ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಹಳ್ಳಿ ಮಕ್ಕಳು ಮತ್ತು ಗುಣಾತ್ಮಕ ಶಿಕ್ಷಣ

ಕಲಿಕೆಯ ‍ಪ್ರಕ್ರಿಯೆಯಲ್ಲಿ ದೊಡ್ಡ ಅಂತರ ಸೃಷ್ಟಿಯಾಗಿದೆ. ಈ ಅಂತರ ನಾಳೆಗೊಂದು ಕದಂಕವೇ ಆಗಿಬಿಡಬಹುದು
Last Updated 2 ಆಗಸ್ಟ್ 2022, 20:45 IST
ಅಕ್ಷರ ಗಾತ್ರ

ಶಾಲೆಯ ಮಕ್ಕಳನ್ನು ಇತ್ತೀಚೆಗೆ ಜಿಲ್ಲಾ ಕೇಂದ್ರಕ್ಕೆ ಒಂದು ಸ್ಪರ್ಧೆಗೆ ಕರೆದುಕೊಂಡು ಹೋಗಿದ್ದೆ. ನಮ್ಮದು ಹಳ್ಳಿ ಶಾಲೆ. ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಹುಡುಗರು. ನಗರದ ನಡುವೆ ಮಕ್ಕಳು ಹಾದು ಹೋಗುವಾಗ ಮುದುಡಿಹೋದರು.‌ ಸ್ಪರ್ಧೆಯ ಜಾಗದಲ್ಲಂತೂ ಹೆದರಿದ ಗುಬ್ಬಿಗಳಂತೆ ಕೂತಿದ್ದರು. ಅವರ ಮುಖದಲ್ಲಿ ದುಗುಡವಿತ್ತು. ಸ್ಪರ್ಧೆಯೇನೂ ಕಠಿಣವಿರಲಿಲ್ಲ. ನಗರದ‌ ಮಕ್ಕಳ ಟಾಕು–ಟೀಕು ನೋಡಿ ಹೆದರಿದ್ದರು. ನಮ್ಮ ವಿದ್ಯಾರ್ಥಿಗಳ ಸಮವಸ್ತ್ರ ನೋಡಿಯೇ ನಗರದ ವಿದ್ಯಾರ್ಥಿಗಳ ಕಣ್ಣಲ್ಲಿ ಇವರು ಸರ್ಕಾರಿ ಶಾಲೆಯ ಮಕ್ಕಳು ಎಂಬ ಗೇಲಿ ಇತ್ತು. ನನ್ನ ಮಾತು ಮಕ್ಕಳ ಮುಖದಲ್ಲಿ ಸಮಾಧಾನ ತರಲಿಲ್ಲ. ನಮ್ಮ ಮಕ್ಕಳು ಸ್ಪರ್ಧೆಗೂ‌ ಮೊದಲೇ ಸೋತಿದ್ದರು. ಮಕ್ಕಳ ಮುಖದಲ್ಲಿನ ಆ ಸಂಕಟ ನೋಡಲಾಗಲಿಲ್ಲ.

ಮಕ್ಕಳ ನಡುವಿನ ಅಸಮಾನತೆಗೆ ಇದೊಂದು ರೂಪಕವಾಗಿ ತೋರಿತು. ಕೋವಿಡ್ ಕಾಲದಲ್ಲಿ
ಹಳ್ಳಿ ಮಕ್ಕಳನ್ನು ತಲುಪಲು ಅದೆಷ್ಟು ಕಷ್ಟಪಟ್ಟೆವು. ನಗರದ ಮಕ್ಕಳು ಬೆಚ್ಚಗೆ ಕೂತು ಮನೆಯಲ್ಲಿ ಆನ್‌ಲೈನ್‌ ಕ್ಲಾಸು ಕೇಳುತ್ತಿದ್ದಾಗ ಹಳ್ಳಿಮಕ್ಕಳು ಅಕ್ಷರ ಕಲಿಯಲು ಅದೆಷ್ಟು ಕಷ್ಟಪಟ್ಟರು. ದೊಡ್ಡ ಕಲಿಕಾ ಅಂತರವೊಂದು ಸೃಷ್ಟಿಯಾಗಿಹೋಯಿತು. ಅದನ್ನು ಸರಿದೂಗಿಸಲು ಸಾಧ್ಯವೇ? ಖಂಡಿತ ಇಲ್ಲ.

ಈ ಹಿಂದೆ, ಚಾರ್ತುವರ್ಣ ಹುಟ್ಟು ಹಾಕಿದ ಶೋಷಣೆಗಳ, ಕರಿಯರ– ಬಿಳಿಯರ ನಡುವಿನ ದಬ್ಬಾಳಿಕೆಯ ಕಥೆಗಳನ್ನು ಓದಿದ್ದೇವೆ. ಈಗ ಇಲ್ಲಿಸೃಷ್ಟಿಯಾಗುತ್ತಿರುವ ಹೊಸ ವರ್ಗ ಪ್ರಭೇದಗಳ ಬಗ್ಗೆ ನಾವು ಗಂಭೀರವಾಗಿ ಯೋಚಿಸಿಲ್ಲ. ‘ನಗರದ ಮಕ್ಕಳು- ಹಳ್ಳಿ ಮಕ್ಕಳು, ಇಂಗ್ಲಿಷ್‌ ಮಾಧ್ಯಮದ ಮಕ್ಕಳು- ಕನ್ನಡ ಮಾಧ್ಯಮದ ಮಕ್ಕಳು, ಖಾಸಗಿ ಶಾಲೆ ಮಕ್ಕಳು- ಸರ್ಕಾರಿ ಶಾಲೆ ಮಕ್ಕಳು’ (ಸ್ಟೇಟ್‌, ಸಿಬಿಎಸ್ಇ, ಐಸಿಎಸ್ಇ ಎಂಬ ವರ್ಗಗಳೂ ಇವೆ) ಎಷ್ಟೊಂದು ವರ್ಗಗಳು ಸೃಷ್ಟಿಯಾಗಿವೆ. ಎಲ್ಲಾ ಅವಕಾಶಗಳನ್ನು ಮೊದಲ ವರ್ಗವೇ ಬಾಚಿಕೊಂಡರೆ ಎರಡನೇ ವರ್ಗದ ಗತಿಯೇನು? ಇತಿಹಾಸದ ಪಾಠ ಕಣ್ಣ ಮುಂದಿರುವಾಗ ನಾಳೆಗಳ ಬಗ್ಗೆ ಯಾವ ಭರವಸೆ ಇಡಬೇಕು?

ಕೈಗೊಂದು ಕೆಲಸ, ಹೊಟ್ಟೆಗೆ ತುತ್ತು ಅನ್ನ ಬೇಕಾದರೆ ಇಂಗ್ಲಿಷ್ ಬರಬೇಕು. ಅವಕಾಶಗಳು ಹಳ್ಳಿಗಳನ್ನು ಹುಡುಕಿಕೊಂಡು ಬರುವುದಿಲ್ಲ, ನಗರದಲ್ಲಿರುವವರೇ ಅವುಗಳನ್ನು ಬಾಚಿಕೊಳ್ಳುತ್ತಾರೆ. ಸರ್ಕಾರಿ ಶಾಲೆಯು ಖಾಸಗಿ ಶಾಲೆ ಮುಂದೆ ನಿಲ್ಲಲಾರದೆ ಪತರುಗುಟ್ಟುತ್ತದೆ. ಈ ಅಂತರ ನಾಳೆಗೊಂದು ಕದಂಕವೇ ಆಗಿಬಿಡಬಹುದು.

ಶಿಕ್ಷಣ ಮೂಲಭೂತ ಹಕ್ಕಾಗಿ ಬಹಳ ದಿನಗಳೇ ಆದವು. ಆದರೂ ಗುಣಾತ್ಮಕ ಶಿಕ್ಷಣ ಪಡೆಯುವುದು ಬಹುಪಾಲು ಹಳ್ಳಿ ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ವಿಪರ್ಯಾಸವೆಂದರೆ ಯಾವ ಮಗುವೂ ಅದನ್ನು ಕೇಳುತ್ತಿಲ್ಲ. ಅಸಲಿಗೆ ಆ ಮಕ್ಕಳಿಗೆ ಅದು ಗೊತ್ತೇ ಇಲ್ಲ. ಹಕ್ಕಾಗಿರುವಾಗ ಯಾಕೆ ಎಲ್ಲಾ ಮಕ್ಕಳಿಗೂ ಒಂದೇ ತೆರನಾದ ಶಿಕ್ಷಣ ಸಿಗುತ್ತಿಲ್ಲ?

‘ಹಳ್ಳಿ‌ ಮಕ್ಕಳು ಬದುಕಿಗೆ ಹತ್ತಿರ; ನಗರದ ಮಕ್ಕಳು ಅಂಕಗಳಿಗೆ ಹತ್ತಿರ’ ಅಂತ ಭಾಷಣದಲ್ಲಿ ಹೇಳಿ ನಗಿಸಲು ಯತ್ನಿಸುತ್ತಾರೆ. ಹಸಿದು ಮಲಗಿದಾಗ, ಕಷ್ಟದಲ್ಲಿ ಕೈ ತೊಳೆಯುವಾಗ ಭಾಷಣ ಕೇಳಿ ನಗುವುದಾದರೂ ಹೇಗೆ? ನಮಗೂ ಅಂಕ ಬಂದು, ಕೈಗೆ ನಾಲ್ಕು ಕಾಸು ಬಂದು, ಸದಾ ಏಗಿ ಬದುಕಿದ ಈ ಕಷ್ಟದ ಜಂಜಾಟದಿಂದ ಬಿಡುಗಡೆ ಪಡೆಯೋಣ ಅಂತ ಹಂಬಲಿಸುತ್ತಾರೆ.

ಒಬ್ಬ ಹಳ್ಳಿ ಹುಡುಗ ಸಾಧನೆ ಮಾಡಿದರೆ ಅದು ಇಡೀ ಹಳ್ಳಿ ಹುಡುಗರ ಸಾಧನೆ ಎಂಬಂತೆ ಬಿಂಬಿಸ ಲಾಗುತ್ತದೆ. ಸರ್ಕಾರಿ ಶಾಲೆಯ ಒಬ್ಬ ವಿದ್ಯಾರ್ಥಿ ಸಾಧನೆ ಮಾಡಿದರೆ ‘ನೋಡು, ಹೇಗೆ ನಮ್ಮ ಗವರ್ನ ಮೆಂಟ್ ಸ್ಕೂಲ್’ ಅಂತಾರೆ. ಸಾವಿರ ಮಕ್ಕಳಲ್ಲಿ ಒಬ್ಬರು ಗೆಲ್ಲುವುದು ಗೆಲುವಲ್ಲ. ನಗರದ ಮಕ್ಕಳಲ್ಲಿ ಗೆಲುವಿನ ಸಾಲೇ ಇರುತ್ತದೆ. ಅದು ಸುದ್ದಿಯಾಗುವು ದಿಲ್ಲ. ಯಾವತ್ತೂ ಅಷ್ಟೆ, ಅಪರೂಪದ್ದೇ ಹೆಚ್ಚು ಸುದ್ದಿ ಯಾಗುವುದು. ಹಳ್ಳಿ ಮಕ್ಕಳಿಗೆ ಅವರದೇ ಆದ ಸಮಸ್ಯೆಗಳಿವೆ. ಪೋಷಕರ ತಿಳಿವಳಿಕೆ, ವಾತಾವರಣ, ಸೌಕರ್ಯ, ಕಷ್ಟದ ಬದುಕು ಹೀಗೆ ನೂರೆಂಟು. ಅವುಗಳೊಂದಿಗೆ ಬಡಿದಾಡುತ್ತಾ ಮಗು ಪುಸ್ತಕ ಹಿಡಿಯಬೇಕು.

ಒಮ್ಮೆ ವೇದಿಕೆಯ ಮೇಲೆ ವಿದ್ಯಾರ್ಥಿನಿಯೊಬ್ಬಳು ಆಡಿದ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಮಾರ್ದನಿಸುತ್ತಿವೆ. ‘ಶಾಲೆಯಿಂದ ಮೂರು ಕಿ.ಮೀ. ನಡೆದು ಮನೆಗೆ ಹೋಗಬೇಕು. ಸುಸ್ತು, ಮನೆ ಗೆಲಸ, ಬಿಡುವಾದರೆ ಓದು. ಓದುವ ಆಸೆ ತುಂಬಾ ಇದೆ. ಸಂಗೀತ ನನ್ನ ಕನಸು. ಈ ಹಳ್ಳಿಯಲ್ಲಿ ಯಾವ ಸಂಗೀತ? ನಗರದ ಮಕ್ಕಳಂತೆ ಚೆಂದದ ಸಮವಸ್ತ್ರ, ಬೂಟು, ಟೈ ಹಾಕಿಕೊಂಡು ಇಂಗ್ಲಿಷ್ ಮಾತಾಡುತ್ತಾ ಶಾಲೆಗೆ ಹೋಗ್ಬೇಕು ಅನ್ಸುತ್ತೆ. ಇದು ನನ್ನಂತಹ ಎಷ್ಟೋ ಮಕ್ಕಳ ಆಸೆ ಕೂಡ. ಹಳ್ಳಿ ಮಕ್ಕಳಿಗೆ ಇದೆಲ್ಲಾ ಕನಸು. ಆ ಮಕ್ಕಳು ಹಳದಿ ಬಸ್ಸು ಹತ್ತಿ ಹೋಗುವಂತೆ ನಮ್ಮನ್ನು ಈ ಕಷ್ಟದಿಂದ ಹೊಸ ಜಗತ್ತಿಗೆ ಕರೆದೊಯ್ಯುವ ಒಂದು ಬಸ್ಸಿಗಾಗಿ ಕಾಯುತ್ತಿದ್ದೇವೆ. ನಾವು ಹಳ್ಳಿಯಲ್ಲಿ ಹುಟ್ಟಿದ್ದೇ ಶಾಪ ಅನ್ಸುತ್ತೆ. ಈ ಶಾಪದಿಂದ ತಪ್ಪಿಸಿ
ಕೊಳ್ಳಲು ಜೀವನಪೂರ್ತಿ ಹೋರಾಡಬೇಕು. ಹೋರಾಟವೇ ಬದುಕಾಗುತ್ತೆ. ನಾವು ಶಾಪಗ್ರಸ್ತ ಮಕ್ಕಳು...’ ಅಂದಳು.‌ ಆ ಹುಡುಗಿಯ ನೋವು ಈ ವ್ಯವಸ್ಥೆಗೆ ಅರ್ಥವಾಗುವುದು ಯಾವಾಗ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT