ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ವಿಶ್ವಾಸ ಕಾಯ್ದುಕೊಳ್ಳುವ ಸವಾಲು

ಲಂಚ ಪ್ರಕರಣದಿಂದ ಕೆಎಸ್‍ಡಿಎಲ್‍ನ ವಿಶ್ವಾಸಾರ್ಹತೆಗೆ ಆಗಬಹುದಾದ ಧಕ್ಕೆಯತ್ತಲೂ ಚರ್ಚೆ ವಾಲಬೇಕಲ್ಲವೇ?
Last Updated 30 ಮಾರ್ಚ್ 2023, 19:47 IST
ಅಕ್ಷರ ಗಾತ್ರ

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‍ಡಿಎಲ್) ಅಧ್ಯಕ್ಷರಾಗಿದ್ದ ಶಾಸಕ ಕೆ.ಮಾಡಾಳ್ ವಿರೂಪಾಕ್ಷಪ್ಪ ಅವರ ಮನೆಯಲ್ಲಿ ಲೋಕಾಯುಕ್ತ ದಾಳಿನಡೆದ ವೇಳೆ ₹ 6.10 ಕೋಟಿ ಹಣ ಪತ್ತೆಯಾದದ್ದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು. ತಮ್ಮ ಪುತ್ರ ಪ್ರಶಾಂತ್ ಮಾಡಾಳ್ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೂಪಾಕ್ಷಪ್ಪ ಅವರು ಮೊದಲಿಗೆ ತಲೆಮರೆಸಿ
ಕೊಂಡು ಆನಂತರ ನಿರೀಕ್ಷಣಾ ಜಾಮೀನು ಪಡೆದದ್ದು ಕೂಡ ಚರ್ಚೆಗೆ ಗ್ರಾಸವಾಯಿತು. ಇದೀಗ ನಿರೀಕ್ಷಣಾ ಜಾಮೀನು ರದ್ದಾಗಿ ಬಂಧನದಲ್ಲಿರುವ ವಿರೂಪಾಕ್ಷಪ್ಪ ಅವರಿಂದ ಬಿಜೆಪಿಗೆ ಆಗಲಿರುವ ಮುಜುಗರದ ಕುರಿತು ಕೂಡ ಬಹಳಷ್ಟು ವಿಶ್ಲೇಷಣೆ ನಡೆದಿದೆ.

ಕಾಂಗ್ರೆಸ್ ಆಡಳಿತಾವಧಿಯ ಭ್ರಷ್ಟಾಚಾರದ ಕುರಿತು ಅತಿ ಉತ್ಸಾಹದಿಂದ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಒಳಗೊಂಡಂತೆ ಬಿಜೆಪಿಯ ಪ್ರಮುಖ ನಾಯಕರು, ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಭ್ರಷ್ಟಾಚಾರದ ಕುರಿತು ಮಾತನಾಡಲು ಆರಂಭಿಸಿದರೆ, ಗುತ್ತಿಗೆದಾರರು ಮಾಡಿದ 40 ಪರ್ಸೆಂಟ್ ಲಂಚದ ಆರೋಪ ಜನರಿಗೆ ನೆನಪಾಗುವುದು ನಿಶ್ಚಿತ. ಜೊತೆಗೆ ವಿರೂಪಾಕ್ಷಪ್ಪನವರ ಕೋಣೆಯಲ್ಲಿದ್ದ ನೋಟಿನ ಕಂತೆಗಳೂ ಕಣ್ಮುಂದೆ ಬರುವ ಸಾಧ್ಯತೆಯಂತೂ ಇದ್ದೇ ಇದೆ.

ಮೈಸೂರು ಸ್ಯಾಂಡಲ್ ಸೋಪು ಸೇರಿದಂತೆ ಕೆಎಸ್‍ಡಿಎಲ್‍ನ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಹೆಸರಿದೆ. ದೀರ್ಘಾವಧಿಯಿಂದ ಕೆಎಸ್‍ಡಿಎಲ್ ಉತ್ಪನ್ನಗಳ ಗುಣಮಟ್ಟದ ಮೇಲೆ ವಿಶ್ವಾಸವಿರಿಸಿ ಬಳಸುತ್ತಿರುವ ಗ್ರಾಹಕರ ಮೇಲೆ ಮಾಡಾಳ್ ಪ್ರಕರಣ ಯಾವುದೇ ಪರಿಣಾಮ ಬೀರುವುದಿಲ್ಲವೇ? ಲೋಕಾಯುಕ್ತ ಪೊಲೀಸರು ನಡೆಸುತ್ತಿರುವ ತನಿಖೆಯಿಂದ ಹೊರಬೀಳುತ್ತಿರುವ ಮಾಹಿತಿ, ‘ಮೈಸೂರು ಸ್ಯಾಂಡಲ್’ ಎಂಬ ಬ್ರ್ಯಾಂಡಿನ ವಿಶ್ವಾಸಾರ್ಹತೆಗೆ ನೀಡುತ್ತಿರುವ ಪೆಟ್ಟಿನ ಅಗಾಧತೆ ಕುರಿತು ಕೂಡ ಚಿಂತಿಸಬೇಕಲ್ಲವೇ?

1916ರಲ್ಲಿ ಸ್ಥಾಪನೆಯಾಗಿ ಇದುವರೆಗೂ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿರುವ ಸಂಸ್ಥೆಯ ವಿಶ್ವಾಸಾರ್ಹತೆಗೆ ಒದಗಬಹುದಾದ ಧಕ್ಕೆ ದೀರ್ಘಾವಧಿಯದ್ದು. ಕೆಎಸ್‍ಡಿಎಲ್‍ಗೆ ಕಚ್ಚಾವಸ್ತುಗಳನ್ನು ಪೂರೈಸುವ ಸಂಸ್ಥೆಗಳಿಂದ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಮಗ ಪ್ರಶಾಂತ್ ಲಂಚ ಪಡೆಯುತ್ತಿದ್ದರು ಎನ್ನುವ ಮಾಹಿತಿ ಲೋಕಾಯುಕ್ತ ಪೊಲೀಸರಿಗೆ ಲಭಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೋಟಿಗಟ್ಟಲೆ ಲಂಚ ನೀಡುವ ಪೂರೈಕೆದಾರರಿಂದ ಸರಬರಾಜಾಗುವ ಕಚ್ಚಾವಸ್ತುಗಳ ಗುಣಮಟ್ಟ ಹೇಗಿರಬಹುದು? ಕೆಎಸ್‍ಡಿಎಲ್‍ನಲ್ಲಿನ ಭ್ರಷ್ಟಾಚಾರದಿಂದ ಉತ್ಪನ್ನದ ಗುಣಮಟ್ಟ ಕುಸಿದಿರಬಹುದು; ಇಲ್ಲವಾದರೆ ಉತ್ಪನ್ನಗಳಿಗೆ ದುಬಾರಿ ಬೆಲೆ ನಿಗದಿಪಡಿಸುವ ಮೂಲಕ ಸೋರಿಕೆಯಾಗುತ್ತಿರುವ ಹಣವನ್ನು ಸರಿದೂಗಿಸಿಕೊಳ್ಳುತ್ತಿರಬಹುದು. ಇದರಿಂದಾಗಿ ನಷ್ಟವಾಗುತ್ತಿರುವುದು ಗ್ರಾಹಕರು ಮತ್ತು ಕೆಎಸ್‍ಡಿಎಲ್ ಸಂಸ್ಥೆಗಲ್ಲವೇ?

ಯಾವುದೇ ಉತ್ಪನ್ನವು ಮಾರುಕಟ್ಟೆಯಲ್ಲಿ ಯಶಸ್ಸು ಕಂಡುಕೊಳ್ಳಲು ‘ಗುಣಮಟ್ಟ’ ಮತ್ತು ‘ಬೆಲೆ’ಯ ಕುರಿತು ಕಾಳಜಿ ವಹಿಸಬೇಕಿರುವುದು ಅತ್ಯಗತ್ಯ. ಗ್ರಾಹಕರು ಯಾವಾಗಲೂ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಉತ್ಪನ್ನದ ಹುಡುಕಾಟದಲ್ಲಿರುತ್ತಾರೆ. ಖಾಸಗಿ ಸಂಸ್ಥೆಗಳ ಉತ್ಪನ್ನಗಳೊಂದಿಗೆ ಸ್ಪರ್ಧಿಸಿ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಬೇಡಿಕೆ ಕಂಡುಕೊಳ್ಳುವುದು, ಮತ್ತದನ್ನು ಕಾಯ್ದುಕೊಳ್ಳುವುದು ದೊಡ್ಡ ಸವಾಲಿನ ಸಂಗತಿ. ಈ ಸವಾಲು ಎದುರಿಸುವಲ್ಲಿ ಕೆಎಸ್‍ಡಿಎಲ್ ಇದುವರೆಗೂ ಯಶಸ್ವಿಯಾಗಿದೆ.

ಕೆಎಸ್‍ಡಿಎಲ್ ಸಂಸ್ಥೆ ಭ್ರಷ್ಟಾಚಾರದ ಕಾರಣಕ್ಕೆ ಉತ್ಪನ್ನಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡರೆ ಅಥವಾ ವಿವೇಚನಾರಹಿತವಾಗಿ ಹೆಚ್ಚು ಬೆಲೆ ನಿಗದಿಪಡಿಸಿದರೆ ಸಹಜವಾಗಿಯೇ ಗ್ರಾಹಕರು ಬೇರೆ ಕಂಪನಿಯ ಉತ್ಪನ್ನಗಳತ್ತ ಮುಖಮಾಡುತ್ತಾರೆ. ತಯಾರಿಕಾ ಸಂಸ್ಥೆಯೊಂದರ ಆಡಳಿತ ಪಾರದರ್ಶಕವಾಗಿಲ್ಲವೆಂಬ ವಿಚಾರ ಬಹಿರಂಗವಾದರೆ, ಸಹಜವಾಗಿಯೇ ಅದರ ಉತ್ಪನ್ನಗಳ ಮೇಲಿನ ಗ್ರಾಹಕರ ವಿಶ್ವಾಸಕ್ಕೂ ಕುಂದುಂಟಾಗಲಿದೆ. ಮಾಡಾಳ್ ವಿರೂಪಾಕ್ಷಪ್ಪನವರ ಪ್ರಕರಣದಿಂದ ತನಗಾಗಿರುವ ಮುಜುಗರದಿಂದ ತಪ್ಪಿಸಿಕೊಳ್ಳುವ ಸಲುವಾಗಿ ವಿಷಯಾಂತರ ಮಾಡಲು ಬಿಜೆಪಿ ಎದುರು ಬಹಳಷ್ಟು ದಾರಿಗಳಿವೆ. ಆದರೆ ಈ ಪ್ರಕರಣದಿಂದ ಕೆಎಸ್‍ಡಿಎಲ್ ಸಂಸ್ಥೆ ಮತ್ತು ಅದರ ಉತ್ಪನ್ನಗಳಿಗೆ ಮೆತ್ತಿಕೊಳ್ಳಬಹುದಾದ ಕಳಂಕ ತೊಳೆಯುವ ಉತ್ಸಾಹ ಆಳುವವರಲ್ಲಿ ಇರಲಿದೆಯೇ?

ಸಚಿವ ಸ್ಥಾನ ಸಿಗಲಿಲ್ಲವೆಂದು ಅಸಮಾಧಾನಗೊಳ್ಳುವ ಶಾಸಕರನ್ನು ಸಮಾಧಾನಪಡಿಸಲು ಅವರನ್ನು ನಿಗಮ- ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಿಸುವುದೇ ಹೆಚ್ಚು. ಸೀಮಿತ ಅಧಿಕಾರ ಮತ್ತು ಸಂಪನ್ಮೂಲಗಳಷ್ಟೇ ಲಭ್ಯವಾಗುವ ಇಂತಹ ಸ್ಥಾನಗಳಿಗೆ ಶಾಸಕರನ್ನು ನೇಮಿಸಿ ಅವರನ್ನು ತೃಪ್ತಿಪಡಿಸಲು ಕಸರತ್ತು ಮಾಡುವ ರಾಜಕೀಯ ಪಕ್ಷಗಳು, ತಾವು ಅಧಿಕಾರಕ್ಕೆ ಬಂದರೆ ಕೆಎಸ್‍ಡಿಎಲ್ ಒಳಗೊಂಡಂತೆ ಸರ್ಕಾರಿ ಸ್ವಾಮ್ಯದ ಉದ್ದಿಮೆ ಸಂಸ್ಥೆಗಳು ಹಾಗೂ ನಿಗಮ ಮಂಡಳಿಗಳಲ್ಲಿ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡುವುದಿಲ್ಲ ಎನ್ನುವ ಭರವಸೆ ನೀಡುತ್ತವೆಯೇ? ಆನಂತರ ನುಡಿದಂತೆ ನಡೆಯುವ ಇಚ್ಛಾಶಕ್ತಿ ಪ್ರದರ್ಶಿಸುವ ಸ್ಥಿತಿಯಲ್ಲಿವೆಯೇ? ಮಾಡಾಳ್ ವಿರೂಪಾಕ್ಷಪ್ಪನವರ ಲಂಚ ಪ್ರಕರಣದಿಂದ ಕೆಎಸ್‍ಡಿಎಲ್‍ಗೆ ಆಗಿರುವುದು ಆರ್ಥಿಕ ನಷ್ಟ ಮಾತ್ರವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT