ಶನಿವಾರ, ಮೇ 30, 2020
27 °C
ವಲಸೆ ಕಾರ್ಮಿಕರ ಬವಣೆ ನೀಗಿಸಲು ಶಿಕ್ಷಣ ಕ್ಷೇತ್ರದ ಗಣ್ಯರಿಂದ ಮುಖ್ಯಮಂತ್ರಿಗೆ ಪತ್ರ

ಸಂಗತ| ಪರಿಹಾರದ ಸನ್ನದಿಗೆ ಸನ್ನದ್ಧರಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸನ್ಮಾನ್ಯ ಬಿ.ಎಸ್‌.ಯಡಿಯೂರಪ್ಪನವರೇ,

ನಿಮ್ಮ ನೇತೃತ್ವದ ಸರ್ಕಾರ ಕೈಗೊಂಡ ತುರ್ತು ಉಪಕ್ರಮಗಳಿಂದಾಗಿ, ರಾಜ್ಯದಲ್ಲಿ ಜನ ಹಸಿವಿನಿಂದ ಬಳಲಿದ ಪ್ರಕರಣಗಳೇನೂ ವರದಿಯಾಗಿಲ್ಲ. ಇದಕ್ಕಾಗಿ ನಾವು ಕೃತಜ್ಞತೆ ಅರ್ಪಿಸುತ್ತೇವೆ. ಕೋವಿಡ್- 19 ಕುರಿತ ಜಾಗೃತಿ ಮತ್ತು ಈ ಪಿಡುಗಿನ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮಗಳಿಗೂ ನಾವು ನಿಮ್ಮನ್ನು ಅಭಿನಂದಿಸುತ್ತೇವೆ.

ಆದರೆ, ಈ ಪಿಡುಗಿನ ತುರ್ತುಸ್ಥಿತಿ ಅನಿರ್ದಿಷ್ಟ ಕಾಲ ಮುಂದುವರಿಯುವ ಸಂಭವವಿದ್ದು, ಈ ಸಂದರ್ಭದಲ್ಲಿ ಗಂಭೀರ ಚರ್ಚೆಯ ಅಗತ್ಯವಿರುವ ನೀತಿಗಳಲ್ಲಿ ದಿಢೀರ್‌ ಬದಲಾವಣೆ ಮಾಡಿ, ಜಾರಿಗೆ ತರುತ್ತಿರುವ ಬಗ್ಗೆ ನಮಗೆ ಆತಂಕವಿದೆ. ಆದ್ದರಿಂದ ವಿಸ್ತೃತ ಸಮಾಲೋಚನೆ ಮತ್ತು ಚರ್ಚೆಯ ಅಗತ್ಯವಿರುವ ನೀತಿ ಬದಲಾವಣೆಗಳನ್ನು ಸದ್ಯ ಯಾವುದೇ ಕಾರಣಕ್ಕೂ ಕೈಗೆತ್ತಿಕೊಳ್ಳಬಾರದು ಎಂದು ಸರ್ಕಾರವನ್ನು ವಿನಂತಿಸುತ್ತೇವೆ.

ಸಂಕಷ್ಟಕ್ಕೆ ಈಡಾಗಿರುವ, ಸೌಲಭ್ಯ ವಂಚಿತ ವ್ಯಕ್ತಿಗಳು ಹಾಗೂ ಸಮುದಾಯಗಳಿಗೆ ತಕ್ಷಣದ ಮತ್ತು ದೀರ್ಘಕಾಲೀನ ಕೆಲವು ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡುತ್ತೇವೆ. ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳು ಹೀಗಿವೆ:

ತಕ್ಷಣದ ಕ್ರಮಗಳು: ವಲಸೆ ಕಾರ್ಮಿಕರಿಗೆ ಪರಿಹಾರ, ಪುನರ್ವಸತಿಯನ್ನು ಒದಗಿಸುವುದು ಮತ್ತು ಅವರನ್ನು ಸುರಕ್ಷಿತವಾಗಿ ಊರಿಗೆ ಕಳಿಸುವುದು, ಕಾರ್ಮಿಕರ ವಿಷಯದಲ್ಲಿ ಕಾನೂನಿಗೆ ಅನುಗುಣವಾಗಿ ಮತ್ತು ಅನುಕಂಪದಿಂದ ವರ್ತಿಸುವಂತೆ ಪೊಲೀಸ್ ಪಡೆಯನ್ನು ಸನ್ನದ್ಧಗೊಳಿಸುವುದು, ಎಲ್ಲಾ ಕೆಲಸಗಾರರಿಗೂ ವೇತನ ಮತ್ತು ಇತರ ಸವಲತ್ತುಗಳನ್ನು ನೀಡುವಂತೆ ನೋಡಿಕೊಳ್ಳುವುದು, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವುದು, ಗ್ರಾಮೀಣ
ಮತ್ತು ನಗರ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ಕಾರ್ಯಕ್ರಮವನ್ನು ಇನ್ನಷ್ಟು ಅಚ್ಚುಕಟ್ಟಾಗಿ ಜಾರಿ
ಗೊಳಿಸುವುದು, ಆಹಾರದ ಕೊರತೆ ಎದುರಾಗದಂತೆ ನೋಡಿಕೊಳ್ಳುವುದು.

ದೀರ್ಘಕಾಲೀನ ಕ್ರಮಗಳು: ಎಲ್ಲಾ ಕಾರ್ಮಿಕರಿಗೂ ಹಕ್ಕು ಮತ್ತು ಘನತೆಯನ್ನು ಖಚಿತಪಡಿಸುವ ಹೊಸ ಕಾರ್ಮಿಕ ಕಾನೂನು ರೂಪಿಸುವುದು, ಕೃಷಿ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ವಿನ್ಯಾಸಗೊಳಿಸಿ ಅನುಷ್ಠಾನಗೊಳಿಸುವುದು, ಗ್ರಾಮೀಣ ಭಾಗಗಳಲ್ಲಿ ಸಣ್ಣ ಪ್ರಮಾಣದ ಸಂಸ್ಕರಣೆ ಮತ್ತು ಉತ್ಪಾದನಾ ಘಟಕಗಳನ್ನು ಸ್ಥಾಪನೆ ಮಾಡುವುದು, ಪರಿಸರ ಪುನಶ್ಚೇತನ ಮತ್ತು ಸಂರಕ್ಷಣೆಗೆ ಕ್ರಮ ಕೈಗೊಳ್ಳುವುದು; ಪಂಚಾಯತ್ ರಾಜ್ ಸಂಸ್ಥೆಗಳನ್ನು ಗಟ್ಟಿಗೊಳಿಸುವುದು; ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವುದು; ಯುವಕರಿಗೆ ತರಬೇತಿ ಮತ್ತು ಕೌಶಲ ವೃದ್ಧಿಯ ವ್ಯವಸ್ಥೆ ಮಾಡುವುದು.

ಈ ಉದ್ದೇಶ ಮತ್ತು ಗುರಿಗಳನ್ನು ಸಾಧಿಸಲು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಾವು ಒತ್ತಾಯಿಸುತ್ತೇವೆ. ಈ ಕ್ರಮಗಳು ವ್ಯವಸ್ಥೆಯಲ್ಲಿ ಶಕ್ತಿ ಸಂಚಯವನ್ನು ಸಾಧಿಸಬಲ್ಲವು.

ಕೋವಿಡ್-19 ಲಾಕ್‌ಡೌನ್ ಮತ್ತು ಲಾಕ್‌ಡೌನ್ ತರುವಾಯದ ಸಂದರ್ಭವನ್ನು ನಿರ್ವಹಿಸುವ ಸಮಿತಿ ಅಥವಾ ಕಾರ್ಯಪಡೆ ಯಾವುದು ಎಂಬ ಮಾಹಿತಿಯೇ ಲಭ್ಯವಿಲ್ಲ. ಈ ಸಂಕಷ್ಟದ ಸಮಯದಲ್ಲಿ ರಾಜ್ಯದ ತುರ್ತು ಕಾರ್ಯಪಡೆಗೆ ಸಲಹೆ ನೀಡಲು ನಾಗರಿಕ ಸಮಾಜದ ಗಣ್ಯರು, ವೃತ್ತಿಪರರು ಮತ್ತು ಅನುಭವಿ ತಜ್ಞರನ್ನು ನಾಮನಿರ್ದೇಶನ ಮಾಡಬೇಕಾಗಿ ಕೋರುತ್ತೇವೆ. ಈ ಸಮಿತಿಯ ನಿರ್ಣಯಗಳನ್ನು ಸಾರ್ವಜನಿಕ
ವಾಗಿ ತಿಳಿಸುವ ನಿಯಮಿತ ವ್ಯವಸ್ಥೆ ಇರಬೇಕು. ಹಾಗೇ ರಾಜ್ಯ ಸರ್ಕಾರದ ಹೊಸ ಆರ್ಥಿಕ ಉತ್ತೇಜಕ ನಿಧಿ ಮತ್ತು ಇತರ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ನಿಧಿ ಉಪಯೋಗದ ವಿವರಗಳನ್ನೂ ಸಾರ್ವಜನಿಕರ ಗಮನಕ್ಕೆ ತರಬೇಕು.

ದೂರು ಪರಿಹಾರ ವ್ಯವಸ್ಥೆ: ಈ ಸಂದರ್ಭವು ಗಮನಾರ್ಹ ಮೊತ್ತದ ಹಣಕಾಸು, ಆಹಾರ ಸಾಮಗ್ರಿ, ವೈದ್ಯಕೀಯ ಸಲಕರಣೆ ಮತ್ತಿತರ ವರ್ಗಾವಣೆಯನ್ನು ಬಯಸುತ್ತಿದ್ದು, ಪರಿಣಾಮಕಾರಿ ದೂರು ಪರಿಹಾರ ವ್ಯವಸ್ಥೆಯನ್ನು ಎಲ್ಲಾ ಹಂತಗಳಲ್ಲೂ ಆರಂಭಿಸಬೇಕು. ಗ್ರಾಮಗಳಿಂದ ಹಿಡಿದು ನಗರಗಳವರೆಗೆ ಪರಿಣಾಮಕಾರಿ ದೂರು ಪರಿಹಾರ ವ್ಯವಸ್ಥೆ ಸ್ಥಾಪಿಸಬೇಕಾಗಿದೆ. ಈ ವ್ಯವಸ್ಥೆ ವಿಕೇಂದ್ರೀಕೃತವಾಗಿ ಇರಬೇಕು ಮತ್ತು ಜನ ಸುಲಭದಲ್ಲಿ ಸಂಪರ್ಕಿಸುವಂತೆ ಇರಬೇಕು. ಜನ ಮತ್ತು ಆಡಳಿತವು ಸಮಸ್ಯೆಗಳಿಗೆ ಪರಿಹಾರ ಒದಗಿಸುವಂಥ ಸನ್ನದನ್ನು ಒಳಗೊಂಡಿರಬೇಕು.

ಕರ್ನಾಟಕವು ಅಭಿವೃದ್ಧಿಶೀಲ ಮತ್ತು ಭರವಸೆಯ ರಾಜ್ಯವೆಂಬ ಹೆಗ್ಗಳಿಕೆಯನ್ನು ಉಳಿಸಿಕೊಳ್ಳಲು ಇಂತಹ ತುರ್ತು ಸಂದರ್ಭದಲ್ಲಿ ಸರ್ಕಾರವು ದಿಟ್ಟವಾಗಿ ಕಾರ್ಯಶೀಲವಾಗಬೇಕಿದೆ. ಮಾನವೀಯ ಪ್ರಜಾಸತ್ತಾತ್ಮಕ ಆಡಳಿತವೊಂದೇ ಈ ಸಂಕಷ್ಟವು ಮಾನವ ದುರಂತದ ಸ್ವರೂಪ ತಾಳದಂತೆ ತಡೆಯಬಲ್ಲದು. ಇತ್ತೀಚೆಗಿನ ಕೆಲವು ಘಟನಾವಳಿಗಳ ಬಗ್ಗೆ ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳಾದ ನಾವು ಕಾಳಜಿ ಹೊಂದಿದ್ದು, ನಿಮ್ಮಿಂದ ಗೌರವಾರ್ಹ ಸ್ಪಂದನೆಯ ನಿರೀಕ್ಷೆ ಮಾಡುತ್ತಿದ್ದೇವೆ.

ನಿಮ್ಮ ವಿಶ್ವಾಸಿಗಳು

ಪ್ರೊ. ವಿನೋದ್ ಗೌರ್, ಪ್ರೊ. ರಾಮೇಶ್ವರಿ ವರ್ಮ,
ಪ್ರೊ. ನರಸಿಂಹನ್, ಪ್ರೊ. ವಿದ್ಯಾನಂದ ನಂಜುಂಡಯ್ಯ,
ಪ್ರೊ. ಎಸ್.ಮಹಾದೇವನ್, ಪ್ರೊ. ಫೂಲನ್ ಪ್ರಸಾದ್, ರಾಮಚಂದ್ರ ಗುಹಾ, ಜಿ.ವಿ.ದಾಶರಥಿ, ಪ್ರೊ. ಅಮಿತ್ ಭಸೋಲೆ, ಪ್ರೊ. ದೀಪಕ್ ಮಲಘಾಣ, ಪ್ರೊ. ನಿತಿನ್ ರಾಯ್, ಪ್ರೊ. ಶರದ್ ಲೆಲೆ, ಪ್ರೊ. ಟಿ.ವಿ.ರಾಮಚಂದ್ರ, ಪ್ರೊ. ಸುಪ್ರಿಯಾ ರಾಯ್ ಚೌಧರಿ, ಪ್ರೊ. ವಿ.ಕೆ.ನಟರಾಜ್, ಪ್ರೊ. ಪ್ರಜ್ವಲ್ ಶಾಸ್ತ್ರಿ, ಬಾಲನ್ ನಂಬಿಯಾರ್, ಪ್ರೊ. ಎ.ಆರ್.ವಾಸವಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.