‘ನಿಮ್ಮನೆಯವರು ಏನ್ ಮಾಡ್ತಾ ಇದ್ದಾರೆ?’
‘ಅವರಾ... ಬರೀ ಮನೆಕೆಲಸ, ಅಂದ್ರೆ ಹೌಸ್‍ವೈಫ್. ಇದೇನಾದ್ರೂ ಕೋರ್ಟ್ ವಿಚಾರಣೆ ಆಗಿದ್ರೆ ಹೋಮ್‌ಮೇಕರ್ ಅನ್ನಬೇಕಿತ್ತು ಅಷ್ಟೇ!’ ಕಾರ್ಯಕ್ರಮವೊಂದರಲ್ಲಿ ಕಿವಿಗೆ ಬಿದ್ದ ಸಂಭಾಷಣೆಯ ತುಣುಕಿದು.
ಲಿಂಗಾಧಾರಿತ ಅಸಮಾನತೆಯನ್ನು ಬದಲಿಸುವ ದಿಸೆಯಲ್ಲಿ ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ ಹೊಸ ಕೈಪಿಡಿಯನ್ನು ಬಿಡುಗಡೆ ಮಾಡಿದೆ. ಇನ್ನು ಮುಂದೆ ಕೋರ್ಟ್ ತೀರ್ಪಿನಲ್ಲಿ ಹಾಗೂ ಆದೇಶ ಪ್ರಕಟಣೆಗಳಲ್ಲಿ ಹೌಸ್‌ವೈಫ್, ವೇಶ್ಯೆ, ಹಾದರಗಿತ್ತಿ, ಕೀಪ್ ಎಂಬಂತಹ ಪದಗಳನ್ನು ಬಳಸಲು ನಿರ್ಬಂಧವನ್ನು ಹೇರಲಾಗಿದೆ. ಇದರ ಬದಲಾಗಿ ಗೌರವಸೂಚಕ ಪದಗಳನ್ನು ಪ್ರಕಟಿಸಲಾಗಿದೆ. ಮಹಿಳೆಯರ ಜೀವನಶೈಲಿ, ಉಡುಪು, ಚಾರಿತ್ರ್ಯವನ್ನು ಆಧರಿಸಿ ಕೆಲವು ಪದಗಳನ್ನು ಬಳಸಲಾಗುತ್ತಿತ್ತು, ರೂಢಿಗತವಾಗಿ ಬಂದಂತಹ ಪದಗಳಿವು, ಈಗ ಸೂಕ್ತ ಎನಿಸುವುದಿಲ್ಲ, ಆದ್ದರಿಂದ ಪದಗಳನ್ನು ತೆಗೆದುಹಾಕಲಾಗಿದೆ ಎಂದು ಕೋರ್ಟ್ ಹೇಳಿದೆ.
ಅಂತಹ ಪದಗಳಲ್ಲೊಂದು, ಸಾಮಾನ್ಯವಾಗಿ ಬಳಕೆಯಲ್ಲಿರುವ ಹೌಸ್‍ವೈಫ್. ಬದಲಿಯಾಗಿ ಹೌಸ್‌ಮೇಕರ್, ಹೋಮ್‍ಮೇಕರ್ ಪದಗಳನ್ನು ಸೂಚಿಸಲಾಗಿದೆ. ಹಾಗೆ ನೋಡಿದರೆ, ಇಂಗ್ಲಿಷಿನಲ್ಲಿ ಹೌಸ್ ಮತ್ತು ಹೋಮ್ ಸಮಾನಾರ್ಥಕ ಶಬ್ದಗಳು. ಆದರೂ ಎರಡರಲ್ಲಿಯೂ ವ್ಯತ್ಯಾಸವಿದೆ. ಹೌಸ್, ಜನರು ವಾಸಿಸಲು ಯೋಗ್ಯವಾದ ಕಟ್ಟಡ. ಹೋಮ್ ಎಂದರೆ ವ್ಯಕ್ತಿಗಳು ಭಾವನಾತ್ಮಕವಾಗಿ ಬೆಸೆದುಕೊಂಡಿರುವಂತಹ ನೆಮ್ಮದಿಯ ತಾಣ. ಹೌಸ್ ಎಂಬುದು ಖಾಲಿ ಕಟ್ಟಡಕ್ಕೆ ಅನ್ವಯವಾದರೆ, ಹೋಮ್‌ನಲ್ಲಿ ಜನರಿರಬೇಕು. ‘ಹೋಮ್ ಈಸ್ ವೇರ್ ದ ಹಾರ್ಟ್ ಈಸ್’ ಎನ್ನುವ ನುಡಿಗಟ್ಟು ಇವೆರಡರ ನಡುವಿನ ವ್ಯತ್ಯಾಸವನ್ನು ಅತ್ಯಂತ ಸೂಕ್ತವಾಗಿ ತಿಳಿಸುತ್ತದೆ.
