ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಸ್ಮಾರ್ಟ್‌ ಸಿಟಿ ಯೋಜನೆ ಕಾಮಗಾರಿಗೆ ವೇಗ ತುಂಬಿ

ಸರ್ಕಾರ ನಿದ್ದೆಯಿಂದ ಎಚ್ಚೆತ್ತು ಈ ಯೋಜನೆಯ ಕಾಮಗಾರಿಗಳಿಗೆ ವೇಗ ತುಂಬಬೇಕು
Last Updated 22 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ‘ಸ್ಮಾರ್ಟ್‌ ಸಿಟಿ’ ಕೂಡ ಒಂದು. ನಗರ ಮೂಲಸೌಕರ್ಯಗಳನ್ನು ಕಾಲಮಿತಿಯೊಳಗೆ ಅಭಿವೃದ್ಧಿಪಡಿಸುವ ಈ ಯೋಜನೆಯ ಅನುಷ್ಠಾನವೂ ‘ಸ್ಮಾರ್ಟ್‌’ ಆಗಿದ್ದಿದ್ದರೆ, ಈ ವೇಳೆಗೆ ದೇಶದ ಪ್ರಮುಖ ಮಹಾನಗರಗಳ ಚಿತ್ರಣವೇ ಬದಲಾಗಿರುತ್ತಿತ್ತು. ರಾಜ್ಯದಲ್ಲಂತೂ ಈ ಯೋಜನೆಯ ಕಾಮಗಾರಿಗಳ ಅನುಷ್ಠಾನ ಶುರುವಿನಿಂದಲೂ ನಿರೀಕ್ಷಿತ ವೇಗದಲ್ಲಿ ನಡೆದೇ ಇಲ್ಲ. ಕಾಮಗಾರಿಗಳ ಗುಣಮಟ್ಟದ ಬಗ್ಗೆಯೂ ಬಹಳಷ್ಟು ಆಕ್ಷೇಪಗಳು ವ್ಯಕ್ತವಾಗಿವೆ.

ಮೊದಲು ಕಾಂಕ್ರೀಟ್‌ ರಸ್ತೆಗಳನ್ನು ನಿರ್ಮಿಸುವುದು, ನಂತರ ಇನ್ಯಾವುದೋ ಕಾರಣ ಹೇಳಿ ಆ ರಸ್ತೆಗಳನ್ನೇ ಅಗೆಯುವಂತಹ ಅಧ್ವಾನಗಳನ್ನು ಜನ ನೋಡಿದ್ದಾರೆ. ಕೇಂದ್ರ ಸರ್ಕಾರವು ಈ ಯೋಜನೆಯನ್ನು 2015ರಲ್ಲಿ ಆರಂಭಿಸಿತು. 2023ರ ಜೂನ್‌ ಒಳಗೆ ಪೂರ್ಣಗೊಳಿಸಬೇಕು ಎಂದು ಕೇಂದ್ರ ಸೂಚಿಸಿತ್ತು. ಈ ಗಡುವು ಪೂರ್ಣಗೊಳ್ಳುವುದಕ್ಕೆ ಇನ್ನು ಬಾಕಿ ಇರುವುದು 10 ತಿಂಗಳು ಮಾತ್ರ. ಈ ಹಂತದಲ್ಲಿ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿರಬೇಕಿತ್ತು. ಆದರೆ, ರಾಜ್ಯದಲ್ಲಿ ₹ 2,239 ಕೋಟಿ ಮೊತ್ತದ 41 ಯೋಜನೆಗಳ ಪ್ರಗತಿ ನಿರೀಕ್ಷೆಗಿಂತ ತೀರಾ ಹಿಂದುಳಿದಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಸಚಿವಾಲಯದ ಕಾರ್ಯದರ್ಶಿಯು ಸ್ಮಾರ್ಟ್‌ ಸಿಟಿ ಕಾಮಗಾರಿಗಳು ವಿಳಂಬವಾಗಿರುವ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ಅಪೂರ್ಣವಾದರೆ, ಈ ಯೋಜನೆ ಮೂಲಕ ಜನಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನ ವಿಫಲಗೊಳ್ಳುತ್ತದೆ. ಈ ಯೋಜನೆಯ ಕಾಮಗಾರಿಗಳನ್ನು ಗಡುವಿನೊಳಗೆ ಪೂರ್ಣಗೊಳಿಸುವ ಅಥವಾ ಕೈಬಿಡುವ ಕುರಿತು ವಿವೇಚನೆ ಬಳಸಿ ನಿರ್ಧಾರ ತಳೆಯಬೇಕು. ಗಡುವು ಪೂರ್ಣಗೊಂಡ ಬಳಿಕ ಕೇಂದ್ರದ ಅನುದಾನವನ್ನು ಸ್ಥಗಿತಗೊಳಿಸಲಾಗುತ್ತದೆ. ಬಳಿಕ ಕಾಮಗಾರಿಯ ಎಲ್ಲ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ಗಡುವಿನೊಳಗೆ ಪೂರ್ಣಗೊಳಿಸಬಹುದಾದ ಕಾಮಗಾರಿಗಳನ್ನು ಮಾತ್ರ ರಾಜ್ಯದಲ್ಲಿ ಈ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿತ್ತು. ಎದುರಾಗಬಹುದಾದ ಅಡ್ಡಿ ಆತಂಕಗಳನ್ನು ನಿವಾರಿಸಿ
ಕಾಮಗಾರಿಗಳನ್ನು ತ್ವರಿತವಾಗಿ ಜಾರಿಗೊಳಿಸಲು ಅನುವು ಮಾಡಿಕೊಡುವ ಸಲುವಾಗಿ ವಿಶೇಷ ಉದ್ದೇಶದ ಘಟಕಗಳನ್ನು (ಎಸ್‌ಪಿವಿ) ಸ್ಥಾಪಿಸಲಾಗಿತ್ತು. ಪ್ರತೀ ಎಸ್‌ಪಿವಿಗೆ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಎಂಜಿನಿಯರ್‌ ಒಳಗೊಂಡಂತೆ ಅಧಿಕಾರಿಗಳ ಪ್ರತ್ಯೇಕ ತಂಡವನ್ನೇ ಒದಗಿಸ
ಲಾಗಿತ್ತು. ಈ ಯೋಜನೆಗೆ ಅನುದಾನದ ಕೊರತೆಯೂ ಇಲ್ಲ. ಇಷ್ಟೆಲ್ಲಾ ಸೌಕರ್ಯಗಳನ್ನು ಒದಗಿಸಿದ ನಂತರವೂ ರಾಜ್ಯದ ಏಳು ಮಹಾನಗರಗಳಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಗಳು ತೆವಳುತ್ತಾ ಸಾಗಿರುವುದು ವಿಪರ್ಯಾಸವೇ ಸರಿ. ಈ ಯೋಜನೆಯ ಗಡುವು ಪೂರ್ಣಗೊಳ್ಳುವ ಹಂತಕ್ಕೆ ಬಂದರೂ ಕೆಲ ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ. ಒಂಬತ್ತು ಕಾಮಗಾರಿಗಳಲ್ಲಿ ಶೇ 10ರಷ್ಟೂ ಭೌತಿಕ ಪ್ರಗತಿ ಆಗಿಲ್ಲ. ಐದು ಕಾಮಗಾರಿಗಳ ಭೌತಿಕ ಪ್ರಗತಿ ಶೂನ್ಯ. ರಾಜ್ಯದ ಪ್ರಗತಿಗೆ ವೇಗ ತುಂಬಬಲ್ಲ ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಬಗ್ಗೆ ರಾಜ್ಯ ಸರ್ಕಾರ ಎಷ್ಟೊಂದು ಅನಾದರ ಪ್ರದರ್ಶಿಸುತ್ತಿದೆ ಎಂಬುದಕ್ಕೆ ಈ ಅಂಕಿ–ಅಂಶಗಳೇ ಸಾಕ್ಷಿ.

ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ನೇತೃತ್ವದ ಸರ್ಕಾರ ಇದ್ದರೆ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗುತ್ತದೆ ಎಂದು ಆಡಳಿತಾರೂಢ ಬಿಜೆಪಿ ನಾಯಕರು ಚುನಾವಣಾ ಭಾಷಣಗಳಲ್ಲಿ ಭರವಸೆ ನೀಡುತ್ತಲೇ ಬಂದಿದ್ದಾರೆ. ‘ಡಬಲ್‌ ಎಂಜಿನ್‌ ಸರ್ಕಾರ’ದ ಸಾಧನೆಗಳ ಬಗೆಗೆ ಹೆಮ್ಮೆಯಿಂದ ಮಾತನಾಡುತ್ತಾರೆ. ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಗಳ ಆಮೆಗತಿಯ ಅನುಷ್ಠಾನವು ಆ ಮಾತುಗಳನ್ನು ಅಣಕಿಸುವಂತಿದೆ. ಕಾಮಗಾರಿಗಳ ಗುತ್ತಿಗೆದಾರರು ಬಿಲ್‌ ಮೊತ್ತವನ್ನು ಪಡೆಯಲು ಶೇ 40ರಷ್ಟು ಕಮಿಷನ್‌ ನೀಡಬೇಕಾದ ಸ್ಥಿತಿ ರಾಜ್ಯದಲ್ಲಿದೆ ಎಂಬ ಆರೋಪವು ಗುತ್ತಿಗೆದಾರರಿಂದಲೇ ಬಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನದಲ್ಲಿ ಅನುಷ್ಠಾನಗೊಳ್ಳುವ ಈ ಕಾಮಗಾರಿಗಳ ವಿಳಂಬದ ಹಿಂದೆಯೂ ಇಂತಹದ್ದೇ ಕಾರಣಗಳಿರಬಹುದು ಎಂಬ ಶಂಕೆ ಮೂಡದಿರದು. ಸರ್ಕಾರ ನಿದ್ದೆಯಿಂದ ಎಚ್ಚೆತ್ತು ಈ ಯೋಜನೆಯ ಕಾಮಗಾರಿಗಳಿಗೆ ವೇಗ ತುಂಬಬೇಕು. ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ ಕಾಮಗಾರಿಗಳನ್ನು ಗಡುವಿನೊಳಗೆ ಪೂರ್ಣಗೊಳಿಸಲು ಇನ್ನಾದರೂ ಇಚ್ಛಾಶಕ್ತಿ ತೋರಬೇಕು. ವಿವಿಧ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬ ಆಗುತ್ತಿದೆ ಎಂಬ ಮಾತಿದೆ. ಇದನ್ನು ನೀಗಿಸುವುದಕ್ಕೂ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT