ಏಳನೇ ತರಗತಿಯ ಬಾಲಕನೊಬ್ಬ ಬದುಕು ಬೇಡವೆಂದು ಎದ್ದು ಹೋದ ಘಟನೆಯೊಂದು ಮನಸ್ಸನ್ನು ತೀವ್ರವಾಗಿ ಕಲಕಿತು. ಬದುಕು ಎಂದರೇನು? ಜೀವ ಎಂದರೇನು? ಎಂಬುದನ್ನೂ ಅರಿಯದ ಹುಡುಗ ಬರೆದಿಟ್ಟ ಮರಣ ಪತ್ರದ ಸಾಲುಗಳನ್ನು ನೋಡಿ ಇನ್ನೂ ಕಂಗಾಲಾದೆ. ಸ್ವಚ್ಛಗಣ್ಣಿನ ಸಣ್ಣ ಮಕ್ಕಳ ಕಣ್ಣುಗಳಲ್ಲೇಕೆ ಸಾವು ಹಾಗೂ ಕೇಡಿನ ನೆರಳು?

ಇಲ್ಲೊಬ್ಬ ಹತ್ತನೇ ತರಗತಿ ಬಾಲಕ ತನಗೆ ಇಂಗ್ಲಿಷ್ ಕಷ್ಟವೆಂದು ಮನೆಬಿಟ್ಟು ಹೋದ. ಅಮ್ಮ ಗದರಿದರು ಅಂತ ಬಾಲಕಿಯೊಬ್ಬಳು ಊಟ, ನೀರು ಬಿಟ್ಟು ಸಾಯುವ ಬೆದರಿಕೆ ಹಾಕಿದಳು. ಮಕ್ಕಳ ಮನಸ್ಸೇಕೆ ಇಷ್ಟೊಂದು ಸೂಕ್ಷ್ಮವಾಗುತ್ತಿದೆ? ಕೃತಕ ಬುದ್ಧಿಮತ್ತೆ ಒಂದೇ ನಿಮಿಷದಲ್ಲಿ ಏನೆಲ್ಲವನ್ನೂ ಮಾಡಬಲ್ಲದು ಎನ್ನುವುದು ಈ ಕಾಲದ ಅಹಂಕಾರ. ಅದೇ ಒಂದು ನಿಮಿಷದಲ್ಲಿ ಎಂತಹ ಒಳ್ಳೆಯ ಮಕ್ಕಳೂ ದುಡುಕಿಬಿಡುತ್ತಾರೆ ಎಂಬುದು ನಮ್ಮ ದೊಡ್ಡ ಸೋಲು.

ಒಂದು ಸಿನಿಮಾ, ಒಂದು ವಿಡಿಯೊ ಗೇಮ್, ಹೆತ್ತವರ ಒಂದು ಗದರಿಕೆ, ನಾಲ್ಕಾರು ವಿಡಿಯೊಗಳು, ಪರೀಕ್ಷೆಯ ಭಯ, ದೇಹದಲ್ಲಿನ ಬದಲಾವಣೆಯ ಗೊಂದಲ, ಭೀತಿ, ಆಕರ್ಷಣೆ, ಪೋಷಕರ ಒತ್ತಡ, ಸಮಾಜದ ನಿರೀಕ್ಷೆಗಳು–ಮಗುವಿನ ಮನಸ್ಸಿನೊಳಗೆ ದ್ವಂದ್ವಗಳ ಬಿರುಗಾಳಿ ಎಬ್ಬಿಸಲು ಇರುವ ಕಾರಣಗಳು ಒಂದೆರಡಲ್ಲ. ತಾತ್ಪರ್ಯ ಇಷ್ಟೇ: ಮಕ್ಕಳ ಮಾನಸ ಸರೋವರದಲ್ಲಿ ಕಂಪನಗಳು ಎದ್ದಿವೆ ಹಾಗೂ ಆ ಕಂಪನಗಳು ಗಂಭೀರ ಸ್ವರೂಪ ಹೊಂದಿವೆ.

ಸಣ್ಣಪುಟ್ಟ ಒತ್ತಡಕ್ಕೂ ಮಕ್ಕಳು ಸ್ಫೋಟಗೊಳ್ಳುತ್ತಿದ್ದಾರೆ. ಮನೆ ಬಿಟ್ಟು ಹೋಗುತ್ತಿದ್ದಾರೆ. ಆಕ್ರಮಣ ಮನಃಸ್ಥಿತಿ ಪ್ರದರ್ಶಿಸುತ್ತಿದ್ದಾರೆ. ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು ಇತ್ತೀಚೆಗೆ ನೀಡಿದ ವರದಿಯಲ್ಲಿ ಮಕ್ಕಳಲೋಕದ ಕುರಿತಾಗಿ ಅಚ್ಚರಿಯ ವಿಷಯಗಳು ಹೊರಬಿದ್ದಿವೆ. ಬಹಳಷ್ಟು ವಿದ್ಯಾರ್ಥಿಗಳಲ್ಲಿ ದೈಹಿಕ ಹಾಗೂ ಮಾನಸಿಕ ಅಸಹಜ ಬೆಳವಣಿಗೆಗಳು ಕಂಡು ಬಂದಿವೆ.

ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆಗಳು ಹೆಚ್ಚಳವಾಗಿರುವುದು ಕಳವಳದ ಸಂಗತಿ. ಅದಕ್ಕೆ ಸಾಕಷ್ಟು ಕಾರಣಗಳೂ ಇವೆ. ಮಿತಿಮೀರಿದ ಮೊಬೈಲ್ ಬಳಕೆ, ಆಧುನಿಕ ಶಿಕ್ಷಣದ ಒತ್ತಡ,ಸ್ಪರ್ಧಾತ್ಮಕತೆಯ ಸವಾಲುಗಳು ಹಾಗೂ ಸಾಮಾಜಿಕ ಬೆಂಬಲದ ಕೊರತೆಯಂತಹ ಕಾರಣಗಳಿಂದ ಮಕ್ಕಳ ಮನಸ್ಸು ಕುಗ್ಗುತ್ತಿದೆ. ಮಾನಸಿಕ ಕುಸಿತಕ್ಕೆ ಒಳಗಾದ ಕೆಲವರು ಆತ್ಮಹತ್ಯೆಯ ದಾರಿ ಹಿಡಿಯುತ್ತಿರುವುದರ ಬಗ್ಗೆ ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದೆ; ಇದೊಂದು ‘ವ್ಯವಸ್ಥಿತ ವೈಫಲ್ಯ’ ಎಂದು ವ್ಯಾಖ್ಯಾನಿಸಿದೆ.

ಮಗುವಿಗೆ ಜ್ವರ ಬಂದರೆ ಕಾಳಜಿ ಮಾಡುತ್ತೇವೆ. ಗಾಯವಾದರೆ ಆತಂಕಕ್ಕೆ ಒಳಗಾಗುತ್ತೇವೆ. ಆದರೆ, ಮನಸ್ಸು ಕೂಡ ಹುಷಾರು ತಪ್ಪುತ್ತದೆ ಎಂಬುದರ ಅರಿವಾಗುತ್ತಿಲ್ಲ ನಮಗೆ. ಮನಸ್ಸಿಗೂ ಗಾಯವಾಗುತ್ತದೆ, ಬಳಲುತ್ತದೆ, ಪ್ರಭಾವಕ್ಕೆ ಒಳಗಾಗುತ್ತದೆ, ಸೋಲುತ್ತದೆ, ನೋವು ತಿನ್ನುತ್ತದೆ. ಜ್ವರಕ್ಕೆ ಔಷಧ ಕೊಟ್ಟಂತೆ ಮನಸ್ಸಿಗೂ ಮದ್ದು
ನೀಡಬೇಕಾಗುತ್ತದೆ.

ವಯಸ್ಕರಿಗೂ ತಮ್ಮ ಮಾನಸಿಕ ತುಮುಲಗಳ ಬಗ್ಗೆ ಅರಿವಿಲ್ಲದ ಸಾಮಾಜಿಕ ಸಂದರ್ಭ ನಮ್ಮದಾಗಿರು ವಾಗ, ಮಕ್ಕಳ ಮನೋಲೋಕದ ಬಗ್ಗೆ ಯೋಚಿಸುವವರು ಕಡಿಮೆ. ಈ ಉದಾಸೀನ ಸರಿಯಲ್ಲ. ಬೆಳೆಯಬೇಕಾದ ಮಕ್ಕಳು, ನಾಳೆ ಸಮಾಜಕ್ಕೆ ಆಸ್ತಿಯಾಗ ಬೇಕಾದ ಮಕ್ಕಳು, ಅನಾರೋಗ್ಯಕರ ಮೈ ಮನಸ್ಸು ಇಟ್ಟುಕೊಂಡರೆ ಹೇಗೆ?

ಮಗು ಅನೇಕ ಕಾರಣಗಳಿಂದ ಮಾನಸಿಕ ಸಮಸ್ಯೆಯಿಂದ ಬಳಲಬಹುದು. ಒಳ್ಳೆಯ ಶಾಲೆ, ಒಳ್ಳೆಯ ಬಟ್ಟೆ, ಒಳ್ಳೆಯ ಆಹಾರದಂತೆ, ಉತ್ತಮ ಮಾನಸಿಕ ಆರೋಗ್ಯ ಹೊಂದುವುದೂ ಎಲ್ಲ ಮಕ್ಕಳ ಹಕ್ಕಾಗಬೇಕು. ಒಂದು ತೀವ್ರ ಜ್ವರ ಗಾಬರಿಗೊಳಿಸಿದಷ್ಟೇ ಮಕ್ಕಳ ಬೇಸರ, ಸಿಟ್ಟು, ಖಿನ್ನತೆ ನಮ್ಮನ್ನು ಆತಂಕಕ್ಕೀಡು ಮಾಡಬೇಕು.

ಶಾಲೆಗಳಲ್ಲಿ ವರ್ಷಕ್ಕೆ ಒಮ್ಮೆಯಾದರೂ ಮಕ್ಕಳಿಗೆ ಮನೋವೈದ್ಯರಿಂದ ಆಪ್ತಸಲಹೆ ರೀತಿಯ ಕಾರ್ಯಕ್ರಮ ಗಳನ್ನು ಯೋಜಿಸಬೇಕು. ಮಗು ಯಾರ ಬಳಿಯೂ ಹೇಳಿಕೊಳ್ಳದೆ ತಾನು ಅನುಭವಿಸುತ್ತಿರುವ ಮಾನಸಿಕ ಸಂಕಟಗಳನ್ನು ವೈದ್ಯರ ಮುಂದೆ ಹೇಳಿಕೊಳ್ಳಲು ಅನುಕೂಲ ವಾಗುತ್ತದೆ. ಎಲ್ಲ ಸಂಗತಿಗಳನ್ನೂ ಗೆಳೆಯರ ಮುಂದೆ, ಶಿಕ್ಷಕರ ಮುಂದೆ, ಪೋಷಕರ ಮುಂದೆ ಹೇಳಿಕೊಳ್ಳಲಾಗದು. ಮನೋವೈದ್ಯರು ಅವರದೇ ಆದ ತಂತ್ರದ ಮೂಲಕ ಮಗುವಿನ ಮನಸ್ಸನ್ನು ತಲುಪಬಲ್ಲರು.

ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಶಿಕ್ಷಕರೂ ಗಮನಹರಿಸಬೇಕು. ಮಗುವಿನ ಮಾನಸಿಕ ತೊಳಲಾಟದ ಲಕ್ಷಣಗಳನ್ನು ಗುರುತಿಸಿ, ಪೋಷಕರ ಗಮನಕ್ಕೆ ತರಬೇಕು. ಶಿಕ್ಷಕರನ್ನು ಈ ನಿಟ್ಟಿನಲ್ಲಿ ತರಬೇತುಗೊಳಿಸಬೇಕು.

ಉತ್ತಮ ಆರೋಗ್ಯವಂತ ಮಗು ನಾಳೆಯ ಸಮಾಜದ ಆಸ್ತಿ. ಉತ್ತಮ ಆರೋಗ್ಯವೆಂದರೆ, ದೈಹಿಕ ಕಾಯಿಲೆ ಗಳಿಂದಷ್ಟೇ ಮುಕ್ತವಾಗಿರುವುದಲ್ಲ; ಮಾನಸಿಕವಾಗಿ, ಭಾವನಾತ್ಮಕವಾಗಿ ಸದೃಢವಾಗಿರುವುದೂ ಕೂಡ. ಆರೋಗ್ಯವಂತ ಮಕ್ಕಳು ನಾಳೆಯ ಆರೋಗ್ಯಯುತ ಸಮಾಜದ ವಾರಸುದಾರರು.

ಕಾರಣ ಏನಾದರೂ ಇರಲಿ, ಮಕ್ಕಳ ಮಾನಸ ಸರೋವರಕ್ಕೆ ಕಲ್ಲಂತೂ ಬಿದ್ದಿದೆ. ಕೊಳಕ್ಕೆ ಕಲ್ಲು ಬಿದ್ದಾಗ ನೀರು ಕಲಕುವುದು ಸಹಜ. ನೀರನ್ನು ಯಥಾಸ್ಥಿತಿಗೆ ತರುವ ಸವಾಲನ್ನು ಪೋಷಕರು, ಶಿಕ್ಷಕರು ಹಾಗೂ ಸಮಾಜ ವಹಿಸಿಕೊಳ್ಳಬೇಕು. ಮಕ್ಕಳ ಆರೋಗ್ಯ; ದೇಶದ ಆರೋಗ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.