ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ನಿಜ ನಾಯಕತ್ವದ ಹುಡುಕಾಟದಲ್ಲಿ...

ತನ್ನವರ ಕ್ಷೇಮವನ್ನು ಬಯಸುವ ಪ್ರತಿಯೊಬ್ಬರೂ ನಾಯಕರೆ. ಆದರೆ?
Last Updated 18 ಫೆಬ್ರುವರಿ 2021, 21:34 IST
ಅಕ್ಷರ ಗಾತ್ರ

ಭಾರತವು ಸಹಜ ಸ್ಥಿತಿಗೆ ಮರಳುತ್ತಿದೆ ಮತ್ತು ಕೋವಿಡ್‌ ಸಾಂಕ್ರಾಮಿಕ ನಂತರದ ಬದುಕಿಗೆ ಸಿದ್ಧವಾಗುತ್ತಿದೆ. ಸಾಂಕ್ರಾಮಿಕ ಮತ್ತು ಅದು ತಂದೊಡ್ಡುವ ಹಾನಿಯನ್ನು ತಡೆಯಲು ಕೈಜೋಡಿಸಿದ ನಮ್ಮ ವೈದ್ಯರು, ದಾದಿಯರು, ಪೌರಕಾರ್ಮಿಕರು ಹಾಗೂ ಸ್ವಯಂಸೇವಕರು ಸಮುದಾಯಗಳಲ್ಲಿ ನಿಜವಾದ ನಾಯಕರಾಗಿ ಹೊರಹೊಮ್ಮಿದ್ದಾರೆ. ನಾಯಕತ್ವವೇ ಹಾಗೆ. ಅದು ರಾಜಿಗೆ ತಲೆಬಾಗುವುದಿಲ್ಲ.

1962ರಲ್ಲಿ ಬಿಡುಗಡೆಯಾದ ‘ಲಾರೆನ್ಸ್‌ ಆಫ್‌ ಅರೇಬಿಯಾ’ ಚಲನಚಿತ್ರ ಇತಿಹಾಸದಲ್ಲಿ ‘ಮಹಾಕಾವ್ಯ’ ಎನಿಸಿಕೊಂಡ ಬ್ರಿಟಿಷ್‌ ಚಲನಚಿತ್ರ. ಈ ಚಿತ್ರವು ಬ್ರಿಟನ್ನಿನ ಯುವಕನೊಬ್ಬ ಅರೇಬಿಯಾದ ಸ್ವಾತಂತ್ರ್ಯದ ಆಶೋತ್ತರಗಳನ್ನು ಈಡೇರಿಸುವ ನಾಯಕನಾಗುವ ಕಥೆ ಹೊಂದಿದೆ. ಚಿತ್ರಕಥೆಯು ಟಿ.ಇ.ಲಾರೆನ್ಸ್‌ ಅವರ ನಿಜಜೀವನವನ್ನು ಆಧರಿಸಿದೆ. ಅವರ ಸಾವಿನ 74 ವರ್ಷಗಳ ನಂತರ ನಿರ್ಮಿಸಲಾದ ಈ ಚಿತ್ರ ಎಷ್ಟು ಪರಿಣಾಮಕಾರಿಯಾಗಿ ಪರದೆಯ ಮೇಲೆ ಮೂಡಿಬಂತೋ ಅದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಲಾರೆನ್ಸ್‌ ಅವರ ಜೀವಿತಾವಧಿ ಕಳೆದಿತ್ತು. ಅವರು ಬರೆದ ‘ಸೆವೆನ್‌ ಪಿಲ್ಲರ್ಸ್‌ ಆಫ್‌ ವಿಸ್ಡಂ’ ಇವತ್ತಿಗೂ ಪುಸ್ತಕಪ್ರಿಯರ ‘ಮಾಸ್ಟರ್‌ಪೀಸ್‌’.

ಲಾರೆನ್ಸ್‌ ಒಬ್ಬ ಮಹಾನ್‌ನಾಯಕನಾಗಿ ಬದಲಾಗಿದ್ದಾದರೂ ಹೇಗೆ? ಈ ಕಥೆಯಲ್ಲಿ ಎರಡು ಮೂಲಭೂತ ಪ್ರಶ್ನೆಗಳು ಉದ್ಭವವಾಗುತ್ತವೆ. ಮೊದಲನೆಯದು, ನಾಯಕ ಜನ್ಮದಿಂದಲೇ ನಾಯಕನಾಗಿರುತ್ತಾನೆ. ಎರಡನೆಯದು, ಒಬ್ಬ ವ್ಯಕ್ತಿ ತನ್ನ ಸುತ್ತಮುತ್ತಲಿನ ವಾತಾವರಣದಲ್ಲಿ ಪಡೆದ ಗುಣಗಳಿಂದ ನಾಯಕನಾಗುತ್ತಾನೆ. ನಾಯಕ ಮೊದಲಾ ಅಥವಾ ನಾಯಕತ್ವ ಮೊದಲಾ ಎಂಬ ಪ್ರಶ್ನೆ, ಕೋಳಿ ಮೊದಲಾ ಮೊಟ್ಟೆ ಮೊದಲಾ ಎಂಬ ಪ್ರಶ್ನೆಯ ಹಾಗಿದೆ.

ಗುಂಪನ್ನು ಮುನ್ನಡೆಸುವವನು ಮಾತ್ರವೇ ನಾಯಕನಲ್ಲ. ತನ್ನನ್ನು ತಾನು ಮುನ್ನಡೆಸುವವನೂ ನಾಯಕನೇ. ಆದರೆ ಎಲ್ಲರಲ್ಲೂ ಆ ನಾಯಕತ್ವ ಯಾಕೆ ಯಶಸ್ವಿಯಾಗುವುದಿಲ್ಲ? ಬೇರೆಯವರು ಒಪ್ಪಲಿ ಒಪ್ಪದಿರಲಿ, ನನಗೆ ನಾನು ನಾಯಕ ಎಂಬ ಆತ್ಮವಿಶ್ವಾಸ ಯಾಕೆ ಎಲ್ಲರ ಕಣ್ಣುಗಳಲ್ಲಿ ಕಾಣುವುದಿಲ್ಲ? ಇದಕ್ಕೆ ಕಾರಣ, ಹುಟ್ಟಿನಿಂದ ನಮ್ಮಲ್ಲಿರುವ ನಾಯಕತ್ವ ಗುಣವು ಬಾಹ್ಯ ವಾತಾವರಣದ ಶಕ್ತಿಗಳಿಂದ ಪ್ರಚೋದನೆಗೆ ಒಳಗಾಗದೇ ಇರುವುದು. ಕೋಲ್ಕತ್ತದಲ್ಲಿ ಕಂಡ ಬಡವರ ಕರುಣಾಜನಕ ಸ್ಥಿತಿಗೆ ಸ್ಪ೦ದಿಸಿ ಸಲ್ಲಿಸಿದ ಸೇವೆಯು ಮದರ್ ತೆರೆಸಾ ಅವರನ್ನು ಮಹಾನ್ ನಾಯಕಿಯನ್ನಾಗಿ ಮಾಡಿತು.

ನಾಯಕತ್ವವು ಲಿಂಗದೊಂದಿಗೆ ಸಂಯೋಜಿಸಿಕೊಂಡದ್ದಲ್ಲ. ಸಾಮಾನ್ಯವಾಗಿ ತಂದೆಯು ಮನೆಯ ಆದಾಯಕ್ಕೆ ಮೂಲವಾದರೂ ತಾಯಿ ಮನೆಯೊಳಗೆ ನಾಯಕತ್ವವನ್ನು ನಿಭಾಯಿಸುತ್ತಾಳೆ. ಕೆಲವು ಮಹಿಳೆಯರಂತೂ ಮನೆಯೊಳಗೆ ಮತ್ತು ಹೊರಗೆ ನಾವೂ ನಾಯಕರಾಗಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕೆಲವರ ನಾಯಕತ್ವಕ್ಕೆ ಪ್ರೇರೇಪಣೆಯ ಮಾತುಗಳು ಮೆರುಗಾದರೆ, ಇನ್ನು ಕೆಲವರ ಕೃತಿಯು ಅವರ ನಾಯಕತ್ವಕ್ಕೆ ಮೂಲ. ಸಾಲುಮರದ ತಿಮ್ಮಕ್ಕ ಎರಡನೆಯ ಪಟ್ಟಿಗೆ ಸೇರುವ ನಾಯಕಿ ಎನ್ನಬಹುದು. ಸಮಸ್ಯೆಯ ಮೂಲವನ್ನು ಹುಡುಕದೆ, ಕೇವಲ ಅದರ ಅಂತ್ಯವನ್ನು ಕಾಣಬಯಸುವ ಗುಣವು ನಾಯಕತ್ವದ ಮೂಲ ಲಕ್ಷಣ.

ಅಮೆರಿಕದ ಪ್ರಖ್ಯಾತ ವಾಗ್ಮಿ ಜಾನ್ ಸಿ. ಮ್ಯಾಕ್ಸ್‌ವೆಲ್‌ ಅವರು ನಾಯಕತ್ವವನ್ನು ಐದು ಹಂತಗಳಲ್ಲಿ ಗುರುತಿಸುತ್ತಾರೆ. ಸ್ಥಾನದ ಕಾರಣದಿಂದಾಗಿ ಸಿಗುವ ನಾಯಕತ್ವ, ಅನುಮತಿ ಆಧಾರಿತ ನಾಯಕತ್ವ, ಉತ್ಪಾದನಾ ನಾಯಕತ್ವ, ಜನರ ಅಭಿವೃದ್ಧಿ ನಾಯಕತ್ವ ಹಾಗೂ ಪರಾಕಾಷ್ಠೆಯ ನಾಯಕತ್ವ. ನಾಯಕತ್ವವನ್ನು ಸಾಬೀತುಪಡಿಸಲು ನಾಯಕ ಹೋರಾಡಲೇ ಬೇಕು. ಆಗಲೇ ಆ ನಾಯಕತ್ವ ಸಫಲವಾಗುವುದು. ಕೆಲವರು ಪ್ರವಾಸದ ಗೈಡ್‌ಗಳಂತೆ ಬೇರೆಯವರಿಗೆ ನಾಯಕತ್ವವನ್ನು ಕಲಿಸುತ್ತಾರೆ, ತಮ್ಮದಲ್ಲದ ಅನುಭವಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುತ್ತಾರೆ. ಇದರಿಂದ ನಾಯಕತ್ವದ ಕಲಿಕೆ ಹೇಗೆ ಸಾಧ್ಯ?

‘ಥಿಂಕ್ ಆ್ಯಂಡ್ ಗ್ರೋ ರಿಚ್’ ಪುಸ್ತಕದ ಲೇಖಕ ನೆಪೋಲಿಯನ್ ಹಿಲ್ ಒಮ್ಮೆ, ಯಶಸ್ವಿ ಉದ್ಯಮಿಯಾದ ಹೆನ್ರಿ ಫೋರ್ಡ್‌ ಅವರನ್ನು ಸಂದರ್ಶಿಸಲು ಹೋಗುತ್ತಾರೆ. ಅವರ ಕಾರು ತಯಾರಿಕಾ ಘಟಕಕ್ಕೆ ತೆರಳಿ ವಿಚಾರಿಸಿದಾಗ, ಅಲ್ಲಿ ಕಾರಿನ ಬಿಡಿಭಾಗಗಳ ಗ್ರೀಸ್‌ ಅನ್ನು ಸ್ವಚ್ಛಗೊಳಿಸುತ್ತಿದ್ದ ವ್ಯಕ್ತಿ ಕಚೇರಿಯ ಕಡೆ ಕೈ ತೋರಿಸಿ ‘ಕಾಯಬೇಕು, ಫೋರ್ಡ್‌ ಅಲ್ಲಿಗೆ ಬರುತ್ತಾರೆ’ ಎಂದು ತಿಳಿಸುತ್ತಾನೆ. ಬಳಿಕ ಅಲ್ಲಿಗೆ ಬಂದ ಫೋರ್ಡ್‌ ಬೇರೆ ಯಾರೋ ಆಗಿರದೆ, ಆ ಕಾರಿನ ಭಾಗಗಳನ್ನು ಸ್ವಚ್ಛಗೊಳಿಸುತ್ತಿದ್ದ ವ್ಯಕ್ತಿಯೇ ಆಗಿರುತ್ತಾನೆ. ಫೋರ್ಡ್‌ ಅವರ ನಾಯಕತ್ವ ಅವರ ಕಾಯಕದಲ್ಲಿ ಎದ್ದು ಕಾಣುವುದಲ್ಲದೆ ಅದೇ ಫೋರ್ಡ್‌ ಬ್ರ್ಯಾಂಡ್‌ನ ಯಶಸ್ಸಿನ ಗುಟ್ಟು ಎನ್ನುತ್ತಾರೆ ನೆಪೋಲಿಯನ್‌.

ಹಿಂಬಾಲಕರನ್ನು ಸೃಷ್ಟಿಸುವವನು ನಾಯಕನಲ್ಲ. ಬದಲಾಗಿ ನಾಯಕರನ್ನು ಸೃಷ್ಟಿಸುವವ ನಿಜ ಅರ್ಥದಲ್ಲಿ ನಾಯಕ. ತನ್ನವರ ಕ್ಷೇಮವನ್ನು ಬಯಸುವ ಪ್ರತಿಯೊಬ್ಬರೂ ನಾಯಕರೆ. ಆದರೆ, ಕೇವಲ ತಮ್ಮವರ ಶ್ರೇಷ್ಠತೆಯನ್ನು ಬಯಸಿ ಮನುಕುಲದ ಕೇಡನ್ನು ಬಯಸಿದ ಹಿಟ್ಲರ್ ಜೀವನಪೂರ್ತಿ ಹೋರಾಡಿದರೂ ಆತನೊಬ್ಬ ಕುಖ್ಯಾತ ನಾಯಕ.

ಕೇವಲ ಜನರ ಮೆದುಳಿನಲ್ಲಿ ವಾಸಿಸುವ ನಾಯಕತ್ವದ ಬಾಳಿಕೆಯ ಅವಧಿ ಕಡಿಮೆ. ಬದಲಾಗಿ, ಕೋವಿಡ್‌ ಕಾಲದಲ್ಲಿ ನಮ್ಮನ್ನು ಪೊರೆದ ಆರೋಗ್ಯ ಕಾರ್ಯಕರ್ತರು, ಪೌರಕಾರ್ಮಿಕರು ಹಾಗೂ ಸ್ವಯಂಸೇವಕರಂತೆ ಅಜ್ಞಾತವಾಗಿದ್ದೂ ಎಲ್ಲರ ಹೃದಯಗಳಲ್ಲಿ ಸ್ಥಾನ ಪಡೆಯುವುದು ನಿಜ ನಾಯಕತ್ವದ ಪೂರ್ವಾಪೇಕ್ಷಿತ ಬೇಡಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT