ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕಾಗಿದ್ದಾರೆ ವಿಜ್ಞಾನದ ಮೇಡಂ

ನಾಗರಿಕತೆಯ ಆಯಾಮದಲ್ಲಿ ಮನುಷ್ಯ ತನ್ನ ನಿಯಂತ್ರಣಕ್ಕಾಗಿ ಕಟ್ಟಿಕೊಂಡ ನಂಬಿಕೆಯ ಸಂಕೋಲೆಯು ಯಾವುದೇ ಜೀವವನ್ನು ಉಳಿಸಲು ಶಕ್ತವಾಗಿಲ್ಲ
Last Updated 8 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ವಿಭಿನ್ನ ಸಂಸ್ಕೃತಿ, ಆಚಾರ– ವಿಚಾರವುಳ್ಳ ಭಾರತದಂತಹ ದೇಶದಲ್ಲಿ ಕೊರೊನಾ ಸೋಂಕು ಹೊಸ ಜನಪದ ಲೋಕವನ್ನೇ ಸೃಷ್ಟಿಸಿದೆ. ತುಮಕೂರು ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಇತ್ತೀಚೆಗೆ ಕೊರೊನಾ ‘ಅಮ್ಮ’ನಿಗಾಗಿ ವಿಶೇಷ ಪೂಜೆ ಸಲ್ಲಿಸಿ, ಊರ ಬೀದಿಗಳನ್ನು ಸಿಂಗರಿಸಿ, ರಂಗೋಲಿ ಬಿಡಿಸಿ, ಕೊರೊನಾ ಮಾರಿ ಊರಿಗೆ ಬಾರದಂತೆ ತಡೆಯಲು ಯತ್ನಿಸಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ.

ಈ ನಂಬುಗೆಯು ‘ಕೊರೊನಾ’ ಎಂಬ ಹೊಸ ದೇವಿಯಾಗಿ ಗ್ರಾಮಗಳಲ್ಲಿ ನೆಲೆ ಕಾಣುವ ಸೂಚನೆಯಿದೆ. ‌ದೇಶದ ಉದ್ದಗಲಕ್ಕೂ ಅನೇಕ ಹಳ್ಳಿಗಳಲ್ಲಿ ಚಿಕ್ಕಅಮ್ಮ, ಪಳೇಕಮ್ಮ ಅಥವಾ ಪ್ಲೇಗಮ್ಮ, ಮಾರಮ್ಮ ಗುಡಿಗಳು ತಲೆ ಎತ್ತಿರುವುದು ಹೀಗೆ ಹುಟ್ಟಿದ ಆಚರಣೆಗಳಿಂದ, ನಂಬಿಕೆಯಿಂದ ಮತ್ತು ಭಯ ಭಕ್ತಿಯಿಂದಲೇ.

ನೂರಾರು ವರ್ಷಗಳ ಹಿಂದೆ ‘ಅಮ್ಮ’ (ಸ್ಮಾಲ್‌ಪಾಕ್ಸ್) ಎಂಬ ಸಾಂಕ್ರಾಮಿಕ ರೋಗವು ಯುರೋಪ್ ದೇಶಗಳಲ್ಲಿ ಲಕ್ಷಾಂತರ ಜನರನ್ನು ಆಹುತಿ ಪಡೆದಿತ್ತು. ಭಾರತಕ್ಕೂ ಹಬ್ಬಿದ್ದ ಈ ರೋಗ, ಜನರ ಪ್ರಾಣ ಹೀರುತ್ತಿತ್ತು. ಮನೆಯ ಸದಸ್ಯರಿಗೆ ‘ಅಮ್ಮ’ ಬಡಿದಿದ್ದಾಳೆ ಎಂದು ತಣ್ಣೀರ ಸ್ನಾನ ಮಾಡಿಸಿ, ಬೇವಿನ ಸೊಪ್ಪು ಸವರಿ, ಅರಿಸಿನ ಬಳಿದು, ಏಳರಿಂದ ಒಂಬತ್ತು ದಿನ ಪೂಜೆ ಸಲ್ಲಿಸಿ ‘ಅಮ್ಮ’ನನ್ನು ಸಾಗಹಾಕುವ ಪದ್ಧತಿ ಈಗಲೂ ಇದೆ. ‘ಅಮ್ಮ’ನ ರೋಗಕ್ಕೆ ತುತ್ತಾದವರನ್ನು ಆಸ್ಪತ್ರೆಗೆ ಕರೆತರದೆ, ಮನೆಯಲ್ಲೇ ಪೂಜೆ ಪುನಸ್ಕಾರ ಮಾಡಿ ಸಂತೈಸಿಕೊಳ್ಳುವುದೇ ಹೆಚ್ಚು. ಇಂತಹ ಆಚರಣೆಗಳಿಂದ ಕೆಲವೊಮ್ಮೆ ರೋಗಿಯ ಆರೋಗ್ಯ ಸ್ಥಿತಿ ಗಂಭೀರವಾಗಿ, ಸಾವಿಗೀಡಾದ ನಿದರ್ಶನಗಳೂ ಇಲ್ಲದೇ ಇಲ್ಲ.

ತುಮಕೂರು ಜಿಲ್ಲೆಯ ಯತ್ತೇನಹಳ್ಳಿ ಎಂಬ ಗ್ರಾಮದಲ್ಲಿ ವರ್ಷಕೊಮ್ಮೆ ಈ ದೇವಿಯ ಜಾತ್ರಾ ಮಹೋತ್ಸವ ನಡೆಯುತ್ತದೆ. ಅಲ್ಲಿ ಸೇರುವ ಸಾವಿರಾರು ಜನ, ಆರತಿ ಹೊತ್ತು ಕೊಂಡದ ಮೇಲೆ ಸಾಗಿ ‘ಕಾಪಾಡು’ ಎಂದು ಬೇಡುತ್ತ ನಡೆಯುತ್ತಾರೆ. ಇವರಲ್ಲಿ ಕೆಲವರು ಮರುದಿನ ಶಾಲೆಗೆ ಹೋಗಿ ವಿಜ್ಞಾನದ ಪಾಠ ಬೋಧಿಸುತ್ತಾರೆ! ಗ್ರಾಮಗಳ ಕೇರಿ, ಹಟ್ಟಿಯಲ್ಲಿ ಮಾರಮ್ಮ, ದುರ್ಗಮ್ಮನ ಗುಡಿ ಕಟ್ಟಿದ್ದು ಇಂತಹುದೇ ಧಾರ್ಮಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ.

ಕ್ರಿ.ಶ. 14ನೇ ಶತಮಾನದ ಪೂರ್ವದಲ್ಲಿ ಚೀನಾ ಅಥವಾ ಭಾರತದಲ್ಲಿ ಹುಟ್ಟಿದ ಪ್ಲೇಗ್ ಎಂಬ ಮಹಾಮಾರಿಯು ವ್ಯಾಪಕವಾಗಿ ಹರಡಿ, ಹಡಗುಗಳ ಮೂಲಕ ಯುರೋಪ್ ದೇಶಗಳನ್ನು ಸೇರಿತು. ಇಟಲಿ, ಸ್ಪೇನ್, ಫ್ರಾನ್ಸ್, ಜರ್ಮನಿ ದೇಶದ ಬೀದಿ ಬೀದಿಗಳಲ್ಲಿ ಜನ ಸತ್ತು ಬಿದ್ದರು. ಪ್ಲೇಗ್‌ನ ಶಮನಕ್ಕಾಗಿ ಅಲ್ಲಿನವರು ಚರ್ಚ್‌ಗಳನ್ನು ಸ್ಥಾಪಿಸಿದರು, ಸಾಮೂಹಿಕವಾಗಿ ಪ್ರಾರ್ಥನೆ ಮಾಡಿದರು. ಭಾರತೀಯರು ಊರುಗಳನ್ನು ಬಿಟ್ಟು ಕಾಡುಗಳಲ್ಲಿ ಬಿಡಾರ ಹೂಡುತ್ತಿದ್ದರು. ಎರಡು– ಮೂರು ವರ್ಷಗಳ ನಂತರ ಕೆಲವರು ತಮ್ಮ ಹಳೆಯ ವಾಸಸ್ಥಳಗಳಿಗೆ ವಾಪಸಾಗುತ್ತಿದ್ದರು. ಹೀಗೆ ಹೊಸ ಗ್ರಾಮಗಳು ಉದಯವಾದವು.

ಸದ್ಯ ಇಡೀ ಜಗತ್ತಿನಲ್ಲೇ ಭಯ ಹುಟ್ಟಿಸುತ್ತಿರುವ ಕೊರೊನಾಗೂ ಕೆಲವರು ದೇವಿ ಪಟ್ಟ ನೀಡಿರುವುದು ಅನಿರೀಕ್ಷಿತ ವಿದ್ಯಮಾನ. ಅಮ್ಮ, ಪ್ಲೇಗಮ್ಮ ಗುಡಿಗಳನ್ನು ಕಟ್ಟಿದ ಸಂದರ್ಭ ಮತ್ತು ಸದ್ಯದ ಸನ್ನಿವೇಶ ವಿಭಿನ್ನ. ಬೀದಿ ಬೀದಿಗಳಲ್ಲಿ ಶಂಖ ಊದಿ, ಜಾಗಟೆ ಬಾರಿಸಿ, ಆ ಶಬ್ದಕ್ಕೆ ಕೊರೊನಾ ವೈರಾಣು ತನ್ನ ಶಕ್ತಿಯನ್ನು ಕಳೆದುಕೊಂಡು ದೀಪದ ಬೆಳಕಿಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತದೆ ಎಂದು ಕೆಲವೆಡೆ ವಿದ್ಯಾವಂತರೇ ಬೋಧಿಸುತ್ತಿದ್ದಾರೆ. ಇದನ್ನು ನೋಡಿದರೆ, ಆಗಿನ ಕಾಲದಲ್ಲಿ ಪ್ಲೇಗ್ ಮತ್ತು ಅಮ್ಮನಿಗೆ ಗುಡಿ ಕಟ್ಟಿ ಪೂಜಿಸಿದ್ದು ಉತ್ಪ್ರೇಕ್ಷೆಯಲ್ಲ ಎನಿಸುತ್ತದೆ.

ನಾಗರಿಕತೆಯ ಆಯಾಮದಲ್ಲಿ ಮನುಷ್ಯ ತನ್ನ ನಿಯಂತ್ರಣಕ್ಕಾಗಿ ಕಟ್ಟಿಕೊಂಡ ನಂಬಿಕೆಯ ಸಂಕೋಲೆಯು ಯಾವುದೇ ಜೀವವನ್ನು ಉಳಿಸಲು ಶಕ್ತವಾಗಿಲ್ಲ. ಧಾರ್ಮಿಕತೆಯ ನೆಲೆಯಲ್ಲಿ ಕೇಳಿಬರುವ ಸಾವು ನೋವು, ಪಾಪ ಪುಣ್ಯದಂತಹ ಸಂಗತಿಗಳನ್ನು ಉಳಿದ ಬದುಕಿಗೆ ದಿಕ್ಸೂಚಿಯಂತೆ ಬಳಸಿಕೊಳ್ಳಬಹುದೇ ಎಂದು ಕೇಳಿದರೆ, ಅದು ಒಳದನಿಯ ನೆಮ್ಮದಿಗಾಗಿ ಮಾತ್ರ ಎನ್ನಬೇಕಷ್ಟೇ. ವಾಸ್ತವದಲ್ಲಿ ವಿಜ್ಞಾನ ಮತ್ತು ಸತ್ಯ ಸಂಗತಿಗಳಷ್ಟೇ ಜೀವಸಂಕುಲ
ವನ್ನು ಮುಂದುವರಿಸುವ ಸಾಧನಗಳಾಗಿವೆ.

ವಿಜ್ಞಾನದ ಮೊಗಸಾಲೆಯಲ್ಲಿ ಕಂಡುಬರುವ ಆವಿಷ್ಕಾರಗಳು ದೇವರ ವರ ಹಾಗೂ ಭಕ್ತಿಯ ಫಲ ಎನ್ನುವವರೂ ಇದ್ದಾರೆ. ಇಂಗ್ಲೆಂಡ್‍ನ ವಿಜ್ಞಾನಿ ಎಡ್ವರ್ಡ್‌ ಜೆನ್ನರ್ ತನ್ನ ಲಸಿಕೆಯನ್ನು ರೋಗಿಗಳ ದೇಹಕ್ಕೆ ಜಿನುಗಿಸದಿದ್ದರೆ ‘ಅಮ್ಮ’ ಎಂಬ ರೋಗಕ್ಕೆ ಮನುಕುಲವೇ ಆಹುತಿಯಾಗುತ್ತಿತ್ತು. ಈ ಲಸಿಕೆಯು ದೇವಿಯ ತೀರ್ಥ ಪ್ರಸಾದವಲ್ಲದೆ ಮತ್ತೇನು ಎಂದು ಪ್ರಶ್ನಿಸುವವರ ನಡುವೆ, ಕೊರೊನಾ ನಿಯಂತ್ರಣಕ್ಕೆ ಇರುವುದು ಲಸಿಕೆ ಅಭಿವೃದ್ಧಿಪಡಿಸುವ ಮಾರ್ಗವೊಂದೇ ಎಂಬ ಉತ್ತರವು ಅವರಿಂದಲೇ ಬರುತ್ತಿದೆ!

ವೈಜ್ಞಾನಿಕ ಮನೋಭಾವವನ್ನು ಬೆಳೆಸಿ, ಜನರ ಅಂಧತ್ವವನ್ನು ತೊಲಗಿಸಲು ಮನೆಗೊಬ್ಬೊಬ್ಬರು ವಿಜ್ಞಾನದ ಮೇಡಂಗಳು ಬೇಕಾಗಿದ್ದಾರೆ. ಪೋಲಿಯೊ, ಕ್ಷಯ, ಕುಷ್ಠದಂತಹ ರೋಗಗಳಿಗೆ ವಿವಿಧ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಮದ್ದು, ಲಸಿಕೆಗಳಿಂದಷ್ಟೇ ಮನುಕುಲದ ಸಂತತಿ ಮುಂದುವರಿದಿದೆ ಎಂಬ ಸತ್ಯವನ್ನು ಸಾರಲು ಬೇಕಾಗಿದೆ ವಿಜ್ಞಾನದ ದೀವಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT