ಬುಧವಾರ, ಆಗಸ್ಟ್ 10, 2022
21 °C
ಜೀವವೈವಿಧ್ಯದ ತೊಟ್ಟಿಲಾದ, ಶಕ್ತಿಯ ಭಂಡಾರವಾದ ಪರ್ವತಗಳನ್ನು ಸಂರಕ್ಷಿಸುವ ಹೊಣೆ ಎಲ್ಲ ವಿಶ್ವಪ್ರಜೆಗಳ ಮೇಲೂ ಇದೆ

ಸಂಗತ: ಪರ್ವತಗಳ ಬಳಲಿಕೆ ತಗ್ಗಿಸೋಣ

ಯೋಗಾನಂದ Updated:

ಅಕ್ಷರ ಗಾತ್ರ : | |

Prajavani

ಭೂಮಿಯ ಶೇ 25ರಷ್ಟು ಭಾಗವನ್ನು ಆವರಿಸಿರುವ ಪರ್ವತ ಪ್ರದೇಶಗಳು ನಯನಮನೋಹರ ದೃಶ್ಯಗಳಿಗೆ, ಚಾರಣಕ್ಕೆ ಮಾತ್ರ ಸೀಮಿತವಲ್ಲ. ಅವು ಕೋಟ್ಯಂತರ ಜನರಿಗೆ, ಅಸಂಖ್ಯ ಸಸ್ಯ ಹಾಗೂ ಪ್ರಾಣಿ ಪ್ರಭೇದಗಳಿಗೆ ಆವಾಸ ಕಲ್ಪಿಸಿವೆ. ಜೊತೆಗೆ ಶುದ್ಧ ನೀರು, ಆಹಾರ ಮತ್ತು ನವೀಕರಿಸಬಹುದಾದ ಶಕ್ತಿಯ ಭಂಡಾರಗಳೇ ಆಗಿವೆ.

ಪರ್ವತಗಳು ಭೂಗೋಳದ ಸುತ್ತ ಬೀಸುವ ಮಾರುತವನ್ನು ತಡೆದು ಮೋಡಗಳಾಗಿ ಹೆಪ್ಪುಗಟ್ಟಿಸಿ, ಮಳೆ ಸುರಿಸುತ್ತವೆ. ಜಗತ್ತಿನ ಎಲ್ಲ ನದಿಗಳ ತವರಾದ ಅವುಗಳಿಂದಲೇ ‘ಜಲಚಕ್ರ’ದ ನಿರ್ವಹಣೆ. ಪರ್ವತ ಸಾಲು ‘ಜಲಗೋಪುರ’ಗಳೇ ಹೌದು. ಪರ್ವತಗಳಿರದಿದ್ದರೆ ಇಡೀ ಜಗತ್ತಿನಲ್ಲಿ ಹವಾಮಾನ ಅಯೋಮಯ
ವಾಗುತ್ತಿತ್ತು. ನೀರ್ಗಲ್ಲಿನಿಂದ ನದಿ, ಕಾಡಿನಿಂದ ಆಹಾರ, ವಸತಿ, ಇಂಧನ. ಪರ್ವತಶ್ರೇಣಿಯ ಜನ ಸಮುದಾಯಗಳ ಸಂಸ್ಕೃತಿ, ಭಾಷೆ, ಪರಂಪರೆ, ಜೀವನದ ರೀತಿ ನೀತಿ, ಸಂಪ್ರದಾಯ ಎಲ್ಲವೂ ವಿಶಿಷ್ಟ.

ಪರ್ವತವು ದಿಟ್ಟತನಕ್ಕೆ ಉಪಮೆ. ದುರ್ದೈವವಶಾತ್ ಮನುಷ್ಯನ ಎಗ್ಗಿಲ್ಲದ ನಾಗರಿಕತೆಯ ವ್ಯಾಮೋಹಕ್ಕೆ ಗುರಿಯಾಗಿರುವ ಗಿರಿಧಾಮಗಳು ನಾಶಭೀತಿಯ ತಾಣಗಳಾಗಿವೆ. ಗಿರಿಗಳಂತೆಯೇ ಗಿರಿವಾಸಿಗಳೂ ಒತ್ತಡದಲ್ಲಿ ಬದುಕುವಂತಾಗಿದೆ. ಪರಿಸರದ ಬೆನ್ನುಹುರಿಯಂತಿರುವ ಪರ್ವತ ಶ್ರೇಣಿಯನ್ನು ಸಂರಕ್ಷಿಸದಿದ್ದರೆ ಪರಿಣಾಮ ಘೋರ. ಈ ಪ್ರಾಕೃತಿಕ ಸಂಪನ್ಮೂಲಗಳು ಇರದಿದ್ದರೆ ಭಾರತದ ನೆಲಹರವಿನ ಬಹುಪಾಲು ಶೈತ್ಯ ಮತ್ತು ಶುಷ್ಕ ಪರಿಸ್ಥಿತಿ ಎದುರಿಸಬೇಕಾಗುತ್ತಿತ್ತು.

ಜಾಗತಿಕ ತಾಪಮಾನದ ದುಷ್ಪರಿಣಾಮ ಗೊತ್ತೇ? ಕಳೆದ ಕೆಲವು ದಶಕಗಳಿಂದ ಕೋಟ್ಯಂತರ ಮಂದಿಗೆ ಜಲಸಂಪನ್ಮೂಲಗಳಾಗಿದ್ದ ಕನಿಷ್ಠ 600 ನೀರ್ಗಲ್ಲುಗಳು ಕಾಣೆಯಾಗಿವೆ! ಸ್ವಾರಸ್ಯವೆಂದರೆ, ಒಂದೆಡೆ ಪರ್ವತಗಳು ಸಿರಿವಂತ ಪ್ರವಾಸಿಗರನ್ನು ಸೆಳೆದರೆ, ಇನ್ನೊಂದೆಡೆ, ಅತೀ ಬಡವರ ದಾರುಣ ಹಸಿವು ನೀಗಿಸುವ ನೆಲೆಗಳಾಗಿವೆ. ‘ದೇಶ ಅಳಿದರೂ ಅಲ್ಲಿನ ಪರ್ವತ, ನದಿಗಳು ಜೀವಂತ’ ಎನ್ನುವುದು ಜರ್ಮನ್ ಗಾದೆ. ಶೇಕಡ 30ರಷ್ಟು ಮುಖ್ಯ ಬೆಳೆಗಳ ಮೂಲವೆಂದರೆ ಪರ್ವತಗಳೇ.

ವಿಶ್ವಸಂಸ್ಥೆಯು 2001ರ ಡಿ. 11ರಂದು ನ್ಯೂಯಾರ್ಕಿನಲ್ಲಿ ಸೇರಿದ್ದ ಸಮಾವೇಶದಲ್ಲಿ ‘ಪರ್ವತ ಮತ್ತು ಪರಿಸರ’ ಕುರಿತು ಸುದೀರ್ಘ ಚರ್ಚೆ ನಡೆಸಿತು. ಪ್ರತಿವರ್ಷ ಡಿ. 11ರಂದು ‘ಅಂತರರಾಷ್ಟ್ರೀಯ ಪರ್ವತಗಳ ದಿನ’ ಆಚರಿಸುವ ನಿರ್ಣಯ ಕೈಗೊಂಡಿತು. ಭೂಮಿಯ ಜೀವವೈವಿಧ್ಯವನ್ನು ಪರ್ವತಗಳು ಹೇಗೆ ಜೋಪಾನ ಮಾಡಿವೆ, ಮನುಷ್ಯ ಅವನ್ನು ಹೇಗೆ ಸಂರಕ್ಷಿಸಬೇಕು ಎಂಬ ಬಗ್ಗೆ ಜನಜಾಗೃತಿ ಮೂಡಿಸುವುದು ಇದರ ಉದ್ದೇಶ.

ತನ್ನ ಆಸುಪಾಸಿಗಿಂತಲೂ 300 ಮೀಟರ್‌ ಎತ್ತರವಿರುವ ಪ್ರದೇಶ ಎನ್ನುವುದು ಪರ್ವತದ ವ್ಯಾಖ್ಯೆ. ಎಲ್ಲ ವಿಶ್ವಪ್ರಜೆಗಳಿಗೂ ಜೀವವೈವಿಧ್ಯದ ತೊಟ್ಟಿಲಾದ ಪರ್ವತವನ್ನು ಸಂರಕ್ಷಿಸುವ ಹೊಣೆಯಿದೆ. ಈ ದಿಸೆಯಲ್ಲಿ ಸರಳ ಹೆಜ್ಜೆಗಳನ್ನು ಇರಿಸಿದರಾಯಿತು, ಪರೋಕ್ಷವಾಗಿ ಪರ್ವತಗಳ ಬಳಲಿಕೆ ತಗ್ಗುತ್ತದೆ. ಮರುಬಳಸಬಹುದಾದ ನೀರಿನ ಬಾಟಲು, ಕೈಚೀಲ ಜೊತೆಗಿರಲಿ. ನೈಸರ್ಗಿಕ ಶುಚಿಕಾರಕಗಳನ್ನೇ ಉಪಯೋಗಿಸಿ. ಒಂದು ಕುಟುಂಬಕ್ಕೆ ಒಂದೇ ಕಾರು ಸಾಕು. ಜಲಾನಯನ ಪ್ರದೇಶಗಳ ಅವನತಿ ಅತಿಯಾಗಿ ಅಂತರ್ಜಲ ಅವಲಂಬನೆಗೆ ಕಾರಣವಾಗುತ್ತದೆ. ವಿಶೇಷವಾಗಿ ನಗರಗಳಲ್ಲಿ ಭೂಮಿಯ ಆಳಕ್ಕೆ ಹೋದಂತೆ ದೊರಕುವುದು ಖನಿಜ, ಲವಣಗಳಿಂದ ಕಲುಷಿತವಾದ ನೀರೇ.

ಕರ್ನಾಟಕ ಸೇರಿದಂತೆ ಭಾರತದ ಆರು ರಾಜ್ಯಗಳ 1,600 ಕಿ.ಮೀ. ತೀರದ ಉದ್ದಕ್ಕೂ ಪಶ್ಚಿಮ ಘಟ್ಟಗಳ ಶ್ರೇಣಿ ಚಾಚಿದೆ. ಹಿಮಾಲಯಕ್ಕೂ ಪ್ರಾಚೀನವಾದ ಈ ಸಾಲನ್ನು ವಿಶ್ವ ಪರಂಪರೆಯ ತಾಣವಾಗಿ ಯುನೆಸ್ಕೊ ಮಾನ್ಯ ಮಾಡಿದೆ. ಭಾರತದ 25 ಕೋಟಿ ಮಂದಿ ಪಶ್ಚಿಮ ಘಟ್ಟಗಳಿಂದ ಬದುಕು ಕಟ್ಟಿಕೊಂಡಿದ್ದಾರೆ. ಇದಕ್ಕೆ ಹೊಂದಿಕೊಂಡ 1.6 ಲಕ್ಷ ಚದರ ಕಿ.ಮೀ. ವಿಸ್ತಾರದ ಅರಣ್ಯಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಇಂಗಾಲವನ್ನು ತಟಸ್ಥಗೊಳಿಸುತ್ತವೆ. ಇದು ಭಾರತದಾದ್ಯಂತ ಅರಣ್ಯಗಳು ತಟಸ್ಥಗೊಳಿಸುವ ಒಟ್ಟು ಇಂಗಾಲದ ಶೇಕಡ 10ರಷ್ಟು. ಆದರೆ ಮರಳು, ಕಬ್ಬಿಣ ಮತ್ತು ಮ್ಯಾಂಗನೀಸ್ ಗಣಿಗಾರಿಕೆಯಿಂದ ಘಟ್ಟಗಳ ಈ ಸಾಮರ್ಥ್ಯ ಕ್ಷೀಣಿಸುತ್ತಿದೆ. ಮೀನುಗಾರಿಕೆಗೆ ವಿಷ, ವಿದ್ಯುತ್ ಬಳಕೆ ಹಾಗೂ ಏಕಬೆಳೆಗೇ ಜೋತುಬಿದ್ದ ನೆಡುತೋಪು, ಕೃಷಿ ಸವಾಲನ್ನು ಉಲ್ಬಣಿಸಿವೆ.

ಕೈಗಾರಿಕೋದ್ಯಮಗಳು ಉತ್ಪನ್ನಗಳನ್ನು ಹೊರತರಲು ಬಳಸುವ ಸಂಪನ್ಮೂಲಗಳು ಕಡಿಮೆ ಎಂದುಕೊಂಡಿರಾ? ಒಂದು ಸಾಧಾರಣ ಗಾತ್ರದ ಕಾರಿನ ತಯಾರಿಕೆಗೆ 1.50 ಲಕ್ಷ ಲೀಟರ್‌ ನೀರು ಬೇಕು! ಇದೊಂದು ನಿದರ್ಶನವಷ್ಟೆ. 1990ರ ದಶಕ. ಮನೆಯ ಕಿಟಕಿ, ಬಾಗಿಲುಗಳಿಗೆ ಸಿಮೆಂಟಿನ ಫ್ರೇಮ್ ಅಳವಡಿಸಿದರೆ ಮರ ಉಳಿಸಬಹುದೆಂಬ ಚಿಂತನೆ ಅದು ಹೇಗೋ ಎಲ್ಲೆಡೆ ಹರಡಿತು. ಫ್ರೇಮ್‍ಗಳ ಉತ್ಪಾದನೆಯಾದ ನಂತರವೇ ಅರಿವಾದದ್ದು, ಹದಕ್ಕೆ ಸುಡಲು ಕಟ್ಟಿಗೆ ಧಾರಾಳವಾಗಿಯೇ ವ್ಯಯವೆಂದು! ಎಲ್ಲರಿಗೂ ಶುದ್ಧ ನೀರು, ಆಹಾರವಿಲ್ಲದೆ ಅಪೌಷ್ಟಿಕತೆ, ರೋಗರುಜಿನಗಳಿಂದ ಮುಕ್ತಿ ತಾನೆ ಹೇಗೆ? ಸುಸ್ಥಿರ ಆರ್ಥಿಕ ವ್ಯವಸ್ಥೆ ಎಂತು?

ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ನಡುವಿನ ಅನುಸಂಧಾನ ಯಶಸ್ವಿಯಾಗಲು ಪ್ರತಿಯೊಬ್ಬ ವಿಶ್ವಪ್ರಜೆಯೂ ಕಾಳಜಿ ವಹಿಸಬೇಕು. ಸರಳತೆಯೇ ವೈಭವ, ಮಿತವ್ಯಯವೇ ಮಂತ್ರ, ಸಮಪಾಲು ಮುಖೇನ ಸಮಬಾಳು ಎಂಬ ಮೌಲ್ಯಗಳಿಂದ ಜೀವನ ಶೈಲಿಯನ್ನು ಪರಿಷ್ಕರಿಸಿಕೊಳ್ಳಬೇಕಿದೆ. ಪರ್ವತವನ್ನು ಪೋಷಿಸಿದರೆ ನಮ್ಮನ್ನು ನಾವೇ ಪೋಷಿಸಿಕೊಂಡಂತೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.