ಮಂಗಳವಾರ, ಮೇ 17, 2022
27 °C
ರಾಜ್ಯದ ಸಮಗ್ರ ಕೃಷಿ ಉಳಿವಿಗೆ ನದಿಗಳ ಜೋಡಣೆಯೇ ಸರಳ ಪರಿಹಾರ

ನೀರಿನ ಕೊರತೆಗಿದೆ ಪರಿಹಾರ

ಸಂಗಮೇಶ ಆರ್. ನಿರಾಣಿ Updated:

ಅಕ್ಷರ ಗಾತ್ರ : | |

Prajavani

ಕರ್ನಾಟಕದ ಪಶ್ಚಿಮಘಟ್ಟಗಳು ಅಪಾರವಾದ ಜಲರಾಶಿಯನ್ನು ಹೊಂದಿವೆ. ಪಶ್ಚಿಮಾಭಿಮುಖವಾಗಿ ಹರಿಯುವ ಕಾಳಿ, ಅಘನಾಶಿನಿ, ಬೇಡ್ತಿ, ನೇತ್ರಾವತಿ ನದಿಗಳು ಸ್ಥಳೀಯವಾಗಿ ಕುಡಿಯುವ ನೀರು ಪೂರೈಕೆ ಹಾಗೂ ಜಲವಿದ್ಯುತ್ ಉತ್ಪಾದನೆಗಷ್ಟೇ ಬಳಕೆಯಾಗಿ, ಕೃಷಿ ಭೂಮಿಗೆ ನೆರವಾಗದೆ ಸಮುದ್ರ ಸೇರುತ್ತಿವೆ. ನಿರಂತರವಾಗಿ ನೀರಿನ ಕೊರತೆ ಅನುಭವಿಸುತ್ತಿರುವ ಉತ್ತರ ಕರ್ನಾಟಕ ಭಾಗದ ಕೃಷಿ ಹಾಗೂ ಕುಡಿಯುವ ನೀರಿಗೆ ಕೆಲವು ತಾಂತ್ರಿಕ ವಿಧಾನಗಳ ಮೂಲಕ ಅಮೂಲ್ಯವಾದ ಇಂತಹ ಜಲಸಂಪತ್ತನ್ನು ಬಳಸಿ
ಕೊಳ್ಳಬಹುದಾಗಿದೆ.

ಕಾಳಿ ನದಿಯು ಕರ್ನಾಟಕದ ವ್ಯಾಪ್ತಿಯಲ್ಲಿ ಮಾತ್ರ ಹರಿಯುವುದರಿಂದ ಇದರ ಬಳಕೆಗೆ ಯಾವುದೇ ಕಾನೂನು ತೊಡಕು ಇಲ್ಲ. ಈ ನದಿಯು ಕಾರವಾರ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ದಿಗ್ಗಿ ಎಂಬ ಗ್ರಾಮದ ಬಳಿ ಹುಟ್ಟುತ್ತದೆ. 159 ಕಿ.ಮೀ. ಹರಿದು ಕಾರವಾರದ ಶಿವಘಡದ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಈ ನದಿಯ 25 ಟಿಎಂಸಿ ಅಡಿ ನೀರನ್ನು ಎರಡು ಸರಳ ಮಾರ್ಗಗಳ ಮೂಲಕ ಘಟಪ್ರಭಾ ಹಾಗೂ ಮಲಪ್ರಭಾ ನದಿಗೆ ಹರಿಸಬಹುದು.

ಮಾರ್ಗ 1: ಸೂಪಾ ಜಲಾಶಯದ ಕೆಳಭಾಗದಲ್ಲಿ ನೀರನ್ನು ಲಿಫ್ಟ್‌ ಮಾಡಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಪೈಪ್‌ಲೈನ್ ಮೂಲಕ 28 ಕಿ.ಮೀ. ದೂರದಲ್ಲಿರುವ ಅಳ್ನಾವರವರೆಗೆ ಹರಿಸಬಹುದು. ಅಲ್ಲಿಂದ ಒಂದು ಪೈಪ್‌ಲೈನ್ ಮೂಲಕ, 34 ಕಿ.ಮೀ. ದೂರದಲ್ಲಿರುವ ಧಾರವಾಡ ಜಿಲ್ಲೆಯ ನರೇಂದ್ರ ಗ್ರಾಮದವರೆಗೆ ನೀರನ್ನು ಹರಿಸಬಹುದು. ಇನ್ನೊಂದು ಬದಿಯಿಂದ ಎರಡು ಲೈನ್ ಪೈಪ್‌ಲೈನ್ ಮೂಲಕ, 40 ಕಿ.ಮೀ. ಅಂತರದಲ್ಲಿರುವ ಎಂ.ಕೆ. ಹುಬ್ಬಳ್ಳಿವರೆಗೆ ಸಾಗಿಸಿ, ಒಂದು ಪೈಪ್‌ಲೈನ್ ಮೂಲಕ ಮಲಪ್ರಭಾ ನದಿಗೆ ಹರಿಸುವುದು. ಇನ್ನೊಂದು ಪೈಪ್‌ಲೈನ್ ಅನ್ನು ಎಂ.ಕೆ. ಹುಬ್ಬಳ್ಳಿಯಿಂದ ಮುಂದುವರಿಸಿ, 50 ಕಿ.ಮೀ. ದೂರದ ಶಿರೂರದ ಮಾರ್ಕಂಡೇಯ ಜಲಾಶಯಕ್ಕೆ ಮತ್ತು 60 ಕಿ.ಮೀ. ದೂರದ ಹಿಡಕಲ್ ಜಲಾಶಯಕ್ಕೆ ಹರಿಸಬಹುದು.

ಈ ಹಂತದ ಮೂಲಕ ವಾರ್ಷಿಕವಾಗಿ ಘಟಪ್ರಭಾ ನದಿಗೆ 10 ಟಿಎಂಸಿ ಅಡಿ ಹಾಗೂ ಮಲಪ್ರಭಾ ನದಿಗೆ 10 ಟಿಎಂಸಿ ಅಡಿ ಮತ್ತು ಧಾರವಾಡದ ನರೇಂದ್ರವರೆಗೆ 5 ಟಿಎಂಸಿ ಅಡಿ ನೀರನ್ನು ಹರಿಸಬಹುದು.

ಮಾರ್ಗ 2: ಕಡಿಮೆ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸಲು ಟನಲ್ ನಿರ್ಮಿಸಿ ಯೋಜನೆಯನ್ನು ಕಾರ್ಯಗತಗೊಳಿಸಬಹುದು. ಸೂಪಾ ಜಲಾಶಯದಲ್ಲಿ ಸಂಗ್ರಹವಾದ ನೀರನ್ನು ಲಿಫ್ಟ್ ಮಾಡಿ 33 ಕಿ.ಮೀ. ಉದ್ದದ ಸುರಂಗದಲ್ಲಿ ಪಶ್ಚಿಮಘಟ್ಟಗಳನ್ನು ದಾಟಿ, ಕಾಳಿ ನದಿಯ 25 ಟಿಎಂಸಿ ಅಡಿ ನೀರನ್ನು ಮಲಪ್ರಭಾ ನದಿಗೆ ಸೇರಿಸಬಹುದು.

ಅಘನಾಶಿನಿ ನದಿಗೆ ನಾಲ್ಕು ಕಡೆ ತಡೆಗೋಡೆ ನಿರ್ಮಿಸಿ ಲಿಫ್ಟಿಂಗ್ ಮಾಡುವ ಮೂಲಕ ವಾರ್ಷಿಕ ಸುಮಾರು 9 ಟಿಎಂಸಿ ಅಡಿ ನೀರನ್ನು ಶಿರಸಿ, ಸಿದ್ದಾಪುರ ತಾಲ್ಲೂಕುಗಳ ಭೂ ಪ್ರದೇಶದ ನೀರಾವರಿಗಾಗಿ ಬಳಕೆ ಮಾಡಿಕೊಳ್ಳಬಹುದು. ಇದರಿಂದ ಸುಮಾರು 14 ಸಾವಿರ ಹೆಕ್ಟೇರ್ ಭೂಮಿ ನೀರಾವರಿ ಸೌಲಭ್ಯ ಪಡೆಯುತ್ತದೆ.

ಬೇಡ್ತಿ ನದಿಯ ನೀರನ್ನು ತುಂಗಭದ್ರಾ ಉಪನದಿಯಾದ ವರದಾ ನದಿಗೆ ಸೇರಿಸಿದರೆ, ತುಂಗಭದ್ರಾ ಎಡದಂಡೆ ಕಾಲುವೆ ಜಲಾನಯನ ಪ್ರದೇಶದ ನೀರಿನ ಕೊರತೆ ನೀಗಿಸಲು ಸಾಧ್ಯವಿದೆ. ಈ ಯೋಜನೆಯು ಕೃಷಿ ಹಾಗೂ ಜಲವಿದ್ಯುತ್ ಉತ್ಪಾದನೆ ಎರಡಕ್ಕೂ ಉಪಕಾರಿಯಾಗಲಿದೆ.

ನೇತ್ರಾವತಿ ನದಿಯ ಕೆಳಪಾತ್ರದ ಉಪ್ಪಿನಂಗಡಿ ಬಳಿ ತಡೆಗೋಡೆ ನಿರ್ಮಿಸಿ ಈ ನದಿಯ ನೀರನ್ನು 500ರಿಂದ 600 ಮೀಟರ್‌ವರೆಗೆ ಲಿಫ್ಟ್ ಮಾಡಿದರೆ, ಅರಿಸೀಕೆರೆ ಬಳಿಯ ಎತ್ತಿನಹೊಳೆ ಕಾಲುವೆಗೆ ಹರಿಸಬಹುದು. ಅಲ್ಲಿಂದ ಕಡೂರು, ಅರಸೀಕೆರೆ ಸೇರಿದಂತೆ ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳಿಗೆ ನೀರನ್ನು ಹರಿಸಬಹುದು.

ಸದ್ಯಕ್ಕೆ ಬಯಲುಸೀಮೆಯ ಬಹುತೇಕ ಕೆರೆಗಳು ಅವಸಾನದ ಅಂಚಿನಲ್ಲಿವೆ. ಈ ಕೆರೆಗಳ ಪುನಶ್ಚೇತನವಾಗದಿದ್ದಲ್ಲಿ ಅಂತರ್ಜಲಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ನದಿಗಳ ಜೋಡಣೆಯ ಮೂಲಕ ಈ ಕೆರೆಗಳಿಗೆ ಮರುಜೀವ ಕಲ್ಪಿಸಬಹುದು. ಪ್ರಮುಖವಾಗಿ ಉತ್ತರ ಕರ್ನಾಟಕದಲ್ಲಿ ಬಹಳಷ್ಟು ಕೃಷಿಯೋಗ್ಯ ಭೂಮಿ ನೀರಾವರಿ ಕೊರತೆಯನ್ನು ಎದುರಿಸುತ್ತಿದೆ. ಹೀಗಾಗಿ ಪಶ್ಚಿಮಾಭಿಮುಖವಾಗಿ ಹರಿಯುವ ಕೆಲವು ನದಿಗಳನ್ನು ಸದ್ಬಳಕೆ ಮಾಡಿಕೊಂಡು ಈ ಸಮಸ್ಯೆಯನ್ನು ನೀಗಿಸಬಹುದು.

ಪಶ್ಚಿಮಘಟ್ಟದ ಒಟ್ಟು 13 ನದಿಗಳು ಕರ್ನಾಟಕದಲ್ಲಿಯೇ ಹುಟ್ಟಿ ರಾಜ್ಯದ ಕರಾವಳಿ ವ್ಯಾಪ್ತಿಯಲ್ಲಿಯೇ ಸಮುದ್ರ ಸೇರುತ್ತವೆ. ಭವಿಷ್ಯದ ಹಿತದೃಷ್ಟಿಯಿಂದ ಯೋಚಿಸಿದಾಗ, 2050ರವರೆಗೆ ರಾಜ್ಯದ ಬೆಳೆಯುವ ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರಿಗಾಗಿಯೇ 240 ಟಿಎಂಸಿ ಅಡಿ ನೀರು ಬೇಕು ಎಂದು ತಜ್ಞರು ಅಂದಾಜಿಸಿದ್ದಾರೆ. 2050ರ ವೇಳೆಗೆ ಕೃಷಿಗೆ ಮತ್ತು ಕುಡಿಯುವ ಉದ್ದೇಶಕ್ಕೆ ಸೇರಿ ರಾಜ್ಯಕ್ಕೆ ಒಟ್ಟು 3,000 ಟಿಎಂಸಿ ಅಡಿ ನೀರಿನ ಅವಶ್ಯಕತೆ ಇದೆ. ಈಗ ರಾಜ್ಯದಲ್ಲಿ ಉಪಯೋಗವಾಗುತ್ತಿರುವ ನೀರಿಗೆ ಹೋಲಿಸಿದರೆ ಒಂದು ಸಾವಿರಕ್ಕೂ ಹೆಚ್ಚು ಟಿಎಂಸಿ ಅಡಿಗಳಷ್ಟು ನೀರಿನ ಕೊರತೆ ಆ ವೇಳೆಗೆ ಎದುರಾಗುತ್ತದೆ. ಆದ್ದರಿಂದ ಭವಿಷ್ಯದ ಅವಶ್ಯಕತೆಗಾಗಿ
ಈಗಿನಿಂದಲೇ ಜಾಗೃತರಾಗಿ, ನೀರಿನ ಸಂರಕ್ಷಣೆಗೆ ಪಣ ತೊಟ್ಟು ಅದರ ಸದ್ಬಳಕೆಗೆ ಜವಾಬ್ದಾರಿಯುತರಾಗಿ ಕಾರ್ಯಪ್ರವೃತ್ತರಾಗುವ ಅವಶ್ಯಕತೆ ಇದೆ.

ಲೇಖಕ: ಅಧ್ಯಕ್ಷ, ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮಿತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು