ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಶಾಲೆ ಶುರುವಿಗೆ ಬೇಕು ಕೆಲವು ಸಿದ್ದತೆಗಳು..

Published 29 ಮೇ 2023, 22:13 IST
Last Updated 29 ಮೇ 2023, 22:13 IST
ಅಕ್ಷರ ಗಾತ್ರ

ಇಲ್ಲೊಬ್ಬಳು ಪಕ್ಕದ ಮನೆಯ ಪೋರಿ ಮತ್ತೆ ತೆರೆಯುವ ತನ್ನ ಶಾಲೆಗಾಗಿ ತಡರಾತ್ರಿಯವರೆಗೂ ತಯಾರಿ ಮಾಡಿಕೊಂಡಳು. ಬ್ಯಾಗು, ಪುಸ್ತಕ, ಲೇಖನ ಸಾಮಾಗ್ರಿ ಎಲ್ಲವನ್ನೂ ಜೋಡಿಸಿಕೊಂಡಳು. ಮೊದಲನೆ ದಿನವೇ ತಾನು ಶಾಲೆಯಲ್ಲಿರಬೇಕು ಎಂಬುದು ಅವಳ ತುಡಿತ. ಪೋಷಕರನ್ನು ಕೇಳಿ ತನಗೆ ಬೇಕಾದದ್ದನ್ನು ತರಿಸಿಕೊಂಡಳು. ಮನಸಿನಲ್ಲಿ ಹೊಸ ಹೊರಪು ತುಂಬಿಕೊಂಡಳು. ಮೊದಲ ದಿನ ಬಾರಿಸುವ ಶಾಲೆಯ ಬೆಲ್ಲು ಅವಳಿಗೆಷ್ಟು ಹಿತವಾಗಬಹುದೆಂದು ನಾನು ಯೋಚಿಸಿದೆ.‌

ಈ ಪುಟ್ಟ ಹುಡುಗಿ ಕಲಿಯಲು ಹೊರಟ ಎಲ್ಲಾ ಮಕ್ಕಳ ಪ್ರತಿನಿಧಿಯಂತೆ ಕಂಡಳು. ಒಂದು ರೂಪಕದಂತೆ ಅನಿಸಿದಳು. ಅಷ್ಟೆ ಅಲ್ಲ ಕಲಿಸಬೇಕಾದವರು ಮಾಡಿಕೊಳ್ಳಬೇಕಾದ ಸಿದ್ದತೆಯನ್ನು ಆ ಮಗು ಸೂಚ್ಯವಾಗಿ ಹೇಳಿದಂತಿತ್ತು. ಮಗು ಎಂದೂ ಕೂಡ ಕಲಿಯಲು ಸಿದ್ದವಿರುತ್ತದೆ.‌ ಅದು ಯಾವ ಕಲಿಕೆಯನ್ನೂ  ತಿರಸ್ಕರಿಸುವುದಿಲ್ಲ. ನೀವು ಏನು‌ ಕಲಿಸಿದ್ದೀರಿ ಎಂಬುದರ ಮೇಲೆ ಮುಂದಿನದು ನಿರ್ಧರಿತ. ಸರಿಯಾಗಿ ಕಲಿಸದೆ ಹೋದರೆ ಅದೆಂಥ ನಷ್ಟ! ಅದ್ದರಿಂದ ಕಲಿಸುವವರು ವ್ಯವಸ್ಥಿತವಾಗಿ ಸಿದ್ದಕೊಳ್ಳಬೇಕಾದದ್ದು ತುಂಬಾ ಅವಶ್ಯಕವಾದದ್ದು.

ರಜೆ ಮುಗಿಸಿದ ಶಾಲೆಗಳು ಮತ್ತೆ ಬಾಗಿಲು ತೆರೆಯುತ್ತಿವೆ. ಸುಮಾರು ಎರಡು ತಿಂಗಳು ರಜೆಯ ಮೇಲಿದ್ದ ಮಕ್ಕಳು ಶಾಲೆಯ ಕಡೆ ಮುಖ ಮಾಡುತ್ತಾರೆ. ಸದಾ ಮೌನದಲ್ಲಿದ್ದ ಶಾಲೆಯ ಅಂಗಳ ಕಳೆಕಟ್ಟುತ್ತದೆ. ಇದು ಈ ವರ್ಷದ ಶಾಲೆಯ ಮೊದಲ ದಿನ. ಶಾಲೆಯ ಶುರುವಾಗುವ ಈ ದಿನದಂದು ನಾವು ಕೆಲವು ವಿಚಾರಗಳ ಬಗ್ಗೆ ಚರ್ಚಿಸುವ ಅವಶ್ಯಕತೆ ಇದೆ.

ಐದನೇ ತರಗತಿ ಮಗು ಶಾಲೆಗೆ ಹೋಗಲು ಅಷ್ಟೊಂದು ಕಾಳಜಿಯಿಂದ ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ಪೋಷಕರು, ಶಿಕ್ಷಕರು, ಶಾಲೆ, ಇಲಾಖೆ ಇನ್ನೂ ಯಾವ ಮಟ್ಟಕ್ಕೆ ಸಿದ್ದರಾಗಬೇಕು ಎಂಬುದನ್ನು ಇದು  ಸೂಚಿಸುತ್ತದೆ.‌ ತೆರೆಯಬೇಕಾದದ್ದು ಬರೀ ಶಾಲೆಯ ಬಾಗಿಲು ಮಾತ್ರವಲ್ಲ ಈ ನಾಲ್ಕು ಕಂಬಗಳ ಮನಸ್ಸು  ಕೂಡ.

ಪೋಷಕರು ಮಕ್ಕಳಿಗೆ ಕೇಳಿದ್ದೆಲ್ಲವನ್ನೂ‌ ಕೊಡಿಸುತ್ತಾರೆ. ದುಬಾರಿ ಶಾಲೆಗೂ ಹಾಕುತ್ತಾರೆ ಅದರ ಜೊತೆ ತಮ್ಮ ತಮ್ಮ ಕನಸುಗಳನ್ನು ಹೇರುತ್ತಾರೆ. ಅದು ಸರಿಯಲ್ಲ.  ಮಕ್ಕಳು ತಮ್ಮದೆ ಕನಸುಗಳನ್ನು ಕಟ್ಟಿಕೊಳ್ಳಲು ಬರೀ ಕಚ್ಚಾ ವಸ್ತುಗಳನ್ನು ಒದಗಿಸಬೇಕು. ಮೊದಲ ದಿನ ಮಗು ಶಾಲೆಗೆ ಸಿದ್ಧವಾಗುವಂತೆ ಪೋಷಕರೂ ಕೂಡ ಒಂದು ಯೋಜನೆ ರೂಪಿಸಿಕೊಳ್ಳುವುದು ಅವಶ್ಯಕ. ಮಗುವನ್ನು, ಅವನ ಕನಸನ್ನು ಗೌರವಿಸುತ್ತೇನೆ. ಓದಲು ಪೂರಕ ವಾತಾವರಣ ಒದಗಿಸುತ್ತೇನೆ. ಅವರೊಂದಿಗೆ ಕೂತು ತಾನೂ ಓದುತ್ತೇನೆ. ಅವರಷ್ಟೇ ನಾನೂ ಕೂಡ ಮೊಬೈಲ್ ಅನ್ನು ಅಗತ್ಯ ಬಿದ್ದಾಗ ಮಾತ್ರ ಬಳಸುತ್ತೇನೆ. ಮಗುವಿನ ಸೋಲನ್ನು ಗೌರವಿಸುತ್ತೇನೆ. ಆತ್ಮವಿಶ್ವಾಸ ತುಂಬುತ್ತೇನೆ. ಮಗುವಿನ ಒಡನಾಟ ಗಮನಿಸುತ್ತೇನೆ, ಮಗುವಿಗೆ ಬರೀ ಹೇಳುವುದಿಲ್ಲ, ಹೇಳುವುದನ್ನು ತನ್ನ ನಡವಳಿಕೆಯಲ್ಲಿ ತೋರಿಸುತ್ತೇನೆ.. ಇಂಥಹ ಹತ್ತೆಂಟು ಪ್ರಮಾಣಗಳನ್ನು ಪೋಷಕ ತನಗೆ ಮಾಡಿಕೊಂಡು ಸಿದ್ಧನಾಗಬೇಕು.

ಶಿಕ್ಷಣ ಇಲಾಖೆ ಕೂಡ ಹಿಂದೆಂದಿಗಿಂತ ಈ ಬಾರಿ ಉತ್ತಮ ಸಿದ್ದತೆ ಮಾಡಿಕೊಂಡಿದೆ. ವರ್ಷ ಪೂರ್ತಿ ಶಾಲೆಯಲ್ಲಿ ಏನೇನು ಆಗಬೇಕು ಎಂಬುದರ ಬಗ್ಗೆ ಸ್ಪಷ್ಟ ಮಾರ್ಗದರ್ಶಿ ಸೂತ್ರ ಹೊರಡಿಸಿದೆ. ಇದು ಬೋಧನೆ ಮತ್ತು ಕಲಿಕೆಯ  ಸಮಗ್ರ ಒಳನೋಟ ಒಳಗೊಂಡಿದೆ. ಮೊದಲ ದಿನವೇ ಮಕ್ಕಳ ಕೈಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರ ಲಭ್ಯವಾಗುತ್ತಿದೆ. ಶಿಕ್ಷರ ಅಭಾವ ಇರುವ ಕಡೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಈಗಾಗಲೇ ಆದೇಶ ಹೊರಡಿಸಿದೆ. ಮೊದಲ ದಿನದಿಂದಲೇ ಅತಿಥಿ ಶಿಕ್ಷಕರು ಲಭ್ಯವಾಗಬಹುದು.‌ ಹಾಲು, ಊಟಕ್ಕೆ ಸಿದ್ದತೆಗಳಾಗಿವೆ. ಆದರೆ ಮಾಡಿಕೊಂಡ ಈ ಯೋಜನೆಗಳು ವರ್ಷಪೂರ್ತಿ‌ ಕ್ರಮವರಿತು ಅನುಷ್ಠಾನವಾಗಬೇಕಾದದ್ದು ಅತೀ ಮುಖ್ಯ.‌

ಇದೆಲ್ಲಕ್ಕಿಂತ ಮುಖ್ಯವಾಗಿ ಕಲಿಸಬೇಕಾದ 'ಶಿಕ್ಷಕ' ತಾನು ಸಂಪೂರ್ಣ ಸನ್ನದ್ದನಾಗಬೇಕಾದದ್ದು ಅತಿ ಮುಖ್ಯ.‌ ಒಂದು ದೀರ್ಘ ವಿಶ್ರಾಂತಿಯ ನಂತರ ಶಿಕ್ಷಕರು ಶಾಲೆ ಕಡೆ ಬರುತ್ತಿದ್ದಾರೆ.‌ ಈ ವರ್ಷ ತಾನು ಬೋಧಿಸಬೇಕಾದ ವಿಷಯಗಳ ಅಧ್ಯಯನವಾಗಬೇಕು. ಯಾವಾಗ, ಯಾವ ಪಾಠ ಮಾಡಬೇಕು ಅನ್ನುವ ಯೋಜನೆ ತಯಾರಾಗಬೇಕು. ಪಾಠಕ್ಕೆ ಸಿದ್ದನಾಗದೆ ತಾನು ತರಗತಿಗೆ ಹೋಗುವುದಿಲ್ಲ ಎಂದು ತನಗೆ ತಾನೇ ಪ್ರಮಾಣ ಮಾಡಿಕೊಳ್ಳಬೇಕು. ಬರೀ ಬೋಧನೆಯಲ್ಲದೆ ಶಾಲೆಯ ಭೌತಿಕ ವಾತಾವರಣವನ್ನು ಕಲಿಕಾ ಸ್ನೇಹಿಯಾಗುವಂತೆ ಸಿದ್ದಗೊಳಿಸಬೇಕು. ಸಮುದಾಯದ ಸಹಕಾರದಲ್ಲಿ ಅದನ್ನು ಸಾಧ್ಯವಾಗಿಸುವ ಮತ್ತು ಮೊದಲನೇ ದಿನವೇ ಎಲ್ಲಾ ಮಕ್ಕಳು ಶಾಲೆಯಲ್ಲಿರುವಂತೆ ಕ್ರಮವಹಿಸಬೇಕು. ಹೊಸ ಹೊಸ ಕಲಿಕಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು‌‌. ಶಾಲೆಯಲ್ಲಿ ಮಗು ಕಲಿಯಲು ಆಹ್ಲಾದಕರ ವಾತಾವರಣ ಸೃಷ್ಟಿಸಬೇಕು.

ಎಷ್ಟೊ ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯುವ ನೀರಿಲ್ಲ. ಕೆಲವು ಶಾಲೆಗಳಲ್ಲಿ ಶೌಚಾಲಯಗಳಿಲ್ಲ. ಕೆಲವು ಕಡೆ ಮಕ್ಕಳು ತುಂಬಾ ದೂರದಿಂದ ನಡೆದು ಬರಬೇಕಾಗುತ್ತದೆ. ಇನ್ನೂ ಕೆಲವು ಕಡೆ ಮಕ್ಕಳ ಆಡಲು ಆಟದ ಮೈದಾನಗಳಿಲ್ಲ. ಕೊಠಡಿಗಳ ಅಭಾವ ಇದೆ, ಮನೆಯಲ್ಲಿ ಬಡತನದ ಕಾರಣಕ್ಕೆ ಮಕ್ಕಳು ಶಾಲೆಗೆ ಬರುವುದಿಲ್ಲ, ಒತ್ತಡದ ಪರಿಣಾಮವಾಗಿ ಕೆಲವು ಮಕ್ಕಳು ಶಾಲೆ ತೊರೆಯುತ್ತಿದ್ದಾರೆ. ಅಲ್ಲಲ್ಲಿ ಕೆಲವು ಶಿಕ್ಷರ ಕರ್ತವ್ಯದ ಬಗ್ಗೆ ಕೇಳಿ ಬರುವ ಅಪಸ್ವರ, ಇಲಾಖೆಯ ಕೆಲವೊಂದು ಆತುರದ ನಿರ್ಧಾರಗಳು..ಇಂಥಹ ಕೆಲವು ಸಮಸ್ಯೆಗಳು  ಮಗುವಿನ ಕಲಿಕೆಗೆ ಕೊಂಚ ಹಿನ್ನೆಡೆ ಕೊಡಬಹುದು.‌ ಈ ಸಮಸ್ಯೆಗಳನ್ನು ಬಗೆಹರಿಸುವುದು ನಮ್ಮ‌ ಆದ್ಯತೆಯಾಗಬೇಕು. ಮತ್ತು ಸಮಸ್ಯೆಗಳಿವೆಯೆಂದು ಹಾಗೆ ಸುಮ್ಮನೆ ಕೂರುವುದಲ್ಲ. ಸಮಸ್ಯೆಗಳು ಎಲ್ಲಾ ಕಾಲಕ್ಕೂ ಇರುತ್ತವೆ. ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಳ್ಳುತ್ತಾ, ಅದಕ್ಕೆ ಬದಲಿ ವ್ಯವಸ್ಥೆ ಮಾಡಿಕೊಳ್ಳುತ್ತಾ ಮಗುವಿನ ಕಲಿಕೆಯನ್ನು ಮಾತ್ರ ಪ್ರಧಾನವಾಗಿಟ್ಟು ನಾವು ಮೆನ್ನೆಡೆದರೆ ನಮ್ಮ ಮಕ್ಕಳು ನಮ್ಮ ಸಮಾಜದ ಆಸ್ತಿಯಾಗಬಹುದು.‌ ಅದೆ ತಾನೇ ಶಿಕ್ಷಣದ ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT