ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಜಾವರರು ಕೇಳಬೇಕಾದುದೇನು?

ಬಾಂಗ್ಲಾ ಯುದ್ಧಕ್ಕೆ ಹೋಲಿಸಿರುವುದರಲ್ಲಿ ರಾಜಕೀಯ ಪಕ್ಷಪಾತ ಇದೆ
Last Updated 4 ಮಾರ್ಚ್ 2019, 8:23 IST
ಅಕ್ಷರ ಗಾತ್ರ

‘ಪಾಕಿಸ್ತಾನದಲ್ಲಿನ ಬಾಲಾಕೋಟ್ ಮೇಲಿನ ನಮ್ಮ ವೈಮಾನಿಕ ದಾಳಿ, ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ತರಲಿದೆ’ ಎಂಬ ಯಡಿಯೂರಪ್ಪನವರ ರಾಜಕೀಯ ಸಂಕುಚಿತತೆಯ ಹೇಳಿಕೆಯನ್ನು ಪೇಜಾವರ ಶ್ರೀಗಳು ಸಮರ್ಥಿಸಿದ್ದಾರೆ (ಪ್ರ.ವಾ., ಮಾರ್ಚ್ 2). ಈ ಸಮರ್ಥನೆಯ ಭಾಗವಾಗಿ ಅವರು ‘ಬುದ್ಧಿಜೀವಿಗಳಿಗೆ ರಾಷ್ಟ್ರಭಕ್ತಿ ಇಲ್ಲ’ ಎಂದೂ ಅಪ್ಪಣೆ ಕೊಡಿಸಿದ್ದಾರೆ.

ನರೇಂದ್ರ ಮೋದಿಯವರ ಪ್ರಭಾವ ಅವರ ನೇತೃತ್ವದ ಸರ್ಕಾರದ ಹಲವು ವೈಫಲ್ಯಗಳ ಹಿನ್ನೆಲೆಯಲ್ಲಿ ಮಸುಕುಗೊಂಡಿರುವುದನ್ನು ಸಮೀಕ್ಷೆಗಳು ಮತ್ತು ಸಾರ್ವಜನಿಕ ಅಭಿಪ್ರಾಯಗಳು ಕೆಲವೇ ದಿನಗಳ ಹಿಂದೆ ಸೂಚಿಸಿದ್ದವು. ಆಗ, ರಾಜಕೀಯವಾಗಿ ತಾವು ತಟಸ್ಥ ಎಂಬರ್ಥದ ಹೇಳಿಕೆ ನೀಡಿದ್ದ ಇವರು, ಈಗ ಸ್ವತಃ ಬಿಜೆಪಿಯ ನಾಯಕತ್ವವೇ ಮುಜುಗರಗೊಳ್ಳುವಂತೆ ಮಾಡಿದ ಯಡಿಯೂರಪ್ಪ
ನವರ ಹೇಳಿಕೆಯನ್ನು ಸಮರ್ಥಿಸಿದ್ದಾರೆ. ಇವರು, ಯಡಿಯೂರಪ್ಪನವರ ಹೇಳಿಕೆಯ ಹಿಂದಿದ್ದ ಯುದ್ಧೋನ್ಮಾದದಿಂದ ಪ್ರೇರಿತರಾಗಿರುವುದು ಸ್ಪಷ್ಟವಾಗಿದೆ. ಇದು, ಸದ್ಯದ ಅವರ ಮನಃಸ್ಥಿತಿಯ ಬಗ್ಗೆ ಜನ ಯೋಚಿಸುವಂತೆ ಮಾಡಿದೆ.

ಪೇಜಾವರ ಮಠಾಧೀಶರು ಯಡಿಯೂರಪ್ಪನವರ ಹೇಳಿಕೆಯನ್ನು ಸಮರ್ಥಿಸುತ್ತಾ, 1971ರ ಬಾಂಗ್ಲಾ ಯುದ್ಧವು ಇಂದಿರಾ ಗಾಂಧಿಯವರಿಗೆ ರಾಜಕೀಯ ಲಾಭ ತಂದಿತ್ತು ಎಂಬುದನ್ನು ನೆನಪಿಸಿದ್ದಾರೆ. ಈ ಹೋಲಿಕೆಯೇ ಹಾಸ್ಯಾಸ್ಪದ. ಏಕೆಂದರೆ ಅದು ನಿಜವಾಗಿ ಯುದ್ಧವೇ ಆಗಿತ್ತು, ಅದರಲ್ಲಿ ನಮಗೆ ಅಭೂತಪೂರ್ವ ಜಯ ದೊರಕಿತ್ತು. ಆದರೆ ಆಗ ಇಂದಿರಾ ಅವರ ಪಕ್ಷದ ಯಾರೂ ಅದರಿಂದ ತಮ್ಮ ಪಕ್ಷಕ್ಕೆ ದೊರೆಯಬಹುದಾದ ಚುನಾವಣಾ ಲಾಭದ ಬಗ್ಗೆ ಮೂರ್ಖರಂತೆ ಮಾತನಾಡಿರಲಿಲ್ಲ. ಬದಲಿಗೆ, ಮೋದಿಯವರ ಪಕ್ಷದ ನಾಯಕರೇ ಆಗಿದ್ದ ಅಟಲ್ ಬಿಹಾರಿ ವಾಜಪೇಯಿಯವರೇ ಇಂದಿರಾ ಅವರನ್ನು ‘ದುರ್ಗೆ’ ಎಂದು ಕರೆದು ಕಾಂಗ್ರೆಸ್ಸಿನ ಚುನಾವಣಾ ವಿಜಯಕ್ಕೆ ನಾಂದಿ ಹಾಡಿದ್ದರು!

ಆದರೆ ಈಗ ಪುಲ್ವಾಮಾ ದಾಳಿಯ ನಂತರ ನಡೆದಿರುವುದೆಲ್ಲ ಎರಡೂ ಕಡೆಯವರು ಹೇಳಿಕೊಂಡಿರುವಂತೆ, ಯಾವ ಕಡೆಯ ಯಾರ ಕೂದಲೂ ಒಂದಿಷ್ಟೂ ಕೊಂಕದೆ ಎರಡೂ ದೇಶಗಳ ನಾಯಕರು ತಂತಮ್ಮ ದೇಶಗಳ ಜನರ ಮಾನಸಿಕ ತೃಪ್ತಿಗಾಗಿ ನಿರ್ದೇಶಿಸಿದ ಬಿಡಿ ಕಸರತ್ತುಗಳಷ್ಟೇ. ಈ ಸೇನಾ ಕಸರತ್ತುಗಳಲ್ಲಿ ನಮ್ಮ ಸೇನೆ ಎಷ್ಟು ವೀರೋಚಿತವಾಗಿ ಭಾಗವಹಿಸಿತ್ತು ಎಂದು ನಾವು ಹೇಳಿಕೊಳ್ಳುತ್ತೇವೆಯೋ ಹಾಗೇ ಪಾಕಿಸ್ತಾನದ ಜನರೂ ತಮ್ಮ ಸೇನೆಯ ಬಗ್ಗೆ ಹೇಳಿಕೊಳ್ಳುತ್ತಿರುವುದರಲ್ಲಿ ಅಸಹಜತೆ ಏನೂ ಇರಲಾರದು. ಪರಿಸ್ಥಿತಿ ಹೀಗಿರುವಾಗ, ಪೇಜಾವರ ಶ್ರೀಗಳಂಥವರು ಇದನ್ನು ಬಾಂಗ್ಲಾ ಯುದ್ಧಕ್ಕೆ ಹೋಲಿಸಿ ಮಾತಾಡಹೊರಟಿರುವುದು ಅವರ ರಾಜಕೀಯ ಪಕ್ಷಪಾತ ದೃಷ್ಟಿಯ ಮರುನಿರೂಪಣೆ ಮಾತ್ರವಾಗಿ ಕಾಣುತ್ತದೆ.

ಪೇಜಾವರ ಶ್ರೀಗಳಂತಹವರು ಈ ಎಲ್ಲ ದ್ರಾವಿಡ ಪ್ರಾಣಾಯಾಮವನ್ನು ಬಿಟ್ಟು ಮಾಡಬೇಕಾದ ಮೊದಲ ಕೆಲಸವೆಂದರೆ, ಭಾರತ-ಪಾಕಿಸ್ತಾನದ ನಡುವಣ ಕೆಲ ದಿನಗಳ ಈ ಉದ್ವಿಗ್ನತೆಗೆ ಕಾರಣವಾದ ಪುಲ್ವಾಮಾ ದಾಳಿ ಏಕೆ ಮತ್ತು ಹೇಗೆ ನಡೆಯಿತೆಂದು ಮೋದಿಯವರನ್ನು ಕೇಳುವುದು. ಹಾಡಹಗಲೇ, ಅದೂ ರಾಷ್ಟ್ರೀಯ ಹೆದ್ದಾರಿಯಲ್ಲಿ, ನಮ್ಮ ಯೋಧರು ನೋಡನೋಡುತ್ತಿದ್ದಂತೆಯೇ ಈ ದಾರುಣ ದಾಳಿ ನಡೆದಿದ್ದರ ಹಿಂದೆ ಇರುವುದು ಯಾವ, ಯಾರ ಮತ್ತು ಎಂತಹ ವೈಫಲ್ಯ ಎಂದೂ ಕೇಳಬೇಕು. ಹಾಗೇ ಎಲ್ಲ ರಾಜಕೀಯ ಪಕ್ಷಗಳೂ ಒಮ್ಮತದಿಂದ ಬೆಂಬಲಿಸಿದ ಭಾರತದ ಸೇನೆಯು ಬಾಲಾಕೋಟ್ ಮೇಲೆ ನಡೆಸಿದ ದಾಳಿಯ ಎಲ್ಲ ಕೀರ್ತಿಯನ್ನೂ ಮೋದಿಯವರು ತಮ್ಮ ಪರಾಕ್ರಮವೇ ಎಂಬಂತೆ ಚುನಾವಣೋದ್ದೇಶದ ಸಾರ್ವಜನಿಕ ಸಭೆಗಳಲ್ಲಿ ಯುದ್ಧೋನ್ಮಾದಿ ಪರಾಕ್ರಮ
ಶೀಲತೆಯ ಮಾತನಾಡುತ್ತಿರುವುದು ಎಷ್ಟು ಸರಿ ಎಂದೂ ಅವರು ಕೇಳಬೇಕು. ಜೊತೆಗೇ, ಈ ದಾಳಿಯ ಮೂಲಕ ಉಗ್ರರ ಹಾವಳಿಯನ್ನು ಸಂಪೂರ್ಣ ಮಟ್ಟ ಹಾಕಿದ್ದೀರಾ ಎಂದೂ ಕೇಳಬೇಕು. ಏಕೆಂದರೆ ಈ ದಾಳಿಯ ಮರುದಿನದಿಂದಲೇ ಕಾಶ್ಮೀರದಲ್ಲಿ ಉಗ್ರರ (ಪ್ರತಿ)ದಾಳಿ ನಿರಂತರವಾಗಿ ನಡೆದಿದ್ದು ನಮ್ಮ ಅನೇಕ ಸೈನಿಕರು ಹುತಾತ್ಮರಾಗುತ್ತಿರುವ ಸುದ್ದಿ ಬರುತ್ತಲೇ ಇದೆ. ಹಾಗಾಗಿ ಎಲ್ಲಕ್ಕಿಂತ ಮುಖ್ಯವಾಗಿ ಈ ಸಂದರ್ಭದಲ್ಲಿ ಮೋದಿಯವರನ್ನು ಕೇಳಬೇಕಾದ ಪ್ರಧಾನ ಪ್ರಶ್ನೆ ಎಂದರೆ, ‘ನಿಮ್ಮ ಆಡಳಿತ ಶೈಲಿಯು ಕಾಶ್ಮೀರ ಸಮಸ್ಯೆಯನ್ನು ಹೆಚ್ಚು ಸರಳಗೊಳಿಸಿದೆಯೋ ಅಥವಾ ಕಠಿಣಗೊಳಿಸಿದೆಯೋ’ ಎಂಬುದು.

ಕಾಶ್ಮೀರ ಸಮಸ್ಯೆಯನ್ನು ಹಿಂದಿನ ಎಲ್ಲ ಸರ್ಕಾರಗಳು ಹದಗೆಡಿಸಿವೆ ಮತ್ತು ಈ ಸಮಸ್ಯೆಗೆ ತಮ್ಮಲ್ಲಿ ವಿಶೇಷ ಮದ್ದಿದೆ ಎಂದು ಹೇಳುತ್ತಾ ಜನರನ್ನು ನಂಬಿಸಿ ಅಧಿಕಾರಕ್ಕೆ ಬಂದ ಮೋದಿಯವರು, ತಮ್ಮ ಅಧಿಕಾರಾವಧಿಯ ಈ ಸುಮಾರು ಐದು ವರ್ಷಗಳಲ್ಲಿ ಕಾಶ್ಮೀರವನ್ನು ಯಾವ ಸ್ಥಿತಿಗೆ ತಂದಿದ್ದಾರೆ ಎಂಬುದನ್ನು ಜನ ನೋಡುತ್ತಿದ್ದಾರೆ. ಈ ಅವಧಿಯಲ್ಲಿ ಪಠಾಣ್‍ಕೋಟ್ ಮತ್ತು ಉರಿ ದಾಳಿಗಳೂ ಸೇರಿದಂತೆ ಹಿಂದೆಂದಿಗಿಂತ ಹೆಚ್ಚು ಸಂಖ್ಯೆಯ ಮತ್ತು ಭೀಕರವೆನ್ನಿಸುವ ದಾಳಿಗಳು ನಮ್ಮ ಮೇಲೆ ನಡೆದಿವೆ. ರಾಜ್ಯದಲ್ಲಿ ನಡೆದಿರುವ ಸೇನಾ ಕಾರ್ಯಾಚರಣೆಗಳಲ್ಲಿ ಮಡಿದ ನಮ್ಮ ಸೈನಿಕರ ಮತ್ತು ನಾಗರಿಕರ ಸಂಖ್ಯೆಯೂ ಹಿಂದೆಂದಿಗಿಂತ ಗಣನೀಯವಾಗಿ ಹೆಚ್ಚಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಗಡಿಯಾಚೆಯ ಭಯೋತ್ಪಾದಕರ ಜೊತೆ ಈಗ ಸ್ಥಳೀಯ ಯುವಕರೂ ಶಾಮೀಲಾಗುವ ಹೊಸ ಬೆಳವಣಿಗೆಯೊಂದು ಆರಂಭವಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಮೋದಿಯವರು ನಿಜವಾಗಿ ಏನು ಮಾಡಿದ್ದಾರೆ ಎಂದು ಸ್ವತಃ ಪೇಜಾವರರಾದರೂ ವಿವರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT