ಶುಕ್ರವಾರ, ಮೇ 20, 2022
19 °C
ಬದುಕು ವರ್ತಮಾನದಲ್ಲಿದೆ ಎಂಬುದನ್ನು ಅರಿಯದವರು ಪರಿಪೂರ್ಣತೆ ಸಾಧಿಸಲಾರರು

ಸಂಗತ: ವರ್ತಮಾನಕ್ಕೆ ‘ಸ್ವಾವಲಂಬನೆ’ಯ ದೀವಿಗೆ

ಡಾ. ಜ್ಯೋತಿ Updated:

ಅಕ್ಷರ ಗಾತ್ರ : | |

Prajavani

ಅಮೆರಿಕದ ತತ್ವಜ್ಞಾನಿ, ಲೇಖಕ ರಾಲ್ಫ್ ವಾಲ್ಡೊ ಎಮರ್ಸನ್ 1841ರಲ್ಲಿ ಬರೆದಿರುವ ಪ್ರಬಂಧ ‘ಸೆಲ್ಫ್‌ ರಿಲಯನ್ಸ್‌’ (ಸ್ವಾವಲಂಬನೆ) ಅರ್ಥಪೂರ್ಣವಾಗಿ ಬದುಕುವ ಬಗೆಯನ್ನು ವಿಶಿಷ್ಟವಾಗಿ ವ್ಯಾಖ್ಯಾನಿಸಿ, ಮನುಷ್ಯಜೀವನದ ಸಾರ್ಥಕತೆಯ ಕುರಿತಾಗಿ ಸ್ವವಿಮರ್ಶೆಗೆ ಹಚ್ಚುತ್ತದೆ.

ಎಮರ್ಸನ್ ತನ್ನ ಪ್ರಬಂಧವನ್ನು ಪ್ರತಿಭೆಯ ವ್ಯಾಖ್ಯಾನದಿಂದ ಆರಂಭಿಸುತ್ತಾರೆ. ಅವರ ಪ್ರಕಾರ, ಪ್ರತಿಭೆಯೆಂದರೆ ಮನುಷ್ಯ ತಾನು ರೂಪಿಸಿಕೊಂಡಿರುವ ಸ್ವಚಿಂತನೆಗಳನ್ನು ಅಥವಾ ಕಂಡುಕೊಂಡ ಜೀವನಸತ್ಯಗಳನ್ನು ಪ್ರಾಮಾಣಿಕವಾಗಿ ಅನುಸರಿಸುವುದು. ವಿಸ್ಮಯವೆಂದರೆ, ಮನುಷ್ಯನ ಅಂತರಂಗಕ್ಕೆ ಸರಿಯೆನಿಸುವ ವಿಚಾರ, ವಿಶ್ವಕ್ಕೂ ಸತ್ಯವಾಗಿ ಅನ್ವಯಿ ಸುತ್ತದೆ. ಈ ಮಾತನ್ನು ಜಗತ್ತಿನ ಶ್ರೇಷ್ಠ ಚಿಂತಕರು ಪ್ರಾಯೋಗಿಕವಾಗಿ ಅನುಭವಿಸಿ, ಜಗತ್ತಿಗೆ ಸಾರಿದ್ದಾರೆ ಕೂಡ. ಕುವೆಂಪು ಹೇಳಿದಂತೆ ‘ಯಾವ ಕಾಲದ ಶಾಸ್ತ್ರ ವೇನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?’ ಹೀಗೆ, ಅಂತರಂಗದ ಕರೆಯು ಮನುಷ್ಯನಿಗೆ ಸತ್ಯದರ್ಶನ ಮಾಡಿಸಿ, ಅವನ ವ್ಯಕ್ತಿತ್ವ ನಿರೂಪಿಸುವಲ್ಲಿ ಬಹಳ ಮಹತ್ವದ ಪಾತ್ರ ವಹಿಸುತ್ತದೆ.

ಈ ಹಿನ್ನೆಲೆಯಲ್ಲಿ, ಮನುಷ್ಯ ತನ್ನ ಅಂತರಂಗದ ದನಿಯನ್ನು ಆಲಿಸುವುದನ್ನು ಬಿಟ್ಟು, ಇನ್ನೊಬ್ಬರ ಕುರುಡು ಅನುಕರಣೆ ಮಾಡುವುದನ್ನು ಎಮರ್ಸನ್ ಆತ್ಮಹತ್ಯೆಗೆ ಹೋಲಿಸುವ ಮೂಲಕ, ಅದು ಸೃಜನ ಶೀಲತೆಗೆ ಮಾರಕ ಎನ್ನುತ್ತಾರೆ. ಆದರೆ, ನಮ್ಮ ಸಾಮಾಜಿಕ ವ್ಯವಸ್ಥೆಯು ಮನುಷ್ಯನಿಂದ ಅನುಕರಣೆ ಯನ್ನು ನಿರೀಕ್ಷಿಸುತ್ತದೆ. ಇದು, ವ್ಯವಸ್ಥೆಗಳು ನಿರಾತಂಕ ವಾಗಿ ಮುಂದುವರಿಯಲು ಅಗತ್ಯ ಕೂಡ. ಆದರೆ, ಇವುಗಳಿಂದ ಬಿಡುಗಡೆ ಪಡೆಯುವುದು ವ್ಯಕ್ತಿಯ ಇಚ್ಛಾಶಕ್ತಿಯನ್ನು ಅವಲಂಬಿಸಿದೆ.

ನಾವಿಲ್ಲಿ ಮುಖ್ಯವಾಗಿ ಅರಿಯಬೇಕಾದುದು, ಯಾವುದೇ ಸಾಮಾಜಿಕ ಸತ್ಯಗಳು ಅಂತಿಮವಾದುವಲ್ಲ. ಆದರೆ, ಸಮಾಜದಲ್ಲಿ ನಮ್ಮ ಬದುಕನ್ನು ಸಹನೀಯವಾಗಿಸಲು, ಇವುಗಳನ್ನು ಬಹುತೇಕ ಪ್ರಶ್ನಿಸದೆ ಕುರುಡಾಗಿ ಅನುಸರಿಸುತ್ತೇವೆ. ಇವುಗಳಿಂದ ಬಿಡಿಸಿಕೊಂಡ ಏಕಾಂಗಿ ವ್ಯಕ್ತಿಗೆ ಸ್ವತಂತ್ರವಾಗಿರುವುದು ಸುಲಭ. ಆದರೆ, ಗುಂಪಿನೊಳಗಿದ್ದೂ ತನ್ನ ನೈಜತೆ, ಅಸ್ಮಿತೆ, ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು, ಹರಸಾಹಸ ಮಾಡಿ ಸಿದ್ಧಿಸಿಕೊಳ್ಳ ಬೇಕಾದ ವಿಚಾರ.

ಎಮರ್ಸನ್ ಹೇಳುವಂತೆ, ನಾವು ಸ್ವಅರಿವು ಕಂಡುಕೊಳ್ಳದೆ ಇನ್ನೊಬ್ಬರನ್ನು ಅನುಸರಿಸಿದರೆ, ಕೇವಲ ಅವರ ವಿಚಾರಧಾರೆಗಳ ಪರವಾಗಿ ವಕೀಲಿಗಿರಿ ಮಾಡಿದಂತೆಯೇ ವಿನಾ ನಮ್ಮತನ ಅಲ್ಲಿರುವುದಿಲ್ಲ. ವಸ್ತುಸ್ಥಿತಿಯೇನೆಂದರೆ, ಪರರ ಅನುಕರಣೆ ಮನುಷ್ಯನಿಗೆ ಬಹಳ ಸುಲಭದ ದಾರಿ. ಅಲ್ಲದೆ, ನಮ್ಮ ವಿಭಿನ್ನತೆ ಪರರಿಗೆ ಅಸಹನೀಯ ಎನಿಸಬಹುದು, ನಮ್ಮಲ್ಲಿಯೂ ಮಾನಸಿಕ ಒತ್ತಡ ಉಂಟಾಗಬಹುದು. ಹೆಚ್ಚಿನ ಜನರು, ಇದ್ಯಾವುದರ ಗೋಳು ಬೇಡವೆಂದೇ ಗುಂಪಿನೊಳಗೊಂದಾಗಿರಲು ಬಯಸುತ್ತಾರೆ. ಆದರೆ, ಅರ್ಥಪೂರ್ಣ ಬದುಕು ನಡೆಸುವ ದಿಸೆಯಲ್ಲಿ, ಇತರರು ನಮ್ಮ ಕುರಿತು ಏನು ಯೋಚಿಸುತ್ತಾರೆ ಎನ್ನುವುದಕ್ಕಿಂತ ಸ್ವಚಿಂತನೆಗೆ ಬದ್ಧತೆ ತೋರಿಸುವುದು ಮುಖ್ಯ.

ಪೈಥಾಗರಸ್, ಸಾಕ್ರಟೀಸ್, ಕೋಪರ್ನಿಕಸ್, ಗೆಲಿಲಿಯೊ, ನ್ಯೂಟನ್ ಅವರಂತಹ ವಿಭಿನ್ನ ಚಿಂತಕ ರನ್ನು ಸುತ್ತಲಿನ ಸಮಾಜ ತಪ್ಪಾಗಿ ಅರ್ಥೈಸಿಕೊಂಡಿತ್ತು. ಹಾಗಾಗಿ, ಮನುಷ್ಯ ಬೇರೆಯವರ ಅನುಮೋದನೆಗೆ ಪರಿತಪಿಸದೆ, ತನಗಿಷ್ಟವಾಗುವ ವಿಷಯದಲ್ಲಿ ಶ್ರೇಷ್ಠನಾಗುವ ಗುರಿ ಹೊಂದುವುದು ಉತ್ತಮ.

ಷೇಕ್ಸ್‌ಪಿಯರ್‌ ಬರಹಗಳನ್ನು ಅಧ್ಯಯನ ಮಾಡಿಕೊಂಡವನು ಇನ್ನೊಬ್ಬ ಷೇಕ್ಸ್‌ಪಿಯರ್‌ ಆಗಲಾರ. ಹಾಗಂತ, ಸಮಾಜದ ಮಾನದಂಡ
ಗಳನ್ನು ತಿರಸ್ಕರಿಸುವುದೆಂದರೆ ಎಲ್ಲವನ್ನೂ ತಿರಸ್ಕರಿ ಸುವುದು ಎಂದರ್ಥವಲ್ಲ. ಆದರೂ ಮನುಷ್ಯನ ಸ್ವಂತ ಮಾನದಂಡಗಳು ಸಾಮಾಜಿಕ ನೈತಿಕತೆಗಿಂತ ಹೆಚ್ಚು ಸ್ಪಷ್ಟತೆ ಕೊಡುತ್ತವೆ. ಯಾಕೆಂದರೆ, ಸಾಮಾಜಿಕ ಮಾನದಂಡಗಳು ವ್ಯಕ್ತಿಯಲ್ಲಿ ಹುಟ್ಟಿಸುವ ಭಯವನ್ನು ಆಧರಿಸಿ ಅಸ್ತಿತ್ವದಲ್ಲಿರುತ್ತವೆ.

ಎಮರ್ಸನ್ ಕಂಡುಕೊಂಡಂತೆ, ನಿರಂತರ ಬಾಹ್ಯ ಪ್ರಯಾಣದಿಂದ ಮನಸ್ಸು ಪರಿಪಕ್ವವಾಗುವುದಿಲ್ಲ. ಇದು ಕೇವಲ ದೈಹಿಕ ಮತ್ತು ಮಾನಸಿಕ ಚಡಪಡಿಕೆಯ ಸಂಕೇತವಷ್ಟೇ. ಗ್ರೀಕ್ ಚಿಂತನೆ ರೂಪಿಸಿದ ತತ್ವಜ್ಞಾನಿಗಳು ಹೆಚ್ಚು ಪ್ರಯಾಣಿಸಿರಲಿಲ್ಲ. ಹಾಗಾಗಿ, ಜ್ಞಾನಿಯಾದವನು ಅಂತರ್ಮುಖವಾಗಿ ಪಯಣಿಸುತ್ತಾ, ತನ್ನನ್ನು ಹೆಚ್ಚು ಅರಿತುಕೊಳ್ಳುತ್ತಾನೆ.

ಸಾಮಾನ್ಯ ಗ್ರಹಿಕೆಗೆ ತದ್ವಿರುದ್ಧವಾಗಿ, ನಮ್ಮ ಸಮಾಜ ಎಂದಿಗೂ ಪ್ರಗತಿಯಾಗುವುದಿಲ್ಲ, ನಿರಂತರವಾಗಿ ಬದ ಲಾಗುತ್ತಿರುತ್ತದೆ. ಉದಾಹರಣೆಗೆ: ಇಂದಿನ ಜನಾಂಗ ಹೆಚ್ಚು ಆಸ್ತಿ ಮತ್ತು ವಿದ್ಯೆ ಹೊಂದಿರಬಹುದು. ಆದರೆ, ಕಡಿಮೆ ಆರೋಗ್ಯ ಹೊಂದಿದೆ. ಅದೇ ರೀತಿ, ಆಧುನಿಕ ಮನುಷ್ಯ ಗುಣಮಟ್ಟದ ವಾಚ್ ಧರಿಸಬಹುದು, ಆದರೆ, ಹಿಂದಿನವರಂತೆ, ಸೂರ್ಯನ ಚಲನೆಗೆ ಅನುಗುಣವಾಗಿ ಸಮಯವನ್ನು ಹೇಳಲಾರ. ಹೀಗೆ, ಕಾಲವೆಂಬುದು ದಿನವೂ ದಡಕ್ಕೆ ಅಪ್ಪಳಿಸುವ ಸಮುದ್ರದ ಹೊಸ ಅಲೆಗಳಂತೆ, ಆದರೆ ನೀರು ಮಾತ್ರ ಅದೇ ಆಗಿರುತ್ತದೆ. ಜೀವನದಲ್ಲಿ ತಾನು ಕಂಡುಕೊಂಡ ಸತ್ಯ ಹಾಗೂ ಅವುಗಳಿಂದ ರೂಪಿಸಿಕೊಂಡ ತತ್ವಗಳನ್ನು ಅನುಸರಿಸಿಕೊಂಡು ಬದುಕಿದರೆ, ಬಾಹ್ಯ ಜಗತ್ತು ನಮ್ಮ ಮೇಲೆ ವಿಶೇಷ ಪರಿಣಾಮ ಬೀರುವುದಿಲ್ಲ ಹಾಗೂ ಮನಸ್ಸಿಗೆ ಸಹಜ ಶಾಂತಿ ದೊರೆಯುತ್ತದೆ.

ಕೊನೆಯದಾಗಿ, ಬದುಕು ವರ್ತಮಾನದಲ್ಲಿದೆ ಎಂಬುದನ್ನು ಅರಿಯದವರು ಪರಿಪೂರ್ಣತೆ ಸಾಧಿಸಲು ಸಾಧ್ಯವಿಲ್ಲ. ಅಮೆರಿಕದ ಕವಿ ಲಾಂಗ್ ಫೆಲೋ ಕೂಡ ಹೇಳಿರುವಂತೆ, ಕಳೆದುಹೋದ ಭೂತಕಾಲವನ್ನು ಮರೆತು, ಅನಿಶ್ಚಿತ ಭವಿಷ್ಯದ ಕನಸಿನಲ್ಲಿ ಕಾಲಹರಣ ಮಾಡದೆ, ವಾಸ್ತವದ ವರ್ತಮಾನ ಕಾಲದಲ್ಲಿ ತನ್ನ ಅಂತರಂಗದ ಕರೆಗೆ ಓಗೊಟ್ಟು ಸಾಧಿಸುವುದೇ ಜೀವನದ ಸಾರ್ಥಕ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.