ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ನೆಟ್‌ವರ್ಕ್‌ ಗಲಿಬಿಲಿಗೊಂಡೀತು!

ಈಗ ಕಾಲಿಟ್ಟ ಕಡೆಯಲ್ಲೆಲ್ಲ ಉದಾತ್ತ ಚಿಂತನೆಗಳೇ. ಆದರೆ ಅದರಂತೆ ನಡೆಯುವವರು ಯಾರು, ಎಷ್ಟು ಮಂದಿ?
Last Updated 30 ಜನವರಿ 2022, 19:45 IST
ಅಕ್ಷರ ಗಾತ್ರ

‘ಸರಳತೆ ಎಂಬುದು ಎಷ್ಟೊಂದು ಸುಂದರ! ಅದೇ ನಮ್ಮ ಪಾಲಿನ ಆಭರಣವೂ ಹೌದು’ ಎಂದು ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಬರೆದುಕೊಂಡಿದ್ದ, ನನಗೆ ಅಗ್ದಿ ಗೊತ್ತಿರುವ ಗೆಳತಿಯ ಆ ಸಾಲುಗಳನ್ನು ಓದಿ ಒಂದು ಕ್ಷಣ ದಂಗಾದೆ. ಅವರ ಬಳಿ ಎರಡು ಕಾರುಗಳಿವೆ, ದೆವ್ವದಂಥ ಮನೆಯಿದೆ, ಸಮಾರಂಭಕ್ಕೆ ಹೊರಟು ನಿಂತರೆ ಅವರು ತೊಡುವ ಬೆಲೆಬಾಳುವ ಬಟ್ಟೆ ಮತ್ತು ಆಭರಣಗಳು ಕಣ್ಣುಕುಕ್ಕುವಂತಿರುತ್ತವೆ. ಬಿಡಿ, ಅದು ಅವರ ಶ್ರೀಮಂತಿಕೆ. ನನ್ನ ಪ್ರಶ್ನೆ ಅದಲ್ಲ, ಅವರು ಹಾಕಿಕೊಂಡ ಸ್ಟೇಟಸ್‌ಗೂ ಬದುಕುತ್ತಿರುವ ರೀತಿಗೂ ಒಂದಿಂಚಾದರೂ ಸಂಬಂಧ ಬೇಡವೇ?

ಕೈಯಲ್ಲೊಂದು ಮೊಬೈಲ್, ಅದಕ್ಕೆ ಇಂಟರ್ನೆಟ್, ಒಂದು ವಾಟ್ಸ್‌ಆ್ಯಪ್ ಖಾತೆ, ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ ಇದ್ದರೆ ಮುಗಿಯಿತು, ಕ್ಷಣಮಾತ್ರದಲ್ಲಿ ಅವನೊಬ್ಬ ಜ್ಞಾನಿಯಾಗಿ ರೂಪುಗೊಳ್ಳು
ತ್ತಾನೆ, ಅನುಭವಿಯಾಗುತ್ತಾನೆ, ಸಮಾಜ ಸುಧಾರಕ ನಾಗುತ್ತಾನೆ, ಪರಿಸರಪ್ರೇಮಿ ಆಗುತ್ತಾನೆ, ಸಲಹೆ ಕೊಡುವ ಮಾರ್ಗದರ್ಶಕನೂ ತತ್ವಜ್ಞಾನಿಯೂ ಆಗುತ್ತಾನೆ. ದೊಡ್ಡ ದೊಡ್ಡ ಹೇಳಿಕೆಗಳಿಂದ, ಸಮಾಜ ಸುಧಾರಣೆಯ ಸಲಹೆಗಳಿಂದ, ತಾತ್ವಿಕ ಮಾತುಗಳಿಂದ, ಘೋಷಣೆಗಳಿಂದ ಸ್ಟೇಟಸ್‌ಗಳು, ಟೈಮ್‌ಲೈನ್‌ಗಳು ತುಂಬಿ ತುಳುಕುತ್ತವೆ. ಇಂತಹ ವಿಚಾರಗಳ ನೂಕು ನುಗ್ಗಲಿಗೆ ನೆಟ್‌ವರ್ಕ್ ಕೂಡ ಗಲಿಬಿಲಿಗೊಳ್ಳುತ್ತದೆ.

‘ಹಸಿರೇ ಉಸಿರು’ ಎಂದು ಬರೆದುಕೊಂಡವನು ಒಂದೂ ಗಿಡ ನೆಟ್ಟಿರುವುದಿಲ್ಲ, ತಂದೆ-ತಾಯಿ ದೇವರು ಎನ್ನುವ ಭಾವನಾತ್ಮಕ ವಿಡಿಯೊ ಹಾಕಿಕೊಂಡವನು ವರ್ಷವಾದರೂ ಅವರನ್ನು ನೋಡಲು ಹೋಗಿರುವುದಿಲ್ಲ, ಪ್ರಾಮಾಣಿಕತೆಯ ಬಗ್ಗೆ ಕವನ ಬರೆದುಕೊಂಡು ಲೈಕು ಎಣಿಸುವವನು ಮಹಾನ್ ಸುಳ್ಳುಗಾರ, ‘ಸರ್ಕಾರಿ ಶಾಲೆ ನಮ್ಮ ಹೆಮ್ಮೆ’ ಎಂದವನ ಮಕ್ಕಳು ಖಾಸಗಿ ಶಾಲೆಯ ವಿದ್ಯಾರ್ಥಿಗಳು, ಮಹಿಳೆಯರ ಬಗ್ಗೆ ಗೌರವದ ಪೋಸ್ಟ್ ಬರೆದುಕೊಂಡವ ಹೆಂಡತಿಯನ್ನು ಮನೆಯೊಳಗೆ ಕೂಡಿಹಾಕಿ ಕೆಲಸಕ್ಕೆ ಹೋಗುತ್ತಾನೆ, ‘ಸೂಪರ್ ಸಿಸ್ಟರ್’ ಅಂತ ಕಮೆಂಟು ಹಾಕಿದವನೇ ಇನ್‌ಬಾಕ್ಸಿನಲ್ಲಿ ಬಂದು ‘ಐ ಲವ್ ಯೂ’ ಅಂತಾನೆ, ರುಚಿಯ ಬಗ್ಗೆ ವ್ಯಾಖ್ಯಾನ ಬರೆಯುವ ಹುಡುಗಿಗೆ ಅಸಲಿಗೆ ಅನ್ನ ಕೂಡ ಮಾಡಲು ಬರುವುದಿಲ್ಲ... ಇವು ಹೊಸ ಬದುಕು ತಂದೊಡ್ಡಿರುವ ಬದುಕಿನ ವಿರೋಧಾಭಾಸಗಳು. ಯಾರು ಹೇಗೆ ಎಂಬುದನ್ನು ಅರ್ಥ ಮಾಡಿಕೊಳ್ಳಲಾಗದಷ್ಟು ಜಟಿಲವಾಗುತ್ತಿದೆ ಜಗತ್ತು‌ ಈಗ.

‘ಬೇಸಿಗೆಕಾಲ ಬಂದಾಗ ಬಾಲ್ಕನಿಗಳಲ್ಲಿ ಪಕ್ಷಿಗಳಿಗೆ ನೀರಿಡಿ’ ಎಂಬುದೊಂದು ಉತ್ತಮ ಸಲಹೆ. ವಾಟ್ಸ್‌ಆ್ಯಪ್‌ನಲ್ಲಿ ಬರುವ ಇಂತಹ ಸಂದೇಶವನ್ನು ಓದಿ ‘ವಾಹ್ ಎಷ್ಟೊಂದು ಒಳ್ಳೆಯ ವಿಚಾರ’ ಎಂದು ಕೊಂಡು ನೂರು ಜನಕ್ಕೆ ಕಳುಹಿಸುತ್ತೇವೆ. ಅವರು ಇನ್ನೂ ನೂರು ಜನಕ್ಕೆ ಕಳುಹಿಸುತ್ತಾರೆ. ಅರ್ಧ ಗಂಟೆಯಲ್ಲಿ ಆ ಸಂದೇಶ ಲಕ್ಷಾಂತರ ಜನರನ್ನು ಮುಟ್ಟುತ್ತದೆ. ಅವರಲ್ಲಿ ಒಬ್ಬನೇ ಒಬ್ಬ ಪಕ್ಷಿಗಳಿಗೆ ನೀರಿಟ್ಟರೆ ಪುಣ್ಯ. ಹಾಗೆ ಸಂದೇಶವನ್ನು ಹಂಚಿದ ಆ ಸಾವಿರಾರು ಜನ ‘ನಾನೊಂದು ಮಹಾನ್ ಕೆಲಸ ಮಾಡಿದೆ, ಈ ಪಕ್ಷಿಗಳಿಗೆ ಮಹಾನ್ ಉಪಕಾರ ಮಾಡಿದೆ’ ಎಂದುಕೊಂಡು ಬೀಗುತ್ತಾರೆ. ಸಂದೇಶ ಕಳುಹಿಸಿದ್ದೇ ಅವರ ಮಹಾನ್ ಕೆಲಸ’ ಎಂದು ಕೆಲವು ದಿನಗಳ ಹಿಂದಷ್ಟೇ ಜಯಂತ ಕಾಯ್ಕಿಣಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

ಸಮಸ್ಯೆ ಇರುವುದು ಚಿಂತನೆಗಳಲ್ಲಿ ಅಲ್ಲ, ಒಳ್ಳೆಯ ವಿಚಾರಗಳಲ್ಲಿ ಅಲ್ಲ, ಅತ್ಯುತ್ತಮ ಸಲಹೆಗಳಲ್ಲೂ ಅಲ್ಲ, ಉತ್ತಮ ಭಾಷಣಗಳಲ್ಲೂ ಅಲ್ಲ, ಅನುಭವದ ಮಾತುಗಳಲ್ಲೂ ಅಲ್ಲ. ಅವೆಲ್ಲವೂ ಧಾರಾಳವಾಗಿಯೇ ಸಿಗುತ್ತವೆ. ಮೊಬೈಲ್ ತೆರೆದರೆ ರಾಶಿಗಟ್ಟಲೆ ನಿಮಗೆ ಎದುರಾಗುತ್ತವೆ. ನಿಜವಾದ ಸಮಸ್ಯೆ ಇರುವುದು ಅದರ ಅನುಷ್ಠಾನದಲ್ಲಿ. ‘ಜಗತ್ತಿನ ಎಲ್ಲಾ ಒಳ್ಳೆಯ ವಿಚಾರಗಳನ್ನು ಈಗಾಗಲೇ ಹೇಳಿ ಆಗಿದೆ, ಉಳಿದಿರುವುದು ಅದನ್ನು ಅನುಸರಿಸುವ ವಿಚಾರ ಮಾತ್ರ’ ಎಂದು ದಾರ್ಶನಿಕರೊಬ್ಬರು ಹೇಳಿದ ಮಾತು ಇಲ್ಲಿ ನೆನಪಾಗುತ್ತಿದೆ.

ಎಲ್ಲರೂ ಹೇಳುವವರೇ ಆದರೆ ಅದರಂತೆ ನಡೆಯುವವರು ಯಾರು? ‘ಉದಾತ್ತ ಚಿಂತನೆಗಳು ನಮಗೆ ಎಲ್ಲಾ ಕಡೆಯಿಂದ ಬರಲಿ’ ಎಂಬ ಮಾತಿದೆ. ಈಗ ಕಾಲಿಟ್ಟ ಕಡೆಯಲ್ಲೆಲ್ಲ ಉದಾತ್ತ ಚಿಂತನೆಗಳೇ. ಅವುಗಳಿಗೆ ಬರವೆಂಬುದೇ‌ ಇಲ್ಲ. ಹಾಗಿದ್ದಮೇಲೆ ಸಮಾಜ ಈಗ ಹೆಚ್ಚು ಸುಧಾರಿಸಬೇಕಿತ್ತು.‌ ಆದರೆ ಮೊದಲಿಗಿಂತ ಹೆಚ್ಚು ದಾರಿ ತಪ್ಪಿರುವುದು ಕಣ್ಣ ಮುಂದೆ ಸ್ಪಷ್ಟವಿದೆ.

ಒಳ್ಳೆಯ ವಿಚಾರವೊಂದು ಮೊಬೈಲ್ ಸ್ಕ್ರೀನಿನ ಮೇಲೆ ಕಾಣಿಸಿದಾಗ ಅದನ್ನು ಮೆಚ್ಚಿ ಒಂದು ಲೈಕು, ಇಲ್ಲವೆ ಕಮೆಂಟು ಬರೆದು, ಹೆಚ್ಚೆಂದರೆ ಒಂದು ಶೇರ್ ಮಾಡಿ ಆ ವಿಚಾರಕ್ಕೆ ಅಲ್ಲಿಯೇ ತಿಲಾಂಜಲಿ ಬಿಟ್ಟು ಮುಂದೆ ಹೋಗುತ್ತೇವೆ. ಇಂತಹ ವಿಚಾರಗಳಿಗೆ ಲಕ್ಷಲಕ್ಷ ಲೈಕುಗಳು ಸಿಗಬಹುದು, ಸಾವಿರಾರು ಜನ ಅದನ್ನು ಶೇರ್ ಮಾಡಬಹುದು, ಲೆಕ್ಕವಿಲ್ಲದಷ್ಟು ಕಮೆಂಟುಗಳು ಸಿಗಬಹುದು. ಅದು ಮುಖ್ಯವಲ್ಲ. ಒಬ್ಬನೇ ಒಬ್ಬನ ಮನಸ್ಸಿನಲ್ಲಿ ಒಂದು ಅರಿವಿನ ಬೀಜ ಮೊಳೆತರೆ ಅದಲ್ಲವೇ ಸಾರ್ಥಕತೆ? ಅಂತಹ ಒಂದು ಮನಃಸ್ಥಿತಿಯನ್ನು ಸಜ್ಜುಗೊಳಿಸುವುದು ಹೇಗೆ? ಬರೀ ತೋರ್ಪಡಿಕೆಯನ್ನೇ ಹಾಸಿ ಹೊದ್ದು ಮಲಗಿರುವಾಗ ನೈಜತೆಯೊಂದು ಜೊತೆಯಾಗುವುದು ಯಾವಾಗ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT