ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಪಡೆವ– ಕೊಡುವ ಕೈಗಳ ಕಾರುಣ್ಯ

ನಮ್ಮ ನಡುವಿನ ಇಂದಿನ ಎಲ್ಲಾ ತಾಕಲಾಟಗಳಿಗೆ ‘ಕೊಡುವ’ ಕಾರುಣ್ಯವೂ ಒಂದು ಔಷಧಿಯಾಗಬಹುದು
Last Updated 21 ಸೆಪ್ಟೆಂಬರ್ 2022, 17:50 IST
ಅಕ್ಷರ ಗಾತ್ರ

ಇಂದು ಜಗತ್ತಿನಲ್ಲಿ ನಮ್ಮ ನಡುವೆ ಬದುಕಿನ ಚೆಂದವೊಂದು ಬಾಡದೇ ಉಳಿದಿದೆ ಎಂದರೆ ಅದು ಎರಡು ಕಾರಣಕ್ಕೆ. ಒಂದು, ಸದ್ದಿಲ್ಲದೆಕೊಡುವಕೈಗಳಿಂದ. ಮತ್ತೊಂದು, ಪಡೆದ ಕೈಗಳು ಅದರ ದುಪ್ಪಟ್ಟಿನಷ್ಟು ಮತ್ತೊಬ್ಬರಿಗೆ ಕೊಡುವುದರಿಂದ. ನಮ್ಮೊಳಗೊಂದು ಹೀಗೆ ಪಡೆಯುವ ಮತ್ತುಕೊಡುವಕಾರುಣ್ಯವು ಗುಪ್ತಗಾಮಿನಿಯಂತೆ ಹರಿಯುತ್ತಿರುವುದರಿಂದಲೇ ಜಗತ್ತಿನ ಹಲವು ಜನರ ಪಾಲಿಗೆ ಬದುಕು ಇಂದಿಗೂ ಬಾಳಲು ಸಹ್ಯ ಅನಿಸಿದೆ.

ಆದರೆ ಈಗೀಗ ಕೊಡುವುದು ಕೆಲವರಿಗೆ ಒಂದು ಪ್ರಚಾರ ತಂತ್ರವಾಗುತ್ತಿದೆ. ಪಡೆದ ಕೆಲವು ಮಂದಿ ಕೂಡ ಕೃತಘ್ನರಂತೆ ಉಳಿದು ಹೋಗುತ್ತಿರುವುದು ವಿಷಾದಕರ. ‘ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ, ಏಡಿಸಿ ಕಾಡಿತ್ತು ಶಿವನ ಡಂಗುರ’ ಎಂದ ಬಸವಣ್ಣನವರ ಮಾತು ನೆನಪಾಗುತ್ತದೆ. ‘ಕೊಟ್ಟಿದ್ದು ಹೃದಯ ತುಂಬಬೇಕೇ ವಿನಾ ನೋಡುವವರ ಕಣ್ಣುಗಳನ್ನಲ್ಲ’ ಅನ್ನುತ್ತಾರೆ ಗಾಂಧೀಜಿ.

ಕೋವಿಡ್ ಸಮಯದಲ್ಲಿ ಹಿಡಿ ಅನ್ನ ಕೊಟ್ಟು ಫೋಟೊ ತೆಗೆಸಿಕೊಂಡವರನ್ನು ನೆನೆದರೆ ಬೇಸರ
ವಾಗುತ್ತದೆ. ಅನ್ನ ಹಿಡಿದವರ ಮುಖದಲ್ಲಿ ಕಾಣುತ್ತಿದ್ದ ಮುಜುಗರ ಕಂಡಾಗ ಸಂಕಟವಾಗುತ್ತಿತ್ತು.
‘ನಾನು ಕೊಡ್ತಾ ಇದೀನಿ’ ಅನ್ನುವ ಭಾವವೇ ಮನುಷ್ಯನಲ್ಲಿ ಅಹಂ ಅನ್ನು ತುಂಬುತ್ತದೆ. ‘ನಾನೇನೋ ಮಾಡಿದೆ’ ಅನ್ನುವ ಬದಲು ‘ನಾನು ಅವರಿಗೆ ಏನಾದ್ರೂ ಮಾಡಬೇಕಲ್ಲ’ ಅನ್ನುವ ಭಾವ ಆತನನ್ನು ವಿನೀತನನ್ನಾಗಿ ಮಾಡುತ್ತದೆ.

ಪ್ರತಿಯೊಬ್ಬ ಮನುಷ್ಯನೂ ನೂರಾರು ಋಣಗಳಲ್ಲಿ ಬದುಕುತ್ತಿದ್ದಾನೆ. ಆ ಋಣಗಳನ್ನು ತೀರಿಸುವೆ ಅನ್ನುವುದು ನಿಜಕ್ಕೂ ಹುಚ್ಚುತನ. ಅದಕ್ಕೆ ಕೃತಜ್ಞನಾಗಿರುವ ಮತ್ತು ಇಲ್ಲಿ‌ ಪಡೆದದ್ದನ್ನು ಇಲ್ಲಿಯೇ ಹಂಚುವ ಪ್ರಯತ್ನವಾದರೂ ಆಗಬೇಕು. ರಕ್ತ ಕೊಟ್ಟು ಜೀವ ಉಳಿಸಿದವನ ಋಣವು ನಮ್ಮ ರಕ್ತವನ್ನು ಪೂರ್ತಿ ಬಸಿದು ದಾನ ಮಾಡಿದರೂ ತೀರುವಂಥದ್ದಲ್ಲ. ನಾವು ಅದಕ್ಕೆ ಕೃತಜ್ಞರಾಗಿ, ಆಮೇಲೆ ದಾನಕ್ಕೆ ನಿಂತರೆ ಅದು ನೂರಾರು ಜೀವಗಳನ್ನು ಉಳಿಸೀತು.

ತನ್ನಂತೆ ಇನ್ನೊಬ್ಬರು ಕೂಡ ಅನ್ನುವ ಭಾವವಿದೆಯಲ್ಲ ಅದುಕಾರುಣ್ಯಸಮತೆ. ತನಗೆ ಯಾರೋ ಕೈಚಾಚಿದರು, ತಾನು ಕೂಡ ಯಾರಿಗೋ ಕೈಚಾಚಬೇಕು ಅನ್ನುವ ಯೋಚನೆ ಬಂದರೆ ಕೊಟ್ಟ ಕೈಗೆ ಒಂದು ಸಾರ್ಥಕತೆ. ಅದನ್ನು ಬುದ್ಧಕಾರುಣ್ಯವೆಂದು ಕರೆಯುತ್ತಾರೆ. ಕೊಟ್ಟಿದ್ದನ್ನು ಆ ಕ್ಷಣಕ್ಕೆ ಮರೆತುಬಿಡಬೇಕು.‌ ಪಡೆದದ್ದನ್ನು ಅಷ್ಟೇ ಪ್ರೀತಿಯಿಂದ ಮತ್ತೊಬ್ಬರಿಗೆ ತಲುಪಿಸುವುದು ಶ್ರೇಷ್ಠವಾದದ್ದು ಎನ್ನುವ ಚಿಂತನೆ ಉದಾತ್ತವಾದುದು.

ಒಮ್ಮೆ ಪರಿಚಯವೇ ಇಲ್ಲದವರು ನಮ್ಮ ಶಾಲೆಗೆ ಬಂದು, ಎಲ್ಲಾ ಮಕ್ಕಳಿಗೂ ಅವರ ಕಲಿಕೆಗೆ ಬೇಕಾದ ವಸ್ತುಗಳನ್ನೆಲ್ಲಾ ಕೊಟ್ಟು, ಕನಿಷ್ಠ ಒಂದು ಫೋಟೊವನ್ನೂ ತೆಗೆಸಿಕೊಳ್ಳದೆ ಹೊರಟರು. ‘ಕೊಡುವುದು ನಮಗೆ ಮತ್ತು ಪಡೆದವರಿಗೆ ಮಾತ್ರ ಗೊತ್ತಿದ್ರೆ ಸಾಕಲ್ವ ಸರ್’ ಎಂದು ಹೇಳಿ ‘ನಾವೇನೂ ಕೊಡ್ತಿಲ್ಲ ಸರ್, ನಾವು ಬಾಲ್ಯದಲ್ಲಿ ಯಾರದೋ ಸಹಾಯದಲ್ಲಿ ಓದಿದ್ವಿ, ಈಗ ಅದನ್ನು ಈಗಿನ ಮಕ್ಕಳಿಗೆ ತಲುಪಿಸ್ತಾ ಇದೀವಿ’ ಎಂದು ಹೇಳಿ ಹೋದ ಆ ಯುವಕರ ಮಾತು, ಕೊಡುವುದೇ ಪ್ರಚಾರಕ್ಕಾಗಿ ಎಂದುಕೊಂಡಿರುವವರ ಕಣ್ಣು ತೆರೆಸುವಂತಿತ್ತು.

ಪ್ರತಿಯೊಬ್ಬರೂ ಒಂದೊಂದು ದ್ವೀಪವಾಗಿರುವ ಈ ಹೊತ್ತಿನಲ್ಲಿ ಮನುಷ್ಯ ಮನುಷ್ಯರನ್ನು ಬೆಸೆಯುವ ಕೆಲಸವಾಗಬೇಕು. ನಮ್ಮ ನಡುವಿನ ಇಂದಿನ ಈ ಎಲ್ಲಾ ತಾಕಲಾಟಗಳಿಗೆ ‘ಕೊಡುವ’ ಕಾರುಣ್ಯವೂ ಒಂದು ಔಷಧಿಯಾಗಬಹುದು. ತಾನು ಯಾವುದೋ ಋಣದಲ್ಲಿದ್ದೇನೆ ಎನ್ನುವ ಭಾವವೇ ವ್ಯಕ್ತಿಯನ್ನು ನಮ್ರಗೊಳಿಸುತ್ತದೆ. ಅದನ್ನು ಕಳೆದುಕೊಳ್ಳುವ ನೆವದಲ್ಲಾದರೂ ಅವನು ಇನ್ನೊಬ್ಬರಿಗೆ ಕೊಟ್ಟಾಗ ಪಡೆದವನಿಗೂ ಸಾರ್ಥಕತೆ, ಕೊಟ್ಟವನಿಗೂ ನೆಮ್ಮದಿ.

ಕಳೆದ ವಾರ ಕುಪ್ಪಳಿಗೆ ಹೊರಟಿದ್ದೆ. ಬೆಳಗಿನ ಬಸ್ಸು. ಕಂಡಕ್ಟರ್ ಬಳಿ ಚಿಲ್ಲರೆ ಇರಲಿಲ್ಲ. ನನ್ನ ಬಳಿಯೂ ಇರಲಿಲ್ಲ. ನನಗೆ ಎಂಟು ರೂಪಾಯಿ ಚಿಲ್ಲರೆಯ ಅವಶ್ಯಕತೆ ಇತ್ತು. ಪಕ್ಕದಲ್ಲಿ ಕೂತಿದ್ದ ತರುಣನ ಕಡೆ ನೋಡಿದೆ. ಅವನು ನನ್ನ ನೋಟದ ಸೂಕ್ಷ್ಮತೆ ಅರಿತವನಂತೆ ‘ನನ್ನ ಬಳಿ‌ ಇದೆ ಕೊಡ್ತೀನಿ ಸರ್’ ಅಂದು ಎಂಟು ರೂಪಾಯಿ ತೆಗೆದುಕೊಟ್ಟ. ನಾನು ನಂತರ ಆ ಹಣವನ್ನು ಕಳುಹಿಸಲು ಅವನ ಬಳಿ ಮೊಬೈಲ್ ನಂಬರ್ ಕೇಳಿದೆ. ‘ಪರವಾಗಿಲ್ಲ ಸರ್, ನೀವು ಆ ಹಣಾನ ಇನ್ಯಾರಿಗೊ ಅವಶ್ಯಕತೆ ಇದ್ದವರಿಗೆ ತಲುಪಿಸಿ’ ಅಂದ. ಅವನಿಗೆ ಎಂಟು ರೂಪಾಯಿ ಮರಳಿಸಿಯೂ ನನ್ನ ಬಳಿ ಆ ಎಂಟು ರೂಪಾಯಿ ಬದಲಿಗೆ ನಾನು ಇನ್ನೊಬ್ಬರಿಗೆ ತೀರಿಸಬೇಕಾದ ಋಣ ಉಳಿಯಿತು.

ನಾನು ಎಂಟು ರೂಪಾಯಿಯನ್ನು ಮತ್ತೊಬ್ಬನಿಗೆ ಕೊಟ್ಟಾಗ, ಅವನು ಇನ್ನೊಬ್ಬನಿಗೆ ಕೊಟ್ಟಾಗ, ಆ ಇನ್ನೊಬ್ಬನು ಮಗದೊಬ್ಬನಿಗೆ ಕೊಟ್ಟಾಗ ಬರೀ ಈ ಎಂಟು ರೂಪಾಯಿ ಎಷ್ಟು ಜನರನ್ನು ಬೆಸೆಯಬಹುದು, ನೋಟ್ ಪುಸ್ತಕ ಪಡೆದ ಮಕ್ಕಳು ನಾಳೆ ಮತ್ತೊಬ್ಬರಿಗೆ ಕೊಟ್ಟಾಗ, ಅವರು ಇನ್ನೊಬ್ಬರಿಗೆ ಕೊಟ್ಟಾಗ ಹೇಗಿರಬಹುದು ಎಂಬ ಯೋಚನೆ ಕಾಡಿತು. ಹೀಗೆ ಪಡೆದು, ಕೊಡುವಈ ಕಾರುಣ್ಯದ ನದಿಯ ಹರಿವು ನಮ್ಮ ಹೃದಯಗಳಲ್ಲಿ ಹೆಚ್ಚಾಗಲಿ. ಪಡೆಯುವ ಕೈಗಳಕಾರುಣ್ಯನಮ್ಮನ್ನು ಪೊರೆಯಲಿ. ನಮ್ಮ ಬದುಕು ಎಂಬುದು ಬಾಳಲು ಮತ್ತಷ್ಟುಸಹ್ಯವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT