ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್ ಚಿತ್ತ ಉದ್ಯೋಗ ಸೃಷ್ಟಿಯತ್ತ?

ಉದ್ಯೋಗ ಸೃಷ್ಟಿಸಬಲ್ಲ ಬೆಳವಣಿಗೆ ದರ ಸಾಧಿಸುವ ನಿಟ್ಟಿನಲ್ಲಿ ಉದ್ದೇಶಿತ ಬಜೆಟ್‌ ದೊಡ್ಡ ಹೆಜ್ಜೆ ಇಡುವ ಅನಿವಾರ್ಯ ಸೃಷ್ಟಿಯಾಗಿರುವುದನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗಿದೆ
Last Updated 20 ಜೂನ್ 2019, 19:45 IST
ಅಕ್ಷರ ಗಾತ್ರ

ಕೇಂದ್ರದಲ್ಲಿ ಹಣಕಾಸು ಸಚಿವರಾಗಿದ್ದ ಅರುಣ್‌ ಜೇಟ್ಲಿ, 2015-16ನೇ ವಿತ್ತೀಯ ವರ್ಷದ ಬಜೆಟ್ ಭಾಷಣದ ಪ್ರಾರಂಭದಲ್ಲೇ ‘ಬಜೆಟ್ ಪ್ರಮುಖವಾಗಿ ಸಾರ್ವಜನಿಕ ಹಣಕಾಸಿನ ವಿವರವಾದರೂ ವಾಸ್ತವದಲ್ಲಿ ಇದು ಸರ್ಕಾರದ ಆರ್ಥಿಕ ನೀತಿಯ ವೇಗ ಮತ್ತು ದಿಕ್ಕುಗಳನ್ನು ತೋರಿಸುತ್ತದೆ’ ಎಂದು ಹೇಳಿದ್ದರು. ಹೆಚ್ಚು ಹೂಡಿಕೆಯ ಮೂಲಕ ಆರ್ಥಿಕ ಬೆಳವಣಿಗೆ ದರವನ್ನು ಹೆಚ್ಚಿಸಿ, ಅದರ ಲಾಭವನ್ನು ಶ್ರೀಸಾಮಾನ್ಯರಿಗೆ, ಯುವಜನರಿಗೆ ತಲುಪಿಸಿ ಅವರ ಜೀವನದ ಗುಣಮಟ್ಟವನ್ನು ಸುಧಾರಿಸುವ ಪ್ರಸ್ತಾವಗಳನ್ನು ತಮ್ಮ ಬಜೆಟ್ ಹೊಂದಿದೆ ಎಂದು ಹೇಳಿ, ತಮ್ಮ ಸರ್ಕಾರದ ನೀತಿಯ ದಿಕ್ಕನ್ನು ತೆರೆದಿಟ್ಟಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಮಾತನ್ನು ಉಲ್ಲೇಖಿಸುತ್ತಾ, ತಮ್ಮದು ನಿರಂತರವಾಗಿ ಕೆಲಸ ಮಾಡುವ ಸರ್ಕಾರ ಎಂದೂ ಘೋಷಿಸಿದ್ದರು. ಅದೇ ಸರ್ಕಾರ, ಅದೇ ಆರ್ಥಿಕ ನೀತಿ ಮುಂದುವರಿಯುತ್ತಿರುವಾಗಲೇ, ಮೋದಿ ನೇತೃತ್ವದಲ್ಲಿನ ಎರಡನೇ ಅವಧಿಯ ಸರ್ಕಾರದ ಪ್ರಥಮ ಬಜೆಟ್ ಜುಲೈ 5ರಂದು ಹೊಸ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಮಂಡನೆಯಾಗಲಿದೆ.

ಬದುಕು ಕಟ್ಟಿಕೊಳ್ಳುವ ಆಶಯದೊಂದಿಗೆ ಪ್ರತಿವರ್ಷ, ಜನಸಂಖ್ಯಾಧಾರಿತ ಲಾಭಾಂಶದ (ಡೆಮೊಗ್ರಾಫಿಕ್ ಡಿವಿಡೆಂಡ್‌) ಭಾಗವಾದ ಎರಡು ಕೋಟಿ ಯುವಜನರು ಉದ್ಯೋಗ ಮಾರುಕಟ್ಟೆ ಪ್ರವೇಶಿಸುತ್ತಿದ್ದಾರೆ. ಉದ್ಯೋಗಸಹಿತ ಅಭಿವೃದ್ಧಿಗೆ ದಾರಿ ಮಾಡಬಲ್ಲ ಬಜೆಟ್‌ಗೆ ಇಡೀ ದೇಶ ಕಾದು ಕುಳಿತಿರುವಾಗಲೇ ಆರ್ಥಿಕ ವೃದ್ಧಿ ದರ ಶೇ 6.8ಕ್ಕೆ ಕುಸಿದಿರುವುದು ಕಳವಳಕಾರಿ. ಕೇಂದ್ರ ಸಾಂಖ್ಯಿಕ ಕಚೇರಿ (ಸಿಎಸ್ಒ) ಈ ಕುಸಿತದ ವರದಿ ಮಾಡಿದ ನಂತರ, ಕೇಂದ್ರ ಸರ್ಕಾರದ ಮಾಜಿ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ತಮ್ಮ ಸಂಶೋಧನೆಯನ್ನೇ ಆಧಾರವಾಗಿ ಇಟ್ಟುಕೊಂಡು ಹೇಳಿಕೆಯೊಂದನ್ನು ನೀಡಿದ್ದಾರೆ. 2011-17ರ ಅವಧಿಯಲ್ಲಿ ಭಾರತ ಶೇ 7ರಷ್ಟು ವಾರ್ಷಿಕ ಬೆಳವಣಿಗೆ ದರದ ಬದಲು ಕೇವಲ ಶೇ 4.5ರಷ್ಟು ಬೆಳವಣಿಗೆ ಸಾಧಿಸಿತ್ತು ಎಂಬ ಅವರ ಮಾತು ಸರ್ಕಾರಕ್ಕೆ ಒಂದಿಷ್ಟು ಮುಜುಗರ ಉಂಟು ಮಾಡಿದೆ.

‘ಉದ್ಯೋಗ ಸೃಷ್ಟಿಯಾಗಿಲ್ಲ ಎಂದ ಮೇಲೆ ಬೆಳವಣಿಗೆ ದರ ಶೇ 7ರಷ್ಟಾಗಿದೆ ಎಂದರೆ ನಂಬುವುದೇ ಕಷ್ಟ’ ಎಂದು ಮೋದಿ ಸಂಪುಟದ ಸದಸ್ಯರೊಬ್ಬರು ತಮ್ಮೊಡನೆ ಹೇಳಿಕೊಂಡಿರುವುದಾಗಿ, ಆರ್‌ಬಿಐನ ಮಾಜಿ ಗವರ್ನರ್ ರಘುರಾಂ ರಾಜನ್ ಕಳೆದ ಮಾರ್ಚ್‌ನಲ್ಲಿ ಟಿ.ವಿ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಬಜೆಟ್‌ ಮಂಡನೆ ಹತ್ತಿರದಲ್ಲಿ ಇರುವಾಗ ರಾಜನ್ ಅವರ ಹೇಳಿಕೆಗೆ ಪೂರಕವಾದ ಅರವಿಂದ ಸುಬ್ರಮಣಿಯನ್‌ ವಾದದಿಂದ, ಜಿಡಿಪಿ ಬೆಳವಣಿಗೆ ಸುತ್ತ ಇರುವ ಸ್ವಲ್ಪ ಹಳೆಯ ವಿವಾದಕ್ಕೆ ಇನ್ನೊಂದು ಬಲವಾದ ತಿರುವು ಬಂದಂತಾಗಿದೆ.

ಬಜೆಟ್ ಮಂಡನೆಗಿಂತ ಮೊದಲು ಸಂಸತ್ತಿನಲ್ಲಿ ಮಂಡನೆಯಾಗುವ 2018-19ನೇ ವರ್ಷದ ಆರ್ಥಿಕ ಸಮೀಕ್ಷೆಯು ಈಗ ತೀವ್ರತೆ ಪಡೆದಿರುವ ವಿವಾದಕ್ಕೆ ಪೂರ್ತಿಯಾಗಿ ತೆರೆ ಎಳೆಯದಿದ್ದರೂ, ಪರಿಣಾಮಕಾರಿ ಉತ್ತರ ನೀಡುವ ಸಂಭವ ಇದೆ. ಸಿಎಸ್ಒ ಸಮೀಕ್ಷೆ ಮಾಡಿದ ಶೇ 7ರ ದರದ ಅಂದಾಜನ್ನು ಸಮರ್ಥಿಸಿಕೊಳ್ಳಲೂಬಹುದು. ವಿವಾದಕ್ಕೆ ದೊರೆತ ಹೊಸ ತಿರುವನ್ನು ನಿರ್ಮಲಾ ಅವರುಬಜೆಟ್ ಭಾಷಣದಲ್ಲಿ ತಮ್ಮದೇ ವೈಖರಿಯಲ್ಲಿ ತೀಕ್ಷ್ಣವಾಗಿ ಪ್ರಸ್ತಾಪಿಸಬಹುದು, ಖಂಡಿಸಲೂಬಹುದು. ಆದರೆ, ಉದ್ಯೋಗ ಸೃಷ್ಟಿಸಬಲ್ಲ ಬೆಳವಣಿಗೆ ದರ (ಶೇ 7ಕ್ಕಿಂತ ಜಾಸ್ತಿ) ಸಾಧಿಸುವ ನಿಟ್ಟಿನಲ್ಲಿ ಉದ್ದೇಶಿತ ಬಜೆಟ್‌ ದೊಡ್ಡ ಹೆಜ್ಜೆ ಇಡುವ ಅನಿವಾರ್ಯ ಸೃಷ್ಟಿಯಾಗಿದೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗಿದೆ. ವಿಶ್ವಾಸಾರ್ಹ ರೀತಿಯಲ್ಲಿ ಬೆಳವಣಿಗೆ ದರ ಜಾಸ್ತಿಯಾಗದಿದ್ದರೆ ಮುಂದಿನ ದಿನಗಳಲ್ಲಿ ವಿದೇಶಿ ನೇರ ಹೂಡಿಕೆಯ ಹರಿವು ಕಡಿಮೆಯಾಗಿ ಸಮಸ್ಯೆಯಾಗಲಿದೆ. ಸಚಿವೆ ಇದನ್ನೆಲ್ಲ ಗಮನಿಸಿ ಬಜೆಟ್ ರೂಪಿಸಬೇಕಾಗಿದೆ. ಈತನಕ ಸಾಧಿಸಲಾಗದ ಉದ್ಯೋಗಸಹಿತ ಆರ್ಥಿಕ ಬೆಳವಣಿಗೆಯನ್ನು ಮುಂದೆ ಸಾಧಿಸುವ ವಿಶ್ವಾಸವನ್ನು ಪ್ರಬಲವಾಗಿ ವ್ಯಕ್ತಪಡಿಸುವ ಸಾಧ್ಯತೆಯೂ ಇದೆ.

ದೇಶದಲ್ಲಿ ಬೆಳವಣಿಗೆ ಪ್ರಕ್ರಿಯೆಯು ಹೂಡಿಕೆ ಚಾಲಿತವಲ್ಲ, ಅದು ಗ್ರಾಹಕರ ಬೇಡಿಕೆ ಚಾಲಿತವಾಗಿದೆ. ‘ಭಾರತದಲ್ಲಿಯೇ ತಯಾರಿಸಿ’ ಕಾರ್ಯಕ್ರಮದ ಪರಿಧಿಯಲ್ಲಿರುವ ತಯಾರಿಕಾ ರಂಗದಲ್ಲಿ ಹೂಡಿಕೆ –ಅದರಲ್ಲೂ ಖಾಸಗಿ ಹೂಡಿಕೆ– ಏರಿಕೆಯಾಗದೇ ಉದ್ಯೋಗ ಸೃಷ್ಟಿಯು ಗಣನೀಯ ಪ್ರಮಾಣದಲ್ಲಿ ಆಗದು. 2014ರಲ್ಲಿ ಒಟ್ಟು ಹೂಡಿಕೆಯ ಪ್ರಮಾಣ ಜಿಡಿಪಿಯ ಶೇ 34 ಇದ್ದದ್ದು ಈಗ ಶೇ 30ಕ್ಕೆ ಇಳಿದಿದೆ. ಖಾಸಗಿ ಹೂಡಿಕೆ ಉತ್ತೇಜಿಸಲು ಬಜೆಟ್ ಕ್ರಮ ತೆಗೆದುಕೊಳ್ಳಬೇಕಾಗಿದೆ. ಕಾರ್ಪೊರೇಟ್ ವಲಯಕ್ಕೆ ಇನ್ನಷ್ಟು ತೆರಿಗೆ ಕಡಿತದ ಲಾಭವಾಗಬಹುದು.

ಅರವಿಂದ ಪನಗರಿಯಾ ಅವರು ನೀತಿ ಆಯೋಗದ ಉಪಾಧ್ಯಕ್ಷರಾಗಿದ್ದಾಗ, ಮಾನವಶ್ರಮ ಆಧಾರಿತ ವಿಧಾನಗಳನ್ನು ಕಡಿಮೆ ಮಾಡಿ ಬಂಡವಾಳ ಆಧಾರಿತ ವಿಧಾನಗಳನ್ನು ಅಳವಡಿಸಿಕೊಂಡು, ಉದ್ಯೋಗ ಸೃಷ್ಟಿಯ ಬದಲು ಉದ್ಯೋಗ ನಷ್ಟ ಉಂಟು ಮಾಡುತ್ತಿರುವ ಖಾಸಗಿ ರಂಗದ ಕೈಗಾರಿಕೆಗಳ ವಿರುದ್ಧ ಹರಿಹಾಯ್ದಿದ್ದರು. ಈಗ ಉದ್ಯೋಗ ಸೃಷ್ಟಿಯ ಮಾನದಂಡವನ್ನು ಉಪಯೋಗಿಸಿ, ತೆರಿಗೆ ಕಡಿತದ ಲಾಭವನ್ನು ಖಾಸಗಿ ರಂಗದ ಕೈಗಾರಿಕೆಗಳಿಗೆ ನೀಡುವುದು ಸಮಂಜಸವಾಗಬಹುದು. ತೆರಿಗೆ ಕಡಿತದ ಪರಿಣಾಮದ ಮೌಲ್ಯಮಾಪನಕ್ಕೆ ಬೇಕಾದ ಸಾಂಸ್ಥಿಕ ವ್ಯವಸ್ಥೆಯನ್ನು ರೂಪಿಸಲು ಕೇಂದ್ರ ಸರ್ಕಾರ ಮುತುವರ್ಜಿ ವಹಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT