ಸರ್ಕಾರಿ ಬಸ್ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ‘ಶಕ್ತಿ’ ಯೋಜನೆ ಜಾರಿ ಆದಾಗಿನಿಂದ, ಕೆಎಸ್ಆರ್ಟಿಸಿ ಬಸ್ಸುಗಳಲ್ಲಿನ ಚಿತ್ರಣವೇ ಬದಲಾಗಿದೆ. ಆ ವಿದ್ಯಮಾನಗಳನ್ನು ಗಮನಿಸಿದರೆ, ಕೆಲವು ಪರಿವರ್ತನೆಗಳು ಸಾಧ್ಯವಾಗದೇ ಹೋದರೆ ಜನಪರವಾದ ಯೋಜನೆಯೊಂದರ ಕಾರ್ಯಾನುಷ್ಠಾನದ ನೆಲೆಯಲ್ಲಿ ತೊಡಕುಗಳು ಎದುರಾಗುವುದರಲ್ಲಿ ಸಂಶಯವಿಲ್ಲ.

ಸಾಲು ಸಾಲು ರಜೆಗಳಿರುವ ಸಂದರ್ಭದಲ್ಲಿ ಬೆಂಗಳೂರಿನಂತಹ ಕೇಂದ್ರ ನಗರದಿಂದ ತಮ್ಮ ಊರುಗಳಿಗೂ ಮತ್ತು ರಜೆ ಮುಗಿಸಿ ತಮ್ಮ ಊರಿನಿಂದ ಬೆಂಗಳೂರಿನಂತಹ ಮಹಾನಗರಗಳ ಕಡೆಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿದೆ. ವಿಶೇಷ ಬಸ್ಸುಗಳ ಹೊರತಾಗಿಯೂ, ಬಿಎಂಟಿಸಿ ಬಸ್ಸುಗಳನ್ನು ಜಿಲ್ಲಾ ಕೇಂದ್ರಗಳಿಗೆ ಕಳುಹಿಸುವ ವ್ಯವಸ್ಥೆಯನ್ನು ಪ್ರಯಾಣಿಕರ ದಟ್ಟಣೆ ಸಂದರ್ಭದಲ್ಲಿ ಮಾಡಲಾಗುತ್ತದೆ. ಇಷ್ಟಾದರೂ ಕಿಕ್ಕಿರಿದು ತುಂಬುವ ಬಸ್ಸುಗಳಿಗೇನೂ ಕಮ್ಮಿ ಇರುವುದಿಲ್ಲ.

ಒತ್ತಡದಿಂದ ವರ್ತಿಸುವ, ಕೋಪಗೊಳ್ಳುವ, ಪ್ರಯಾಣಿಕರನ್ನು ಏಕವಚನದಲ್ಲಿ ಮಾತನಾಡಿಸುವ, ಉಚಿತವಾಗಿ ಪ್ರಯಾಣಿಸುವ ಮಹಿಳೆಯರ ಜೊತೆಯಲ್ಲಿ ಅಗೌರವದಿಂದ ನಡೆದುಕೊಳ್ಳುವ ಸಾಕಷ್ಟು ನಿರ್ವಾಹಕರು, ಚಾಲಕರನ್ನು ನೋಡಬಹುದಾಗಿದೆ. ಈ ಪ್ರತಿಕ್ರಿಯೆಗಳೆಲ್ಲವೂ, ಜನರನ್ನು ಬಸ್ಸಿನೊಳಗೆ ನಿಯಂತ್ರಿಸಲು ಹರಸಾಹಸ ಪಡುವ ನಿರ್ವಾಹಕ ಮತ್ತು ಚಾಲಕರ ಕಾರ್ಯ ನಿರ್ವಹಣೆಯಲ್ಲಿ ಉಂಟಾದ ಒತ್ತಡದಿಂದಾಗಿ ನಿರೂಪಿತಗೊಂಡ ಮಾನಸಿಕ ಪ್ರತಿಕ್ರಿಯೆಗಳೇ ಆಗಿವೆ. ಕುಟುಂಬದಿಂದ ದೂರ ಉಳಿದ ಸಾರಿಗೆ ಸಂಸ್ಥೆಯ ನೌಕರರು ಬಿಡುವಿಲ್ಲದೆ, ರಜೆ ಇಲ್ಲದೆ ದುಡಿಯುತ್ತಾರೆ. ಮಾನಸಿಕ ಸ್ವಾಸ್ಥ್ಯಕ್ಕೆ ಅಗತ್ಯವಾದ ಕೌನ್ಸೆಲಿಂಗ್, ತರಬೇತಿ ಅವರಿಗಿರುವುದಿಲ್ಲ. ಹಾಗಾಗಿಯೇ, ಅವರು ಅಸಹನೆಯಿಂದ ವರ್ತಿಸುತ್ತಾರೆ. ಅವರ ವರ್ತನೆಗಳು ಸಾಮಾಜಿಕ ವ್ಯವಸ್ಥೆಯನ್ನು ಸ್ವಲ್ಪಮಟ್ಟಿಗೆ ಕಲುಷಿತಗೊಳಿಸುತ್ತವೆ.

ನಿರ್ವಾಹಕರ ಜೊತೆಯಲ್ಲಿ ಸಣ್ಣ ವಿಚಾರಕ್ಕೂ ವಾಗ್ವಾದಕ್ಕಿಳಿದು ಕೈ ಕೈ ಮಿಲಾಯಿಸುವ ಮಟ್ಟಿಗೆ ನಮ್ಮ ಜನಸಾಮಾನ್ಯರು ತಾಳ್ಮೆ ಕಳೆದುಕೊಳ್ಳುವುದೂ ಇದೆ. ಪ್ರಯಾಣಿಕರ ಜೊತೆಯಲ್ಲಿ ನಿರ್ವಾಹಕ ಮತ್ತು ಚಾಲಕರು ಸೌಜನ್ಯಯುತವಾಗಿ ವರ್ತಿಸಬೇಕು ಎನ್ನುವಂತೆಯೇ, ಪ್ರಯಾಣಿಕರೂ ನೌಕರರ ಸಂಕಷ್ಟವನ್ನರಿತುಕೊಂಡು ಸಹಕಾರ ಮನೋಭಾವ ಬೆಳೆಸಿಕೊಳ್ಳುವ ಅಗತ್ಯವಿದೆ. ಸಾರಿಗೆ ಸಂಸ್ಥೆ ನೌಕರರಿಗೆ ತರಬೇತಿ, ಕಾರ್ಯಾಗಾರವನ್ನು ಸರ್ಕಾರ ಹಮ್ಮಿಕೊಳ್ಳಬೇಕು. ವಿಶ್ರಾಂತಿ, ರಜೆ, ಆರೋಗ್ಯ ಸಂಬಂಧಿ ತಪಾಸಣೆಯಂತಹ ನೌಕರರ ಕ್ಷೇಮಾಭಿವೃದ್ಧಿಗೂ ಕೌಶಲಾಭಿವೃದ್ಧಿಗೂ ಸಂಬಂಧಿಸಿದ ಕಾರ್ಯಸೂಚಿಗಳನ್ನು ಅನುಷ್ಠಾನಗೊಳಿಸಬೇಕು.

ಬಸ್ಸಿನೊಳಗೆ ಮಹಿಳೆಯರಿಗೆ, ಅಂಗವಿಕರಿಗೆ ಹಾಗೂ ಹಿರಿಯ ನಾಗರಿಕರಿಗೆ ಮೀಸಲಿರಿಸಿದ ಸೀಟುಗಳಲ್ಲಿ ಮೀಸಲಾತಿಗೆ ಅರ್ಹರು ನಿಂತುಕೊಂಡು, ಮೀಸಲಾತಿ ಅನ್ವಯಿಸದವರು ಆ ಜಾಗಗಳನ್ನು ಆಕ್ರಮಿಸಿಕೊಂಡು ಪ್ರಯಾಣಿಸುವ ಸ್ಥಿತಿಯು ಸಹಜ ಎಂಬಂತೆ ಕಾಣಸಿಗುತ್ತದೆ. ಇಯರ್ ಫೋನ್ ಬಳಸದೆ ಜೋರಾಗಿ ಮೊಬೈಲಿನಲ್ಲಿ ಹಾಡು, ಸಿನಿಮಾಗಳನ್ನು ಹಾಕುವ, ಗಟ್ಟಿ ಧ್ವನಿಯಲ್ಲಿ ಫೋನಿನಲ್ಲಿ ಗಂಟೆಗಟ್ಟಲೆ ಮಾತನಾಡುವ, ಅನುಚಿತವಾಗಿ ವರ್ತಿಸುವ– ವಿಶೇಷವಾಗಿ ಯುವತಲೆಮಾರಿನ ವಿದ್ಯಾರ್ಥಿಗಳ– ನಡವಳಿಕೆ, ಇತ್ಯಾದಿ ಕುರಿತು ನಿರ್ವಾಹಕ ಮತ್ತು ಪ್ರಯಾಣಿಕರು ತುಟಿಕ್ಪಿಟಿಕ್ ಎನ್ನಲಾರರು. ಪ್ರಯಾಣಿಕರು ಪ್ರಯಾಣಿಸುವ ಸಂದರ್ಭದಲ್ಲಿ ನಿರ್ವಹಿಸಬೇಕಾದ ಸಾಮಾನ್ಯ ನಿಯಮಗಳನ್ನು ಪಾಲಿಸಲು ನಿರ್ವಾಹಕನೂ ಬದ್ಧನಾಗಿರಬೇಕು.

ಗರ್ಭಿಣಿಯರಿಗೆ ಬಸ್ಸುಗಳಲ್ಲಿ ಮೀಸಲು ಸೀಟನ್ನು ನಿಗದಿಪಡಿಸಬೇಕು. ಅಥವಾ ಮಹಿಳೆಯರಿಗೆ ಮೀಸಲಿರಿಸದ ಸೀಟುಗಳಲ್ಲಿ ಒಂದು ಸೀಟನ್ನು ಗರ್ಭಿಣಿಗೆ ಎಂದು ಮೀಸಲಿರಿಸುವುದು ಉತ್ತಮ. ಹಾಗೆಯೇ, ಕೆಂಪು ಬಸ್ಸುಗಳಲ್ಲಿ ಹೆಚ್ಚಾಗಿ ಪ್ರಯಾಣಿಸದ ವಿಧಾನಸಭಾ ಸದಸ್ಯರ, ಲೋಕಸಭಾ ಸದಸ್ಯರ ಮೀಸಲು ಸೀಟುಗಳನ್ನು ತೆಗೆದುಹಾಕುವುದು ಉತ್ತಮ. ಲಿಂಗತ್ವ ಅಲ್ಪಸಂಖ್ಯಾತರಿಗೂ ಒಂದೆರಡು ಸೀಟುಗಳನ್ನು ಮೀಸಲಿರಿಸಬಹುದು.

‘ಶಕ್ತಿ’ ಯೋಜನೆ ಆರಂಭವಾದ ನಂತರ ಪುರುಷ ಪ್ರಯಾಣಿಕರ ಮನೋಭಾವದಲ್ಲಿ ವಿಪರೀತ ಬದಲಾವಣೆ ಕಂಡುಬರುತ್ತಿದೆ. ಸೀಟು ಸಿಗದೆ ಹೋದಾಗ ಮಹಿಳೆಯರ ಜೊತೆಯಲ್ಲಿ ವಾಗ್ವಾದಕ್ಕಿಳಿಯುವುದು ಕಾಣಿಸುತ್ತಿದೆ. ಹಣ ಕೊಟ್ಟು ಪ್ರಯಾಣಿಸುವ ಪುರುಷರಿಗೂ ನಾಲ್ಕು ಸೀಟುಗಳನ್ನು ಮೀಸಲಿರಿಸಿದರೆ ಶಕ್ತಿ ಯೋಜನೆಯ ಕಾರಣದಿಂದ ನಿಂತುಕೊಂಡೇ ಗೊಣಗುತ್ತಾ ಪ್ರಯಾಣಿಸುವ ಗಂಡಸರಿಗೂ ಕೊಂಚ ಸಮಾಧಾನ ತರಬಹುದು.

ರಾತ್ರಿ ಚಲಿಸುವ ಕೆಂಪು ಬಸ್ಸುಗಳಲ್ಲಿ ಮಹಿಳೆಯರಿಗೆ ಆನ್ಲೈನ್ ಮೂಲಕ ಉಚಿತವಾಗಿ ಸೀಟು ಕಾಯ್ದಿರಿಸುವ ಅವಕಾಶವಿದೆ. ಇದರ ಬದಲಾಗಿ, ಆನ್ಲೈನ್ ಕಾಯ್ದಿರಿಸುವಿಕೆಗೆ ಪ್ರಯಾಣ ವೆಚ್ಚದ ಐವತ್ತು ಪ್ರತಿಶತವನ್ನಾದರೂ ಪಾವತಿಸುವಂತೆ ಮಾಡಿ, ಬಸ್ಸಿನಲ್ಲೇ ಟಿಕೆಟ್ ಪಡೆಯುವ ಮಹಿಳೆಯರಿಗೆ ಮಾತ್ರ ಪೂರ್ಣ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ ಮಾದರಿಯನ್ನು ಪರಿಚಯಿಸಬೇಕು. ಆ ಮೂಲಕ ಎಲ್ಲರನ್ನೂ ಒಳಗೊಳ್ಳುವ ವ್ಯವಸ್ಥೆಯನ್ನು ರೂಪಿಸುವ ಪ್ರಯತ್ನ ಮಾಡಬಹುದಾಗಿದೆ. ಇಂಥ ಬದಲಾವಣೆಗಳ ಮೂಲಕ, ‘ಶಕ್ತಿ’ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿ ಹಾಗೂ ಪ್ರಯಾಣಿಕಸ್ನೇಹಿ ಆಗಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.