ಶುಕ್ರವಾರ, ಡಿಸೆಂಬರ್ 13, 2019
26 °C

ಇತಿಹಾಸವನ್ನು ಕಾಣುವ ದೃಷ್ಟಿ ಬದಲಾಗಲಿ

ನಿರಂಜನಾರಾಧ್ಯ ವಿ.ಪಿ. Updated:

ಅಕ್ಷರ ಗಾತ್ರ : | |

Prajavani

ನಮ್ಮ ಪಠ್ಯಪುಸ್ತಕಗಳು, ಅದರಲ್ಲೂ ವಿಶೇಷವಾಗಿ ಇತಿಹಾಸದ ಪುಸ್ತಕಗಳು ಯಾವುದೇ ಪೂರ್ವಗ್ರಹ ವಿಲ್ಲದೆ ಜ್ಞಾನಾರ್ಜನೆಯ ಭಾಗವಾಗಿ, ವಸ್ತುನಿಷ್ಠವಾದಮಾಹಿತಿಯನ್ನು ಸಾಕ್ಷ್ಯಾಧಾರಗಳ ಮೂಲಕ ಒದಗಿಸಬೇಕು. ಹೀಗಾಗಬೇಕಾದರೆ, ತಜ್ಞರೆನಿಸಿಕೊಂಡ ಇತಿಹಾಸಕಾರರಲ್ಲದೆ, ಅದನ್ನು ತರಗತಿ ಕೋಣೆಯಲ್ಲಿ ಬೋಧಿಸಬೇಕಾದ ಸಾಮಾನ್ಯ ಶಿಕ್ಷಕರನ್ನೂ ಈ ಪ್ರಕ್ರಿಯೆಯಲ್ಲಿ ಪ್ರಧಾನವಾಗಿ ತೊಡಗಿಸಿಕೊಳ್ಳುವುದು ಅತೀ ಮುಖ್ಯವಾಗುತ್ತದೆ. ಕಲಿಕೆಯ ಭಾಗವಾಗಿ ಒದಗಿಸುವ ಮಾಹಿತಿಯ ಸತ್ಯಾಸತ್ಯತೆಯನ್ನು ವಿಶ್ಲೇಷಿಸಿ, ಸರಿ-ತಪ್ಪುಗಳನ್ನು ಒರೆಗೆ ಹಚ್ಚಿ, ತನ್ನದೇ ರೀತಿಯಲ್ಲಿ ವಿಮರ್ಶಾತ್ಮಕ ತೀರ್ಮಾನ ಕೈಗೊಳ್ಳುವ ಶಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಶಿಕ್ಷಣದ ಮುಖ್ಯ ಗುರಿ.

ಇತಿಹಾಸವನ್ನು ಬೋಧಿಸುವ ಹಲವು ಉದ್ದೇಶಗಳ ಪೈಕಿ ಮುಖ್ಯವಾದದ್ದೆಂದರೆ, ಮಕ್ಕಳು ತಾವು ಭಾಗವಾಗಿರದ ಇತಿಹಾಸವನ್ನು ಆದಷ್ಟೂ ವಸ್ತುನಿಷ್ಠವಾಗಿ ಚಿತ್ರಿಸಿಕೊಳ್ಳಲು ಸಹಾಯ ಮಾಡುವುದೇ ಹೊರತು, ಸಾಂಪ್ರದಾಯಿಕ ನೆಲೆಯಲ್ಲಿ ಇತಿಹಾಸವನ್ನು ತಿರುಚುವುದಾಗಲೀ ತಪ್ಪುದಾರಿಗೆ ದೂಡುವುದಾಗಲೀ ಅಲ್ಲ. ಲಭ್ಯವಿರುವ ಸಂಶೋಧನೆಗಳ ಪ್ರಕಾರ ಮಕ್ಕಳಿಗೆ ಇತಿಹಾಸವನ್ನು ಬೋಧಿಸುವಾಗ ಗಮನದಲ್ಲಿ ಇರಿಸಿಕೊಳ್ಳಬೇಕಾದ ಪ್ರಮುಖ ಅಂಶವೆಂದರೆ, ಇತಿಹಾಸವನ್ನು ಕೇವಲ ವಶಾಹತುಶಾಹಿಗಳು ಅಥವಾ ರಾಷ್ಟ್ರೀಯವಾದಿಗಳ ದೃಷ್ಟಿಕೋನದಿಂದ ವಿವಾದಗೊಳಿಸಬಹುದಾದ ವಿಷಯವನ್ನಾಗಿ ಮಾತ್ರ ನೋಡದೆ, ರಚನಾತ್ಮಕವಾಗಿ ಪರಿಚಯಿಸುವ ವಸ್ತುನಿಷ್ಠತೆಯಿಂದ ನೋಡಬೇಕಾಗುತ್ತದೆ.

ಸಾಮಾನ್ಯವಾಗಿ ಮಧ್ಯಕಾಲೀನ ಇತಿಹಾಸವೆಂದರೆ, ಹಿಂದೂ ಮತ್ತು ಮುಸಲ್ಮಾನರ ನಡುವಿನ ವಿಭಜನೆಯನ್ನು ಪುನರುಚ್ಚರಿಸುವ ಮತ್ತು ಆ ಎರಡು ವರ್ಗಗಳನ್ನು ಕಡುವೈರಿಗಳಂತೆ, ಎರಡು ಪ್ರತ್ಯೇಕ ಗುಂಪುಗಳಂತೆ ಬಿಂಬಿಸುವ ಪರಿಪಾಟವಾಗಿದೆ. ಇಂತಹ ದೃಷ್ಟಿಕೋನವು ತರಗತಿಯಲ್ಲಿರುವ ಎಲ್ಲ ವರ್ಗದ ಮಕ್ಕಳ ಮೇಲೆ, ಅದರಲ್ಲೂ ವಿಶೇಷವಾಗಿ ಹಿಂದೂ- ಮುಸಲ್ಮಾನ ವರ್ಗಕ್ಕೆ ಸೇರಿದ ಮಕ್ಕಳ ಮೇಲೆ ಎಂತಹ ಪರಿಣಾಮವನ್ನುಂಟು ಮಾಡಬಹುದೆಂಬ ಕನಿಷ್ಠ ಪ್ರಜ್ಞೆಯೂ ಇಲ್ಲದಿರುವುದು ಹಲವು ಸಂದರ್ಭಗಳಲ್ಲಿ ಎದ್ದು ಕಾಣುತ್ತದೆ. ಭಾರತದ ಏಕತೆ ಮತ್ತು ಸಮಗ್ರತೆ ದೃಷ್ಟಿಯಿಂದ ಇದು ಅಪಾಯಕಾರಿ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾದುದು.

19ನೇ ಶತಮಾನದ ಅಂತ್ಯದಲ್ಲಿ ಭಾರತವು ಸಾಮ್ರಾಜ್ಯಶಾಹಿಗಳ ಹಿಡಿತದಲ್ಲಿತ್ತು. ವಶಾಹತುಶಾಹಿ ಶಕ್ತಿಯು ಸಿಪಾಯಿ ದಂಗೆ ಹಾಗೂ ರೈತರ ದಂಗೆಯನ್ನು ತನ್ನ ಅಧೀನದಲ್ಲಿ ಇಟ್ಟುಕೊಳ್ಳುವಲ್ಲಿ ಯಶಸ್ವಿಯಾದರೂ ಕ್ರಮೇಣ ಹೊಸ ಮಧ್ಯಮವರ್ಗದ ಮೂಲಕ ಉದಯಿಸಿದ ರಾಷ್ಟ್ರೀಯತೆಯನ್ನು ಎದುರಿಸಬೇಕಾಯಿತು. ಇತಿಹಾಸದ ಬಗೆಗಿನ ಬರವಣಿಗೆ ಮತ್ತು ಬೋಧನೆಯು ಈ ರಾಷ್ಟ್ರೀಯತೆಯನ್ನು ಪ್ರಶ್ನಿಸಬೇಕಾದ ಅಗತ್ಯ ಹಾಗೂ ಅನಿವಾರ್ಯ ಇದೆ. ಕಾರಣ, ಅವರ ದೃಷ್ಟಿಯಲ್ಲಿ ಭಾರತ ಯಾವಾಗಲೂ ಪರಕೀಯ ಶಕ್ತಿಗಳ ಅಧೀನಕ್ಕೆ ಒಳಪಟ್ಟಿತ್ತು. ಆದ್ದರಿಂದ ಭಾರತದ ಇತಿಹಾಸವೆಂದರೆ ಆಕ್ರಮಣಗಳ ವಿವರಪೂರ್ಣ ಕಥನ. ಇವರಲ್ಲಿ ನಿರಂತರ ಆಕ್ರಮಣಕಾರರೆಂದರೆ ಮುಸಲ್ಮಾನರು, ಅವರು ಭಾರತದಲ್ಲಿಯೇ ನೆಲೆಸಿ ಆಳ್ವಿಕೆ ನಡೆಸಿದ್ದಲ್ಲದೆ ಶಕ್ತಿಯುತ ಸಮುದಾಯವಾಗಿ ಬೆಳೆದರು ಇತ್ಯಾದಿ. ಒಂದು ಮಧ್ಯಮವರ್ಗ ಹುಟ್ಟುಹಾಕಿದ ಈ ಆಲೋಚನಾಕ್ರಮ, ದೇಶದಲ್ಲಿ ಹಿಂದೂ-ಮುಸಲ್ಮಾನರ ನಡುವೆ ನಿರಂತರ ಕಲಹವನ್ನು ಸೃಷ್ಟಿಸಿತು.

ಹೀಗಾಗಿ, ಟಿಪ್ಪು ಜಯಂತಿ ಹಾಗೂ ಪಠ್ಯ ವಿಷಯಕ್ಕೆ ಸಂಬಂಧಿಸಿ ನಡೆಯುತ್ತಿರುವ ಪರ-ವಿರೋಧದ ಚರ್ಚೆಗಳು ಇತಿಹಾಸಕ್ಕಿಂತ ಹೆಚ್ಚಾಗಿ ರಾಜಕೀಯ ಮೇಲಾಟದವಾಗಿವೆ. ಬ್ರಿಟಿಷರ ಮಾದರಿಯಲ್ಲಿಯೇ, ಒಡೆದು ಆಳುವ ನೀತಿಯನ್ನು ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳುತ್ತಿರುವ ಇಂದಿನ ರಾಜಕಾರಣ ಅಪಾಯಕಾರಿ. ಇತಿಹಾಸದ ಸ್ವಾತಂತ್ರ್ಯ ಸೇನಾನಿಗಳು, ನಾಯಕರು ಒಂದು ರಾಜಕೀಯ ಪಕ್ಷಕ್ಕೆ ಅಪ್ರತಿಮ ನಾಯಕರಂತೆ ಕಂಡರೆ, ಅದೇ ರಾಜ್ಯದಲ್ಲಿನ ಮತ್ತೊಂದು ರಾಜಕೀಯ ಪಕ್ಷಕ್ಕೆ ಖಳನಾಯಕರೆನಿಸುವುದು ವಿಪರ್ಯಾಸ. ಸ್ವಾತಂತ್ರ್ಯ ದೊರಕಿ ಏಳು ದಶಕಗಳು ಕಳೆದರೂ ನಾವು ನಮ್ಮ ಮಕ್ಕಳಿಗೆ ಬೋಧಿಸಬೇಕಾದ ಇತಿಹಾಸವನ್ನು ವಿವಾದಮುಕ್ತಗೊಳಿಸಿ ಒಮ್ಮತಕ್ಕೆ ಬರಲು ಸಾಧ್ಯವಾಗದಿರುವುದು ನಮ್ಮೊಳಗಿನ ರಾಜಕೀಯ ವೈರುಧ್ಯ ಮತ್ತು ದ್ವಂದ್ವಗಳ ಪರಿಣಾಮವೇ ಹೊರತು ಇತಿಹಾಸದ ತಪ್ಪಲ್ಲ.

ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಅಂತಹ ಬದಲಾವಣೆಯಾಗದೆ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಕಾಣಲು ಸಾಧ್ಯವಿಲ್ಲ. ಪ್ರತೀ ಬಾರಿ ಸರ್ಕಾರ ಬದಲಾದಾಗ ಶಿಕ್ಷಣ ವ್ಯವಸ್ಥೆಯನ್ನು, ಅದರಲ್ಲೂ ವಿಶೇಷವಾಗಿ ಪಠ್ಯ ವಿಷಯವನ್ನು ತಮ್ಮ ಸಿದ್ಧಾಂತಗಳಿಗೆ ಅನುಗುಣವಾಗಿ ಬದಲಾಯಿಸಬೇಕೆಂಬುದು ಸಂಕುಚಿತ ದೃಷ್ಟಿಕೋನ. ಶಿಕ್ಷಣ ಕ್ಷೇತ್ರದಲ್ಲಿ ಆಳವಾಗಿ ಬೇರೂರಿರುವ ಅಸಮಾನತೆ, ತಾರತಮ್ಯ ಮತ್ತು ಖಾಸಗೀಕರಣ- ವ್ಯಾ‍ಪಾರೀಕರಣವನ್ನು ಮುಕ್ತಗೊಳಿಸಿ, ಎಲ್ಲಾ ಮಕ್ಕಳಿಗೆ ಕನಿಷ್ಠ 12ನೇ ತರಗತಿವರೆಗೆ ಸಮಾನ ಗುಣಮಟ್ಟದ ಉಚಿತ ಶಿಕ್ಷಣ ಒದಗಿಸಬೇಕಾದ ಮೂಲ ಜವಾಬ್ದಾರಿಯಿಂದ ನುಣುಚಿಕೊಳ್ಳುವ, ಆ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸವಲ್ಲದೆ ಮತ್ತೇನೂ ಅಲ್ಲ. ಸರ್ಕಾರ ಬದಲಾದಾಗ ಉಂಟಾಗುವ ಈ ರಾಜಕೀಯ ಮೇಲಾಟದಿಂದ ಪಠ್ಯ ರಚನಾಕಾರರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಮುಕ್ತಗೊಳಿಸಿವಸ್ತುನಿಷ್ಠತೆಯನ್ನು ಕಾಯ್ದುಕೊಳ್ಳಬೇಕಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು