ಶನಿವಾರ, ಅಕ್ಟೋಬರ್ 23, 2021
22 °C
ವಿಶ್ವಾಸಾರ್ಹವಲ್ಲದ ಹುಸಿ ಡಿಜಿಟಲ್ ಮಾಹಿತಿ ಗುರುತಿಸುವುದು ಹೇಗೆ?

ಸಂಗತ: ಇದು ಫ್ಯಾಕ್ಟ್‌ ಚೆಕ್‌ ಕಾಲ

ಡಾ. ಎಂ.ಎಸ್.ಶ್ರೀಧರ್ Updated:

ಅಕ್ಷರ ಗಾತ್ರ : | |

Prajavani

ಎರಡು ದಶಕಗಳ ಹಿಂದೆ, ಗೂಗಲ್ ಒಂದಿದ್ದರೆ ಸಾಕು, ಪುಸ್ತಕಗಳು ಮುಂತಾದ ಮುದ್ರಿತ ಮಾಹಿತಿ ಆಕರಗಳು, ಗ್ರಂಥಾಲಯಗಳ ಅವಶ್ಯಕತೆಯೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಬಳಕೆದಾರರು ಇಂಟರ್‌ನೆಟ್ ಮಾಹಿತಿಗಳನ್ನು ನಂಬಿದ್ದರು. ಕಂಪ್ಯೂಟರೀಕೃತ ನೇತ್ರ ಪರೀಕ್ಷೆಯಿಂದ ಹಿಡಿದು ಬೀದಿಬದಿಯಲ್ಲಿ ಕಂಪ್ಯೂಟರ್ ಭವಿಷ್ಯ ಕೇಳುವವರೆಗೆ ಕಂಪ್ಯೂಟರ್‌ನಿಂದ ಪಡೆದದ್ದೆಲ್ಲಾ ಅಪ್ಪಟ ಸತ್ಯ ಎಂದು ನಂಬಿದ್ದ ಕಾಲವೊಂದಿತ್ತು.

ಶೋಧಯಂತ್ರಗಳನ್ನು ನಿರ್ವಹಿಸುವವರ ಪೂರ್ವಗ್ರಹಪೀಡಿತ, ಪಕ್ಷಪಾತ ಧೋರಣೆ ಹಾಗೂ ಸಾಮಾಜಿಕ ಜಾಲತಾಣಗಳ ಹುಸಿ ಮತ್ತು ದಾರಿತಪ್ಪಿಸುವ ಮಾಹಿತಿಗಳ ಮಹಾಪೂರದ ಅರಿವು ಕ್ರಮೇಣ ಮೂಡಿದ್ದರ ಪರಿಣಾಮವಾಗಿ ಇಂದು ಪತ್ರಿಕೆಗಳಲ್ಲಿ ಫ್ಯಾಕ್ಟ್‌ ಚೆಕ್‌ ಕಾಲಂ ಮತ್ತು ಗ್ರಂಥಾಲಯಗಳಲ್ಲಿ ಡಿಜಿಟಲ್ ಮಾಹಿತಿಯ ಸತ್ಯಾಸತ್ಯತೆ ಬಗೆಗೆ ಅರಿವು ಮೂಡಿಸುವ ಸೇವೆಗಳನ್ನು ಆರಂಭಿಸಲಾಗಿದೆ.

ಇಂಟರ್‌ನೆಟ್‌ನಲ್ಲೂ ಸುಳ್ಳು ಮಾಹಿತಿ ಪತ್ತೆ ಮಾಡುವಂತಹ ತಾಣಗಳಿವೆ (ಉದಾಹರಣೆಗೆ: https://www.factcheck.org, https://www.snopes.com, https://www.politifact.com). ಹುಸಿ ಮಾಹಿತಿ ಪತ್ತೆ ಹಚ್ಚುವ ಪರಿಕರಗಳನ್ನು ಅಭಿವೃದ್ಧಿಪಡಿಸಲಾಗಿದೆ. SurfSafe, MetaCert, Fake News Guard, Decodex ಅಂತಹ ಬ್ರೌಸರ್ ವಿಸ್ತರಣೆ ರೂಪದ ಪರಿಕರಗಳೂ ಲಭ್ಯವಿವೆ. ದಿ ಇಂಟರ್‌ನ್ಯಾಷನಲ್‌ ಫ್ಯಾಕ್ಟ್‌ ಚೆಕಿಂಗ್‌ ನೆಟ್‌ವರ್ಕ್‌ (ಐಎಫ್‌ಸಿಎನ್‌) ಇಂತಹ ಎಲ್ಲಾ ಪ್ರಯತ್ನಗಳನ್ನು ಒಗ್ಗೂಡಿಸಿ ಎಲ್ಲರಿಗೂ ದೊರೆಯುವಂತೆ ಮಾಡುತ್ತಿದೆ. ಒಟ್ಟಿನಲ್ಲಿ ಇಂಟರ್‌ನೆಟ್ ಯುಗದಲ್ಲಿ ದಿಗಿಲು ಹುಟ್ಟಿಸುವಷ್ಟು ಕಪಟ ಮಾಹಿತಿ, ಅಂತರ್ಜಾಲ ಕಿರುಕುಳ, ಕೃತಕ ಬುದ್ಧಿಮತ್ತೆ ತುಂಬಿದ್ದು, ಯಾವುದು ನಿಜ ಯಾವುದು ಸುಳ್ಳು ಎಂದು ನಿರ್ಧರಿಸಲಾಗದೆ ಪರದಾಡುವಂತಹ ಪರಿಸ್ಥಿತಿಯಲ್ಲಿದ್ದೇವೆ.

ಪಠ್ಯ, ಚಿತ್ರ, ಧ್ವನಿ ಮತ್ತು ವಿಡಿಯೊಗಳನ್ನು ಅತ್ಯಂತ ಸುಲಭದಲ್ಲಿ ಪ್ರತಿ ಮಾಡಿ ಬೇಕಾದಂತೆ ಬದಲಿಸಿಕೊಳ್ಳುವ, ಮಾಹಿತಿಯನ್ನು ಅನುಕೂಲಕ್ಕೆ ತಕ್ಕಂತೆ ತಿರುಚಿ, ಕ್ಷಣಾರ್ಧದಲ್ಲಿ ವಿಶ್ವದಾದ್ಯಂತ ಏಕಕಾಲಕ್ಕೆ ಪ್ರಸಾರ ಮಾಡಬಹುದಾದ ಸಾಧ್ಯತೆ ಇಂತಹ ಬೆಳವಣಿಗೆಗೆ ಪೂರಕವಾಗಿದೆ. ಇದನ್ನು ಯಾವ ಅಡೆತಡೆಯಿಲ್ಲದೆ ರಾಜಕೀಯ, ವ್ಯಾಪಾರ, ಪ್ರಚಾರ ಮತ್ತು ದ್ವೇಷದ ಕಾರಣಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ.

ಪ್ರಪಂಚದಾದ್ಯಂತ ಮಾಧ್ಯಮದ ಮೇಲಿನ ನಂಬಿಕೆ ಒಂದೇ ವರ್ಷದಲ್ಲಿ (2020ರಿಂದ 2021) ಪ್ರತಿಶತ 8ರಷ್ಟು ಕುಸಿದಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ವಿಷಯಗಳ ಮೇಲಿನ ನಂಬಿಕೆ ಅತ್ಯಂತ ಕಡಿಮೆ ಮಟ್ಟದಲ್ಲಿದೆ. ಫೇಸ್‌ಬುಕ್‌ನಂತಹ ದಿಗ್ಗಜ ಕಂಪನಿಗಳು ಕೂಡ 2016ರಿಂದ ಆರಂಭಿಸಿ ಸುಳ್ಳು ಮಾಹಿತಿ ಮತ್ತು ಕಥೆಗಳನ್ನು ಪ್ರತಿಶತ 50ರಷ್ಟು ಕಡಿಮೆ ಮಾಡಿರುವುದಾಗಿ ಹೇಳಿಕೊಂಡಿವೆ. ಆದರೂ ಫೇಸ್‌ಬುಕ್‌ನಲ್ಲಿ 2020ರ 2ನೇ ತ್ರೈಮಾಸಿಕದಲ್ಲಿ 70 ಲಕ್ಷದಷ್ಟಿದ್ದ ಹುಸಿ ಸಮಾಚಾರ 3ನೇ ತ್ರೈಮಾಸಿಕ ದಷ್ಟರಲ್ಲಿ 180 ಕೋಟಿಯಷ್ಟಾಗಿದೆ. ಗೂಗಲ್ ಕೂಡ ತನ್ನ ಗುಣಮಟ್ಟ ಹಾಗೂ ನೀತಿಗಳಿಗೆ ವ್ಯತಿರಿಕ್ತವಾದ ಖಾತೆಗಳನ್ನು ಕಡಿಮೆ ಮಾಡುವ, ತೆಗೆದುಹಾಕುವ ಹಾಗೂ ಬಳಕೆದಾರರನ್ನು ಎಚ್ಚರಿಸುವ ಮೂರು ಅಂಶಗಳ ಕಾರ್ಯಕ್ರಮವನ್ನು ಹೊಂದಿದೆ. ಪ್ರಖ್ಯಾತ ಉನ್ನತ ತಾಂತ್ರಿಕ ಕಂಪನಿಗಳು ಹದ್ದಿನ ಕಣ್ಣಿಟ್ಟು ಇಷ್ಟೆಲ್ಲಾ ಪ್ರಯತ್ನಪಟ್ಟರೂ ಸುಳ್ಳು ಮಾಹಿತಿ ಮತ್ತು ಕತೆಗಳ ಬಗ್ಗೆ ಗ್ರಾಹಕರು ಅತಿ ಎಚ್ಚರ ವಹಿಸಬೇಕಾದುದು ಅವಶ್ಯಕ.

ಕಪಟ ಡಿಜಿಟಲ್ ಮಾಹಿತಿ ಗುರುತಿಸಲು ಕೆಲವು ಸೂತ್ರ-ಸಲಹೆಗಳು ಇಂತಿವೆ: ಕಳಕಳಿಯಿಂದ ಅಂಗಲಾಚುವ ವಿವೇಕರಹಿತ ಸಮಾಚಾರ, ಕಥೆಗಳನ್ನು ಅನುಮಾನಿಸಿ. ಎಲ್ಲ ಮಾಹಿತಿ ಮೂಲಗಳೂ ತಪ್ಪುಮಾಹಿತಿ ಕೊಡುವ ಸಾಧ್ಯತೆ ಇರುತ್ತದೆಯಾದರೂ ಗೌರವಾನ್ವಿತವಾದವು ಅದಕ್ಕೆ ಹೊಣೆಹೊರಲು ಸಿದ್ಧವಿದ್ದು, ತಮ್ಮ ತಾಣದ ವಿಳಾಸ, ಇ- ಮೇಲ್‌ನಂತಹ ಮಾಹಿತಿ ಪ್ರಕಟಿಸುತ್ತವೆ. ಮಾಹಿತಿ ಮೂಲದ ಧ್ಯೇಯೋದ್ದೇಶ ಮತ್ತು ಸಂಪರ್ಕಗಳನ್ನು ಗಮನಿಸಿ. ವೆಬ್ ತಾಣದ ವಿಳಾಸವು (ಯುಆರ್‌ಎಲ್‌) ವಾಡಿಕೆಯಂತಿಲ್ಲದೆ ವಿಚಿತ್ರವಾಗಿದೆಯೇ ಪರಿಶೀಲಿಸಿ.

ಸಮಾಚಾರಕ್ಕೆ ಅನುರೂಪವಾಗಿರದ ಶೀರ್ಷಿಕೆ, ಅನವಶ್ಯಕವಾಗಿ ಇಂಗ್ಲಿಷ್‌ ಅಕ್ಷರಗಳಿರುವ ಶೀರ್ಷಿಕೆ, ಹೆಚ್ಚು ಆಶ್ಚರ್ಯಸೂಚಕ ಚಿಹ್ನೆಯಂತಹ ವಿರಾಮಚಿಹ್ನೆಗಳನ್ನು ಹೊಂದಿದ್ದು ಮೋಹಕವಾಗಿದ್ದು, ಗಮನ ಸೆಳೆದು ಲಿಂಕ್ ಮೇಲೆ ಕ್ಲಿಕ್ಕಿಸಲು ಉತ್ತೇಜಿಸುವಂತಹ ಶೀರ್ಷಿಕೆ ಬಗ್ಗೆ ಎಚ್ಚರವಹಿಸಿ.

ಸಾಧಾರಣವಾಗಿ ಸಂಪಾದಕರಿಲ್ಲದ್ದರಿಂದ ಕಾಗುಣಿತ ದೋಷ, ಅನವಶ್ಯಕವಾಗಿ ಕ್ಯಾಪಿಟಲ್ ಅಕ್ಷರಗಳ ಬಳಕೆ ಇದ್ದು, ಪಠ್ಯದ ಗುಣಮಟ್ಟ ಕಡಿಮೆಯಿರುತ್ತದೆ. ಶೀರ್ಷಿಕೆ ಎರಡು ಪಂಗಡಗಳ ನಡುವೆ ದ್ವೇಷ ಹುಟ್ಟುಹಾಕುವ ಧ್ವನಿಯಲ್ಲಿದ್ದರೆ ಜಾಗರೂಕತೆ ವಹಿಸಿ.

ಪ್ರಖ್ಯಾತರ ಖಾತೆಗಳನ್ನು ನಕಲು ಮಾಡಿ ಅವರ ಹೆಸರಿನಲ್ಲಿ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಲಾಗುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಅವರ ಹೆಸರುಗಳ ಕಾಗುಣಿತದಲ್ಲಿ ವ್ಯತ್ಯಾಸವಿರುವುದು ತಿಳಿಯುತ್ತದೆ (Warren Buffett ಬದಲಾಗಿ Warren Buffet). ಭಾವೋದ್ವೇಗಗೊಳಿಸುವಂತಹ, ವೈರಲ್ ಆಗಬಹು ದಾದ ನಕಲಿ ಚಿತ್ರಗಳನ್ನು ಗಮನಿಸಿ ನ್ಯಾಯಸಮ್ಮತ ಸಮಾಚಾರ ತಾಣಗಳೊಂದಿಗೆ ತುಲನೆ ಮಾಡಿ. ಅನುಮಾನಾಸ್ಪದ ಮಾಹಿತಿಯನ್ನು ಇತರ ವಿಶ್ವಾಸಾರ್ಹ ತಾಣದಲ್ಲಿ ಮರುಪರಿಶೀಲಿಸುವುದು ಸೂಕ್ತ.

ಲೇಖಕ: ನಿವೃತ್ತ ಮುಖ್ಯಸ್ಥ, ಗ್ರಂಥಾಲಯ ಮತ್ತು ಪ್ರಲೇಖನ ವಿಭಾಗ, ಯು.ಆರ್.ರಾವ್ ಉಪಗ್ರಹ ಕೇಂದ್ರ, ಇಸ್ರೊ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು