷಕರ ಮಿದುಳಿನ ಮೂಲಕವಲ್ಲ ಎಂಬುದನ್ನು ಈ ವಿದ್ಯಮಾನವು ಪುಷ್ಟೀಕರಿಸುತ್ತದೆ. ಈಗ ಮಕ್ಕಳ ಊಟದ ತಟ್ಟೆಗೆ ಮೊಟ್ಟೆಯೂ ಸೇರಿಕೊಂಡಿದೆ. 

ಖಾಸಗಿ ಶಾಲೆಗಳ ಮಕ್ಕಳಿಗೆ ಹೋಲಿಸಿದರೆ, ಸರ್ಕಾರಿ ಶಾಲೆಗಳ ಹೆಚ್ಚಿನ ಮಕ್ಕಳು ಪೀಚಲಾಗಿರು
ತ್ತಾರೆ. ಕಡಿಮೆ ತೂಕ, ಬಿಳಿಚಿಕೊಂಡ ತುಟಿ. ಇವೆಲ್ಲವೂ ನ್ಯೂನಪೋಷಣೆಯ ಸೂಚಕಗಳು. ಕಳೆದ ವರ್ಷ ನಡೆದ ಒಂದು ಅಧ್ಯಯನದ ಪ್ರಕಾರ ಯಾದಗಿರಿ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿನ ಶೇ 74ರಷ್ಟು ವಿದ್ಯಾರ್ಥಿಗಳು ನ್ಯೂನಪೋಷಣೆಯಿಂದ ಬಳಲುತ್ತಿದ್ದಾರೆ. ಕಲಬುರಗಿ, ಕೊಪ್ಪಳ, ಬೀದರ್‌, ರಾಯಚೂರು ಜಿಲ್ಲೆಗಳಲ್ಲೂ ಮುಕ್ಕಾಲು ಪಾಲು ಮಕ್ಕಳ ದೇಹ ತೂಕ ಅವರ ಎತ್ತರಕ್ಕೆ ತಕ್ಕದಾಗಿರಲಿಲ್ಲ. ಜೊತೆಗೆ, ರಕ್ತಹೀನತೆ, ಏಕಾಗ್ರತೆ ಕೊರತೆಯಂತಹ ಸಮಸ್ಯೆಗಳಿಂದ ಬಳಲು
ತ್ತಿದ್ದರು. ಕಳೆದ ಡಿಸೆಂಬರ್‌ನಿಂದ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಹದಿನಾಲ್ಕೂವರೆ ಲಕ್ಷ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ನೀಡುವ ಕಾರ್ಯಕ್ರಮವನ್ನು ಆರಂಭಿಸಿದ ಮೇಲೆ ನ್ಯೂನಪೋಷಣೆಯ ತೀವ್ರತೆ ಇಳಿಮುಖವಾಯಿತು. ನ್ಯೂನಪೋಷಣೆಯ ವಿಚಾರ ದಲ್ಲಿ ಬೇರೆ ಜಿಲ್ಲೆಗಳಲ್ಲೂ ಪರಿಸ್ಥಿತಿ ತೀರಾ ಭಿನ್ನವಾಗಿಲ್ಲ. ಮೊಟ್ಟೆ ನೀಡುವ ಯೋಜನೆಯನ್ನು ರಾಜ್ಯ ಸರ್ಕಾರವು ಈಚೆಗೆ ಎಲ್ಲ ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ 1ರಿಂದ 8ನೇ ತರಗತಿಯ ಮಕ್ಕಳಿಗೆ (ವರ್ಷದಲ್ಲಿ 46 ದಿನ) ವಿಸ್ತರಿಸಿದೆ. ಇದು ಅಗತ್ಯವಾಗಿ ಆಗಬೇಕಿದ್ದ ಕೆಲಸ.

ಕೆಲವು ಮಕ್ಕಳಿಗೆ ಹೊಟ್ಟೆ ತುಂಬಾ ಊಟ ಸಿಗುತ್ತಿಲ್ಲ. ಊಟ ದೊರೆಯುತ್ತಿರುವ ಮಕ್ಕಳಲ್ಲೂ ನ್ಯೂನಪೋಷಣೆ ಇರಲು ಊಟದಲ್ಲಿ ಆಹಾರದ ವಿವಿಧ ಘಟಕಗಳು ಅವಶ್ಯಕ ಪ್ರಮಾಣದಲ್ಲಿ ದೊರೆಯದಿರುವುದೇ ಕಾರಣ ಎನ್ನುತ್ತದೆ ಪೋಷಣೆಯ ಬೆನ್ನುಹತ್ತಿ ಹೋದ ‘ಈಟ್– ಲ್ಯಾನ್ಸೆಟ್’ ಅಧ್ಯಯನ. ಈ ಅಧ್ಯಯನದ ಮುಖ್ಯ ಗ್ರಹಿಕೆ ಮತ್ತು  ಶಿಫಾರಸುಗಳು ಗಮನಾರ್ಹವಾಗಿವೆ. ಗ್ರಾಮೀಣ ಭಾರತೀಯರು ನಿತ್ಯವೂ ಸರಾಸರಿ 2,214 ಕಿಲೊ ಕ್ಯಾಲರಿ ಆಹಾರವನ್ನು ಸೇವಿಸಿದರೆ, ಪಟ್ಟಣಿಗರು ತುಸು ಕಮ್ಮಿ. ಅವರು ಸರಾಸರಿ 2,169 ಕಿಲೊ ಕ್ಯಾಲರಿ ಸೇವಿಸುತ್ತಾರೆ. ಇದು ಅವರು ತೆಗೆದುಕೊಳ್ಳಬೇಕಾದ ಸರಾಸರಿ ಕ್ಯಾಲರಿಗಿಂತ 400 ಕಿಲೊ ಕ್ಯಾಲರಿ ಕಡಿಮೆ. ಶ್ರೀಮಂತ ವರ್ಗದವರು ಸರಾಸರಿ 3,000 ಕಿಲೊ ಕ್ಯಾಲರಿ ಸೇವಿಸುತ್ತಾರೆ. ಇದು, ಅಗತ್ಯ ಎಂದು ಗುರುತಿಸಿ ರುವುದಕ್ಕಿಂತ 400 ಕಿಲೊ ಕ್ಯಾಲರಿ ಜಾಸ್ತಿ.

ನಮ್ಮ ಮಕ್ಕಳ ನ್ಯೂನಪೋಷಣೆಗೆ ಮುಖ್ಯ ಕಾರಣವೆಂದರೆ ನಮ್ಮ ಊಟದ ತಟ್ಟೆಯ ಬಹುಭಾಗವು ಧಾನ್ಯ ಮೂಲದ ಆಹಾರದಿಂದ ತುಂಬಿರುವುದು. ಅಧ್ಯಯನವು ನೀಡಿರುವ ಶಿಫಾರಸಿನಂತೆ ನಮ್ಮ ಆಹಾರದ ಮೂರನೇ ಒಂದು ಭಾಗವು ಅಂದರೆ 800 ಕಿಲೊ ಕ್ಯಾಲರಿ ಶಕ್ತಿಯು ಧಾನ್ಯಗಳಿಂದ ಬಂದರೆ ಸಾಕು. ನಮ್ಮ ಬಹುತೇಕ ಮಕ್ಕಳಿಗೆ ಅರ್ಧದಷ್ಟು ಶಕ್ತಿ ದೊರೆಯುವುದು ಅಕ್ಕಿ, ಗೋಧಿ, ಜೋಳ, ರಾಗಿ ಮುಂತಾದ ಧಾನ್ಯಗಳಿಂದ. ಹಳ್ಳಿಗಳಲ್ಲಂತೂ ಮುಕ್ಕಾಲು ಪಾಲು ಆಹಾರವೇ ಧಾನ್ಯಮೂಲದ್ದಾಗಿರುತ್ತದೆ ಎನ್ನುತ್ತದೆ ಅಧ್ಯಯನ. ನಮ್ಮ ಆಹಾರದ ಶೇ 29ರಷ್ಟು ಅಂದರೆ 729 ಕ್ಯಾಲರಿಯಷ್ಟು ಶಕ್ತಿಯು ಮೊಟ್ಟೆ, ಹಾಲು, ಮೀನು, ಮಾಂಸ, ಕಾಳುಗಳಿಂದ ಬರಬೇಕು. ಆದರೆ, ಹಳ್ಳಿಯ ಬಡ ಮಕ್ಕಳು ತಾವು ಸೇವಿಸಬೇಕಾಗಿದ್ದ ಪ್ರೋಟೀನಿನ ಶೇ 6ರಷ್ಟನ್ನು ಮಾತ್ರ ಸೇವಿಸುತ್ತಿದ್ದಾರೆ. ಇದು ಚಿಂತೆಗೀಡುಮಾಡುವ ವಿಷಯ. ಹೀಗಾದಲ್ಲಿ ಭವಿಷ್ಯದ ಭಾರತ ರೋಗಗ್ರಸ್ತವಾಗುತ್ತದೆ. ಶಕ್ತಿಹೀನವಾಗುತ್ತದೆ.

ಬಿಸಿಯೂಟದಿಂದ ಮಕ್ಕಳ ಆರೋಗ್ಯ ಸುಧಾರಿಸುತ್ತಿದೆ. ಊಟದ ಜೊತೆ ಮೊಟ್ಟೆಯನ್ನು ವಾರಕ್ಕೆ ಮೂರು ಬಾರಿಯಾದರೂ ಕೊಡಬೇಕು. ತಮಿಳುನಾಡಿನ ಮಕ್ಕಳಿಗೆ ವಾರದ ಐದು ದಿನಗಳು ಮೊಟ್ಟೆ ದಿನಗಳು. ಆಂಧ್ರ, ತೆಲಂಗಾಣ ಹೀಗೆ ಹದಿಮೂರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶದ ಮಕ್ಕಳಿಗೆ ಮೊಟ್ಟೆಯ ಶಕ್ತಿ ದೊರೆಯುತ್ತಿದೆ.

ಜೀವನಶೈಲಿ ಕಾಯಿಲೆಗಳಾದ ರಕ್ತದೊತ್ತಡ, ಮಧುಮೇಹಕ್ಕೆ ನಮ್ಮ ಆಹಾರದಲ್ಲಿ ಶರ್ಕರ, ಪಿಷ್ಟ ಹೆಚ್ಚಿರುವ ಧಾನ್ಯ– ಸಿಹಿತಿನಿಸುಗಳೇ ಕಾರಣವೆಂದು ಇತ್ತೀಚಿನ ಕೆಲವು ಅಧ್ಯಯನಗಳು ದೃಢಪಡಿಸುತ್ತವೆ. ಮೀನು, ಮಾಂಸ, ಕಾಳು, ಮೊಟ್ಟೆಯನ್ನು ಊಟದ ತಟ್ಟೆಯಲ್ಲಿ ಹಾಕುವುದರಿಂದ ಊಟದಲ್ಲಿ ದೇಹ ನಿರ್ಮಾಣದ ಪೋಷಕಗಳ ಪ್ರಮಾಣ ಹೆಚ್ಚುತ್ತದೆ. ಆಹಾರದ ವಿಷಯದಲ್ಲಿ ಶ್ರೇಷ್ಠ– ಕನಿಷ್ಠ ಎಂಬ ಭೇದ ಬೇಡ. ಮಕ್ಕಳ ವಿಚಾರದಲ್ಲಿ ಅಪೌಷ್ಟಿಕತೆ ನಿವಾರಣೆಯೇ ನಮಗೆ ಮುಖ್ಯವಾಗಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.