ಹೌಸ್‍ವೈಫ್ ಎನ್ನುವುದು ಮನೆಯಲ್ಲೇ ಇದ್ದು ಗೃಹಕೃತ್ಯ ನಿಭಾಯಿಸುವ ವಿವಾಹಿತ ಮಹಿಳೆಗೆ ಇಂಗ್ಲಿಷ್‍ನಲ್ಲಿ ಉಪಯೋಗಿಸುವ ಪದ. ಕನ್ನಡದಲ್ಲಿ ಗೃಹಿಣಿ ಎಂಬ ಅರ್ಥಪೂರ್ಣ ಪದವಿದ್ದರೂ ಅದು ಅಪಮೌಲ್ಯಗೊಂಡಿದೆ, ರೂಢಿಯಲ್ಲಿಲ್ಲ. ಹಾಗೆ ನೋಡಿದರೆ ಗೃಹಿಣಿಗೆ ‘ಹೋಮ್‌ಮೇಕರ್’ ಎನ್ನುವುದೇ ಸೂಕ್ತವಾದದ್ದು. ಲಿಂಗಭೇದವಿಲ್ಲದೆ, ವಿಶಾಲ ಅರ್ಥ ಹೊಂದಿ, ಕಟ್ಟುವುದನ್ನು ಸಂಕೇತಿಸುವ ಪದವಿದು. ಆದ್ದರಿಂದಲೇ ಹೌಸ್‍ವೈಫ್ ಎನ್ನುವ ಪದಕ್ಕಿಂತ ಹೋಮ್‌ಮೇಕರ್ ಎನ್ನುವ ಪದ ಬಳಕೆಯ ನಿರ್ದೇಶನ ಅತ್ಯಂತ ಸೂಕ್ತ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಕೋರ್ಟಿನಲ್ಲೇನೋ ದಂಡನೆಯ ಹೆದರಿಕೆಯಿಂದ ಪದಗಳನ್ನು ಬದಲಿಸಬಹುದು. ಆದರೆ ಜನಬಳಕೆಯಲ್ಲಿ ಏನಾದರೂ ಬದಲಾವಣೆ ಆದೀತೇ? ಪದ ಬದಲಾದೀತು ಎಂದೇ ಇಟ್ಟುಕೊಳ್ಳೋಣ. ಆದರೆ, ಅವುಗಳನ್ನು ಬಳಸುವ, ಆಡುವ ರೀತಿ? ಮಹಿಳೆಯ ಶ್ರಮ ಮತ್ತು ಆಕೆಯ ಬಗೆಗಿನ ಧೋರಣೆಯಲ್ಲಿ ಮಾರ್ಪಾಡಾಗದ ವಿನಾ ಹೆಚ್ಚಿನ ಪ್ರಯೋಜನವೇನೂ ಆಗದು!
ಯಾವುದೇ ಸಮಾಜದ ಅತ್ಯಂತ ಪ್ರಮುಖ ಅಂಗವೆಂದರೆ ಕುಟುಂಬ. ಕುಟುಂಬವಿರುವುದು ಮನೆಯಲ್ಲಿ. ಇಟ್ಟಿಗೆ, ಸಿಮೆಂಟ್, ಮರ ಇವೆಲ್ಲವನ್ನೂ ಉಪಯೋಗಿಸಿ ಅದ್ಭುತ ಕಟ್ಟಡ ನಿರ್ಮಿಸಬಹುದು. ಆದರೆ ಅದಷ್ಟೇ ಮನೆಯಲ್ಲ. ಸಂಬಂಧಗಳು ಪರಸ್ಪರ ಹೆಣೆದುಕೊಂಡು, ಮನಸ್ಸು ಬೆಸೆದು, ತನ್ನದು ಎನಿಸುವ ನೆಮ್ಮದಿಯ ತಾಣ ಅದಾಗಬೇಕು. ನಾವು ನಾವಾಗಿ, ನಮ್ಮವರೊಂದಿಗೆ ಇರುವಂತಹ ಸುರಕ್ಷಿತ ಸ್ಥಳ. ಹಾಗಾಗಿಯೇ ವ್ಯಕ್ತಿಯನ್ನು ರೂಪಿಸುವಲ್ಲಿ ಮನೆಯ ವಾತಾವರಣ ಪ್ರಮುಖ ಪಾತ್ರ ವಹಿಸುತ್ತದೆ. ಸಹಬಾಳ್ವೆ- ಸಮಾನತೆ- ಸ್ವಾವಲಂಬನೆಯಂತಹ ಮೌಲ್ಯಗಳ ಅರಿವು ಮತ್ತು ಪ್ರಾಯೋಗಿಕ ಶಿಕ್ಷಣ ಆರಂಭವಾಗುವುದೇ ಮನೆಯಿಂದ. ಇವೆಲ್ಲವನ್ನೂ ಕಲಿಸುತ್ತಾ ಎಲ್ಲವನ್ನೂ, ಎಲ್ಲರನ್ನೂ ಸಂಬಾಳಿಸುವ ಮಹಿಳೆ ನಿಜಕ್ಕೂ ಹೋಮ್‍ಮೇಕರ್.
ಆದರೂ ಹೋಮ್‌ಮೇಕರ್‌ಗಳ ಪಾತ್ರದ ಬಗ್ಗೆ ಅಸಡ್ಡೆಯ ಧೋರಣೆ ಏಕೆ? ‘ಏನೂ ಇಲ್ಲ, ಮನೆಕೆಲಸ’ ಎನ್ನುವುದೇ ಅನಾದರವನ್ನು ತೋರಿಸುತ್ತದೆ. ಹಾಗೆ ನೋಡಿದರೆ, ಎಷ್ಟು ಮಾಡಿದರೂ ಮುಗಿಯದ, ಹೊತ್ತು ಗೊತ್ತಿಲ್ಲದ, ಎಂದಿಗೂ ನಿವೃತ್ತಿ ಸಿಗದ ಕೆಲಸವಿದು. ಮಾಡಿದ ಕೆಲಸಕ್ಕೆ ಯಾವುದೇ ರೀತಿಯ ದುಡ್ಡು ಸಿಗದ, ಕನಿಷ್ಠ ಮನ್ನಣೆಯೂ ಇರದ ಯಾಂತ್ರಿಕ ದುಡಿತ. ಮಹಿಳೆ ತನ್ನ ಕುಟುಂಬಕ್ಕಾಗಿ, ತನ್ನವರಿಗಾಗಿ ನಿಸ್ವಾರ್ಥದಿಂದ, ಪ್ರೀತಿಯಿಂದ ಮಾಡುವ ಕೆಲಸಕ್ಕೆ ದುಡ್ಡಿನಿಂದ ಬೆಲೆ ಕಟ್ಟಲು ಸಾಧ್ಯವಿಲ್ಲ; ನಿಜವೇ! ಆದರೆ ಆ ಕೆಲಸಕ್ಕೆ ಒಂದಿಷ್ಟು ಮನ್ನಣೆಯೂ ಸಿಗದಿದ್ದಾಗ ಬೇಸರವೆನಿಸುವುದು ಸಹಜವೇ.
ಸಂಸಾರವೇ ಸರ್ವಸ್ವ ಎಂದು ದುಡಿಯುವ ಮಹಿಳೆಯರಿಗೆ ಯಾರೂ ಗುರುತಿಸದ ಚಾಕರಿ ತಮ್ಮದು ಎನ್ನುವ ನೋವು ಕಾಡುತ್ತದೆ. ಹೊರಗಡೆ ಶ್ರಮವಹಿಸಿ ದುಡಿಯುವ ಮಹಿಳೆಗೆ ಅದನ್ನು ಗುರುತಿಸದ ಸಮಾಜ ಹಾಗೂ ಸಂಸಾರವನ್ನು ನಿರ್ಲಕ್ಷಿಸುತ್ತಾಳೆ ಎಂಬ ಕುಟುಂಬದವರ ಆರೋಪ ಚುಚ್ಚುತ್ತದೆ. ತಲೆತಲಾಂತರಗಳಿಂದ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿರುವ ಕೆಲಸದ ಈ ವರ್ಗೀಕರಣ, ಲಿಂಗಾಧಾರಿತ ಅಸಮಾನತೆ ಸೂಚಿಸುವ ಪದಗಳ ಬಳಕೆಯನ್ನು ಒಂದೇ ದಿನದಲ್ಲಿ ಅಳಿಸಲು ಸಾಧ್ಯವಿಲ್ಲ. ಆದರೆ ಪ್ರಯತ್ನವಂತೂ ನಿರಂತರವಾಗಿ ಜಾರಿಯಲ್ಲಿರಬೇಕು.
ಬದಲಾಗುವ ದಿಸೆಯಲ್ಲಿ ಮೊದಲು ಮನಃಸ್ಥಿತಿಯಲ್ಲಿ ಮಾರ್ಪಾಡಾಗಬೇಕು, ಆಗ ನಮ್ಮ ನಡೆ, ನುಡಿ ಸುಧಾರಿಸಲು ಸಾಧ್ಯ. ಪದಗಳ ಬಳಕೆ ಜತೆ ನಮ್ಮ ಮನಃಸ್ಥಿತಿಯನ್ನೂ ಬದಲಿಸುವಲ್ಲಿ ಸುಪ್ರೀಂ ಕೋರ್ಟಿನ ನಿರ್ದೇಶನ ಸಹಕಾರಿಯಾಗಲಿ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.