ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಇದೆ ‘ಪ್ರಭು’ವಿಗೂ ಒಂದು ದಿನ

ಪ್ರಜಾಪ್ರಭುತ್ವದ ಆಶಯಗಳ ಮೇಲಿನ ದಾಳಿಯ ಬಗ್ಗೆ ನಾವೆಲ್ಲಾ ಎಚ್ಚರದಿಂದ ಇರಬೇಕಾಗಿದೆ
ಡಾ. ಎಚ್.ಸಿ.ಮಹದೇವಪ್ಪ
Published : 12 ಸೆಪ್ಟೆಂಬರ್ 2024, 19:30 IST
Last Updated : 12 ಸೆಪ್ಟೆಂಬರ್ 2024, 19:30 IST
ಫಾಲೋ ಮಾಡಿ
Comments

ಬುದ್ಧನ ಕಾಲದ ಸಂಘ ಮತ್ತು ಗಣ ಎಂಬ ವ್ಯವಸ್ಥೆಯ ಮೂಲಕ ಭಾರತಕ್ಕೆ ಪರಿಚಿತವಾದ ಪ್ರಜಾಪ್ರಭುತ್ವದ ಕಲ್ಪನೆಯು ಮತ್ತೊಮ್ಮೆ ಅಧಿಕೃತವಾಗಿ ಜಾರಿಯಾಗಬೇಕಾದರೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವೇ ಬರಬೇಕಾಯಿತು.

ಸಾರ್ವಜನಿಕರ ಭಾಗವಹಿಸುವಿಕೆಯು ಪ್ರಜಾಪ್ರಭುತ್ವದ ಮೂಲ ತತ್ವಗಳಲ್ಲಿ ಒಂದು. ಆದರೆ ದೇಶದಲ್ಲಿ ಜಾತಿಯ ಮೇಲರಿಮೆ, ಶಿಕ್ಷಣ, ಉದ್ಯೋಗದಂತಹ ಕ್ಷೇತ್ರಗಳಲ್ಲಿನ ಅವಕಾಶ ಕೊರತೆಯಂತಹ ಹಲವು ಕಾರಣಗಳಿಂದ ಇದು ಅಸಾಧ್ಯವಾದ ಸಂಗತಿಯಾಗಿತ್ತು. ಸಂವಿಧಾನದ ಮೂಲಕ ಸಾರ್ವಜನಿಕರ ಹಕ್ಕುಗಳನ್ನು ಖಾತರಿಪಡಿಸಿದ ನಂತರ ಎಲ್ಲರಿಗೂ ಸಮಾನವಾದ ಭಾಗವಹಿಸುವಿಕೆ ಸಾಧ್ಯವಾಯಿತು. ಇದನ್ನು ನಾವು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೊರಳಿದ ಸಂದರ್ಭ ಎನ್ನಬಹುದು.

ಹಿಂದೊಮ್ಮೆ ಜೆ.ಎಚ್.ಪಟೇಲ್‌ ಅವರು ಬುದ್ಧಿವಂತಿಕೆಗೆ ಸಂಬಂಧಿಸಿದಂತೆ ಬಿ.ರಾಚಯ್ಯನವರ ಹೇಳಿಕೆಗೆ ಸದನದಲ್ಲಿ ಪ್ರತಿಕ್ರಿಯಿಸುತ್ತಾ, ‘ರೀ ರಾಚಯ್ಯನವರೇ, ಮೇಲ್ವರ್ಗಗಳಿಗೆ 2,000 ವರ್ಷಗಳ ಇತಿಹಾಸವಿದೆ. ಆದರೆ ನಿಮ್ಮ ಇತಿಹಾಸ ಶುರುವಾಗಿದ್ದೇ ಅಂಬೇಡ್ಕರ್ ಸಂವಿಧಾನ ಬಂದ ನಂತರ’ ಎಂದು ಹೇಳಿದ್ದರು. ಕೆಳವರ್ಗಗಳನ್ನು ಸಮಾಜ ಅಷ್ಟರಮಟ್ಟಿಗೆ ಹೊರಗಿಟ್ಟಿದ್ದುದನ್ನು ಪ್ರಸ್ತಾಪಿಸಿದ್ದರು. ಲೋಹಿಯಾ ಆದಿಯಾಗಿ ನೆಹರೂ ಅವರಂತಹ ಅನೇಕ ನಾಯಕರು ಪ್ರಜಾಪ್ರಭುತ್ವದ ಕನಸನ್ನು ಕಂಡಿದ್ದರು. ಅಧಿಕಾರದ ಅವಕಾಶ ಸಿಕ್ಕಾಗ ಅದನ್ನು ಕಾನೂನಾತ್ಮಕವಾಗಿ ಜಾರಿ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದರು.

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಮರ್ಥ ನಾಯಕತ್ವ, ವ್ಯಕ್ತಿ ಗೌರವ, ಶಿಕ್ಷಣ ಮತ್ತು ಸಂವಿಧಾನಾತ್ಮಕ ನಡವಳಿಕೆಗಳು ಪ್ರಜಾಪ್ರಭುತ್ವದ ಮೂಲ ಸೂತ್ರಗಳಾಗಿವೆ. ಈ ಪೈಕಿ ಸಮಾನತೆಯು ಮೊದಲನೇ ಸೂತ್ರವಾಗಿದೆ. ರಾಷ್ಟ್ರವನ್ನು ಸಮಾನತೆ ಮತ್ತು ಘನತೆಯ ಆಧಾರದ ಮೇಲೆ ಕಟ್ಟಲು ಸಾಧ್ಯವೇ ವಿನಾ ಅಸಮತೆ ಮತ್ತು ದೌರ್ಜನ್ಯದ ಮೇಲಲ್ಲ ಎಂಬ ತತ್ವವನ್ನು ಅದು ಪ್ರಧಾನವಾಗಿ ಸಾರುತ್ತದೆ.

ಎರಡನೆಯ ಸೂತ್ರವಾಗಿ ಸ್ವಾತಂತ್ರ್ಯವನ್ನು ಗುರುತಿಸಲಾಗಿದೆ. ಸಾಮಾನ್ಯ ಪ್ರಜೆಗಳು ಸರ್ಕಾರದ ಕಾರ್ಯಕಲಾಪಗಳಲ್ಲಿ  ಭಾಗವಹಿಸಬೇಕಾದರೆ ಅದನ್ನು ಕ್ರಾಂತಿಯಿಂದಲೇ ಸಾಧಿಸಬೇಕೆಂಬ ಭಾವನೆ 18ನೇ ಶತಮಾನದಲ್ಲಿತ್ತು. ಆದರೆ 19ನೇ ಶತಮಾನದಲ್ಲಿ ಪ್ರಜೆಗಳು ಮತ ಚಲಾಯಿಸುವ ಅಧಿಕಾರ ಪಡೆದ ಮೇಲೆ ಅವರಿಗೆ ವಾಕ್ ಸ್ವಾತಂತ್ರ್ಯ, ಆಸ್ತಿ ಹೊಂದುವ ಸ್ವಾತಂತ್ರ್ಯ, ರಾಜಕೀಯ ಸ್ವಾತಂತ್ರ್ಯ, ವೈಯಕ್ತಿಕ ಸ್ವಾತಂತ್ರ್ಯ ದೊರೆಯಿತು. ವಿಷಾದದ ಸಂಗತಿಯೆಂದರೆ, ಈ ದಿನಗಳಲ್ಲಿ ಇಂತಹ ಸ್ವಾತಂತ್ರ್ಯದ ಕಲ್ಪನೆಗೆ ಸಂವಿಧಾನದ ಗಡಿ ಮೀರಿದ ಕಂಟಕಗಳು ಎದುರಾಗುತ್ತಿವೆ. ‘ನೀನು ಇಂತಹದ್ದನ್ನೇ ತಿನ್ನಬೇಕು, ಇಂತಹದ್ದನ್ನೇ ಧರಿಸಬೇಕು, ಇಂತಹದ್ದನ್ನೇ ಆಚರಿಸಬೇಕು, ಇಂತಹದ್ದನ್ನೇ ಬೆಂಬಲಿಸಬೇಕು’ ಎಂಬಂಥ ಹೇರಿಕೆಗಳು ಸ್ವಾತಂತ್ರ್ಯದ ತತ್ವಕ್ಕೆ ವಿರುದ್ಧವಾಗಿವೆ. ಮತ್ತೊಂದು ಅಂಶವಾದ ಭ್ರಾತೃತ್ವ ಕೂಡ ದೇಶದ ಏಕತೆಯ ಮೂಲ ಸೂತ್ರವಾಗಿದೆ. ಇಂದು ಇಂತಹ ಭ್ರಾತೃತ್ವದ ಕಲ್ಪನೆಯನ್ನು ಮೀರಿ ಧರ್ಮದ ಹೆಸರಿನಲ್ಲಿ ವಿಷಮಯ ವಾತಾವರಣ ಹಬ್ಬುತ್ತಿರುವುದರಿಂದ, ಭ್ರಾತೃತ್ವದ ಮೌಲ್ಯವನ್ನು ನಾವು ಮತ್ತೆ ಮತ್ತೆ ನೆನೆಯಬೇಕಾಗಿದೆ.

ಇನ್ನು ಸಾರ್ವಜನಿಕ ನಾಯಕತ್ವವು ಪ್ರಜಾಪ್ರಭುತ್ವದ ಪ್ರಮುಖ ಮತ್ತು ಅಗತ್ಯವಾದ ಸಂಗತಿಯಾಗಿದೆ. ಆದರೆ ಈಗಿನ ಸಂದರ್ಭದಲ್ಲಿ ನಾಯಕತ್ವದ ಸ್ಥಿತಿ ಬಹಳ ದುರ್ಬಲವಾಗಿದೆ. ಸಾರ್ವಜನಿಕ ಜೀವನದ ಮಹತ್ವ ಅರಿಯದವರು ರಾಜಕೀಯವನ್ನು ಪ್ರವೇಶಿಸುತ್ತಿದ್ದು, ಇವರು ಪ್ರಜಾಪ್ರಭುತ್ವಕ್ಕೆ ನಿಜಕ್ಕೂ ಮಾರಕವಾಗಿದ್ದಾರೆ. ಜನಪರ ದನಿಗಳನ್ನು ಅಡಗಿಸಲು ನಿರಂತರವಾದ ಪ್ರಯತ್ನಗಳು ನಡೆಯುತ್ತಿರುವುದು ಪ್ರಜಾಪ್ರಭುತ್ವದ ಆಶಯಗಳ ಮೇಲಿನ ನೇರವಾದ ದಾಳಿಯಾಗಿದೆ. ಈ ಬಗ್ಗೆ ನಾವೆಲ್ಲಾ ಸದಾ ಎಚ್ಚರದಿಂದ ಇರಬೇಕಾಗಿದೆ.

ಸಂವಿಧಾನದ ಇಂತಹ ಆಶಯಗಳನ್ನು 5 ಗ್ಯಾರಂಟಿಗಳ ರೂಪದಲ್ಲಿ ಜಾರಿ ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡಿದೆ. ಇಂತಹ ಯೋಜನೆಗಳ ಬಗ್ಗೆ ಆರ್ಥಿಕತೆಯ ಕಾರಣಕ್ಕೆ ನಾವು ವಿಮರ್ಶೆಗಳನ್ನು ಸ್ವೀಕರಿಸಿ, ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳಬಹುದು. ಆದರೆ ಯೋಜನೆಗಳೇ ಬೇಡ ಎಂಬಂತಹ ಅಸಹನೆಯನ್ನು, ಜನಸಾಮಾನ್ಯರ ಬದುಕನ್ನು ಗಮನದಲ್ಲಿಟ್ಟು ತಿರಸ್ಕರಿಸಬೇಕಾಗಿದೆ. ಈ ಹಿಂದೆ ಇಂದಿರಾ ಗಾಂಧಿ ಮತ್ತು ದೇವರಾಜ ಅರಸು ಅವರು 20 ಅಂಶಗಳ ಕಾರ್ಯಕ್ರಮ ಹಾಗೂ ‘ಉಳುವವನೇ ಹೊಲದೊಡೆಯ’ ಎಂಬ ಯೋಜನೆಗಳ ಮೂಲಕ ಜನರ ಬದುಕಿಗೆ ನೆರವಾಗಿದ್ದನ್ನು ನಾವು ನೆನೆಯಬೇಕಾಗಿದೆ.

ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳ ಕುರಿತು ಮುಂದಿನ ಪೀಳಿಗೆಗೆ ಅರಿವು ಮೂಡಿಸಬೇಕಾದ ಬಹುದೊಡ್ಡ ಜವಾಬ್ದಾರಿ ಆಡಳಿತಾರೂಢ ಪಕ್ಷದ ಮೇಲಿರುತ್ತದೆ. ಈ ದಿಸೆಯಲ್ಲಿ, ಸಂವಿಧಾನದ ಪೀಠಿಕೆಯ ವಾಚನದ ಮೂಲಕ 2023ರಿಂದ ಆರಂಭಗೊಂಡ ಕರ್ನಾಟಕ ಸರ್ಕಾರದ ಪ್ರಯತ್ನಗಳು ಹಲವು ಬಗೆಯಲ್ಲಿ ಸಾಗಿವೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇದೇ 15ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಗುತ್ತಿದೆ. ಅಂದು ಬೀದರ್‌ನಿಂದ ಚಾಮರಾಜನಗರದವರೆಗೆ 25 ಲಕ್ಷಕ್ಕೂ ಹೆಚ್ಚು ಜನ ಮಾನವ ಸರಪಳಿ ನಿರ್ಮಿಸುವ ಮೂಲಕ ಸಮಾನತೆ ಮತ್ತು ಏಕತೆಯ ಸಂದೇಶವನ್ನು ದೇಶಕ್ಕೆ ಸಾರಲಿದ್ದಾರೆ.

ದೇಶದ ಪ್ರಜೆಗಳಾಗಿ ನಾವೆಲ್ಲರೂ ಅಂದು ಸಕ್ರಿಯವಾಗಿ ಭಾಗವಹಿಸೋಣ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ನೆನಪಿಸಿಕೊಂಡು ಮುನ್ನಡೆಯೋಣ.

ಲೇಖಕ: ಸಮಾಜ ಕಲ್ಯಾಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT