ಶನಿವಾರ, ಏಪ್ರಿಲ್ 1, 2023
29 °C
ಒಂದೊಮ್ಮೆ ಮನುಷ್ಯ ಜೀವನದ ಅತಿಮುಖ್ಯ ಮೈಲಿಗಲ್ಲೆಂದು ಪರಿಗಣಿತವಾಗಿದ್ದ ವಿವಾಹ, ಇಂದು ಅಪ್ರಸ್ತುತವಾಗುವ ಹಂತಕ್ಕೆ ತಲುಪಿರುವುದಕ್ಕೆ ಹಲವಾರು ಕಾರಣಗಳಿವೆ

ಸಂಗತ: ಒಂಟಿ ಬಾಳು, ಹೆಚ್ಚುತ್ತಿದೆ ಒಲವು

ಡಾ. ಜ್ಯೋತಿ Updated:

ಅಕ್ಷರ ಗಾತ್ರ : | |

Prajavani

ವಿವಾಹ ಎಂಬುದು ನಾಗರಿಕ ಮನುಷ್ಯ ಜೀವನದ ಅತಿ ಮುಖ್ಯ ಸಾಮಾಜಿಕ ಹಾಗೂ ಸಾಂಪ್ರದಾಯಿಕ ವ್ಯವಸ್ಥೆ. ಇಂದಿನ ಯುವಜನರ ದೃಷ್ಟಿಯಲ್ಲಿ ಇದು ಅರ್ಥ ಹಾಗೂ ಅಸ್ತಿತ್ವ ಕಳೆದುಕೊಳ್ಳುತ್ತಿದೆಯೇ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಜಗತ್ತಿನಾದ್ಯಂತ ಬಹಳಷ್ಟು ಅಧ್ಯಯನಗಳು ನಡೆದಿವೆ. ಕೆಲವು ದಿನಗಳ ಹಿಂದೆ ಪ್ರಕಟವಾಗಿರುವ, ಪೀವ್ ರಿಸರ್ಚ್ ಸಂಸ್ಥೆಯು 2019 ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ, ಅಮೆರಿಕದಲ್ಲಿ 25ರಿಂದ 34 ವರ್ಷ ವಯೋಮಿತಿಯ ಶೇ 38ರಷ್ಟು ಮಂದಿ ಒಂಟಿ ಬಾಳು ಸಾಗಿಸುತ್ತಿದ್ದಾರೆ. ಇವರಲ್ಲಿ, ಒಮ್ಮೆಯೂ ಮದುವೆಯಾಗದವರು, ವಿಚ್ಛೇದಿತರು ಹಾಗೂ ಸಂಗಾತಿಯನ್ನು ಕಳೆದುಕೊಂಡವರೂ ಸೇರಿದ್ದಾರೆ.

ಈ ಅಧ್ಯಯನ ವಿಶಿಷ್ಟವಾಗಿ ಗುರುತಿಸಿದಂತೆ, 1990ರ ನಂತರ ಅಮೆರಿಕದಲ್ಲಿ ಅವಿವಾಹಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಅವಿವಾಹಿತರಲ್ಲಿ ಬಿಳಿಯರಿಗಿಂತ ಕಪ್ಪುವರ್ಣೀಯರು ಹೆಚ್ಚಾಗಿದ್ದಾರೆ. ಹಾಗೆಯೇ, ಲಿಂಗಾಧಾರಿತವಾಗಿ ವಿಶ್ಲೇಷಿಸಿದರೆ, ಅವಿವಾಹಿತರಲ್ಲಿ ಹೆಂಗಸರಿಗಿಂತ ಗಂಡಸರ ಸಂಖ್ಯೆ ಹೆಚ್ಚಾಗಿದೆ. ಆದರೆ, ಕಪ್ಪುವರ್ಣೀಯರಲ್ಲಿ ಮಾತ್ರ ಗಂಡಸರಿಗಿಂತ ಹೆಂಗಸರೇ ಹೆಚ್ಚಿನ ಸಂಖ್ಯೆಯಲ್ಲಿ ಅವಿವಾಹಿತರಾಗಿದ್ದಾರೆ.

ಸಮೀಕ್ಷೆಯ ಅಂಕಿಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿದರೆ, ವಿವಾಹವಾಗುವ ನಿರ್ಧಾರ ಹಾಗೂ ವ್ಯಕ್ತಿಯ ಆರ್ಥಿಕ ಸ್ಥಿತಿಗತಿಯ ನಡುವಿನ ಪೂರಕ ಸಂಬಂಧವನ್ನು ಗಮನಿಸಬಹುದು. 1990ರ ದಶಕದಲ್ಲಿ ನಡೆದ ಬೃಹತ್ ಪ್ರಮಾಣದ ಜಾಗತೀಕರಣ, ಉದಾರೀಕರಣ, ಬಹುರಾಷ್ಟ್ರೀಯ ಕಂಪನಿಗಳ ಉದಯ, ಹೊಸ ಉದ್ಯೋಗಗಳ ಸೃಷ್ಟಿ, ಜೀವನಮಟ್ಟ ಸುಧಾರಣೆಯಂತಹ ಅಂಶಗಳು ಜನಸಾಮಾನ್ಯರನ್ನು ಹೆಚ್ಚು ಸ್ಪರ್ಧಾತ್ಮಕವಾಗಿ, ವೃತ್ತಿನಿರತ ರನ್ನಾಗಿ ಜೊತೆಗೆ ಉನ್ನತ ಸ್ಥಾನವನ್ನೇರಲು ಹೆಚ್ಚು ಪದವಿಗಳನ್ನು ಗಳಿಸುವುದರತ್ತ ಗಮನಹರಿಸುವಂತೆ ಮಾಡಿವೆ. ಇಂದು, ವಿವಾಹವೆನ್ನುವ ವ್ಯವಸ್ಥೆ, ಕೇವಲ ಶ್ರೀಮಂತ ರಾಷ್ಟ್ರಗಳಲ್ಲಿ ಮಾತ್ರವಲ್ಲ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿಯೂ ತನ್ನ ಪ್ರಾಧಾನ್ಯವನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದೆ.

ಇಂತಹ ಸ್ಥಿತಿಗೆ ಹಲವಾರು ಕಾರಣಗಳಿವೆ. ಉದಾಹರಣೆಗೆ, ಕೂಡುಕುಟುಂಬಗಳು ಕಣ್ಮರೆ ಆಗುತ್ತಿರುವುದು, ಯುವಜನರಲ್ಲಿ ಹೆಚ್ಚಾಗುತ್ತಿರುವ ಸ್ವತಂತ್ರ ಮನೋಭಾವ, ವೃತ್ತಿಬೆಳವಣಿಗೆಯ ಕಡೆಗೆ ಹೆಚ್ಚುತ್ತಿರುವ ಪ್ರಾಧಾನ್ಯ, ವಿವಾಹದ ಹಂಗಿಲ್ಲದೆಯೂ ‘ಲಿವ್ ಇನ್’ ಸಂಬಂಧಗಳಿಗೆ ಮುಕ್ತವಾಗುತ್ತಿರುವ ಸಮಾಜ ಇತ್ಯಾದಿ ಅಂಶಗಳು ಪ್ರಭಾವ ಬೀರುತ್ತವೆ. ಅದೇ ರೀತಿ, ಒಂಟಿಯಾಗಿರುವ ಹೆಣ್ಣು ಅಥವಾ ಗಂಡು ಯಾವುದೇ ಸಾಮಾಜಿಕ ಕುಹಕ ಅಥವಾ ವಿಮರ್ಶೆಯಿಲ್ಲದೆ ಬದುಕುವ ಸ್ವಾತಂತ್ರ್ಯ ಹಾಗೂ ಅವರದ್ದೇ ಆದ ಸಮಾನಮನಸ್ಕ ಸ್ನೇಹಿತರ ವಲಯ ಗಳ ಸೃಷ್ಟಿಗೆ ತೆರೆದಿರುವ ಅವಕಾಶಗಳೂ ಕಾರಣವೆನ್ನಬಹುದು.

ಈ ಪ್ರಕ್ರಿಯೆಗೆ ಸಮಾನಾಂತರವಾಗಿ, ವೃದ್ಧಾಪ್ಯ ದಲ್ಲಿ ಮಕ್ಕಳು ನಮಗೆ ಆಸರೆಯಾಗುತ್ತಾರೆ ಎನ್ನುವ ಗ್ರಹಿಕೆ, ಭ್ರಮೆ ಹಾಗೂ ನಿರೀಕ್ಷೆಗಳು ಈಚಿನ ದಿನಗಳಲ್ಲಿ ಜನಸಾಮಾನ್ಯರಲ್ಲಿ ಕ್ಷೀಣಿಸುತ್ತಿರುವುದರಿಂದ, ಅದಕ್ಕಾಗಿಯಾದರೂ ಮದುವೆಯಾಗಿ, ಮಕ್ಕಳನ್ನು ಪಡೆದು ವಂಶ ಮುಂದುವರಿಸಬೇಕೆನ್ನುವ ಒತ್ತಡವೂ ಕಡಿಮೆಯಾಗಿದೆ.

ಮನಃಶಾಸ್ತ್ರಜ್ಞರು ಹೇಳುವಂತೆ, ವಿವಾಹವೆಂಬ ವ್ಯವಸ್ಥೆಯು ಹೆಣ್ಣಿಗಿಂತ ಗಂಡಿಗೆ ಜೀವನದಲ್ಲಿ ಹೆಚ್ಚಿನ ಸ್ಥಿರತೆ ತಂದುಕೊಡುತ್ತದೆ. ಹಾಗೆಯೇ, ಅಪಾಯಕ್ಕೆ ಒಡ್ಡಿಕೊಳ್ಳುವ ಗುಣವನ್ನು ಕಡಿಮೆ ಮಾಡುತ್ತದೆ. ಇದಕ್ಕೆ ತದ್ವಿರುದ್ಧವಾಗಿ ವಿವಾಹಿತರು ಅಥವಾ ತಾಯಂದಿರಿಗಿಂತ ಅವಿವಾಹಿತ ಹೆಣ್ಣು ಮಕ್ಕಳು ಹೆಚ್ಚು ಸಂತೋಷವಾಗಿರುತ್ತಾರೆ. ಆದರೆ, ಈ ವಿಶ್ಲೇಷಣೆ ಗಳನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಆಗುವು ದಿಲ್ಲ. ಯಾಕೆಂದರೆ, ನಮ್ಮ ನಡುವೆಯೇ ಬಹಳಷ್ಟು ಅವಿವಾಹಿತ ಗಂಡಸರು ಜವಾಬ್ದಾರಿಯಿಂದ ನಡೆದು ಕೊಂಡು ಯಶಸ್ವಿ ಜೀವನ ಸಾಗಿಸುವುದನ್ನು ಹಾಗೆಯೇ ವಿವಾಹಿತ ಮಹಿಳೆಯರು ತಕ್ಕಮಟ್ಟಿಗೆ ಸಂತೋಷವಾಗಿರುವುದನ್ನು ಕೂಡ ಕಾಣುತ್ತೇವೆ.

ಆದರೆ, ಒಂದಂತೂ ಸತ್ಯ. ಮದುವೆಯೆನ್ನುವ ಸಾಮಾಜಿಕ ಅನುಕೂಲಸಿಂಧು ವ್ಯವಸ್ಥೆ, ಜನರ ಮೇಲಿನ ನಿಯಂತ್ರಣವನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದೆ. ಅದೇ ರೀತಿ, ಅವಿವಾಹಿತರಿಗೆ ಇದ್ದಂತಹ ಕಳಂಕ, ಅವರನ್ನು ಸಮಾಜ ನೋಡುತ್ತಿದ್ದ ಸಂಶಯದ ದೃಷ್ಟಿ, ಸಿನಿಕತನ ಕೂಡ ಬದಲಾಗುತ್ತಾ, ಜಗತ್ತು ನಿಧಾನವಾಗಿ ಅವರನ್ನು ಒಪ್ಪಿಕೊಳ್ಳುತ್ತಿದೆ.

ಈ ಸಮೀಕ್ಷೆ ಅಮೆರಿಕದ ಸಮಾಜದಲ್ಲಿ ಗುರುತಿ ಸಿದ ಇನ್ನೊಂದು ವಿದ್ಯಮಾನವೆಂದರೆ, ಒಮ್ಮೆ ಅಥವಾ ಹಲವು ಬಾರಿ ಮದುವೆಯಾಗಿ ವಿಚ್ಛೇದಿತರಾದವರಿಗಿಂತ, ಜೀವನಪರ್ಯಂತ ಮದುವೆ ಆಗದೇ ಉಳಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಒಮ್ಮೆ ವಿವಾಹವಾಗಿ, ಅನಿವಾರ್ಯ ಕಾರಣಗಳಿಗೆ ವಿಚ್ಛೇದನ ಪಡೆಯುವುದನ್ನು ಅರ್ಥಮಾಡಿಕೊಳ್ಳುವುದು ಸುಲಭ. ಆದರೆ, ಮದುವೆಯೇ ಬೇಡವೆನ್ನುವವರ ಸಂಖ್ಯೆ ಹೆಚ್ಚಾಗುತ್ತಿರುವುದು, ಸಂಪ್ರದಾಯವಾದಿ ಗಳ ನಿದ್ರೆಕೆಡಿಸಿದೆ ಎನ್ನಬಹುದು. ಯಾಕೆಂದರೆ, ವಿವಾಹವೆನ್ನುವ ವ್ಯವಸ್ಥೆಯ ಆಧಾರದಲ್ಲಿ ಹಲವಾರು ಆರ್ಥಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ವ್ಯವಸ್ಥೆಗಳು ಕಾರ್ಯ ನಿರ್ವಹಿಸುತ್ತವೆ. ಇವುಗಳ ಅಸ್ತಿತ್ವಕ್ಕೆ ವಿವಾಹವೇ ಜೀವಾಳ. ಸುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ಈ ಪ್ರವೃತ್ತಿಯನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡು, ಅದನ್ನು ಬದಲಾಗುತ್ತಿರುವ ಜಗತ್ತಿನ ಸಹಜ ಭಾಗವೆಂದು ಸ್ವೀಕರಿಸುವುದು ನಮಗಿಂದು ಅನಿವಾರ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು