ಸೋಮವಾರ, ಅಕ್ಟೋಬರ್ 26, 2020
26 °C
ರಂಗನತಿಟ್ಟಿಗೆ ಸಮೀಪ ನಿರ್ಮಿಸಲು ಹೊರಟಿರುವ ರಸ್ತೆಯಿಂದಾಗಿ ಕಾವೇರಿ ಕೊಳ್ಳದ ಆ ಭಾಗದ ಜೈವಿಕ ಸರಪಳಿ ತುಂಡಾಗದಂತೆ ತಡೆಯಬೇಕಾಗಿದೆ

‘ಕರ್ನಾಟಕದ ಪಕ್ಷಿಕಾಶಿ’ ರಕ್ಷಿಸಿ

ಗುರುರಾಜ್ ಎಸ್. ದಾವಣಗೆರೆ Updated:

ಅಕ್ಷರ ಗಾತ್ರ : | |

ಕಾವೇರಿ ನದಿ ಉಕ್ಕೇರಿ, ರಂಗನತಿಟ್ಟು ಪಕ್ಷಿಧಾಮಕ್ಕೆ ಅಪಾಯವೊದಗಿದೆ ಎಂದುಕೊಂಡಿರಾ? ಅಲ್ಲ, ಈಗ ರಂಗನತಿಟ್ಟನ್ನು ರಕ್ಷಿಸಬೇಕಾಗಿರುವುದು ರಸ್ತೆಯೊಂದರಿಂದ. ನೀರ ಹಕ್ಕಿಗಳ ಪಾಲಿನ ಸ್ವರ್ಗವೇ ಆಗಿರುವ ಮಂಡ್ಯ ಜಿಲ್ಲೆಯ ರಂಗನತಿಟ್ಟು ಪಕ್ಷಿಧಾಮದ ಬಳಿಯೇ, ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ನಿರ್ಮಿಸಲು ಉದ್ದೇಶಿಸಿರುವ ಪರ್ಯಾಯ ರಸ್ತೆಯಿಂದಾಗಿ ಧಾಮದ ಅಸ್ತಿತ್ವಕ್ಕೆ ಧಕ್ಕೆ ಒದಗುವ ಭೀತಿ ಎದುರಾಗಿದೆ. ಮಡಿಕೇರಿ ಹೆದ್ದಾರಿಗೆ ನೇರ ಸಂಪರ್ಕ ಕಲ್ಪಿಸುವ ಈ ರಸ್ತೆಯ ನಿರ್ಮಾಣಕ್ಕೆ ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅನುಮೋದನೆ ಪಡೆದುಕೊಂಡಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ತನ್ನ ಕೆಲಸ ಪ್ರಾರಂಭಿಸಿ, ರಸ್ತೆ ಮಾರ್ಗಕ್ಕೆ ಬೇಕಾದ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದೆ. ‘ಕರ್ನಾಟಕದ ಪಕ್ಷಿಕಾಶಿ’ಗೆ ಒದಗಿರುವ ಈ ಅಪಾಯ, ವನ್ಯಜೀವಿ ತಜ್ಞರು ಹಾಗೂ ಪರಿಸರ ಪ್ರೇಮಿಗಳನ್ನು ಕೆರಳಿಸಿದೆ.

ಉದ್ದೇಶಿತ ರಸ್ತೆಯು ಪಕ್ಷಿಧಾಮಕ್ಕೆ ತೀರಾ ಸಮೀಪ ಹಾದು ಹೋಗುವುದರಿಂದ, ಅನಾದಿ ಕಾಲದಿಂದಲೂ ವಾಸಿಸುತ್ತಿರುವ ಮತ್ತು ಕಾಲಾನುಗುಣಕ್ಕೆ ತಕ್ಕಂತೆ ವಲಸೆ ಬರುವ ಹಕ್ಕಿಗಳ ನೆಲೆ ತಪ್ಪಿದಂತಾಗುವುದಿಲ್ಲವೇ? ಸುಮಾರು ಇನ್ನೂರಕ್ಕೂ ಹೆಚ್ಚು ವಿವಿಧ ಬಗೆಯ ಪಕ್ಷಿಗಳಿಗೆ ನೆಲೆ ಕಲ್ಪಿಸಿ ಜೈವಿಕ ಸರಪಳಿಯ ಸುಸ್ಥಿತಿಗೆ ಕಾರಣವಾಗಿರುವ ರಂಗನತಿಟ್ಟು, ಪಕ್ಷಿ ಪ್ರೇಮಿಗಳ, ವೀಕ್ಷಕರ, ಸಂಶೋಧಕರ ಪಾಲಿನ ಸ್ವರ್ಗವೇ ಹೌದು. ಕಾವೇರಿ ನದಿಯ ಪ್ರಶಾಂತ ವಾತಾವರಣದಲ್ಲಿ ನೆಲೆನಿಂತಿರುವ ಹಲವು ದ್ವೀಪಗಳು ನಾಶವಾದರೆ ಹಕ್ಕಿಗಳು ಎಲ್ಲಿ ಹೋಗಬೇಕು?

ಪಕ್ಷಿಧಾಮದ ಪ್ರದೇಶದ ಸರಹದ್ದಿನಲ್ಲಿ ಭತ್ತ ಬೆಳೆಯುವ ಫಲವತ್ತಾದ ಅನೇಕ ಗದ್ದೆಗಳಿವೆ. ಗದ್ದೆಯ ನೀರಿನಲ್ಲಿ ಸಿಗುವ ಹುಳುಗಳನ್ನೇ ಅನೇಕ ಪಕ್ಷಿಗಳು ಆಹಾರವನ್ನಾಗಿಸಿಕೊಂಡಿರುತ್ತವೆ. ಹೊಸ ರಸ್ತೆಯಿಂದಾಗಿ ಗದ್ದೆಗಳೆಲ್ಲಾ ಮಾಯವಾಗುತ್ತವೆ. ಭತ್ತದ ಕಾಳುಗಳನ್ನೇ ಆಶ್ರಯಿಸಿರುವ ಹಲವು ವಲಸೆ ಹಕ್ಕಿಗಳ ಆಹಾರದ ಮೂಲ ನಾಶವಾಗುತ್ತದೆ. ದಿನದ ಇಪ್ಪತ್ನಾಲ್ಕು ಗಂಟೆಯೂ ವಾಹನ ಸಂಚಾರ ಇರುವುದರಿಂದ ಅಪಾರ ಶಬ್ದ ಹಾಗೂ ವಾಯುಮಾಲಿನ್ಯ ಉಂಟಾಗುತ್ತದೆ. ಹೀಗಾಗಿ, ಈಗ ಬಳಕೆಯಲ್ಲಿರುವ ರಸ್ತೆಯನ್ನೇ ಅಗಲ ಮಾಡಬಹುದು ಅಥವಾ ಅಲ್ಲಲ್ಲಿ ಮೇಲು ಸೇತುವೆ ಕಟ್ಟಿ ಸಂಚಾರ ದಟ್ಟಣೆ ಕಡಿಮೆ ಮಾಡಲಿ ಎಂಬುದು ಪರಿಸರ ಸಂಘಟನೆಗಳ ಆಗ್ರಹ.

ಪಕ್ಷಿಧಾಮವು ಮೈಸೂರಿನಿಂದ 16 ಕಿ.ಮೀ. ದೂರವಿದ್ದು, ಐತಿಹಾಸಿಕ ಶ್ರೀರಂಗಪಟ್ಟಣದಿಂದ 3 ಕಿ.ಮೀ. ದೂರದಲ್ಲಿದೆ. ಪ್ರತೀ ವರ್ಷ ಮೂರೂವರೆ ಲಕ್ಷ ಪ್ರವಾಸಿಗರನ್ನು ಆಕರ್ಷಿಸುವ ಖಗಧಾಮ, ಸುಮಾರು 61 ಜಾತಿಯ 220 ಬಗೆಯ ವಿವಿಧ ಪ್ರಭೇದದ ಪಕ್ಷಿಗಳ ಆವಾಸಸ್ಥಾನವಾಗಿದೆ. ಚಳಿಗಾಲದಲ್ಲಿ ಸುಮಾರು ನಲವತ್ತು ಸಾವಿರ ಪಕ್ಷಿಗಳಿಗೆ ನೆಲೆ ನೀಡುವ ಈ ಧಾಮ ಪ್ರಾರಂಭವಾದದ್ದು 1940ರಲ್ಲಿ. ಕಾವೇರಿ ನದಿ ಪಾತ್ರದ ಆರು ನಡುಗಡ್ಡೆಗಳ ಮರ-ಪೊದೆಗಳಲ್ಲಿ ಪಕ್ಷಿಗಳು ನೆಲೆಸುವುದನ್ನು ಕಂಡ ಪಕ್ಷಿತಜ್ಞ ಸಲೀಂ ಅಲಿ ಅವರು, ಅಂದಿನ ಮೈಸೂರು ಮಹಾರಾಜ ಕಂಠೀರವ ನರಸಿಂಹರಾಜ ಒಡೆಯರ್‌ ಅವರನ್ನು ಒತ್ತಾಯಿಸಿ ಪಕ್ಷಿಧಾಮ ಪ್ರಾರಂಭಿಸುವಲ್ಲಿ ಯಶಸ್ವಿಯಾದರು.

ಸೈಬೀರಿಯ, ಲ್ಯಾಟಿನ್ ಅಮೆರಿಕ ಮತ್ತು ಉತ್ತರ ಭಾರತದಿಂದ ವಲಸೆ ಬರುವ ಪಕ್ಷಿಗಳು ಮೊಟ್ಟೆ ಇಟ್ಟು, ಸಂತಾನ ಬೆಳೆಸಿಕೊಂಡು ಸ್ವಸ್ಥಾನಗಳಿಗೆ ಹಿಂತಿರುಗುತ್ತವೆ. ನಲವತ್ತು ಎಕರೆ ವಿಸ್ತಾರ ಹೊಂದಿರುವ ಧಾಮದಲ್ಲಿ ಎಂಟು ಸಾವಿರ ಗೂಡುಗಳಿದ್ದ ದಾಖಲೆಯೂ ಇದೆ. ಮಳೆಗಾಲದಲ್ಲಿ ಪ್ರತಿವರ್ಷ ಪ್ರವಾಹಕ್ಕೆ ಸಿಲುಕಿ ಅನೇಕ ಮರಿ ಹಕ್ಕಿಗಳು ಮತ್ತು ಮೊಟ್ಟೆಗಳು ನಾಶವಾದದ್ದೂ ಇದೆ. ಅಷ್ಟೊಂದು ಹಕ್ಕಿಗಳಿಗೆ ಸ್ಥಳ ಸಾಲದು ಎಂದರಿತ ಅರಣ್ಯ ಇಲಾಖೆ, ಖಾಸಗಿಯವರಿಂದ ಭೂಮಿ ಖರೀದಿಸುವ ಪ್ರಯತ್ನವನ್ನೂ ಮಾಡಿತ್ತು. ಅಲ್ಲದೆ 2014ರಲ್ಲಿ ಧಾಮದ ಸುತ್ತಲಿನ 28 ಚದರ ಕಿ.ಮೀ. ವ್ಯಾಪ್ತಿಯನ್ನು ‘ಪರಿಸರ ಸೂಕ್ಷ್ಮ ವಲಯ’ ಎಂದು ಗುರುತಿಸಲಾಗಿದೆ. ಅತೀ ಮಳೆಯಿಂದಾಗುವ ಪ್ರವಾಹ ಮತ್ತು ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾದಾಗ ಹೊರಬಿಡುವ ನೀರಿನಿಂದ ಸಾಕಷ್ಟು ಹಾನಿ ಅನುಭವಿಸುವ ಪಕ್ಷಿಗಳಿಗೀಗ ರಸ್ತೆಯಿಂದಾಗಿ ಇನ್ನಷ್ಟು ಅಪಾಯ ಒದಗಲಿದೆ. ಅರ್ಜುನ ಮರ, ಬಿದಿರು ಹಾಗೂ ದೊಡ್ಡ ಎಲೆಗಳ ಮರಗಳಿಗೆ ನಡುಗಡ್ಡೆಗಳು ಆಶ್ರಯ ಕಲ್ಪಿಸಿವೆ. ಅಲ್ಲದೆ ಕಾವೇರಿ ನದಿಯ ಸಿಹಿನೀರಿನ ಮೊಸಳೆಗಳು, ಮುಂಗುಸಿ, ಮಂಗ, ಪುನುಗು ಬೆಕ್ಕುಗಳು ಸಹ ಪಕ್ಷಿಗಳೊಂದಿಗೆ ಸಹಬಾಳ್ವೆ ನಡೆಸುತ್ತಿವೆ.

ಐದು ವರ್ಷಗಳ ಹಿಂದೆ ಪಕ್ಷಿಧಾಮದ ವಿಸ್ತರಣೆಗಾಗಿ ಜಮೀನು ವಶಪಡಿಸಿಕೊಂಡು, ಪರಿಸರ ಸೂಕ್ಷ್ಮ ವಲಯವನ್ನು ಗುರುತಿಸಿ ಪಕ್ಷಿ ರಕ್ಷಣೆಗೆ ಮುಂದಾಗಿದ್ದ ಸರ್ಕಾರ, ಈಗ ತನ್ನದೇ ಉತ್ತಮ ಕೆಲಸವನ್ನು ಹಾಳುಮಾಡಲು ಹೊರಟಿದೆ. ಕಾವೇರಿ ಕೊಳ್ಳದ ಆ ಭಾಗದ ಜೈವಿಕ ಸರಪಳಿ ತುಂಡಾಗದಂತೆ ತಡೆಯುವುದು ಎಲ್ಲರ ಕರ್ತವ್ಯ. ಪರಿಸರಕ್ಕೆ ಧಕ್ಕೆಯಾದರೆ ಪರಿಸರವಾದಿಗಳು ಮಾತ್ರ ಹೋರಾಡಬೇಕೆಂದಿಲ್ಲ. ಸಂವಿಧಾನವು ನಾಗರಿಕರಿಗೆ ಕೊಡಮಾಡಿರುವ ಮೂಲಭೂತ ಜವಾಬ್ದಾರಿ ಗಳಲ್ಲಿ ನಿಸರ್ಗ ಸಂರಕ್ಷಣೆಯೂ ಒಂದು. ಪರಿಸ್ಥಿತಿಯ ತೀವ್ರತೆಯನ್ನು ಅರಿತು ಸರ್ಕಾರ ತನ್ನ ನಿರ್ಧಾರ ಬದಲಿಸಲೇಬೇಕು, ರಸ್ತೆ ನಿರ್ಮಾಣದಿಂದ ಹಿಂದೆ ಸರಿದು ‘ಪಕ್ಷಿಕಾಶಿ’ಯನ್ನು ರಕ್ಷಿಸಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.