ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಕ್ರೆಟ್‌ ಬಿಟ್ಟುಕೊಡದ ‘ಸೂಪರ್‌ ಸ್ಟಾರ್‌’

ಚಿತ್ರರಂಗಕ್ಕೆ ಝೈರಾ ವಿದಾಯ
Last Updated 3 ಜುಲೈ 2019, 20:00 IST
ಅಕ್ಷರ ಗಾತ್ರ

‘ದಂಗಲ್’ ಮತ್ತು ‘ಸೀಕ್ರೆಟ್ ಸೂಪರ್ ಸ್ಟಾರ್‌’ ಚಿತ್ರಗಳ ಮೂಲಕ ಜನಪ್ರಿಯತೆಯ ಶಿಖರವನ್ನೇರಿದ ಯುವನಟಿ ಝೈರಾ ವಾಸೀಂ ಚಿತ್ರರಂಗಕ್ಕೆ ವಿದಾಯ ಹೇಳಿದ್ದಾರೆ. ಆದರೆ ಅದಕ್ಕೆ ಅವರು ಕೊಟ್ಟ ಕಾರಣ ವಿಶೇಷ ಎನ್ನಿಸುವಂಥದ್ದು. ‘ಚಿತ್ರಗಳಲ್ಲಿ ನಟಿಸುವುದು ನನ್ನ ಈಮಾನ್‌ಗೆ (ದೇವರಲ್ಲಿನ ನಂಬಿಕೆ) ಅಡ್ಡಿ ತರುತ್ತಿದೆ’ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಯಾವುದೇ ಪ್ರಮಾಣದ ಯಶಸ್ಸು, ಖ್ಯಾತಿ, ಆಸ್ತಿಯು ನಮ್ಮ ಮನಃಶಾಂತಿ ಅಥವಾ ಈಮಾನ್ ಅನ್ನು ಕಳೆದುಕೊಳ್ಳುವುದಕ್ಕೆ ಸಮನಾಗಲಾರದು ಎಂಬುದು ಝೈರಾ ಅಭಿಪ್ರಾಯ. ನಿಜವೇ, ತಪ್ಪೇನಲ್ಲ. ಆಕೆಯ ವೈಯಕ್ತಿಕ ನಿರ್ಧಾರವನ್ನು ಗೌರವಿಸುವುದು ಎಲ್ಲರ ಕರ್ತವ್ಯ. ತಮ್ಮ ಬೇಕು ಬೇಡಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಇನ್ನೂ ಹದಿನೆಂಟರ ಹುಡುಗಿ ಈ ಮಾತನಾಡುತ್ತಿರುವುದು ಆತಂಕ ಹುಟ್ಟಿಸುತ್ತಿದೆ.

ಅಕಸ್ಮಾತ್ ಆಕೆ ಜನಪ್ರಿಯತೆಯ ಒತ್ತಡ ತಾಳಲಾಗದೆ ನಿವೃತ್ತಿ ಘೋಷಿಸಿದ್ದರೆ ಅದು ಒಪ್ಪುವಂತಹ ಕಾರಣವಾಗುತ್ತಿತ್ತು. ಅದನ್ನು ಬಿಟ್ಟು, ದೇವರಲ್ಲಿನ ನಂಬಿಕೆಗೆ ಧಕ್ಕೆಯಾಗುತ್ತಿದೆ ಎಂದು ಹೇಳಿ ನಟನೆಯನ್ನು ಬಿಟ್ಟುಬಿಡಲು ಹೊರಟಿರುವುದು ಧರ್ಮ ಹೇಗೆ ಹೆಣ್ಣುಮಕ್ಕಳ ಭವಿಷ್ಯವನ್ನು ಅವರಿಗೇ ಅರಿವಿಲ್ಲದೆ ರೂಪಿಸುತ್ತಿರುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆ. ಇಲ್ಲದಿದ್ದರೆ ಬೇರೆ ಯಾರಿಗೂ ತೊಂದರೆಯಾಗದ ಧಾರ್ಮಿಕತೆಯು ಬಾಲಿವುಡ್‍ನಲ್ಲಿ ಇನ್ನೂ ಕಣ್ಣು ಬಿಡುತ್ತಿದ್ದ ಹುಡುಗಿಗೇಕೆ ಅಡ್ಡಿಯಾಗಬೇಕು? ಹಾಗೆಂದು, ಚಿತ್ರರಂಗ ಎಂದರೆ ಝೈರಾಗೆ ಇಷ್ಟವಿಲ್ಲವೇ ಎಂದರೆ ಹಾಗೇನೂ ಇಲ್ಲ. ಆಕೆಯೇ ಫೇಸ್‍ಬುಕ್‍ನಲ್ಲಿ ಹೇಳಿಕೊಂಡಂತೆ ಆಕೆ ಚಿತ್ರರಂಗದ ಈ ಐದು ವರ್ಷದ ಪಯಣವನ್ನು ಬಹಳ ಇಷ್ಟಪಟ್ಟಿದ್ದಾರೆ. ಲೇಖಕಿ ತಸ್ಲಿಮಾ ನಸ್ರೀನ್ ಅವರು ಝೈರಾ ನಿರ್ಧಾರವನ್ನು ಖಂಡಿಸಿದ್ದಾರೆ. ಮುಸ್ಲಿಂ ಸಮುದಾಯದ ಎಷ್ಟೋ ಪ್ರತಿಭೆಗಳು ಬುರ್ಖಾದ ಕತ್ತಲೆಯಲ್ಲಿ ತಳ್ಳಲ್ಪಡುತ್ತಿವೆ ಎಂದು ಅವರು ವಿಷಾದಿಸಿದ್ದಾರೆ.

ಇನ್ನು, ಗಾಯಕಿ ಸುಧಾ ರಘುನಾಥನ್ ಅವರ ಮಗಳ ಮದುವೆ ಕುರಿತಾದ ಗಲಾಟೆಯಂತೂ ಅಸಹ್ಯಕರ. ಹುಡುಗ ಆಫ್ರಿಕನ್ ಮತ್ತು ಕ್ರಿಶ್ಚಿಯನ್ ಆಗಿರುವುದಕ್ಕೆ ಸ್ವಘೋಷಿತ ಹಿಂದೂ ಧರ್ಮರಕ್ಷಕರು ತಕರಾರು ಎತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಧಾ ಮತ್ತು ಅವರ ಮಗಳು ಮಾಳವಿಕಾ ವಿರುದ್ಧ ನಾಲಿಗೆ ಹರಿಯಬಿಟ್ಟಿರುವ ಅವರು, ಸುಧಾ ಅವರಿಗೆ ಸಭೆಗಳು ಮತ್ತು ದೇವಾಲಯಗಳಲ್ಲಿ ಹಾಡಲು ಅವಕಾಶ ನೀಡಬಾರದೆಂಬ ಫತ್ವಾವನ್ನೂ ಹೊರಡಿಸಿದ್ದಾರೆ! ಸುಧಾ ಅವರ ವಿದೇಶಿ ಅಳಿಯನ ಬಣ್ಣದ ಬಗ್ಗೆಯೂ ಜನಾಂಗೀಯ ನಿಂದನೆಗಳು ಕೇಳಿ ಬಂದಿವೆ. ಮಾಳವಿಕಾ ಕ್ರಿಶ್ಚಿಯನ್ ಆಗಿ ಮತಾಂತರ ಹೊಂದಿದ್ದಾರೆ ಎಂಬ ಸುಳ್ಳು ಸುದ್ದಿಯನ್ನೂ ಹಬ್ಬಿಸಲಾಗುತ್ತಿದೆ. ‘ಅವರಂತೂ ಬೇರೆ ಧರ್ಮ ಸೇರಿದರು. ಆದರೆ ಉಳಿದ ಹುಡುಗಿಯರನ್ನು ರಕ್ಷಿಸುವ ಬಗ್ಗೆ ಮಾತಾಡೋಣ’ ಎಂದು ಸಂದೇಶ ಹಾಕಿದ್ದಾರೆ. ತಮ್ಮ ಧರ್ಮದ ಹುಡುಗಿಯರನ್ನು ರಕ್ಷಿಸುವ ಕಾಂಟ್ರಾಕ್ಟ್ ಅನ್ನು ಈ ಮಹಾಪುರುಷರಿಗೆ ಕೊಟ್ಟವರಾರೋ?

ಈ ಎರಡೂ ಪ್ರಸಂಗಗಳು ಜನರ, ಅದರಲ್ಲೂ ಪ್ರಮುಖವಾಗಿ ಹೆಣ್ಣುಮಕ್ಕಳ ಪ್ರತೀ ಹೆಜ್ಜೆಯೂ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಧರ್ಮದಿಂದ ನಿರ್ದೇಶಿಸಲ್ಪಡುತ್ತಿರುವುದರ ಸ್ಪಷ್ಟ ನಿದರ್ಶನ. ಝೈರಾಗೆ ಚಿತ್ರರಂಗ ಬಿಡುವಂತೆ ಯಾರೂ ನೇರವಾಗಿ ಹೇಳಿರಲಿಕ್ಕಿಲ್ಲ. ಅದು ಆಕೆ ಯೋಚಿಸಿ ತೆಗೆದುಕೊಂಡ ನಿರ್ಧಾರವೇ ಇರಬಹುದು. ಅದೂ ಅಲ್ಲದೆ ಅಷ್ಟು ಚಿಕ್ಕ ಹುಡುಗಿಯ ತೀರ್ಮಾನವನ್ನು ಗಂಭೀರವಾಗಿ ವಿಮರ್ಶಿಸುವುದೂ ಸಲ್ಲದು. ಝೈರಾ ನಿರ್ಧಾರ ಸರಿಯೋ ತಪ್ಪೋ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ. ಆದರೆ ‘ಸೀಕ್ರೆಟ್ ಸೂಪರ್ ಸ್ಟಾರ್‌’ ಸಿನಿಮಾದಲ್ಲಿ ಧರ್ಮದ ಸಂಕೋಲೆಯನ್ನು ಕಳಚಿಹಾಕಿ ಹಾಡುಗಾರ್ತಿಯಾಗುವುದನ್ನು ದಿಟ್ಟತನದಿಂದ ಆಯ್ಕೆ ಮಾಡಿಕೊಳ್ಳುವ ಹುಡುಗಿಯ ಪಾತ್ರ ನಿರ್ವಹಿಸಿದ್ದ ಝೈರಾ, ನಿಜಜೀವನದಲ್ಲಿ ನಟಿಸದಿರಲು ಧಾರ್ಮಿಕ ಕಾರಣವನ್ನೇ ಕೊಟ್ಟಿರುವುದು ಮಾತ್ರ ವಿಷಾದದ ಸಂಗತಿ.

ಮನರಂಜನಾ ಕ್ಷೇತ್ರದಲ್ಲಿರುವ ಇತರ ಮುಸ್ಲಿಂ ಮಹಿಳೆಯರ ಮೇಲೆ ಝೈರಾ ನಿರ್ಧಾರ ನೇತ್ಯಾತ್ಮಕ ಪರಿಣಾಮಗಳನ್ನು ಬೀರದೇ ಇದ್ದೀತೇ? ಸ್ವಾಮಿ ಚಕ್ರಪಾಣಿ ಎಂಬುವರು ‘ಹಿಂದೂ ನಟಿಯರು ಝೈರಾಳಿಂದ ಸ್ಫೂರ್ತಿ ಪಡೆಯಬೇಕು’ ಎಂಬ ಹೇಳಿಕೆ ನೀಡಿರುವುದು ಇದನ್ನು ಸ್ಪಷ್ಟಪಡಿಸುತ್ತದೆ. ಧರ್ಮ ಯಾವುದೇ ಆಗಲಿ ಮೊದಲು ಈ ಉಪದೇಶಕರ ಕಣ್ಣಿಗೆ ಬೀಳುವುದು ಮಹಿಳೆಯರೇ. ನಟರಿಗೆ ಯಾಕೆ ಯಾರೂ ಈ ರೀತಿಯ ಉಚಿತ ಸಲಹೆಗಳನ್ನು ಕೊಡುವುದಿಲ್ಲ? ದುರದೃಷ್ಟವಶಾತ್ ಎಲ್ಲ ಧರ್ಮಗಳ ಮಹಿಳೆಯರ ಕಾಲಿನ ಕಾಣದ ಸಂಕೋಲೆಗಳು ಇಂತಹ ಘಟನೆಗಳಿಂದ ಇನ್ನಷ್ಟು ಬಿಗಿಯಾಗುತ್ತವೆ. ಇನ್ನು ಝೈರಾ ತೀರ್ಮಾನ ಅವರ ಸ್ವಂತದ್ದಾಗಿರಲಾರದು ಎನ್ನುವ ಅನುಪಮ್ ಖೇರ್ ಥರದವರು ಸುಧಾ ಅವರ ಮೇಲಿನ ವಾಗ್ದಾಳಿಯನ್ನು ಕಂಡೂ ಕಾಣದಂತೆ ಇದ್ದುಬಿಡುತ್ತಾರೆ!

ಈ ವಿಚಾರಗಳೆಲ್ಲ ಮುಂದೊಂದು ದಿನ ತಮ್ಮ ಬುಡಕ್ಕೇ ಬರುತ್ತವೆ ಎಂಬುದರ ಅರಿವಿಲ್ಲದ ನಮ್ಮ ಬಹುತೇಕ ಹುಡುಗ–ಹುಡುಗಿಯರು ಸ್ವಂತ ಆಲೋಚಿಸುವ ಕಷ್ಟವನ್ನೇ ತೆಗೆದುಕೊಳ್ಳದೆ ‘ವಾಟ್ಸ್‌ಆ್ಯಪ್‌ ಯೂನಿವರ್ಸಿಟಿ’ಯ ವಿಚಾರಗಳನ್ನು ಓದುತ್ತಾ, ನಂಬುತ್ತಾ, ಹಂಚುತ್ತಾ ಏಕರೂಪದ ಆಲೋಚನೆಯುಳ್ಳ ರೋಬೊಗಳಾಗುತ್ತಿರುವುದು ಇನ್ನೂ ವಿಷಾದನೀಯ ವಿಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT