ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಗ್ ಹೊರೆ ತಗ್ಗಿಸುವ ಮಾರ್ಗೋಪಾಯ

ಶಾಲಾ ಮಕ್ಕಳ ಬ್ಯಾಗ್ ಹೊರೆ ತಗ್ಗಿಸಿ, ಮೊದಲಿನಷ್ಟೇ ಗುಣಮಟ್ಟದ ಬೋಧನೆ ಸಾಧ್ಯವಾಗುವಂತೆ ಯೋಜನೆಗಳು ರೂಪುಗೊಳ್ಳಬೇಕು
Last Updated 17 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ಶಾಲಾ ಮಕ್ಕಳ ಭಾರದ ಬ್ಯಾಗಿನ ಸಮಸ್ಯೆ ಇಂದು ನಿನ್ನೆಯದಲ್ಲ. ಅನೇಕ ವರ್ಷಗಳಿಂದಲೂ ಈ ಬಗ್ಗೆ ಕಳಕಳಿ ವ್ಯಕ್ತವಾಗುತ್ತಲೇ ಇದೆ. ಈ ವಿಷಯದ ಬಗ್ಗೆ ಬಹಳಷ್ಟು ಚರ್ಚೆಗಳಾಗಿವೆ. ವರದಿಗಳು ಸರ್ಕಾರವನ್ನು ತಲುಪಿವೆ. ಆದರೆ ಮಗುವಿನ ಶಾಲಾ ಬ್ಯಾಗಿನ ಭಾರ ಮಾತ್ರ ಕಡಿಮೆಯಾಗಿಲ್ಲ. ‘ಇನ್ನು ಪ್ರತೀ ಶನಿವಾರ ಮಕ್ಕಳಿಗೆ ಬ್ಯಾಗ್‌ರಹಿತ ದಿನವಾಗಲಿದೆ’ ಎಂದು ರಾಜ್ಯದ ಶಿಕ್ಷಣ ಸಚಿವರು ಇತ್ತೀಚೆಗೆ ನೀಡಿದ ಹೇಳಿಕೆಯು ಬ್ಯಾಗ್‌ ಹೊರೆ ವಿಷಯದ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

ಮಕ್ಕಳ ಬ್ಯಾಗ್ ಹೊರೆ ಕಡಿಮೆ ಮಾಡಲು ಶಾಲೆಯಲ್ಲಿ ಕಡಿಮೆ ವಿಷಯಗಳನ್ನು ಬೋಧಿಸ ಬೇಕಾಗುತ್ತದೆ ಎಂದು ತರ್ಕಿಸುವುದು ಸರಿಯಲ್ಲ. ಬ್ಯಾಗ್ ಹೊರೆ ತಗ್ಗಿಸಿ ಅಷ್ಟೇ ಗುಣಮಟ್ಟದ, ಅಷ್ಟೇ ಪ್ರಮಾಣದ ಬೋಧನೆಯು ಸಾಧ್ಯವಾಗಬೇಕು. ಈ ವಿಚಾರವನ್ನು ಇಟ್ಟುಕೊಂಡೇ ಬ್ಯಾಗ್ ಭಾರ ತಗ್ಗಿಸುವ ಯೋಜನೆಗಳು ರೂಪುಗೊಳ್ಳಬೇಕು.

ಮಕ್ಕಳ ಬ್ಯಾಗ್ ಭಾರಕ್ಕೆ ನಮ್ಮ ಶಿಕ್ಷಣ ಕ್ರಮವನ್ನು ಮತ್ತು ಶಿಕ್ಷಣ ಇಲಾಖೆಯನ್ನು ಪೂರ್ಣ ಹೊಣೆ ಮಾಡಿ ಮಾತನಾಡಲಾಗುತ್ತಿದೆ. ಯಾವ ಅಧಿಕಾರಿಗೂ ಮಕ್ಕಳ ಮೇಲೆ ಭಾರ ಹೊರಿಸಲೇಬೇಕೆಂಬ ಹಟವಿರುವುದಿಲ್ಲ. ಕಲಿಸುವ ವಿಷಯಕ್ಕನುಗುಣವಾಗಿ ಮಗು ಪುಸ್ತಕಗಳನ್ನು ಶಾಲೆಗೆ ತರಲೇಬೇಕಾಗುತ್ತದೆ. ಆದರೆ ಅದನ್ನು ವ್ಯವಸ್ಥಿತವಾಗಿ ಹೊಂದಿಸುವಲ್ಲಿ ಇಲಾಖೆ ಸೋತಿರಬಹುದು, ಪ್ರಯತ್ನಗಳಂತೂ ನಿಂತಿಲ್ಲ. ಅರ್ಧ ವರ್ಷಕ್ಕೆ ಒಂದರಂತೆ ದೊಡ್ಡ ಪುಸ್ತಕವನ್ನು ಎರಡು ಭಾಗಗಳಾಗಿ ಮುದ್ರಿಸಿಕೊಡಲಾಗುತ್ತಿದೆ. ಇದು, ಮಗು ದಪ್ಪನೆಯ ಪುಸ್ತಕವನ್ನು ವರ್ಷವಿಡೀ ಹೊರುವ ಅನಿವಾರ್ಯವನ್ನು ತಪ್ಪಿಸುತ್ತದೆ.

ಮಕ್ಕಳಿಗೆ ಅತಿಯಾಗಿ ಹೋಂವರ್ಕ್ ಹೇರು ವುದು ಬೇಡ ಎಂದು ಖಡಕ್ ಸೂಚನೆಯನ್ನು ನೀಡ ಲಾಗುತ್ತಿದೆ. ಒಂದರಿಂದ ಮೂರನೇ ತರಗತಿಯ ಮಕ್ಕಳು ತಮ್ಮ ಅಭ್ಯಾಸ ಪುಸ್ತಕಗಳನ್ನು ಮನೆಗೆ ಕೊಂಡೊಯ್ಯುವ ಬದಲು ಶಾಲೆಯಲ್ಲೇ ಇರಿಸುವಂತೆ ಸೂಚಿಸಲಾಗಿದೆ. ಇವೆಲ್ಲಾ ತುಂಬಾ ಒಳ್ಳೆಯ ಕ್ರಮಗಳೇ. ಆದರೆ, ಇವು ಎಷ್ಟರಮಟ್ಟಿಗೆ ಅನುಷ್ಠಾನಗೊಂಡಿವೆ ಎಂಬುದು ಮುಖ್ಯ. ಬ್ಯಾಗ್‌ ಹಗುರ ಮಾಡುವ ಸರ್ಕಾರದ ಈ ಕಾರ್ಯಕ್ರಮಗಳನ್ನು ಬಹುತೇಕ ಖಾಸಗಿ ಶಾಲೆಗಳು ಅನುಸರಿಸದಿರುವುದು ದುರದೃಷ್ಟಕರ.

ಸರ್ಕಾರಿ ಶಾಲೆಯ ಮಕ್ಕಳು ಬ್ಯಾಗ್ ಭಾರದಿಂದ ಪೂರ್ಣ ಮುಕ್ತರಾಗಿದ್ದಾರೆ ಎಂದೇನಿಲ್ಲ. ಖಾಸಗಿ ಶಾಲೆಯ ಮಕ್ಕಳಿಗೆ ಹೋಲಿಸಿದರೆ ಅವರು ತುಸು ನಿರಾಳ ಅಷ್ಟೆ. ಸರ್ಕಾರ ನಿಗದಿಪಡಿಸಿದ ವಿಷಯಗಳಿಗಿಂತ ಮತ್ತಷ್ಟು ಹೆಚ್ಚಿನದನ್ನು ಕಲಿಸುವ ಪ್ರಯತ್ನಗಳು ಮಗುವಿನ ಬ್ಯಾಗನ್ನು ಭಾರವಾಗಿಸಿರಬಹುದು. ಬ್ಯಾಗಿನಲ್ಲಿ ತುಂಬಿಕೊಂಡಿದ್ದನ್ನೆಲ್ಲ ಮಗು ಕಲಿಯುತ್ತದೆಯೇ? ಅವೆಲ್ಲ ಜೀವನಕ್ಕೆ ಬೇಕಾಗುತ್ತವೆಯೇ ಎನ್ನುವ ಪ್ರಶ್ನೆಗೆ ಯಾರಿಂದಲೂ ಸಮಾಧಾನಕರ ಉತ್ತರ ಸಿಕ್ಕಿಲ್ಲ. ಮಗು ಹೊರುವ ಬ್ಯಾಗು ಎಷ್ಟು ಭಾರವಿದೆ ಎನ್ನುವುದರ ಮೇಲೆ ನಮ್ಮ ಶಿಕ್ಷಣದ ಹೆಚ್ಚುಗಾರಿಕೆಯನ್ನು ಗುರುತಿಸುವಂತೆ ಆಗಿರುವುದು ವಿಷಾದನೀಯ.

ವಾರದಲ್ಲಿ ಒಂದು ದಿನ ಬ್ಯಾಗ್ ತರದೆ ಶಾಲೆಗೆ ಬಂದರೆ, ಆ ದಿನ ಮಾತ್ರ ಮಗುವಿಗೆ ಬ್ಯಾಗಿನಿಂದ ಬಿಡುಗಡೆ ಸಿಗಬಹುದು. ಆದರೆ ಉಳಿದ ದಿನಗಳಲ್ಲಿ ಆ ಮಣಭಾರವನ್ನು ಮಗು ಹೊರಲೇಬೇಕಾಗುತ್ತದೆ. ಶಿಕ್ಷಕರು ಮನಸ್ಸು ಮಾಡಿದರೆ ಶಾಲಾ ಹಂತದಲ್ಲೇ ಮಗುವಿನ ಬ್ಯಾಗ್ ಹೊರೆಯನ್ನು ತಗ್ಗಿಸಬಹುದು. ನಿಯಮಿತ ವೇಳಾಪಟ್ಟಿಯಂತೆ ಮಾತ್ರ ಪುಸ್ತಕ ತರುವುದು, ಒಂದು ವಿಷಯಕ್ಕೆ ಸಂಬಂಧಿಸಿದಂತೆ ವಾರಕ್ಕೆ ಎರಡು ಬಾರಿಯಷ್ಟೇ ಹೋಂವರ್ಕ್ ನೀಡುವುದು, ದಿನಕ್ಕೆ ಕೇವಲ ಎರಡು ವಿಷಯಗಳ ಹೋಂವರ್ಕ್ ಬರುವಂತೆ ಹಂಚಿಕೊಳ್ಳುವುದು, ಆಯಾ ದಿನ ಆ ನೋಟ್‌ಪುಸ್ತಕಗಳನ್ನು ಮಾತ್ರ ತರುವಂತೆ ತಿಳಿಸುವುದು ಸೂಕ್ತ.

ಪೋಷಕರಿಗೆ ಈ ವಿಚಾರ ತಿಳಿಸಿ, ಮಗು ಮನೆ ಯಿಂದ ಹೊರಡುವಾಗ ಅಷ್ಟು ಪುಸ್ತಕಗಳನ್ನು ಮಾತ್ರ ಬ್ಯಾಗಿನಲ್ಲಿ ಇರಿಸಿಕೊಳ್ಳುವಂತೆ ನೋಡಿಕೊಳ್ಳಬೇಕು. ಮಗುವಿಗೆ ಅಭ್ಯಾಸವಾಗಿಸಲು, ಒಂದಷ್ಟು ದಿನ ಶಿಕ್ಷಕರು ಎರಡು-ಮೂರು ದಿನಗಳಿಗೊಮ್ಮೆ ಮಗುವಿನ ಬ್ಯಾಗನ್ನು ಪರಿಶೀಲಿಸಬೇಕು. ನಿಗದಿಪಡಿಸಿದ ಪುಸ್ತಕಗಳಲ್ಲದೆ ಬೇರೆ ಯಾವುದೂ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಮಕ್ಕಳು ಕೈಗೆ ಸಿಕ್ಕಿದ ಗೈಡುಗಳು, ಹಳೆಯ ನೋಟ್ ಪುಸ್ತಕಗಳು, ಕಥೆ ಪುಸ್ತಕ... ಹೀಗೆ ಸಿಕ್ಕಿದ್ದೆಲ್ಲವನ್ನೂ ತುಂಬಿಕೊಂಡಿರುತ್ತವೆ. ಶಿಕ್ಷಕರು ಮತ್ತು ಪೋಷಕರು ಕಾಳಜಿ ವಹಿಸಿ, ಇದನ್ನು ತಪ್ಪಿಸಿದರೆ ಬ್ಯಾಗ್ ಭಾರವನ್ನು ತಕ್ಕಮಟ್ಟಿಗೆ ತಗ್ಗಿಸಬಹುದು.

ತಂತ್ರಜ್ಞಾನ ಇಷ್ಟೆಲ್ಲಾ ಮುಂದುವರಿದಿದ್ದರೂ ಶಾಲಾ ಕೊಠಡಿಯೊಳಗೆ ಸಂಪೂರ್ಣವಾಗಿ ಅದು ಬಳಕೆಯಾಗುತ್ತಿಲ್ಲ. ಸರ್ಕಾರದ ವತಿಯಿಂದ ಮಗುವಿಗೆ ಒಂದೊಂದು ಟ್ಯಾಬ್ಲೆಟ್ ಪಿ.ಸಿ. ಕೊಡಿಸಿ, ಅದರಲ್ಲಿ ಎಲ್ಲಾ ಪಠ್ಯಪುಸ್ತಕಗಳು, ನೋಟ್ಸ್, ಹೋಂವರ್ಕ್ ಬರೆಯಲು ಬರುವಂತಹ ತಂತ್ರಾಂಶ ಅಳವಡಿಸ
ಬಹುದು. ಕೆಲವು ದೇಶಗಳಲ್ಲಿ ಇದಾಗಲೇ ಬಳಕೆಯಲ್ಲಿದೆ. ಮಗು ಶಾಲೆಗೆ ಟ್ಯಾಬ್ಲೆಟ್ ಪಿ.ಸಿ. ಮತ್ತು ತೀರಾ ಅನಿವಾರ್ಯವಾಗಿ ಬೇಕಾದ ಒಂದೆರಡುಪುಸ್ತಕಗಳನ್ನು ಹಿಡಿದು ಬರುವಂತೆ ಆಗಬೇಕು. ಸರ್ಕಾರ ಮನಸ್ಸು ಮಾಡಿದರೆ ಇದೇನೂ ತೀರಾ ಕಷ್ಟದ ಕೆಲಸವಲ್ಲ. ಆರೋಗ್ಯವಂತರಾಗಿ ಬಾಳಬೇಕಾದ ಮಕ್ಕಳ ಬೆನ್ನಿನ ಎಳೆಯ ಮೂಳೆಗಳ ಮೇಲೆ ಅತಿಹೆಚ್ಚು ತೂಕದ ಬ್ಯಾಗ್ ಹೊರಿಸಿ ಬಳಲಿಸುವುದು ಅಮಾನವೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT