ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಎಳೆತನ ದಕ್ಕಲಿ, ರಜೆ ಆಸ್ವಾದಿಸಲಿ

ನಾವು ವರ್ಷವಿಡೀ ಮಕ್ಕಳನ್ನು ತರಗತಿಯಲ್ಲಿ ಬಂಧಿಸುವುದಲ್ಲದೆ ಸಿಗುವ ರಜೆಯಲ್ಲೂ ಅವರನ್ನು ಕಾಡುವುದೇಕೆ?
Last Updated 17 ಏಪ್ರಿಲ್ 2022, 18:38 IST
ಅಕ್ಷರ ಗಾತ್ರ

ಬಿಸಿಲು ಸುರಿಯುತ್ತಿದೆ. ಶಾಲೆಗಳ ಬಾಗಿಲುಗಳು ಮುಚ್ಚಿವೆ. ಪರೀಕ್ಷೆಗಳನ್ನು ‌ಮುಗಿಸಿ ಬಂದ ಮಕ್ಕಳುನಿಟ್ಟುಸಿರುಬಿಟ್ಟಿವೆ. ತುಸು ನೆಮ್ಮದಿಯಿಂದ ಕೈ ಕಾಲನ್ನು ಚಾಚಿ ಮನೆ ತುಂಬಾ ಓಡಾಡುತ್ತಿವೆ. ಒಂದು ತಿಂಗಳ ರಜೆ ಅವರ ಖಾತೆಗೆ ಜಮೆಯಾಗಿದೆ. ನಾವು ಬ್ಯಾಂಕ್ ಖಾತೆಯಲ್ಲಿನ ಹಣ ನೋಡಿ ಖುಷಿಪಡುವಂತೆ ಮಗು ತನ್ನ ರಜೆ ನೆನೆದು ಒಳಗೊಳಗೇ ಸಂಭ್ರಮಿಸುತ್ತಿದೆ. ಆದರೆ ಪೋಷಕರ ವಕ್ರದೃಷ್ಟಿ ಮತ್ತೆ ಈಗ ಮಗುವಿನ ರಜೆಯ ಮೇಲೂ ಬಿದ್ದಿದೆ.

ನೌಕರಿಯ ಕಾರಣಕ್ಕೆ ದೂರದ ನಗರದಲ್ಲಿರುವ ಗೆಳೆಯನಿಗೆ ಮೊನ್ನೆಯಷ್ಟೆ ಫೋನ್ ‌ಮಾಡಿದೆ. ‘ನಿಮ್ಮ ಅಮ್ಮ ಹೇಳಿದ್ರು, ಮಗೂನ ಕರ್ಕೊಂಡು ಊರಿಗೆ ಬರ್ಬೇಕಂತೆ ನೋಡು. ಮೊಮ್ಮಗನನ್ನು ನೋಡಿ ತುಂಬಾ ದಿನ ಆಯ್ತಂತೆ. ರಜೆಯಲ್ಲಾದ್ರೂ ಬಂದು ಹೋಗಿ ಅಂತ ಹೇಳ್ತಿದಾರೆ’ ಅಂದೆ. ‘ರಜೆ, ಯಾವ ರಜೆ? ಮಗೂಗೆ ಸಮ್ಮರ್ ಕ್ಯಾಂಪಿದೆ. ನಿನ್ನೆಯಷ್ಟೇ 20 ಸಾವಿರ ಕೊಟ್ಟು ಅಡ್ಮಿಷನ್ ತಗೊಂಡಿದ್ದೀನಿ. ಮಗೂನ ಭವಿಷ್ಯ ಮುಖ್ಯ. ಖುಷಿ ಮುಖ್ಯ. ಅಮ್ಮನಿಗೆ ಹೇಳು ಒಂದು ದಿನದ ಮಟ್ಟಿಗೆ ಬಂದು ಹೋಗ್ತೀವಿ ಅಂತ’ ಅಂದು ಫೋನಿಟ್ಟ.

ಮಗುವಿನ ಭವಿಷ್ಯದ ಖುಷಿ ಬೇಸಿಗೆ ಶಿಬಿರದಲ್ಲಿದೆ ಅನ್ನುವ ಅವನ ಅಪಾರ ಜ್ಞಾನಕ್ಕೆ ಬೆರಗಾದೆ. ರಜೆ ಇರುವುದೇ ಮಗುವನ್ನು ಶಿಬಿರಕ್ಕೆ ನೂಕುವ ಇಲ್ಲವೇ ಮುಂದಿನ ವರ್ಷದ ಇಡೀ ಕಲಿಕೆಯನ್ನು ಒಂದೇ ತಿಂಗಳಲ್ಲಿ ಕಲಿಸುತ್ತೇವೆ ಅನ್ನುವ ಮನೆಪಾಠಕ್ಕೆ ತಳ್ಳುವ ಗೀಳದು. ವಿಪರೀತ ಜಾಹೀರಾತುಗಳೊಂದಿಗೆ ಪೋಷಕರಿಗೆ ಮೋಡಿ ಮಾಡಿರುವ ರಜೆ ಕಾಲದ ಶಿಬಿರಗಳು ಉಂಟು ಮಾಡುವ ಪರಿಣಾಮಗಳು ಏನೇ ಇರಬಹುದು. ಆದರೆ ಮಗು ಎಂಬುದು ಯಂತ್ರವಲ್ಲ. ರಜೆ ಇರುವುದೇ ಮಗುವಿನ ಮನಸ್ಸಿನ ಚೇತರಿಕೆಗೆ. ರಜೆ ಎಂಬುದು
ಬಿಡುಗಡೆಯೇ ವಿನಾ ಬಂಧನವಲ್ಲ. ನೀವು ಮತ್ತದೇ ಶಿಬಿರದೊಳಗೆ ಬಂಧಿಸುತ್ತೀರೆಂದರೆ ಮಗುವಿನ ಮನಸ್ಸು ಏನಾಗಬೇಡ?!

ಒಂದು ಮಗುವಿಗೆ ಸಿಗಲೇಬೇಕಾದ ‘ಬಾಲ್ಯತನ’ ಅದಕ್ಕೆ ದಕ್ಕಬೇಕು. ಅದು ಮಗುವಿನ ಹಕ್ಕು. ಸ್ಪೋಕನ್ ಇಂಗ್ಲಿಷ್, ಒಂದು ದಿನದ ಟ್ರಕ್ಕಿಂಗ್, ಆನೆ ಚಿತ್ರ ಬಿಡಿಸಿ, ಉಸಿರನ್ನು ದೀರ್ಘವಾಗಿ ಎಳೆದುಕೊಳ್ಳಿ, ಹಳಸಲು ಉಪನ್ಯಾಸಗಳು, ಗಂಟೆ ಲೆಕ್ಕದ ಭಾಷಣಗಳು ಇವ್ಯಾವೂ ಮಗುವಿನ ಬಾಲ್ಯವನ್ನು ಚೆಂದಗೊಳಿಸುವುದಿಲ್ಲ. ಅವೆಲ್ಲಾ ಮಗುವಿಗೆ ಶಾಲಾ ತರಗತಿಯಲ್ಲೇ ಸಿಗುವಾಗ ಮತ್ತ್ಯಾಕೆ ಶಿಬಿರದ ಹಂಗು?

ಮಕ್ಕಳನ್ನು ಹಳ್ಳಿಗೊಯ್ಯಿರಿ. ನಿಮ್ಮ ಮಕ್ಕಳು ಅವರ ಅಜ್ಜ ಅಜ್ಜಿಯರ ತೊಡೆಯ ಮೇಲೆ ತಮ್ಮ ರಜೆ ಕಳೆಯಲಿ. ಅವರು ಹೇಳುವ ಕಥೆ ಕೇಳಿಸಿಕೊಳ್ಳಲಿ. ಮಗುವಿಗೆ ಮಣ್ಣಿನಲ್ಲಿ ಆಡುವುದಕ್ಕೆ ಬಿಡಿ, ಆ ಮಣ್ಣಿನ ಸೊಬಗಿನ ಸವಿಗಂಪನ್ನು ಮಗು ಆಘ್ರಾಣಿಸಲಿ. ಅಲ್ಲಿಯ ಮಕ್ಕಳೊಂದಿಗೆ ಬೆರೆಯುವುದಕ್ಕೆ ಅವಕಾಶ ಮಾಡಿಕೊಡಿ. ಬಿಸಿಲಿನಲ್ಲಿ ಬೆವರಲಿ, ಹಳ್ಳಿಯಆಟಗಳನ್ನಾಡಲಿ. ಆಟವೆಂದರೆ ಕೇವಲ ಕ್ರಿಕೆಟ್‌ ಅಥವಾ ವಿಡಿಯೊ ಗೇಮ್ ಅಲ್ಲ ಎಂಬುದು ಖಾತರಿಯಾಗಲಿ.

ಹೊಲ ಗದ್ದೆಗಳ ಕಡೆ ಕರೆದೊಯ್ಯಿರಿ. ಕಟ್ಟಿದ ಇರುವೆಗಳ ಗೂಡು, ಅವುಗಳ ಬದುಕಿನ ಕೌತುಕ, ಮೊಳಕೆ ಒಡೆದ ಬೀಜ, ಆಗ ತಾನೇ ಚಿಗುರಿದ ಎಲೆಗಳು, ಹಾರುವ ದುಂಬಿಗಳು, ಹಾಡುವ ಪಕ್ಷಿಗಳು, ಹರಿಯುವ ನದಿ, ತುಂಬಿದ ಕೆರೆ, ಬೆಳೆದು ನಿಂತ ಪೈರು, ರೈತನ ಬಾಳು, ದನ ಕರುಗಳು ಮೇಯುವ ಠೀವಿ ಇವೆಲ್ಲಾ ಅವರಿಗೆ ದಕ್ಕಲಿ.

ರೈತನ ಕಷ್ಟದ ಬದುಕನ್ನು ಪರಿಚಯಿಸಿ, ಬರಿದಾದ ಕೆರೆಯನ್ನು ತೋರಿಸಿ, ಒಣಗಿದ ಬೆಳೆಯನ್ನು ತೋರಿಸಿ, ನೀರಿಲ್ಲದೆ ಪರಿತಪಿಸುವ ಪಶು ಪಕ್ಷಿಗಳನ್ನು ಕಣ್ಮುಂದಿರಿಸಿ. ಪ್ರಕೃತಿಯೊಂದಿಗೆ ಬೆರೆತು ಅದನ್ನೇ ದೇವರೆಂದು ಪೂಜಿಸುವ ಹಳ್ಳಿಯ ಜನರ ಪ್ರಕೃತಿಪರ ಕಾಳಜಿ ಮಗುವಿಗೆ ತಾಗಲಿ. ಇವೆಲ್ಲ ನಿಮ್ಮ ಬೇಸಿಗೆ ಶಿಬಿರದಲ್ಲಿ ಸಿಗುತ್ತವೆಯೇ ಎಂದು ಒಮ್ಮೆ ಕೇಳಿಕೊಳ್ಳಿ.

ಸಾಧ್ಯವಾದರೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಒಂದು ಪ್ರವಾಸ ಹೊರಡಿ. ಭವ್ಯ ದೇವಾಲಯಗಳು, ಭಯ ಹುಟ್ಟಿ
ಸುವ ಕಾಡುಗಳು, ಗಂಭೀರವಾಗಿ ಬದುಕುವಕಾಡುಪ್ರಾಣಿಗಳನ್ನು ನೋಡಲಿ. ಹರಿಯುವಝರಿಯಲ್ಲಿ ತೇಲಲಿ. ಕೋಗಿಲೆ ಪುಸ್ತಕದಲ್ಲಿ ಕೂಗುವುದಿಲ್ಲ ಎಂಬುದು ಗೊತ್ತಾಗಲಿ. ತರಗತಿಯಾಚೆ ಕಲಿಯುವುದು ಎಷ್ಟಿದೆ ಎಂಬುದು ಅರಿವಾಗಲಿ. ಪುಸ್ತಕ ಓದುವ ರುಚಿ ಹತ್ತಿಸಿ.

ಆಕಾಶದಲ್ಲಿ ಹಾರುವ ಹಕ್ಕಿಯ ರಮ್ಯತೆಯ ಬಗ್ಗೆ, ಸೂರ್ಯನ ರಶ್ಮಿಯಲ್ಲಿ ಹಾರುವ ದುಂಬಿಗಳ ಝೇಂಕಾರದ ಬಗ್ಗೆ ಮತ್ತು ಹಸಿರು ಬೆಟ್ಟದಲ್ಲಿ ನಗುವ ಹೂವಿನ ಬಗ್ಗೆ ಯೋಚಿಸುವುದಕ್ಕೆ ಸಮಯ ಹೊಂದಿಸಿಕೊಳ್ಳುವುದನ್ನು ಹೇಳಿಕೊಡಿ ಎಂದು ಅಬ್ರಹಾಂ ಲಿಂಕನ್ ತಮ್ಮ ಮಗನ ಶಾಲೆಯ ಶಿಕ್ಷಕರಿಗೆ ಪತ್ರ ಬರೆಯುತ್ತಾರೆ.‌ ಸಾಹಿತಿ ಶಿವರಾಮ ಕಾರಂತರು ತಮ್ಮ ಮಗನನ್ನು ಶಾಲೆಗೆ ಸೇರಿಸದೇ ಇರುವ ನಿರ್ಧಾರಕ್ಕೆ ಬರುತ್ತಾರೆ. ಸಲೀಂ ಅಲಿ ಅವರು ತರಗತಿಗೆ ಚಕ್ಕರ್ ಹಾಕಿ ಹಾರುವ ಹಕ್ಕಿಗಳನ್ನು ಎಣಿಸುತ್ತಾ ಕೂರುತ್ತಾರೆ. ನಮ್ಮ ಜನಪದ ಮಹಿಳೆ ‘ಆಡಿ ಬಾ ಎನ ಕಂದ ಅಂಗಾಲ ತೊಳೆದೇನು...’ ಎಂದು ಆಡಲು ಆಚೆ ಕಳುಹಿಸುತ್ತಾಳೆ.

ನಾವು ವರ್ಷವಿಡೀ ಮಗುವನ್ನು ತರಗತಿಯಲ್ಲಿ ಬಂಧಿಸಿದ್ದಲ್ಲದೆ ಸಿಗುವ ರಜೆಯಲ್ಲೂ ಕಾಡುತ್ತೇವೆ. ಹೋಗಲಿ ನಮ್ಮ ನಮ್ಮ ಬದುಕಿನ ಉದ್ದೇಶವಾದರೂ ಏನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT