ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮೌಢ್ಯದ ಮಬ್ಬಿಗೆ ಮತಿಯ ಕೈದೀವಿಗೆ

ಮೌಢ್ಯವೆಂಬುದು ವಿಶ್ವವ್ಯಾಪಿಯಾಗಿ, ವೈರಾಣುವಿನಂತೆಯೇ ರೂಪಾಂತರಗೊಂಡು ಸಾಂಕ್ರಾಮಿಕವಾಗಿ ಮರುಹುಟ್ಟು ಪಡೆಯುತ್ತಲೇ ಇದೆ
Last Updated 26 ಜೂನ್ 2022, 20:15 IST
ಅಕ್ಷರ ಗಾತ್ರ

ಮನುಷ್ಯಮಾತ್ರನನ್ನು ಪಶುತ್ವಕ್ಕಿಂತ ಭಿನ್ನವಾಗಿಸಲು ಕಾರಣವಾದ ಮತಿಯ ಕೈದೀವಿಗೆಯು ಅವನನ್ನು ದೈವತ್ವಕ್ಕೂ ಏರಿಸಬಲ್ಲದು. ಬರಬರುತ್ತಾ ಮಾನವಜಗತ್ತು ವೈಜ್ಞಾನಿಕ ತಿಳಿವು, ವೈಚಾರಿಕಾ ನಿಲುವು, ಸಂವೇದನಾಶೀಲತೆಗಳಲ್ಲಿ ಹೆಚ್ಚೆಚ್ಚು ಮಾನವೀಯಗೊಳ್ಳಬೇಕಿತ್ತು. ಆದರದು ಅಜ್ಞಾನ, ಅಂಧಾನುಕರಣೆ, ಆತ್ಮವಂಚನೆಯ ಜಾಲದಲ್ಲಿ ಸಿಲುಕಿ ನರಳುತ್ತಿರುವುದು ದುರ್ದೈವದ ಸಂಗತಿ.

‘ಮೌಢ್ಯಾಚರಣೆಗಳನ್ನು ನಂಬುವ ಸುಶಿಕ್ಷಿತರೆಂದರೆಪುಸ್ತಕಗಳನ್ನು ಹೊರುವ ಕತ್ತೆಗಳಂತೆ’ ಅಂದಿದ್ದರು ಕುವೆಂಪು. ಮೊನ್ನೆಯಷ್ಟೇ (ಅದೇ ವೈಚಾರಿಕ ನೆಲದಲ್ಲಿ) ಪರಸ್ಪರ ವಿವಾಹವಾಗಲು ತಮ್ಮ ಜಾತಕದಲ್ಲಿದ್ದ ಕುಜದೋಷವು ಅಡ್ಡಿಯಾಗಿದೆ ಎಂಬ ಕಾರಣಕ್ಕೆ, ಸರ್ಕಾರಿ ಉದ್ಯೋಗದಲ್ಲಿದ್ದ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ನಿರ್ಣಯಿಸಿದ್ದು, ಕೊನೆಯಲ್ಲಿ ಯುವತಿಯು ದುರಂತ ಅಂತ್ಯ ಕಂಡ ಸುದ್ದಿಯು ಮತ್ತೊಮ್ಮೆ ಮೌಢ್ಯಾಚರಣೆಯ ಭೀಕರತೆಯನ್ನು ತೆರೆದಿಟ್ಟಿದೆ.

ಭಯ ಮತ್ತು ಅಜ್ಞಾನವೇ ಮೂಢನಂಬಿಕೆಗಳ ತಾಯಿತಂದೆ. ಅವು ವ್ಯಕ್ತಿಯ ಆತ್ಮವಿಶ್ವಾಸ ಮತ್ತು ಸ್ವತಂತ್ರ ಆಲೋಚನೆಗಳನ್ನೇ ನಾಶ ಮಾಡಿ ಅಧೀರಗೊಳಿಸುತ್ತವೆ. ಬಡತನ, ದಾರಿದ್ರ್ಯದ ಹೆಚ್ಚಳಕ್ಕೂ ಅವೇ ನೀರುಗೊಬ್ಬರ. ಮೌಢ್ಯವೆಂಬುದೂ ವಿಶ್ವವ್ಯಾಪಿಯಾಗಿ,ವೈರಾಣುವಿನಂತೆಯೇ ರೂಪಾಂತರಗೊಂಡು ಹೊಸಹೊಸ ವೇಷ ಧರಿಸಿ, ಜನಮಾನಸದಲ್ಲಿ ಸಾಂಕ್ರಾಮಿಕವಾಗಿ ಮರುಹುಟ್ಟು ಪಡೆಯುತ್ತಲೇ ಇದೆ.

ಸ್ವತಃ ವೈಜ್ಞಾನಿಕ ಕೌತುಕವೆಂಬಂತೆ ಬದುಕಿದ್ದ ಸ್ಟೀಫನ್ ಹಾಕಿನ್ಸ್‌ ಅವರ ಸ್ಪಷ್ಟ ಉಲ್ಲೇಖದಂತೆ ‘ವಿಶ್ವಸೃಷ್ಟಿ, ಅದರ ಮುಂದುವರಿಕೆಯಲ್ಲಿ ಅಗೋಚರ ಶಕ್ತಿಯ ಪಾತ್ರವಿದೆ. ಹಾಗಂತ ಯಾವೊಂದು ಜೀವವನ್ನೂ ವೈಯಕ್ತಿಕವಾಗಿ ಉದ್ಧರಿಸುವ ಅಥವಾ ನಾಶ ಮಾಡುವ ಶಕ್ತಿಗಳು ಈ ಸೃಷ್ಟಿಯಲ್ಲಿ ಇಲ್ಲ. ನಾಳೆಗಳ ಬಗ್ಗೆ ಯಾವ ವ್ಯಕ್ತಿ, ಶಾಸ್ತ್ರಕ್ಕೂ ನಿಖರವಾಗಿ ಹೇಳಲಾಗದು, ಪ್ರಾಕೃತಿಕ ವಿದ್ಯಮಾನಗಳನ್ನಷ್ಟೇ ಅಧ್ಯಯನದಿಂದ ಮಂಡಿಸಲು ಸಾಧ್ಯ!’

ಭೂಪರಿಸರದಲ್ಲಿ ನೈಸರ್ಗಿಕ ವೈಪರೀತ್ಯ ಮತ್ತು ರೋಗರುಜಿನಗಳೆಲ್ಲವೂ ಸಹಜ ವಿದ್ಯಮಾನಗಳಾಗಿದ್ದು,ಸ್ವಚ್ಛ, ಸರಳ, ಪರಿಸರಪೂರಕವಾದ ಆರೋಗ್ಯಕರ ಜೀವನವಿಧಾನವನ್ನು ಅಳವಡಿಸಿಕೊಳ್ಳುವುದು ಎಲ್ಲ ಕಾಲಕ್ಕೂ ಸೂಕ್ತ. ಜೀವನಪ್ರೀತಿಯ ತುಡಿತ, ಬೆವರು ಬಸಿವ ದುಡಿತದಲ್ಲಿ ಎಲ್ಲರ ಭವಿಷ್ಯ ಅಡಗಿರುತ್ತದೆ.ವಿಶ್ವಚಲನೆಯಲ್ಲಿ ಕಾಯಗಳು ಪರಿಭ್ರಮಣೆಗೊಳ್ಳುವಲ್ಲಿನ ಸಹಜ ವಿದ್ಯಮಾನವಾದ ಗ್ರಹಣವನ್ನು ಹಿಂದಿನಿಂದಲೂ ಕೇಡು ಅಂತಲೇ ನಂಬಿಸಲಾಗಿದೆ. ಈಗೀಗಂತೂ ಮಾಧ್ಯಮಗಳು ಲೋಕದ ಕೆಡುಕಿನ ಪ್ರತೀಕವೆಂಬಂತೆ ಗ್ರಹಣವನ್ನು ವೈಭವೀಕರಿಸಿ ಜನಸಾಮಾನ್ಯರ ಮತಿಭ್ರಮಣೆಗೊಳಿಸುವ ಪ್ರವೃತ್ತಿ ಹೆಚ್ಚಾಗಿದೆ. ಅರಿವಿನ ಕನ್ನಡಿಗೆ ಅಂಟಿಸಿಕೊಂಡ ಮೋಸ- ಮೌಢ್ಯದ ಕರಿನೆರಳುಗಳು ಜಾಗೃತಸೂರ್ಯನಿಗೆ ನಿರಂತರವಾಗಿ ಗ್ರಹಣ ಹಿಡಿಸುತ್ತಲೇ ಇರುತ್ತವೆ. ಇಲ್ಲದ ಗ್ರಹಗತಿಗಳನ್ನು ಭವಿಷ್ಯಕ್ಕೆ ಸಮೀಕರಿಸುವ ವಿಧಾನಗಳು ಬಹಳಷ್ಟು ಜನರ ನಿತ್ಯಬದುಕನ್ನು ನರಕವನ್ನಾಗಿಸಿವೆ. ಮಾತ್ರವಲ್ಲ ಬೆಳಕಿಗೆ ಮುಖಮಾಡಿ ಬೆಳೆಯಬೇಕಾದ ಎಳೆಯರಲ್ಲಿ ವಾಸ್ತವಜ್ಞಾನವನ್ನು ಮಸುಕಾಗಿಸುತ್ತವೆ.

ಯುವಜನ ಅರಿವಿನ ಬೆಳಕಲ್ಲಿ, ಪ್ರಯತ್ನವನ್ನು ನಂಬಿಕೊಂಡು ತಾರಾಬಲದ ಬಗ್ಗೆ ತಲೆಬಿಸಿ ಮಾಡಿಕೊಳ್ಳದೆ ತಾರಾಮಂಡಲದ ಕೌತುಕವನ್ನು ಗ್ರಹಿಸುವುದು, ಸಂಭ್ರಮಿಸುವುದು ಮುಖ್ಯವಾಗಬೇಕಿದೆ.

ಅಷ್ಟಕ್ಕೂ, ಜನ್ಮಜನ್ಮದ ಕಥೆ ಹೇಳುವ, ಅಂಗೈಯಲ್ಲಿ ದೇವರನ್ನು ತೋರುವ ಅಥವಾ ಕಲ್ಲುಮಣ್ಣುಗಳಲ್ಲಿ ದೇವರನ್ನು ಪ್ರತಿಷ್ಠಾಪಿಸುವ ಮಂದಿಗೆ ಸತ್ತ ಜೀವಿಯೊಂದನ್ನು ಬದುಕಿಸುವುದು ಸಾಧ್ಯವೇ? ನಡೆಯುತ್ತಿರುವ ಭಯೋತ್ಪಾದಕ ದಾಳಿಗಳಾಗಲೀ ಪರಿಸರ ವಿಕೋಪಗಳಾಗಲೀ ಅಥವಾ ಇತ್ತೀಚಿನ ಕೊರೊನಾ ಅಟ್ಟಹಾಸದಲ್ಲಿ ಜಗತ್ತೇ ನಲುಗಿಹೋದುದರ ಬಗೆಗಾಗಲೀ ಜ್ಯೋತಿಷಿಗಳಿಗೆ ಸಣ್ಣ ಸುಳಿವು ಸಿಕ್ಕಿದ್ದರೆ ಶ್ರೀಸಾಮಾನ್ಯ ಅಷ್ಟೊಂದು ಸಂಕಷ್ಟಗಳನ್ನು ಅನುಭವಿಸಬೇಕಿತ್ತೇ?!

ಯಜ್ಞದಿಂದ ಶತ್ರುವನ್ನು ಸಂಹರಿಸುವುದಾದರೆ,ಬಡದೇಶದ ರಕ್ಷಣೆಗೆ ಕ್ಷಿಪಣಿ, ಅಣುಶಕ್ತಿಗಳಿಗಾಗಿಲಕ್ಷಾಂತರ ಕೋಟಿಗಳನ್ನು ವಿನಿಯೋಗಿಸುವ ಅಗತ್ಯವಾದರೂ ಏನಿದೆ? ಪರ್ಜನ್ಯಯಾಗದಿಂದ ಮಳೆ ತರಿಸಬಹುದಾದರೆ ಸಹರಾ ಮರುಭೂಮಿಯಲ್ಲಿ ಆ ಪ್ರಯೋಗ ಏಕಾಗಬಾರದು? ಇಷ್ಟೇ, ಯಾವ ಮಂತ್ರದಿಂದಲೂ ಮಾವಿನಕಾಯಿ ಉದುರುವುದಿಲ್ಲ, ಬಡಿಗೆ ಬೀಸಲೇಬೇಕು. ಸ್ವಾಮೀಜಿಯೊಬ್ಬರ ‘ನನ್ನ ಪಾದ ತೊಳೆದ ನೀರು ಕುಡಿದು ನೀವೆಲ್ಲ ಪಾವನರಾಗುವುದಾದರೆ ಕಾವೇರಿ ನದಿಗೇ ಕಾಲಿಟ್ಟು ಕೂರುತ್ತೇನೆ, ನದಿಯ ನೀರು ಕುಡಿದವರಿಗೆಲ್ಲಾ ಶಾಪ ವಿಮೋಚನೆ’ ಎಂಬ ಕಳಕಳಿ ಮಾರ್ಮಿಕವಾದುದು. ಸಮಾಜದ ಅಂಕುಡೊಂಕು ತೊಡೆದುಹಾಕಲು ಜೀವನ ಸಮರ್ಪಿಸಿದ ಸಂತರನ್ನು ಫೋಟೊ ಕಟ್ಟಿ ಗೋಡೆಗೆ ನೇತುಹಾಕುವುದಕ್ಕಿಂತ ಎದೆಯೊಳಗೆ ಅರಿವಾಗಿ ಬಿತ್ತಬೇಕು, ಭಕ್ತಿ, ಸದ್ವಿಚಾರಗಳನ್ನು ಕೃತಿಯಲ್ಲಿ ಬದುಕಿಸಿಕೊಳ್ಳಬೇಕು...

‘ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ’ ಎಂಬಂತಹ ವಚನದೀಪ್ತಿಗಳು ಒಳಗಿನ ಕತ್ತಲನ್ನು ಕಳೆಯುವಂತಾಗಬೇಕು. ಮತವನ್ನು ತೊಲಗಿಸಿ ಅಧ್ಯಾತ್ಮ, ವಿವೇಕ, ಜೀವಪರತೆಗಳಲ್ಲಿ ಅಂತಃಸಾಕ್ಷಿಯನ್ನು ಎಚ್ಚರಿಸುವ ನಿಜದರ್ಶನವನ್ನು ಎಲ್ಲರೂ ಕಾಣುವಂತಾಗಬೇಕು. ಯುವಜನತೆಯು ಸಿಲುಕಿಕೊಂಡ ಸಂಕೋಲೆಗಳಿಂದ ಮುಕ್ತವಾಗಿ, ಮತಿಯ ದೀವಿಗೆಯಡಿ ನಿರಾಮಯ ಬದುಕಿನೆಡೆಗೆ ದಿಟ್ಟಹೆಜ್ಜೆಗಳನ್ನು ಊರುವಂತಾಗಬೇಕು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT