ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ದಾಖಲಾತಿ ಹೆಚ್ಚಳ: ಸಂಭ್ರಮವಲ್ಲ

ಹಣವಿಲ್ಲವೆಂಬ ಕಾರಣಕ್ಕೆ ಓದು ನಿಲ್ಲಿಸುತ್ತಿರುವ ವಿದ್ಯಾರ್ಥಿಗಳಿಗೆ ನೆರವಾಗುವಂತಹ ಯೋಜನೆಗಳನ್ನು ರೂಪಿಸಬೇಕಾಗಿದೆ
Last Updated 29 ಸೆಪ್ಟೆಂಬರ್ 2020, 3:11 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳ ಅಭಾವದಿಂದ ಮುಚ್ಚಲಾಗಿದ್ದ ಕೆಲ ಸರ್ಕಾರಿ ಶಾಲೆಗಳು ಪುನರಾರಂಭಗೊಳ್ಳುತ್ತಿವೆ. ಕೆಲವೆಡೆ ಗ್ರಾಮಸ್ಥರೇ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿ, ಮುಚ್ಚಿದ್ದ ತಮ್ಮೂರಿನ ಶಾಲೆಯನ್ನು ತೆರೆಸುತ್ತಿದ್ದಾರೆ. ಸರ್ಕಾರಿ ಶಾಲೆಗಳಿಗೆ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ದಾಖಲಾಗುತ್ತಿದ್ದಾರೆ ಎಂದು ಸರ್ಕಾರದ ಅಂಕಿ ಅಂಶಗಳೂ ಹೇಳುತ್ತಿವೆ.

ಸರ್ಕಾರಿ ಶಾಲೆಗಳಲ್ಲಿನ ಕಲಿಕಾ ಗುಣಮಟ್ಟದ ಸುಧಾರಣೆಯಿಂದ ಈ ರೀತಿಯ ಬೆಳವಣಿಗೆ ಉಂಟಾಗಿದ್ದರೆ, ಇದು ಎಲ್ಲರೂ ಸಂಭ್ರಮ ಪಡುವಂತಹ ಸಂಗತಿಯೇ ಸರಿ. ಆದರೆ, ಪ್ರವೇಶಾತಿ ಹೆಚ್ಚಳಕ್ಕೆ ಜನ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿರುವುದೂ ಕಾರಣವೆನ್ನುವ ಅಂಶ ಸರ್ಕಾರದ ಪಾಲಿಗೆ ಖಂಡಿತ ಸಂಭ್ರಮ ಪಡುವ ಬೆಳವಣಿಗೆಯಲ್ಲ. ಹಣವಿಲ್ಲವೆಂಬ ಕಾರಣಕ್ಕೆ ತಮ್ಮ ಮಕ್ಕಳನ್ನು ತಾವು ಬಯಸಿದ ಶಾಲೆಗೆ ಸೇರಿಸಲು ಸಾಧ್ಯವಾಗದೆ, ಕೊನೆಗೆ ಬೇರೆ ದಾರಿ ಕಾಣದೆ ಪೋಷಕರು ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದರೆ, ಸರ್ಕಾರ ತಲೆ ತಗ್ಗಿಸಬೇಕೇ ವಿನಾ ಬೀಗುವುದು ಹೊಣೆಗೇಡಿತನವಾಗುತ್ತದೆ.

ಒಂದು ವೇಳೆ ಸರ್ಕಾರಿ ಶಾಲೆಗಳಲ್ಲಿನ ಕಲಿಕಾ ಗುಣಮಟ್ಟದ ಸುಧಾರಣೆಯಿಂದಾಗಿ ಪ್ರವೇಶಾತಿ ಹೆಚ್ಚಳವಾಗುತ್ತಿದೆ ಎಂದು ಸರ್ಕಾರ ಸಮರ್ಥಿಸಿಕೊಳ್ಳುವುದೇ ಆದಲ್ಲಿ, ಇತ್ತೀಚಿನ ದಿನಗಳಲ್ಲಿ ತಾನು ಕೈಗೊಂಡ ಸುಧಾರಣಾ ಕ್ರಮಗಳಾದರೂ ಯಾವುವು ಮತ್ತು ಅವು ಹೇಗೆ ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ಕಾರಣವಾಗಿವೆ ಎಂಬುದನ್ನು ಸಮಾಜಕ್ಕೆ ಮನವರಿಕೆ ಮಾಡಿಕೊಡಲಿ. ಶಿಕ್ಷಣ ಕ್ಷೇತ್ರಕ್ಕೆ ಮಾಡುವ ವೆಚ್ಚದಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದೆಯೇ? ರಾಜ್ಯದ ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಪ್ರಶ್ನೆಗಳಿಗೆ ಉತ್ತರಿಸಲಿ.

ಕೊರೊನಾ ಮತ್ತು ಅದರ ನಿಯಂತ್ರಣಕ್ಕಾಗಿ ಹೇರಿದ ಲಾಕ್‍ಡೌನ್‍ನಿಂದ ದೇಶದ ಆರ್ಥಿಕ ಪರಿಸ್ಥಿತಿ ಹಳ್ಳ ಹಿಡಿದಿರುವುದಕ್ಕೆ ಕೇಂದ್ರ ಸರ್ಕಾರ ಘೋಷಿಸಿರುವ ಜಿಡಿಪಿ ಅಂಕಿ ಅಂಶ ಕನ್ನಡಿ ಹಿಡಿಯುತ್ತಿದೆ. ಆದಾಯ ಮೂಲಗಳು ಬತ್ತಿಹೋಗಿ ಜನ ಪರಿತಪಿಸುತ್ತಿದ್ದಾರೆ.
ಇಂತಹ ದುಃಸ್ಥಿತಿಯ ಕಾರಣಕ್ಕೆ ಜನ ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದರೆ ಅದು ಬೇಸರದ ಸಂಗತಿ.

ಒಂದು ವೇಳೆ ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯ ಹಾಗೂ ಸಿಬ್ಬಂದಿಯನ್ನು ಒದಗಿಸದೆ, ಇರುವ ಸೌಲಭ್ಯಗಳ ಸಮರ್ಪಕ ನಿರ್ವಹಣೆಗೆ ಕಾರ್ಯತಂತ್ರ ರೂಪಿಸದೇ ಹೋದಲ್ಲಿ ಸದ್ಯ ದಾಖಲಾಗುತ್ತಿರುವ ವಿದ್ಯಾರ್ಥಿಗಳು ಅಲ್ಲೇ ಓದು ಮುಂದುವರಿಸುವರೇ? ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸುವುದು ಪೋಷಕರ ಸ್ವಾಭಾವಿಕ ಆಯ್ಕೆಯಾಗುವಂತಹ ಸಂದರ್ಭ ಸೃಷ್ಟಿಸುವುದು ಸರ್ಕಾರ ಮತ್ತು ಸಮಾಜದ ಹೊಣೆಗಾರಿಕೆ. ಅದು ಬಿಟ್ಟು, ಬಡತನದ ಕಾರಣಕ್ಕೆ ಕೆಲವರು ಇದನ್ನು ಅನಿವಾರ್ಯ ಆಯ್ಕೆಯಾಗಿ ಸ್ವೀಕರಿಸಿದರೆ ಅದನ್ನು ಸಂಭ್ರಮವಾಗಿ ಪರಿಗಣಿಸಲು ಹೇಗೆ ಸಾಧ್ಯ?

ಸರ್ಕಾರಿ ಶಾಲೆಗಳು ಬಡ ಮಕ್ಕಳ ಶಾಲೆಗಳಾಗಿ ಮಾತ್ರ ಉಳಿಯಬೇಕೇ? ಸಮಾಜದ ಎಲ್ಲ ವರ್ಗದ ಮಕ್ಕಳೂ ಒಂದೆಡೆ ಸೇರಿ ಕಲಿಯುವ ತಾಣಗಳಾಗಿ ಸರ್ಕಾರಿ ಶಾಲೆಗಳು ರೂಪುಗೊಳ್ಳಬಾರದೇ? ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಖಾಲಿ ಉಳಿದಿರುವ ಬೋಧಕ ಸಿಬ್ಬಂದಿ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆಯೇ? ತಮ್ಮ ಮಕ್ಕಳ ಓದಿನ ಖರ್ಚು ನಿಭಾಯಿಸಲೂ ಸಾಧ್ಯವಾಗದ ಸ್ಥಿತಿಗೆ ರಾಜ್ಯದ ಜನ ಈಡಾಗುತ್ತಿರುವ ಸದ್ಯದ ಸಂದರ್ಭದಲ್ಲಾದರೂ ಶಿಕ್ಷಣ ಕ್ಷೇತ್ರದ ಮೇಲಿನ ಸರ್ಕಾರದ ಹೂಡಿಕೆ ಹೆಚ್ಚಬಾರದೇ?

ಕೊರೊನಾ ಕಾರಣಕ್ಕೆ ಶಾಲಾ ಕಾಲೇಜುಗಳು ಮುಚ್ಚಿದ ನಂತರ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಕುಟುಂಬಗಳ ಮಕ್ಕಳು, ತಮ್ಮಿಂದ ಸಾಧ್ಯವಾದಷ್ಟು ಹಣ ಸಂಪಾದಿಸಿ ಕುಟುಂಬ ನಿರ್ವಹಣೆಯಲ್ಲಿ ಕೈಜೋಡಿಸುತ್ತಿದ್ದಾರೆ. ಖಾಸಗಿ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಸ್ನೇಹಿತರೊಬ್ಬರು, ಇತ್ತೀಚೆಗೆ ತಮ್ಮ ವಿದ್ಯಾರ್ಥಿಯೊಬ್ಬನನ್ನು ಪೆಟ್ರೋಲ್ ಬಂಕ್‍ನಲ್ಲಿ ಇಂಧನ ತುಂಬುವ ಕೆಲಸ ಮಾಡುವಾಗ ಮುಖಾಮುಖಿಯಾದ ಅನುಭವ ಹಂಚಿಕೊಂಡರು. ಕೆಲ ವಿದ್ಯಾರ್ಥಿಗಳು ಡೆಲಿವರಿ ಬಾಯ್‍ಗಳಾಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ.

ಈಗಾಗಲೇ ಖಾಸಗಿ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ಸೇರಿದಂತೆ ವಿವಿಧ ಪದವಿಗಳನ್ನು ಓದುತ್ತಿರುವ ಕೆಲವರು ಶೈಕ್ಷಣಿಕ ವೆಚ್ಚ ಭರಿಸಲೂ ಸಾಧ್ಯವಾಗದೆ ಅರ್ಧಕ್ಕೆ ಓದು ನಿಲ್ಲಿಸುವ ತೀರ್ಮಾನ ಕೈಗೊಂಡಿರುವ ನಿದರ್ಶನಗಳೂ ಇವೆ. ಹೋಟೆಲ್‍ಗಳು ಸೇರಿದಂತೆ ಕೆಲವು ಸಣ್ಣ ಉದ್ದಿಮೆಗಳನ್ನು ಮುಚ್ಚುತ್ತಿರುವುದರಿಂದ ಬಿಡುವಿನ ವೇಳೆಯಲ್ಲಿ ಅರೆಕಾಲಿಕ ಕೆಲಸಗಳನ್ನು ನಿರ್ವಹಿಸುತ್ತ ಹೇಗೋ ತಮ್ಮ ಓದಿನ ಖರ್ಚು ನಿಭಾಯಿಸಿಕೊಳ್ಳುತ್ತಿದ್ದವರೂ ಈಗ ಕೆಲಸವಿಲ್ಲದೆ ಓದು ಮುಂದುವರಿಸಲೂ ಸಾಧ್ಯವಾಗದ ಸಂಕಟದಲ್ಲಿದ್ದಾರೆ.

ಹಣವಿಲ್ಲವೆಂಬ ಕಾರಣಕ್ಕೆ ಓದು ನಿಲ್ಲಿಸುತ್ತಿರುವ ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ಅವರಿಗೆ ನೆರವಾಗುವಂತಹ ಯೋಜನೆಗಳನ್ನು ರೂಪಿಸದೇ ಹೋದಲ್ಲಿ, ಅನೇಕ ವಿದ್ಯಾರ್ಥಿಗಳು ಓದಿನಿಂದ ವಿಮುಖರಾಗುವ ಸಾಧ್ಯತೆ ಇದೆ. ಕಣ್ಣೆದುರಿನ ಈ ಕಟುವಾಸ್ತವಕ್ಕೆ ಆಳುವವರು ಬೆನ್ನು ತೋರಿ, ಸರ್ಕಾರಿ ಶಾಲೆಗಳಿಗೆ ಹೆಚ್ಚು ಮಕ್ಕಳು ದಾಖಲಾಗುತ್ತಿದ್ದಾರೆ ಎಂದು ಸಂಭ್ರಮಿಸಲು ಹೊರಡುವುದು ಅಸಮಂಜಸವಲ್ಲದೆ ಮತ್ತೇನೂ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT